ಕಲಬುರಗಿ: ಗಾಂಧಿ ಜಯಂತಿಯಂದು ಜಿಮ್ಸ್ ಟ್ರಾಮಾ ಸೆಂಟರ್ ಉದ್ಘಾಟನೆ, ಸಚಿವ ಸುಧಾಕರ್

By Suvarna NewsFirst Published Jun 14, 2020, 3:22 PM IST
Highlights

ಕಪ್ಪು ಪಟ್ಟಿಯಲ್ಲಿ ಇದ್ದವರಿಗೆ ರಕ್ಷಣಾ ವ್ಯವಸ್ಥೆಯ ಗುತ್ತಿಗೆ ನೀಡಿರುವ ಆರೋಪ| ಪರಿಶೀಲಿಸಿ ಹೌಸ್ ಕೀಪಿಂಗ್ ಹೊರಗುತ್ತಿಗೆಗೆ ಸಂಬಂಧಿಸಿದಂತೆ ನಿರ್ದಿಷ್ಟ ನೀತಿ ಜಾರಿಗೆ ಕ್ರಮ| ಸಂಸದರು ಮತ್ತು ಶಾಸಕರು ಸಭೆಯಲ್ಲಿ ಪ್ರಸ್ತಾಪಿಸಿದ ಕೆಲ ವಿಷಯಗಳ ಆಧಾರದ ಮೇಲೆ ಹೊರಗುತ್ತಿಗೆ ಸಂಸ್ಥೆ ಸಿಬ್ಬಂದಿ ವಿರುದ್ಧದ ಆರೋಪಗಳ ಬಗ್ಗೆ ತನಿಖೆ ನಡೆಸಿ ಕ್ರಮ ಜರುಗಿಸಬೇಕು, ಅದಕ್ಕಾಗಿ ಒಂದು ಸಮಿತಿ ರಚನೆ|

ಕಲಬುರಗಿ(ಜೂ.14): ಗುಲ್ಬರ್ಗಾ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ನೂತನವಾಗಿ ನಿರ್ಮಿಸಿರುವ ಟ್ರಾಮಾ ಸೆಂಟರ್ ಅನ್ನು ಮುಂದಿನ ಅಕ್ಟೋಬರ್‌ನಲ್ಲಿ ಉದ್ಘಾಟಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.

ಜಿಮ್ಸ್‌ಗೆ ಭೇಟಿ ನೀಡಿ ಸಂಸ್ಥೆಯ ಕಾರ್ಯ ವೈಖರಿಯನ್ನು ಪರಿಶೀಲಿಸಿ ಭಾನುವಾರ ಅವರು ಮಾತನಾಡಿದರು. ಅಗತ್ಯವಾದ ಎಲ್ಲಾ ಕಾಮಗಾರಿ ಪೂರ್ಣಗೊಳಿಸಿ ಉಪಕರಣಗಳನ್ನು ತರಿಸುವ ಪ್ರಕ್ರಿಯೆ ಪೂರ್ಣ ಗೊಳಿಸಬೇಕು. ಅಗತ್ಯವಿರುವ ಸಿಬ್ಬಂದಿ ವಿವರಗಳನ್ನು ನಿರ್ದೇಶಕರಿಗೆ ಕಳುಹಿಸಿ ಒಪ್ಪಿಗೆ ಪಡೆದು ತ್ವರಿತವಾಗಿ ಟ್ರಾಮಾ ಸೆಂಟರ್ ಕಾರ್ಯಾರಂಭಿಸುವಂತೆ ನೋಡಿಕೊಳ್ಳಬೇಕು. ಬರುವ ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ಅದನ್ನು ಉದ್ಘಾಟಿಸಲು ಸಿದ್ಧತೆ ಪೂರ್ಣಗೊಳಿಸಬೇಕು ಎಂದು ಸಚಿವರು ಸೂಚಿಸಿದರು.

