ರೈತರ ಸಾಲ ಒಟಿಎಸ್‌ಗೆ ಬ್ಯಾಂಕ್‌ಗಳು ಸಹಕರಿಸಿ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ

Kannadaprabha News   | Kannada Prabha
Published : Jun 29, 2025, 04:42 PM IST
HD Kumaraswamy

ಸಾರಾಂಶ

ರೈತರು ತಾವು ಪಡೆದ ಸಾಲವನ್ನು ಒಮ್ಮೆಲೇ ಪಾವತಿ (ಒನ್ ಟೈಮ್ ಸೆಟಲ್ ಮೆಂಟ್) ಮಾಡುವ ಸಂದರ್ಭದಲ್ಲಿ ಬ್ಯಾಂಕ್‌ಗಳು ಸೂಕ್ತ ಮಾರ್ಗದರ್ಶನ ಮಾಡಬೇಕು ಹಾಗೂ ಪುನಃ ಸಾಲ ನೀಡಬೇಕು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಬ್ಯಾಂಕ್‌ಗಳಿಗೆ ಸೂಚಿಸಿದರು.

ಮಂಡ್ಯ (ಜೂ.29): ರೈತರು ತಾವು ಪಡೆದ ಸಾಲವನ್ನು ಒಮ್ಮೆಲೇ ಪಾವತಿ (ಒನ್ ಟೈಮ್ ಸೆಟಲ್ ಮೆಂಟ್) ಮಾಡುವ ಸಂದರ್ಭದಲ್ಲಿ ಬ್ಯಾಂಕ್‌ಗಳು ಸೂಕ್ತ ಮಾರ್ಗದರ್ಶನ ಮಾಡಬೇಕು ಹಾಗೂ ಪುನಃ ಸಾಲ ನೀಡಬೇಕು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಬ್ಯಾಂಕ್‌ಗಳಿಗೆ ಸೂಚಿಸಿದರು. ಮಂಡ್ಯದಲ್ಲಿ ನಡೆದ ಜಿಲ್ಲಾ ಬ್ಯಾಂಕರುಗಳ ಸಭೆಯಲ್ಲಿ ಆನ್‌ಲೈನ್‌ ವೇದಿಕೆ ಮೂಲಕ ಭಾಗಿಯಾಗಿ ಮಾತನಾಡಿದ ಸಚಿವರು, ನಾನಾ ಉದ್ದೇಶಗಳಿಗೆ ರೈತರು ಪಡೆಯುವ ಸಾಲಗಳಿಗೆ ಬಡ್ಡಿ ಜಾಸ್ತಿ ಎನ್ನುವ ದೂರುಗಳು ಬರುತ್ತಿವೆ. ಈ ಹಿನ್ನೆಲೆಯಲ್ಲಿ ಅವರು ಏಕಕಾಲಕ್ಕೆ ತಮ್ಮ ಸಾಲವನ್ನು ಪಾವತಿ ಮಾಡಲು ಮುಂದಾಗುತ್ತಿದ್ದಾರೆ. ಅಂತಹ ರೈತರಿಗೆ ಬ್ಯಾಂಕ್‌ಗಳು ಸಹಕರಿಸಬೇಕು ಎಂದರು.

ಕೃಷಿಕರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಅವರ ಸಾಲದ ಬಡ್ಡಿ ಹೆಚ್ಚಾಗಿದೆ ಎಂದು ದಿನವೂ ದೂರುಗಳು ಬರುತ್ತಿವೆ. ಅದಕ್ಕಾಗಿಯೇ ಅವರು ಒಂದೇ ಬಾರಿಗೆ ಹಣ ಪಾವತಿ ಮಾಡಲು ಶ್ರಮಿಸುತ್ತಿದ್ದಾರೆ. ಅಂತಹ ಸಂದರ್ಭದಲ್ಲಿ ಬ್ಯಾಂಕ್‌ಗಳು ಸೌಜನ್ಯದಿಂದ ವರ್ತಿಸಬೇಕು. ರೈತರ ವಿಷಯದಲ್ಲಿ ಯಾವುದೇ ಕಾರಣಕ್ಕೂ ಕಠಿಣವಾಗಿ ನಡೆದುಕೊಳ್ಳಬೇಡಿ ಎಂದು ಕೇಂದ್ರ ಸಚಿವರು ಸ್ಪಷ್ಟ ಸೂಚನೆ ಕೊಟ್ಟರು. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಅನೇಕ ಯೋಜನೆಗಳ ಮೂಲಕ ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಆರ್ಥಿಕ ಶಕ್ತಿ ತುಂಬುವ ಕೆಲಸ ಆಗುತ್ತಿದೆ. ಅವರ ಸಬಲೀಕರಣಕ್ಕೆ ಕೇಂದ್ರ ಸರ್ಕಾರ ಅನೇಕ ಕಾರ್ಯಕ್ರಮ ಹಾಕಿಕೊಂಡಿದೆ.

