* ಪಶುಗಳ ವಿವಿಧ ತಳಿಗಳ ಅಧ್ಯಯನದ ಜತೆಗೆ ಸಂರಕ್ಷಣೆ
* ಗೋ ಹತ್ಯೆ ನಿಷೇಧ ಶೀಘ್ರ ಪರಿಣಾಮಕಾರಿ ಜಾರಿ
* ಆರ್‌ಐಡಿಎಫ್ ಯೋಜನೆಯಡಿ 288 ಕಟ್ಟಡಗಳಿಗೆ ಅನುದಾನ
ಹಾವೇರಿ(ಆ.30): ರಾಜ್ಯದಲ್ಲಿ 100 ಎಕರೆ ಜಾಗದಲ್ಲಿ ಒಂದು ಸಾವಿರ ಕೋಟಿ ರು. ವೆಚ್ಚದಲ್ಲಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಪಶುಲೋಕ (ಕಾಯಂ ಸ್ವರೂಪಿ ಪಶುಪಾಲನೆ) ನಿರ್ಮಿಸುವ ಚಿಂತನೆ ಇದೆ ಎಂದು ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ಹೇಳಿದ್ದಾರೆ.
ಭಾನುವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಪಶುಲೋಕನಿಂದ ಟೂರಿಸಂ ಜತೆಗೆ ಪಶುಗಳ ವಿವಿಧ ತಳಿಗಳ ಅಧ್ಯಯನದ ಜತೆಗೆ ಸಂರಕ್ಷಣೆ ಮಾಡುವುದು, ಪ್ರಾಣಿಗಳ ಬಗ್ಗೆ ಪ್ರತಿಯೊಬ್ಬರಿಗೂ ಸಂಪೂರ್ಣ ಮಾಹಿತಿ ನೀಡಲು ಸಹಾಯಕವಾಗುವಂತೆ ಮಾಡಲಾಗುವುದು ಎಂದರು.
undefined
ಖಾಲಿ ಹುದ್ದೆಗಳ ನೇಮಕ:
ಪಶು ಸಂಗೋಪನಾ ಇಲಾಖೆಯಲ್ಲಿ 18 ಸಾವಿರ ಹುದ್ದೆಗಳಲ್ಲಿ 8 ಸಾವಿರ ಹುದ್ದೆಗಳು ಖಾಲಿ ಇದ್ದು, ಈಗಾಗಲೇ ಭಾಗದಲ್ಲಿ ಮೆರಿಟ್ ಮೇಲೆ ನೇರ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗಿದೆ. ಪ್ರಾಣಿ ರಕ್ಷಣೆಗಾಗಿ ರಾಜ್ಯದಲ್ಲಿ ಪ್ರಾಣಿ ಕಲ್ಯಾಣ ಮಂಡಳಿ ಸ್ಥಾಪನೆ ಮಾಡಲಾಗಿದೆ. ಪಶು ಸಂಜೀವಿನಿ ಆ್ಯಂಬುಲೆನ್ಸ್ಗಳನ್ನು 15 ಜಿಲ್ಲೆಗಳಿಗೆ ಒದಗಿಸಲಾಗಿದ್ದು, ಇನ್ನು 25 ಜಿಲ್ಲೆಗಳಿಗೆ ಆ್ಯಂಬುಲೆನ್ಸ್ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಹೊರರಾಜ್ಯದಿಂದ ಗೋವು, ಗೋಸಾಗಣೆ ತಡೆಯಿರಿ
2021-22ರ ಬಜೆಟ್‌ನಲ್ಲಿ ಜಿಲ್ಲೆಗೊಂದು ಗೋಶಾಲೆ ನೀಡಲಾಗಿದೆ. 22 ಜಿಲ್ಲೆಗಳಲ್ಲಿ ಗೋಶಾಲೆಗೆ ಸ್ಥಳ ಗುರುತಿಸಲಾಗಿದೆ. ಪ್ರತಿ ಜಿಲ್ಲೆ ಗೋಶಾಲೆಯಲ್ಲಿ 6ರಿಂದ 7 ಸಾವಿರ ಗೋವುಗಳನ್ನು ನೋಡಿಕೊಳ್ಳಬಹುದು, ಆಹಾರ, ನೀರು, ಗೋವುಗಳ ಆರೈಕೆ ಮಾಡಲಾಗುವುದು. ಈಗಾಗಲೇ ರಾಜ್ಯದಲ್ಲಿ 188 ಖಾಸಗಿ ಗೋಶಾಲೆಗಳು ನೋಂದಣಿಯಾಗಿವೆ. ಇವುಗಳಿಗೆ ಅನುದಾನ ನೀಡಲಾಗುತ್ತಿದೆ. ಮೊದಲು ಮುಖ್ಯಮಂತ್ರಿ ಜಿಲ್ಲೆಯಲ್ಲಿ ಗೋಶಾಲೆ ಪ್ರಾರಂಭ ಮಾಡುವ ಉದ್ದೇಶವಿದೆ. ವಯಸ್ಸಾದ ಹಸುಗಳನ್ನು ನಮ್ಮ ಗೋಶಾಲೆಗೆ ಕಳಿಸಿ ಎಂದು ಮನವಿ ಮಾಡಿದರು.