ಕರ್ನಾಟಕ ಮತ್ತೆ ಲಾಕ್‌ಡೌನ್ ಆಗುತ್ತಾ? ಎಲ್ಲಾ ಗೊಂದಲಗಳಿಗೆ ತೆರೆ ಎಳೆದ ಸಚಿವ ಸುಧಾಕರ್

ಖಾಲಿಯಿರುವ 16 ಪ್ರೊಫೆಸರ್ ಹುದ್ದೆಗಳ ಭರ್ತಿಗೆ ತಕ್ಷಣವೇ ಅಧಿಸೂಚನೆ ಹೊರಡಿಸಿ ನೇಮಕ ಪ್ರಕ್ರಿಯೆ ಮುಗಿಸುವಂತೆ ಸೂಚಿಸಿದರು. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ನೇಮಕ ಮಾಡುವುದು ತಡ ಆಗುವುದರಿಂದ ಇಲಾಖೆ ಮೂಲಕವೇ ನೇರ ನೇಮಕ ಮಾಡಿಕೊಳ್ಳಲು ಅನುವಾಗುವಂತೆ ನೇಮಕ ನಿಯಮ ರೂಪಿಸಿ. ಇಲ್ಲವಾದಲ್ಲಿ ಬಹುತೇಕ ಎಲ್ಲ ಕಾಲೇಜುಗಳಲ್ಲಿ ನನೆಗುದಿಗೆ ಬಿದ್ದಿರುವ ಬೋಧಕ ಹುದ್ದೆಗಳನ್ನು ಭರ್ತಿ ಮಾಡಲು ಆಗುವುದಿಲ್ಲ ಎಂದು ಇಲಾಖೆ ನಿರ್ದೇಶಕರಿಗೆ ಸಭೆಯಲ್ಲಿ ಸೂಚನೆ ನೀಡಿದರು.

ಹೊರಗುತ್ತಿಗೆ ಸಿಬ್ಬಂದಿಗೆ ಬಯೋಮೆಟ್ರಿಕ್ ಹಾಜರಾತಿ ಕಡ್ಡಾಯ ಗೊಳಿಸಬೇಕು. ಹಣಕಾಸು ಅಧಿಕಾರಿ ಹುದ್ದೆ ಖಾಲಿ ಬಿಡಬಾರದು ಅಥವಾ ಪ್ರಭಾರವು ಇರಬಾರದು ಪೂರ್ಣ ಪ್ರಮಾಣದ ಅಧಿಕಾರಿ ನೇಮಕ ಮಾಡುವಂತೆ ಸೂಚನೆ ನೀಡಿದರು.

ಕೋವಿಡ್ ಸಂದರ್ಭದಲ್ಲಿ ಸರಿಯಾಗಿ ಕಾರ್ಯನಿರ್ವಹಿಸದ ಹೌಸ್ ಕೀಪಿಂಗ್ ಸಿಬ್ಬಂದಿಯನ್ನು ಏಕೆ ಇಟ್ಟುಕೊಂಡಿದ್ದೀರಿ? ಸ್ಥಳೀಯರಿಗೆ ಏಕೆ ಅವಕಾಶ ನೀಡಿಲ್ಲ? ಇದರಿಂದ ಕೆಲಸ ಕಾರ್ಯಗಳಿಗೆ ತೊಂದರೆ ಆಗುವುದಿಲ್ಲವೇ ಎಂದು ನಿರ್ದೇಶಕ ರನ್ನು ತರಾಟೆಗೆ ತೆಗೆದುಕೊಂಡರು.

