ತುಮಕೂರು (ಜೂ.11): ಮೈಸೂರಿನಲ್ಲಿ ಬಹಿರಂಗ ಹೇಳಿಕೆಗಳ ಮೂಲಕ ಜಗಳಕ್ಕಿಳಿದಿದ್ದ ಇಬ್ಬರು ಐಎಎಸ್ ಅಧಿಕಾರಿಗಳಾದ ರೋಹಿಣಿ ಸಿಂಧೂರಿ ಹಾಗೂ ಶಿಲ್ಪಾನಾಗ್ ಅವರನ್ನು ಸರ್ಕಾರ ಸಸ್ಪೆಂಡ್ ಮಾಡಿ ಮೂಲೆಗೆ ಕೂರಿಸಿದ್ದರೆ ಬುದ್ಧಿ ಬರುತ್ತಿತ್ತು ಎಂದು ಸಣ್ಣ ನೀರಾವರಿ ಸಚಿವ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರಿ ನೌಕರರಿಗೆ ನಿಬಂಧನೆಗಳಿವೆ. ಸರ್ಕಾರಿ ನೌಕರರು ರಾಜಕಾರಣಿಗಳಂತೆ ಹೇಳಿಕೆ ನೀಡುವುದು ಸರಿಯಲ್ಲ. ಸರ್ಕಾರ ಕಣ್ಣು ಮುಚ್ಚಿ ಕೂತಿದೆ.
ನಿಲ್ಲದ ಸಾ.ರಾ.ಮಹೇಶ್, ರೋಹಿಣಿ ಸಮರ : ನಿವೃತ್ತಿ ಸವಾಲ್ ..
ಮೈಸೂರಿನಲ್ಲಿ ಬಹಿರಂಗವಾಗಿ ಜಗಳಕ್ಕಿಳಿದಿದ್ದ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಬೇಕು. ಉತ್ತರ ಪ್ರದೇಶದಲ್ಲಿ ಅಖಿಲೇಶ್ ಯಾದವ್ ಮುಖ್ಯಮಂತ್ರಿಯಾಗಿದ್ದ ವೇಳೆ ಇಬ್ಬರು ಐಎಎಸ್ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿದ್ದರು.
ಇಲ್ಲೂ ಅದೇ ರೀತಿ ಮಾಡಬೇಕಾಗಿತ್ತು. ಆದರೆ ಇಲ್ಲಿ ಯಾರ ಒತ್ತಡ ಇದೆಯೋ ಗೊತ್ತಿಲ್ಲ. ಸರ್ಕಾರ ಇವರಿಬ್ಬರನ್ನು ಉಳಿಸಿಕೊಂಡಿದೆ ಎಂದು ವಿಷಾದಿಸಿದರು.
ಅಲ್ಲದೇ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಗೆ ಪ್ರಚಾರ ಗೀಳು ಇದೆ. ಅವರಿಗಿಂತ ಕೆಲಸ ಮಾಡಿದವರು ರಾಜ್ಯದಲ್ಲಿ ಇಲ್ಲವೇ ಎಂದು ಅಸಮಾಧಾನ ಹೊರಹಾಕಿದರು.