ಸಚಿವ ಚಲುವರಾಯಸ್ವಾಮಿಯಿಂದ ಜಿಲ್ಲೆಯಲ್ಲಿ ದ್ವೇಷದ ರಾಜಕಾರಣ: ಸಿ.ಎಸ್.ಪುಟ್ಟರಾಜು ಕಿಡಿ

Kannadaprabha News   | Kannada Prabha
Published : Jun 29, 2025, 04:49 PM IST
CS Puttaraju

ಸಾರಾಂಶ

ಡಿ.ಕೆ.ಶಿವಕುಮಾರ್ ಅವರನ್ನು ಬಿಟ್ಟರೆ ಕಾಂಗ್ರೆಸ್‌ನಲ್ಲಿ ನಾನೇ ಒಕ್ಕಲಿಗರ ಪರಮೋಚ್ಚ ನಾಯಕ ಎಂದು ವರ್ತಿಸುತ್ತಿರುವ ಚಲುವರಾಯಸ್ವಾಮಿ ಜಿಲ್ಲೆಯಲ್ಲಿ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಕಿಡಿಕಾರಿದರು.

ಪಾಂಡವಪುರ (ಜೂ.29): ಉಪ ಮುಖ್ಯಮಂತಿ ಡಿ.ಕೆ.ಶಿವಕುಮಾರ್ ಅವರನ್ನು ಬಿಟ್ಟರೆ ಕಾಂಗ್ರೆಸ್‌ನಲ್ಲಿ ನಾನೇ ಒಕ್ಕಲಿಗರ ಪರಮೋಚ್ಚ ನಾಯಕ ಎಂದು ವರ್ತಿಸುತ್ತಿರುವ ಚಲುವರಾಯಸ್ವಾಮಿ ಜಿಲ್ಲೆಯಲ್ಲಿ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಕಿಡಿಕಾರಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಯಲ್ಲಿ ಜನ ನನ್ನನ್ನು ಸೋಲಿಸಿದ್ದಾರೆ. ಅದೇ ರೀತಿ ಚಲುವರಾಯಸ್ವಾಮಿ ಅವರನ್ನು ಹಿಂದಿನ ಚುನಾವಣೆಗಳಲ್ಲಿ ಸೋಲಿಸಿದ್ದಾರೆ. ಅಭಿವೃದ್ಧಿ ವಿಚಾರದಲ್ಲಿ ನಾನು ಯಾವುದೇ ತಾರತಮ್ಯ ಮಾಡಿಲ್ಲ. ಕಳೆದ ಮೂರು ಬಾರಿ ಶಾಸಕನ್ನಾಗಿ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿ ಮಾಡಿದ್ದೇನೆ. ಇದರಲ್ಲಿ ಯಾವ ಊರಿಗೂ ತಾರತಮ್ಯ ಮಾಡಿಲ್ಲ ಎಂದರು.