ದೇಶದಲ್ಲಿಯೇ ಮೊದಲು ಎಲ್ಲ ಪ್ರಾಣಿಗಳ ಯೋಗಕ್ಷೇಮಕ್ಕಾಗಿ ಪ್ರಾಣಿ ಕಲ್ಯಾಣ ಸಹಾಯವಾಣಿ ಕೇಂದ್ರ ಆರಂಭಿಸಲಾಗಿದೆ. ಈ ಕೇಂದ್ರ ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತದೆ. ರೈತರು ಪಶುಗಳ ಚಿಕಿತ್ಸೆ, ಪ್ರಾಣಿಗಳ ಸಮಸ್ಯೆ(ರೋಗಗಳು), ಪಶು ಕುರಿತ ಯಾವುದೇ ಮಾಹಿತಿಯನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ಆರ್‌ಐಡಿಎಫ್ ಯೋಜನೆಯಡಿ 288 ಕಟ್ಟಡಗಳಿಗೆ ಅನುದಾನ ಒದಗಿಸಲಾಗಿದೆ. ರಾಜ್ಯದಲ್ಲಿ ಸೂಪರ್ ಸ್ಪೆಷಾಲಿಟಿ ಅಸ್ಪತ್ರೆ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ನ್ಯಾಷನಲ್ ನ್ಯಾವಲ್ ಸ್ಟಾಕ್ ಮಿಷನ್ ಅಡಿಯಲ್ಲಿ ರೈತರಿಗೆ ಅನುಕೂಲವಾಗುವಂತಹ ನಾರಿ ಸುವರ್ಣ ಕುರಿ ತಳಿ ಅಭಿವೃದ್ಧಿ, ನಂದಿನಿ ದುರ್ಗ ಮೇಕೆ ಅಭಿವೃದ್ಧಿ, ಪಶು ಚಿಕಿತ್ಸೆ, ಔಷಧ ಕೇಂದ್ರಗಳು ಅಮೃತ ಶಿಲಾ ಯೋಜನೆಯಲ್ಲಿ ರೈತರಿಗೆ ಹೋರಿಕರು ವಿತರಣೆ, ದೇಶಿ ತಳಿಗಳ ಅಭಿವೃದ್ಧಿ ಯೋಜನೆಗಳನ್ನು ಘೋಷಣೆ ಮಾಡಲಾಗಿದೆ ಎಂದರು.
ರಾಜ್ಯ ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟು ಆಯೋಗದ ಅಧ್ಯಕ್ಷ ನೆಹರು ಓಲೇಕಾರ, ಸಿದ್ದರಾಜ ಕಲಕೋಟಿ, ಪಶು ಸಂಗೋಪನಾ ಇಲಾಖೆ ಜಂಟಿ ನಿರ್ದೇಶಕ ಡಾ. ಭಾಸ್ಕರ್ ರಾವ್, ಉಪನಿರ್ದೇಶಕ ರಾಜು ಕೂಲೆರ ಉಪಸ್ಥಿತರಿದ್ದರು.
ಗೋ ಹತ್ಯೆ ನಿಷೇಧ ಶೀಘ್ರ ಪರಿಣಾಮಕಾರಿ ಜಾರಿ
ಹಾವೇರಿ: ಶೀಘ್ರದಲ್ಲೇ ನಿಷೇಧ ಕಾನೂನು ಪರಿಣಾಮಕಾರಿ ಅನುಷ್ಠಾನಕ್ಕೆ ಕ್ರಮ ತಗೆದುಕೊಳ್ಳುತ್ತೇವೆ. ಪ್ರತಿ ಜಿಲ್ಲೆಗೆ ಹೋಗಿ ಡಿಡಿ, ಎಡಿ ಜತೆ ಮೀಟಿಂಗ್ ಮಾಡುವೆ. ಅಧಿಕಾರಿಗಳು ಗ್ರಾಮಗಳಿಗೆ ಹೋಗಿ ಗ್ರಾಮಸಭೆ ಮಾಡಿ ಗ್ರಾಮಸ್ಥರಿಗೆ ಹೇಳಬೇಕು. ಗೋ ಮಾತಾ ರಕ್ಷಣೆ ಆಗಬೇಕು. ಬಿಗಿಯಾದ ಕಾನೂನು ಜಾರಿಯಾಗಿದೆ. ಬಕ್ರೀದ್ ಸಮಯದಲ್ಲಿ ಎಲ್ಲ ಎಸ್‌ಪಿಗಳ ಜತೆ ಚರ್ಚೆ ಮಾಡಿದ್ದೆ. ಬಕ್ರೀದ್ ಸಂದರ್ಭದಲ್ಲಿ ಆರೇಳು ಸಾವಿರ ಗೋವುಗಳ ರಕ್ಷಣೆ ಮಾಡಿದ್ದೇವೆ ಎಂದು ಸಚಿವ ಪ್ರಭು ಚವ್ಹಾಣ ವಿವರಿಸಿದರು.