ಬೇರೆ ರಾಜ್ಯದಿಂದ ಬರುವವರಿಗೆ ‘ನೆಗೆಟಿವ್’ ಕಡ್ಡಾಯ| ಬೆಂಗಳೂರಿಗೆ ಬಂದು ನೆಲೆಸುವವರು ಪಾಲಿಸಲೇಬೇಕು| ಮಹಾರಾಷ್ಟ್ರ, ಕೇರಳ, ಪಂಜಾಬ್, ಛತ್ತೀಸ್‌ಗಢ ರಾಜ್ಯಗಳಿಂದ ಬಂದವರಿಗೆ ಕೊರೋನಾ ನೆಗೆಟಿವ್ ವರದಿ ಕಡ್ಡಾಯ|
ಚಿಕ್ಕಬಳ್ಳಾಪುರ(ಮಾ.27): ಅನ್ಯ ರಾಜ್ಯಗಳಿಂದ ಬೆಂಗಳೂರಿಗೆ ಬಂದು ನೆಲೆಸುವವರಿಗೆ ಮಾತ್ರ ಕೊರೋನಾ ನೆಗೆಟಿವ್ ವರದಿ ಕಡ್ಡಾಯ. ಇಂದು ಬಂದು ನಾಳೆ ಹೋಗುವವರಿಗೆ ಅಥವಾ ಎರಡು, ಮೂರು ದಿನ ಇದ್ದು ಹೋಗುವವರಿಗೆ ವರದಿ ಕಡ್ಡಾಯವಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟಪಡಿಸಿದ್ದಾರೆ.
ಜಿಲ್ಲೆಯ ಮಂಚೇನಹಳ್ಳಿಯಲ್ಲಿ ಸುದ್ದಿಗಾರರ ಜತೆ ಮಾತನಾಡುವ ವೇಳೆ ದೇಶದ ಯಾವುದೇ ರಾಜ್ಯದಿಂದ ಬೆಂಗಳೂರಿಗೆ ಆಗಮಿಸಿದರೂ ಕೊರೋನಾ ನೆಗೆಟಿವ್ ವರದಿ ಕಡ್ಡಾಯ ಎಂಬ ಆದೇಶದ ಕುರಿತು ಪ್ರತಿಕ್ರಿಯಿಸಿದ ಅವರು, ಬೆಂಗಳೂರಿಗೆ ಬಂದು ಹೋಗುವವರಿಗೆ ನೆಗೆಟಿವ್ ವರದಿ ಕಡ್ಡಾಯವಲ್ಲ. ಆದರೆ, ಬೇರೆಡೆಯಿಂದ ಬಂದು ಬೆಂಗಳೂರಿನಲ್ಲಿ ದೀರ್ಘ ಕಾಲ ಉಳಿದುಕೊಳ್ಳುವವರಿಗೆ ನೆಗೆಟಿವ್ ವರದಿ ಕಡ್ಡಾಯ. ಆದರೆ ಮಹಾರಾಷ್ಟ್ರ, ಕೇರಳ, ಪಂಜಾಬ್, ಛತ್ತೀಸ್‌ಗಢ ರಾಜ್ಯಗಳಿಂದ ಬಂದವರಿಗೆ ಕೊರೋನಾ ನೆಗೆಟಿವ್ ವರದಿ ಕಡ್ಡಾಯ ಎಂದು ತಿಳಿಸಿದರು.
ಕೊರೋನಾ ಕಾಟ: ಬೆಂಗ್ಳೂರಲ್ಲಿ 1500ರ ಗಡಿಗೆ ತಲುಪಿದ ಸೋಂಕಿತರ ಸಂಖ್ಯೆ
ಮುಂದಿನ ಎರಡು ತಿಂಗಳು ಕಾಲ ಎದುರಾಗಲಿರುವ ಕೊರೋನಾ ಎರಡನೇ ಅಲೆಯನ್ನು ಮಣಿಸಿದರೆ ಹೆಚ್ಚು ಕಡಿಮೆ ಮಹಾಮಾರಿ ಕೊರೋನಾದಿಂದ ನಾವು ಪಾರಾದಂತೆ ಎಂದರು.
ಮಹಾರಾಷ್ಟ್ರದಲ್ಲಿ ಒಂದೇ ದಿನ 35 ಸಾವಿರ ಕೊರೋನಾ ಪಾಸಿಟಿವ್ ಪ್ರಕರಣಗಳು ಕಂಡು ಬಂದಿವೆ. ಬಹುತೇಕ ನಗರಗಳು ಲಾಕ್‌ಡೌನ್ ಆಗಿವೆ. ಆ ಪರಿಸ್ಥಿತಿಗೆ ನಾವು ಹೋಗಬಾರದು. ಪ್ರತಿಯೊಂದು ಜೀವ ಕೂಡ ಅಮೂಲ್ಯ. ನಮ್ಮ ಮನೆಗಳಲ್ಲಿರುವ ಹಿರಿಯರು, ಕಿರಿಯರಾಗಲಿ ಯಾರನ್ನಾದರೂ ಒಬ್ಬರನ್ನು ಕಳೆದುಕೊಂಡರೆ ಎಷ್ಟುನೋವು ಆಗುತ್ತದೆಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ನಮ್ಮ ರಕ್ಷಣೆ ನಮ್ಮ ಕೈಯಲ್ಲಿದೆ ಎಂದು ಸಚಿವರು ಹೇಳಿದರು.