ಶಾಸಕರಾಗಿ, ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವಾಗ ಎಲ್ಲರನ್ನು ಸಮಾನತೆಯಿಂದ ಕಾಣುವುದಾಗಿ ಅಂಬೇಡ್ಕರ್ ಅವರ ಸಂವಿಧಾನದ ಆಶಯದಂತೆ ನಡೆದುಕೊಳ್ಳುವುದಾಗಿ ಅಧಿಕಾರ ಸ್ವೀಕರಿಸುತ್ತಾರೆ. ಆನಂತರದಲ್ಲಿ ದ್ವೇಷದ ರಾಜಕಾರಣ ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಾಜಕೀಯ ಮಾಡೋದು ಬೇರೆ ವಿಚಾರ. ಅಭಿವೃದ್ಧಿ ವಿಚಾರದಲ್ಲಿ ಸಮಾನತೆ ಇರಬೇಕು. ಚಿನಕುರಳಿಗೆ ಮಂಜೂರಾಗಿದ್ದ ಪೊಲೀಸ್ ಠಾಣೆಯನ್ನು ಕ್ಯಾತನಹಳ್ಳಿಗೆ ಸ್ಥಳಾಂತರಿಸಿರುವುದು ದುರುದ್ದೇಶದ ರಾಜಕಾರಣ. ಇದರಲ್ಲಿ ಚಲುವರಾಯಸ್ವಾಮಿ ಅವರ ಸೇಡಿನ ರಾಜಕಾರಣ ಅಡಗಿದೆ ಎಂದು ಆರೋಪಿಸಿದರು.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಮನವಿ ಮೇರೆಗೆ ಪಾಂಡವಪುರ ರೈಲ್ವೇ ನಿಲ್ದಾಣದಿಂದ ಶಿವಮೊಗ್ಗ ಸೇರಿದಂತೆ ಇನ್ನಿತರೆ ನಗರಗಳನ್ನು ಸಂಪರ್ಕಿಸುವ ರಾಜ್ಯ ಹೆದ್ದಾರಿ ರಾಷ್ಟ್ರೀಯ ಹೆದ್ದಾರಿಯಾಗಿ ಮಾರ್ಪಡುಗೊಳ್ಳುತ್ತಿದೆ. ಆದರೆ, ಈ ರಸ್ತೆ ಅಭಿವೃದ್ಧಿ ಕಾಣದೆ ಗುಂಡಿ ಬಿದ್ದಿರುವ ಕಾರಣ ಜನ ಅಪಘಾತಕ್ಕೊಳಗಾಗಿ ಕೈ-ಕಾಲು ಕಳೆದುಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು. ಜಿಲ್ಲಾ ಉಸ್ತುವಾರಿ ಸಚಿವರು ಇದನ್ನು ಕಣ್ತೆರೆದು ನೋಡಬೇಕು. ಪಂಚಾಯ್ತಿಗೆ ಎರಡೆರಡು ಸಿಎಲ್-7 ಬಾರ್ ಅಂಡ್ ರೆಸ್ಟೋರೆಂಟ್‌ಗಳಿಗೆ ಅನುಮತಿ ನೀಡುವ ಮೂಲಕ ಯುವ ಸಮುದಾಯವನ್ನು ಕುಡಿತದ ಚಟಕ್ಕೆ ತಳ್ಳಲಾಗುತ್ತಿದೆ. ಯುವಕರು ಕಲಬೆರಕೆ ಮದ್ಯ ಕುಡಿದು ಸಾಯುವುದಕ್ಕಿಂತ ಇದು ಪರವಾಗಿಲ್ಲ ಎಂದು ನಾವು ಎಲ್ಲವನ್ನು ಸಹಿಸಿಕೊಂಡಿದ್ದೇವೆ. ಮುಂದೆ ಕಾಲ ಬರುತ್ತದೆ ಇವರು ಕೆಲಸ ಮಾಡಲಿ ಬಿಡಲಿ ನಮ್ಮ ಕೆಲಸವನ್ನು ನಾವೇ ಮಾಡಿಕೊಳ್ಳುತ್ತೇವೆ ಎಂದರು.

ಜೆಡಿಎಸ್‌ನಿಂದ ಬಿಜೆಪಿಗೆ ಶಕ್ತಿ: ಜಡಿಎಸ್, ಬಿಜೆಪಿ ಮೈತ್ರಿ ಕಾರಣಕ್ಕೆ ಬಿಜೆಪಿಗೆ ರಾಜ್ಯದಲ್ಲಿ ಶಕ್ತಿ ತುಂಬುವಂತಹ ಕೆಲಸ ಆಗಿದೆ. ಅದರಲ್ಲೂ ಹಳೇ ಮೈಸೂರು ಪ್ರಾಂತ್ಯದಲ್ಲಿ ಬಿಜೆಪಿ ಬಲ ಹೆಚ್ಚಾಗಿದೆ. ಜೆಡಿಎಸ್ ಮತ್ತು ಬಿಜೆಪಿ ನಾಯಕರಲ್ಲಿ ಕೇಂದ್ರ ಮತ್ತು ರಾಜ್ಯ ನಾಯಕರ ಸಂಬಂಧ ಉತ್ತಮವಾಗಿದೆ ಎಂದರು. ಎರಡು ಪಕ್ಷಗಳ ನಾಯಕರಲ್ಲಿ ಸಣ್ಣ-ಪುಟ್ಟ ಲೋಪದೋಷಗಳು ಇರಬಹುದು. ಮುಂದಿನ ದಿನಗಳಲ್ಲಿ ನಾನೇ ಮುಂದೆ ನಿಂತು ಎಲ್ಲವನ್ನು ಬಗೆಹರಿಸುತ್ತೇನೆ. ಸ್ಥಳೀಯ ಕಾರ್ಯಕರ್ತರಲ್ಲಿ ಇರುವ ಭಿನ್ನಾಭಿಪ್ರಾಯಗಳನ್ನು ಪಕ್ಷದ ದೃಷ್ಟಿಯಿಂದ ಬಗೆಹರಿಸಲಾಗುವುದು ಎಂದರು. ಆಂಧ್ರ ಪ್ರದೇಶದ ಮುಖ್ಯಮಂತ್ರಿಗಳು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಮುಂದೆ ಗಂಟೆಗಳ ಕಾಲ ಕೂತು ಅಗತ್ಯ ನೆರವು ಪಡೆಯುತ್ತಾರೆ. ಆದರೆ, ಕಾಂಗ್ರೆಸ್ ನಾಯಕರಿಗೆ ಏನಾಗಿದೆ ಗೊತ್ತಿಲ್ಲ. ಅಭಿವೃದ್ಧಿ ವಿಚಾರದಲ್ಲಿ ಸಹಕಾರ ನೀಡಬೇಕು. ಈ ಸರ್ಕಾರದ ಪ್ರತಿನಿಧಿಗಳು ಅಭಿವೃದ್ಧಿ ವಿಚಾರದಲ್ಲಿ ಕೇಂದ್ರದ ಸಹಕಾರ ಕೇಳುತ್ತಿಲ್ಲ ಎಂದು ದೂರಿದರು.

