* ಕೋರ್ ಕಮಿಟಿ ತೀರ್ಮಾನ: ಸಚಿವ ಈಶ್ವರಪ್ಪ
* ಸಿಎಂ ಆಗುವ ಮೊದಲು ಸಿದ್ದು, ಡಿಕೆಶಿ ಗೆಲ್ಲಲಿ
* ವಿಶ್ವನಾಥ್‌ಗೆ ನೋಟಿಸ್ ಕೊಡಲಿರುವ ಕಟೀಲ್
ಶಿವಮೊಗ್ಗ(ಜೂ.21): ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರ ಸೂಚನೆ ಬಳಿಕವೂ ಬಹಿರಂಗ ಹೇಳಿಕೆಗಳನ್ನು ನೀಡುತ್ತಿರುವ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅವರ ವಿರುದ್ಧ ಕ್ರಮಕ್ಕೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.
ಭಾನುವಾರ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು ಎಚ್.ವಿಶ್ವನಾಥ್ ಅವರ ಹೇಳಿಕೆಗಳನ್ನು ಗಮನಿಸಿದ್ದೇವೆ. ಯಾರೂ ಪರ ಮತ್ತು ವಿರುದ್ಧದ ಬಹಿರಂಗ ಹೇಳಿಕೆ ನೀಡಬಾರದು ಎಂದು ವರಿಷ್ಠರು ಈಗಾಗಲೇ ಸೂಚಿಸಿದ್ದಾರೆ. ಅರುಣ್ ಸಿಂಗ್ ಸೂಚನೆ ನಂತರವೂ ಬಹಿರಂಗ ಹೇಳಿಕೆ ನೀಡಿದ ಎಚ್. ವಿಶ್ವನಾಥ ವಿರುದ್ಧ ಕ್ರಮಕ್ಕೆ ನಿರ್ಧಾರ ಕೈಗೊಳ್ಳಲಾಗಿದೆ. ಬಿಜೆಪಿ ಕೋರ್ ಕಮಿಟಿಯಲ್ಲಿ ಈ ಸಂಬಂಧ ಚರ್ಚೆ ನಡೆದಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಎಚ್. ವಿಶ್ವನಾಥ್‌ರಿಗೆ ನೋಟೀಸ್ ಕೊಡಲಿದ್ದಾರೆ ಎಂದರು.
'ವಿಶ್ವನಾಥ್ ರಾಜೀನಾಮೆ ನೀಡಿ, ಇಲ್ಲವೆ ಅಪಮಾನ ಎದುರಿಸಲು ಸಿದ್ಧರಾಗಿ'
ಕಾಂಗ್ರೆಸ್ ಮುಖಂಡರಾದ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರಿಬ್ಬರೂ ಮುಖ್ಯಮಂತ್ರಿ ಆಗುವ ಕನಸು ಕಾಣುವುದಕ್ಕೂ ಮೊದಲು ಶಾಸಕರಾಗಿ ಗೆದ್ದು ಬರಲಿ ಎಂದು ವ್ಯಂಗ್ಯವಾಡಿದರು.
ಕಳೆದ ಬಾರಿ ಕಾಂಗ್ರೆಸ್‌ನವರು ಹಾಗೂ ಹೀಗೂ ಐದು ವರ್ಷ ಅಧಿಕಾರ ನಡೆಸಿದರು. ನಂತರ ಕಾಂಗ್ರೆಸ್ ಸರ್ಕಾರ ಬೇಡ ಎಂದು ಜನರೇ ತಿರಸ್ಕಾರ ಮಾಡಿದ್ದಾರೆ. ಸಿದ್ದರಾಮಯ್ಯನವರೇ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲು ಕಂಡರು. ಕಾಂಗ್ರೆಸ್‌ನ ಹಲವು ಮಂತ್ರಿಗಳು, ಶಾಸಕರು ಸೋತರು. ಹೀಗಿದ್ದರೂ ಆ ಪಕ್ಷದ ಕೆಲವು ನಾಯಕರಿಗೆ ಇನ್ನು ಕೂಡ ಮುಖ್ಯಮಂತ್ರಿ ಕುರ್ಚಿಯ ಕನಸು ಬೀಳುತ್ತಿದೆ ಎಂದು ಲೇವಡಿ ಮಾಡಿದರು.