ಕಪ್ಪು ಪಟ್ಟಿಯಲ್ಲಿ ಇದ್ದವರಿಗೆ ರಕ್ಷಣಾ ವ್ಯವಸ್ಥೆಯ ಗುತ್ತಿಗೆ ನೀಡಿರುವ ಆರೋಪಗಳಿವೆ. ಇದನ್ನು ಪರಿಶೀಲಿಸಿ ಹೌಸ್ ಕೀಪಿಂಗ್ ಹೊರಗುತ್ತಿಗೆಗೆ ಸಂಬಂಧಿಸಿದಂತೆ ನಿರ್ದಿಷ್ಟ ನೀತಿ ಜಾರಿಗೆ ಕ್ರಮ ಜರುಗಿಸಲಾಗುವುದು ಎಂದು ಪ್ರಕಟಿಸಿದರು.
ಸಂಸದರು ಮತ್ತು ಶಾಸಕರು ಸಭೆಯಲ್ಲಿ ಪ್ರಸ್ತಾಪಿಸಿದ ಕೆಲ ವಿಷಯಗಳ ಆಧಾರದ ಮೇಲೆ ಹೊರಗುತ್ತಿಗೆ ಸಂಸ್ಥೆ ಸಿಬ್ಬಂದಿ ವಿರುದ್ಧದ ಆರೋಪಗಳ ಬಗ್ಗೆ ತನಿಖೆ ನಡೆಸಿ ಕ್ರಮಜರುಗಿಸಬೇಕು. ಅದಕ್ಕಾಗಿ ಒಂದು ಸಮಿತಿ ರಚಿಸಲಾಗುವುದು ಎಂದು ತಿಳಿಸಿದರು.

ಸೃಜನೆ ಮಾಡಿರುವ 61 ಸ್ಟಾಫ್ ನರ್ಸ್‌ ಹುದ್ದೆಗಳನ್ನು ಆರೋಗ್ಯ ಇಲಾಖೆಯಿಂದ ಹಸ್ತಾಂತರಿಸುವ ಸಂಬಂಧ ಕ್ರಮ ಜರುಗಿಸಲಾಗುವುದು. ಗುಣಮಟ್ಟದ ಆರೋಗ್ಯ ಸೇವೆ ಜನರಿಗೆ ಸಿಗಬೇಕು ಎಂಬುದು ಚುನಾಯಿತ ಪ್ರತಿನಿಧಿಗಳ ಕಾಳಜಿಯಾಗಿದೆ. ಇದನ್ನು ಎಲ್ಲಾ ಸಿಬ್ಬಂದಿ ಅರ್ಥ ಮಾಡಿಕೊಳ್ಳಬೇಕು ಎಂದರು.

ಆಯುಷ್ಮಾನ್ ಭಾರತ್ ಹಾಗೂ ಇತರೆ ಯೋಜನೆಗಳನ್ನು ಪರಿಣಾಮಕಾರಿಯಾಗಿ ಉಪಯೋಗಿಸಿಕೊಂಡರೆ ಸಂಸ್ಥೆಯ ಸ್ವಯಂ ನಿರ್ವಹಣೆ ಸಾಧ್ಯವಿದೆ. ಸಂಸ್ಥೆ ನಮ್ಮದು ಎಂಬ ಭಾವನೆಯಿಂದ ಕೆಲಸ ಮಾಡಿದರೆ ಇದು ಸಾಧ್ಯವಾಗುತ್ತದೆ ಎಂದು ಸಿಬ್ಬಂದಿಗೆ ಕಿವಿಮಾತು ಹೇಳಿದರು. ಹಣದ ಬಳಕೆ ಮತ್ತು ಬ್ಯಾಂಕ್ ಖಾತೆಯಲ್ಲಿ ಇರುವ ಹಣದ ಮಾಹಿತಿ, ಮೇಲ್ದರ್ಜೆಗೆ ಏರಿಸಲು ರೂಪಿಸಿರುವ ಯೋಜನೆಗಳ ಮಾಹಿತಿಯನ್ನು ಎರಡು ದಿನಗಳಲ್ಲಿ ತಮಗೆ ಕಳುಹಿಸಿಕೊಡುವಂತೆ ಸಚಿವರು ಸೂಚಿಸಿದರು.

click me!