ರಾಜಕೀಯ ಕ್ರಾಂತಿ ಆಗಬಹದು: ಸಚಿವ ಕೆ.ಎನ್.ರಾಜಣ್ಣ ಅವರ ಹೇಳಿಕೆಯಂತೆ ಮುಂದಿನ ದಿನಗಳಲ್ಲಿ ರಾಜ್ಯ ರಾಜಕಾರಣದಲ್ಲಿ ಕ್ರಾಂತಿ ಆಗಬಹುದು. ರಾಜಣ್ಣ ಅವರ ಯಾವ ಆಧಾರದ ಮೇಲೆ ಕ್ರಾಂತಿ ವಿಚಾರ ಪ್ರಸ್ತಾಪಿಸಿದ್ದಾರೆ ಗೊತ್ತಿಲ್ಲ. ಮುಂದಿನ ಬೆಳವಣಿಗೆ ಬಗ್ಗೆ ಅವರನ್ನೇ ಕೇಳಿ ತಿಳಿದುಕೊಳ್ಳಬೇಕು. ಅಮೆರಿಕಾದಲ್ಲಿ ನಡೆಯುವ ವಿಶ್ವ ಒಕ್ಕಲಿಗರ ಸಮ್ಮೇಳನಕ್ಕೆ ಕಾಂಗ್ರೆಸ್ ನಾಯಕರು ಬರುತ್ತಾರೆ. ಅವರನ್ನೇ ಕೇಳಿ ಈ ಪ್ರಶ್ನೆಗಳಿಗೆ ಉತ್ತರಿಸುವುದಾಗಿ ತಿಳಿಸಿದರು.

ಚಾಮುಂಡೇಶ್ವರಿ ದರ್ಶನದಿಂದ ಉತ್ತಮ ಮಳೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಹಿಂದೆ ಚಾಮುಂಡೇಶ್ವರಿ ದರ್ಶನಕ್ಕೆ ಹೋಗುತ್ತಿರಲಿಲ್ಲ. ಈಗ ಚಾಮುಂಡಿ ಮೇಲೆ ಭಕ್ತಿ ಹೆಚ್ಚಾಗಿ ದರ್ಶನಕ್ಕೆ ಹೋಗುತ್ತಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಉತ್ತಮ ಮಳೆಯಾಗಿ ಜಲಾಶಯಗಳು ತುಂಬುತ್ತಿವೆ. ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾದಗಲೆಲ್ಲ ರಾಜ್ಯ ಮಳೆ ಬೆಳೆಯಾಗಿ ಸುಭಿಕ್ಷವಾಗಿರಲಿಲ್ಲ ಎಂದು ವ್ಯಂಗ್ಯವಾಡಿದರು.

PREV
Read more Articles on
click me!

Recommended Stories

ನಾದಬ್ರಹ್ಮ ಇಡ್ಲಿ ಸೆಂಟರ್‌ ಮಾಲೀಕ, 28 ವರ್ಷದ ಸಂದೇಶ್‌ ಹೃದಯಾಘಾತದಿಂದ ಸಾವು
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