ಮೋದಿ ಅವರು ಜಾರಿಗೆ ತಂದಿರುವ ಯೋಜನೆಗಳ ಸೌಲಭ್ಯಗಳನ್ನು ಜಾರಿಗೆ ತಲುಪಿಸುವ ಕೆಲಸವನ್ನು ಬ್ಯಾಂಕ್‌ಗಳು ಉತ್ತಮವಾಗಿ ಮಾಡುತ್ತಿವೆ ಎಂದು ಕೇಂದ್ರ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು. ಯುವಕರು, ಮಹಿಳೆಯರು, ಕೃಷಿಕರು ಕೇಂದ್ರದ ಯೋಜನೆಗಳ ಸೌಲಭ್ಯ ಪಡೆಯಲು ಬ್ಯಾಂಕ್‌ಗಳು ಸೇತುವೆಯಾಗಿವೆ. ಇದು ಮತ್ತಷ್ಟು ವಿಸ್ತೃತವಾಗಿ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ಸಲಹೆ ನೀಡಿದರು. ಇದೇ ವೇಳೆ ವಾರ್ಷಿಕ ಆರ್ಥಿಕ ಕ್ರೆಡಿಟ್ ರಿಪೋರ್ಟ್ ಬಿಡುಗಡೆ ಮಾಡಲಾಯಿತು. ಜಿಲ್ಲಾ ಪಂಚಾಯ್ತಿ ಸಿಇಒ ನಂದಿನಿ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು, ಜಿಲ್ಲೆಯ ಬ್ಯಾಂಕ್‌ಗಳ ಮುಖ್ಯಸ್ಥರು ಭಾಗಿಯಾಗಿದ್ದರು.

ಆಣೆ- ಪ್ರಮಾಣ ಮಾಡಲು ತಯಾರಿದ್ದೇನೆ: ನಾನು ಮುಖ್ಯಮಂತ್ರಿಯಾಗುವ ವೇಳೆ ಚಲುವರಾಯಸ್ವಾಮಿ ನೋಡಿ ಎಂಎಲ್‌ಎಗಳು ಬಂದರಾ? ಅವರನ್ನು ಮಂತ್ರಿ ಮಾಡಲು ನಾನು ಶ್ರಮ ಹಾಕಿದ್ದೇನೆ. ತಾವು ಮಂತ್ರಿಯಾಗುವುದಕ್ಕಾಗಿ ನನ್ನ ಮೂರು ಗಂಟೆವರೆಗೆ ನಿದ್ದೆ ಮಾಡಲು ಬಿಟ್ಟಿಲ್ಲ. ಆತನನ್ನು ಮಂತ್ರಿ ಮಾಡಲು 50 ಜನ ಶಾಸಕರನ್ನು ಸೇರಿಸಿದ್ದೇನೆ. ನಾನು ಪಟ್ಟಿರುವ ಶ್ರಮವನ್ನು ಅವರು ಮರೆಯೋದು ಬೇಡ. ಈ ವಿಷಯವಾಗಿ ನಾನು ಎಲ್ಲಿ ಬೇಕಾದರೂ ಆಣೆ- ಪ್ರಮಾಣಕ್ಕೆ ಸಿದ್ಧನಿದ್ದೇನೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದರು.

ಚಲುವರಾಯಸ್ವಾಮಿಗೆ ಇರುವ ಚಟಗಳು ನನಗಿಲ್ಲ. ಅವರಿಗಿರುವ ಚಟಗಳ ಬಗ್ಗೆ ಮಂಡ್ಯದಲ್ಲಿ ಕೇಳಿದರೆ ಹೇಳುತ್ತಾರೆ. ಚಲುವರಾಯಸ್ವಾಮಿಯಿಂದ ಎಷ್ಟು ಮನೆ ಹಾಳಾಗಿವೆ ಎನ್ನುವುದೂ ಗೊತ್ತಿದೆ. ಚಟಗಳ ಬಗ್ಗೆ ಚರ್ಚೆ ಮಾಡೋದು ಬೇಡ, ಅದು ಕೀಳುಮಟ್ಟದ ಅಭಿರುಚಿ ಎಂದು ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು. ನಾನು ರಾಜಕೀಯದಲ್ಲಿ ದುಡ್ಡು ಮಾಡಬೇಕೆಂದು ಎಂದೂ ಆಸೆಪಟ್ಟವನಲ್ಲ. ನಾನು ಜನರ ಮಧ್ಯ ೨೪ ಗಂಟೆ ಕೆಲಸ ಮಾಡಿದ್ದೇನೆ. ಜನತಾ ದರ್ಶನ, ಗ್ರಾಮ ವಾಸ್ತವ್ಯದಲ್ಲಿ ಬೆಳಗಿನ ಜಾವದವರೆಗೆ ಕೆಲಸ ಮಾಡಿದ್ದೇನೆ. ಇದು ನನ್ನ ವೈಯಕ್ತಿಕ ಸಮಸ್ಯೆ.ಎಲ್ಲವನ್ನೂ ದೇವರು ನೋಡುತ್ತಾನೆ ಎಂದು ಹೇಳಿದರು.

PREV
Read more Articles on
click me!

Recommended Stories

ಕಾಂಗ್ರೆಸ್‌ ಕಾರ್ಯಕರ್ತನ ಬಲಿ ಪಡೆದ ಗನ್‌ ಯಾರದ್ದು? ತನಿಖೆ
ಪೆರಿಫೆರಲ್‌ ರಿಂಗ್‌ ರಸ್ತೆಗಾಗಿ ಭೂಸ್ವಾಧೀನಕ್ಕೆ ಸಂಪುಟ ಗ್ರಿನ್ ಸಿಗ್ನಲ್‌