* ಸಿದ್ದರಾಮಯ್ಯ ಹಲವು ಸುಳ್ಳು ಹೇಳುತ್ತ ಬಂದಿದ್ದಾರೆ: ಈಶ್ವರಪ್ಪ
* ಇಲಾಖೆ ಹಣವನ್ನು ಬೇನಾಮಿ ಹೆಸರಿನಲ್ಲಿ ಇಡುವುದು ಸರಿಯಲ್ಲ
* ಚುನಾವಣೆ ಸೋಲಿಗೆ ಹೆದರಿ ಜಾತಿಗಣತಿ ಬಹಿರಂಗಪಡಿಸದ ಸಿದ್ದರಾಮಯ್ಯ
ಬಳ್ಳಾರಿ(ಸೆ.13): ಸಿದ್ದರಾಮಯ್ಯ ಅವರು ತಮ್ಮದೇ ಸರ್ಕಾರ ಅಧಿಕಾರ ಇದ್ದಾಗ ಜಾತಿ ಸಮೀಕ್ಷೆ ವರದಿಯನ್ನು ಏಕೆ ಬಿಡುಗಡೆ ಮಾಡಲಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಪ್ರಶ್ನಿಸಿದ್ದಾರೆ.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ತಮ್ಮದೇ ಕಾಂಗ್ರೆಸ್ ಸರ್ಕಾರವಿತ್ತು. ಬಳಿಕ ಜೆಡಿಎಸ್ ಜತೆ ಸೇರಿಕೊಂಡು ಸಮ್ಮಿಶ್ರ ಸರ್ಕಾರ ಮಾಡಿದರು. ಆಗ ಏಕೆ ಸಮೀಕ್ಷೆ ವರದಿ ಹೊರ ಹಾಕಲಿಲ್ಲ? ಕೇಳಿದ್ರೆ ಕುಮಾರಸ್ವಾಮಿ ಬೇಡ ಅಂದ್ರು ಅನ್ನುತ್ತಾರೆ. ಕುಮಾರಸ್ವಾಮಿ ಕೇಳಿಯೇ ಇಲ್ಲ ಎನ್ನುತ್ತಾರೆ. ಆಯೋಗದ ಅಧ್ಯಕ್ಷ ಕಾಂತರಾಜ್ ಸಹಿ ಮಾಡಲಿಲ್ಲ ಅಂತ ಮತ್ತೊಮ್ಮೆ ಹೇಳುತ್ತಾರೆ. ಹೀಗೆ ನಾನಾ ಸುಳ್ಳುಗಳನ್ನು ಹೇಳುತ್ತಾ ಬಂದಿದ್ದಾರೆ ಎಂದರು.
undefined
ಜಾತಿ ಸಮೀಕ್ಷೆ ವರದಿ ಕುರಿತು ಸತ್ಯ ಹೇಳಿದ್ರೆ ಸಿದ್ದರಾಮಯ್ಯ ಅವರಿಗೆ ಸಿಟ್ಟು ಬರುತ್ತದೆ. ನಿಜಕ್ಕೂ ಕಾಂಗ್ರೆಸ್‌ನವರಿಗೆ ಜಾತಿ ಸಮೀಕ್ಷೆ ವರದಿಯ ಮೇಲೆ ನಂಬಿಕೆ ಇದ್ದಿದ್ರೆ ಯಾಕೆ ಬಿಡುಗಡೆ ಮಾಡಲಿಲ್ಲ ಎಂದು ಪ್ರಶ್ನಿಸಿದ ಸಚಿವ ಈಶ್ವರಪ್ಪ, ಚುನಾವಣೆ ಸೋಲಿನ ಭೀತಿಯಿಂದಾಗಿ ಜಾತಿಗಣತಿ ವರದಿ ಬಹಿರಂಗಪಡಿಸಲು ಕಾಂಗ್ರೆಸ್ ಹಿಂದಕ್ಕೆ ಸರಿಯಿತು. ಈಗ ನಮ್ಮ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಗಣತಿಗಾಗಿ . 180 ಕೋಟಿ ಖರ್ಚಾಗಿದ್ದು ಇದಕ್ಕೆ ಯಾರು ಹೊಣೆ ಎಂದು ಇದೇ ವೇಳೆ ಪ್ರಶ್ನಿಸಿದರು. ಇಡೀ ವರದಿಯನ್ನೇ ಸಿದ್ದರಾಮಯ್ಯ ಅವರು ಸಾಯಿಸಿದರು. ಡಿಕೆಶಿ ಹೂತು ಹಾಕಿದ್ದಾರೆ. ಇದೀಗ ಮಾಜಿ ಮುಖ್ಯಮಂತ್ರಿ ಮೋಯ್ಲಿ ನೇತೃತ್ವದಲ್ಲಿ ಸಮಿತಿ ಮಾಡಿದ್ದಾರೆ ಎಂದು ಟೀಕಿಸಿದರು.
