* ಮಠಕ್ಕೆ ಹೋದರೆ ಮಂತ್ರಿ ಸ್ಥಾನ ಸಿಗೋದಾದ್ರೆ ಜನ ಕ್ಯೂ ನಿಲ್ತಾರೆ
* ನನಗೆ ಭವಿಷ್ಯ ಹೇಳುವ ಹಣೆಪಟ್ಟಿ ಕೊಡುವಂತೆ ಕಾಣುತ್ತಿದೆ
* ಮುಂದೆ ಏನಾಗುತ್ತಿರಾ ಎಂದು ರಮೇಶ್ ಜಾರಕಿಹೊಳಿಗೆ ನೀವು ಕೇಳಬೇಕು
ಶಿವಮೊಗ್ಗ(ಜೂ.26): ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನ ಸಿಗುತ್ತೋ, ಇಲ್ಲವೋ ಎಂದು ಹೇಳಲು ನಾನು ಶಾಸ್ತ್ರದವನಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ, ನನಗೊಂದು ಗಿಣಿ ತಂದುಕೊಟ್ಟು ಬಿಡಿ ಭವಿಷ್ಯ ಹೇಳುತ್ತಾ ಕುಳಿತುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿ, ಅವರನ್ನು ಪುನಃ ಸಚಿವ ಸಂಪುಟಕ್ಕೆ ತೆಗೆದುಕೊಳ್ಳುತ್ತಾರೋ, ಬಿಡುತ್ತಾರೋ ಎಂಬ ವಿಷಯ ಕೇಂದ್ರ ನಾಯಕರು ಮತ್ತು ಮುಖ್ಯಮಂತ್ರಿಗಳ ತೀರ್ಮಾನಕ್ಕೆ ಬಿಟ್ಟ ವಿಚಾರ. ನಾನು ಮುಖ್ಯಮಂತ್ರಿಯೂ ಅಲ್ಲ, ಕೇಂದ್ರದ ನಾಯಕನು ಅಲ್ಲ ಎಂದು ತಿಳಿಸಿದ್ದಾರೆ.
ಶಾಸಕ ಸ್ಥಾನಕ್ಕೆ ರಾಜೀನಾಮೆ ಫಿಕ್ಸ್: ಖಚತಪಡಿಸಿದ ರಮೇಶ್ ಜಾರಕಿಹೊಳಿ
ಜಾರಕಿಹೊಳಿ ಸುತ್ತೂರು ಮಠಕ್ಕೆ ಭೇಟಿ ನೀಡಿದ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಮಠಕ್ಕೆ ಹೋದ್ರೆ ಸಚಿವ ಸ್ಥಾನ ಸಿಗುತ್ತದೆ ಎನ್ನುವುದಾದರೆ ಎಲ್ಲಾ ಮಠಗಳ ಮುಂದೆ ಕ್ಯೂ ನಿಲ್ಲುತ್ತಿದ್ದರು ಎಂದು ಟಾಂಗ್ ಕೊಟ್ಟರು.
ನಾನು ಭವಿಷ್ಯಗಾರನಲ್ಲ. ನನಗೆ ಭವಿಷ್ಯ ಹೇಳುವ ಹಣೆಪಟ್ಟಿ ಕೊಡುವಂತೆ ಕಾಣುತ್ತಿದೆ. ಮುಂದೆ ಏನಾಗುತ್ತಿರಾ ಎಂದು ರಮೇಶ್ ಜಾರಕಿಹೊಳಿಗೆ ನೀವು ಕೇಳಬೇಕು ಎಂದು ಹೇಳಿದ್ದಾರೆ.