ಬಳ್ಳಾರಿ: ಗಣೇಶ ವಿಸರ್ಜನೆಯಲ್ಲಿ ರೆಡ್ಡಿ-ರಾಮುಲು ಕುಚುಕು ಗೆಳೆಯರ ಸಂಭ್ರಮ
ಮುಸಲ್ಮಾನರು ಅಷ್ಟೇ ಕಾಂಗ್ರೆಸ್‌ನವರ ಆಸ್ತಿ. ಅವರು ಸಹ ನಮ್ಮ ಜತೆ ಬರಲು ಶುರು ಮಾಡಿದ್ದಾರೆ. ರಾಷ್ಟ್ರಭಕ್ತ ಮುಸಲ್ಮಾನರ ಬಗ್ಗೆ ನನಗೆ ಅಪಾರ ಗೌರವವಿದೆ. ಆದರೆ, ಸಿದ್ದರಾಮಯ್ಯನವರ ಜತೆ ಎಂತಹವರಿದ್ದಾರೆ ನಿಮಗೂ ಗೊತ್ತೇ ಇದೆಯಲ್ಲಾ ಎಂದ ಈಶ್ವರಪ್ಪ, ಜಮೀರ್ ಅಹ್ಮದ್, ರೋಷನ್ ಬೇಗ್ ಅವರ ಆಟಗಳನ್ನು ನೀವೂ ನೋಡಿದ್ದೀರಿ. ಇವರೆಲ್ಲಾ ಸಿದ್ದರಾಮಯ್ಯನವರ ಸ್ನೇಹಿತರೇ ಎಂದು ವಾಗ್ದಾಳಿ ನಡೆಸಿದರಲ್ಲದೆ, ರೋಷನ್‌ಬೇಗ್ ಅಂತಹವರನ್ನು ಬಿಜೆಪಿ ಹತ್ತಿರವೂ ಸುಳಿಯಲು ಬಿಡುವುದಿಲ್ಲ ಎಂದರು.
ಕುರುಬರು ಸೇರಿದಂತೆ ಎಲ್ಲ ಸಮುದಾಯವರು ಮೀಸಲಾತಿ ಕೇಳುತ್ತಿದ್ದಾರೆ. ಕೇಂದ್ರ ಸರ್ಕಾರ ಎಲ್ಲ ಜಾತಿಗಳ ಬಗ್ಗೆ ನೀವೇ ತೀರ್ಮಾನ ತೆಗೆದುಕೊಳ್ಳಿ ಎಂದು ಹೇಳಿದ್ದಾರೆ. ಕೇಂದ್ರ ನೀಡುವ ಸೂಚನೆಗಳನ್ನು ಇಟ್ಟುಕೊಂಡು ಮುಂದಿನ ಕ್ರಮ ವಹಿಸಲಾಗುವುದು. ಕುರುಬರನ್ನು ಎಸ್ಟಿ ಸೇರಿಸುವ ಕುರಿತು ಕೇಂದ್ರಕ್ಕೆ ಕಳಿಸಿ, ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ತಿಳಿಸಿದರು.
ಇಲಾಖೆ ಹಣ ಬೇನಾಮಿ ಹೆಸರಿನಲ್ಲಿ:
ಗ್ರಾಮೀಣಾಭಿವೃದ್ಧಿ ಇಲಾಖೆಯ ಹಣವನ್ನು ಮಾಜಿ ಸಚಿವ ಕೆ.ಎಚ್. ಪಾಟೀಲ್ ಅವರು ಬೇನಾಮಿ ಹೆಸರಿನಲ್ಲಿ ಇಟ್ಟಿದ್ದರು ಎಂಬ ಆರೋಪವಿತ್ತು. ಅದರ ತನಿಖೆ ನಡೆಯುತ್ತಿದ್ದು, ಅಂತಿಮ ಹಂತದಲ್ಲಿದೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದರು.
ಇಲಾಖೆ ಹಣವನ್ನು ಬೇನಾಮಿ ಹೆಸರಿನಲ್ಲಿ ಇಡುವುದು ಸರಿಯಲ್ಲ. ಎಚ್.ಕೆ. ಪಾಟೀಲ್‌ರ ಮೇಲೆ ಆರೋಪ ಬಂದಿದ್ದರಿಂದ ತನಿಖಾ ಸಮಿತಿ ಮಾಡಲಾಗಿತ್ತು. ವರದಿ ಶೀಘ್ರದಲ್ಲಿಯೇ ಬರಲಿದೆ. ಬಂದ ಬಳಿಕ ನಾನು ಮಾತನಾಡುವೆ. ವರದಿ ಬರುವ ಮುಂಚೆಯೇ ಏನೂ ಮಾತನಾಡುವುದು ಸರಿಯಲ್ಲ ಎಂದರಲ್ಲದೆ, ಒಂದು ವೇಳೆ ಅವ್ಯವಹಾರ ನಡೆದಿದ್ದರೆ ಖಂಡಿತ ಕ್ರಮ ವಹಿಸುತ್ತೇವೆ ಎಂದರು. ಇನ್ನು ಒಂದೂವರೆ ತಿಂಗಳಲ್ಲಿ ಅಂತಿಮ ವರದಿ ಬರಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.