ಗೋ ಮಾಂಸ ತಿನ್ನಬೇಕೆನಿಸಿದರೆ ತಿನ್ನುತ್ತೇನೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಈಶ್ವರಪ್ಪ ಪ್ರತಿಕ್ರಿಯೆ| ಗೋ ರಕ್ಷಕರನ್ನು ಬಂಧಿಸಲು ಇದು ಕಾಂಗ್ರೆಸ್ ಸರ್ಕಾರ ಅಲ್ಲ| ಮುಂದಿನ ಅಧಿವೇಶನದಲ್ಲಿ ಲವ್ ಜಿಹಾದ್ ಕಾನೂನು ಜಾರಿಗೆ ತರಲಾಗುವುದು: ಈಶ್ವರಪ್ಪ|
ಚಿಕ್ಕಮಗಳೂರು(ಜ.14): ಸಿದ್ದರಾಮಯ್ಯ ಹೇಳಿದ್ರು, ನಾನು ಗೋ ಮಾಂಸ ತಿಂತಿನಿ, ಹನುಮ ಹುಟ್ಟಿದ ದಿನ ನಾಟಿ ಕೋಳಿ ತಿಂತಿನಿ ಎಂದ್ರು, ಏನಾದ್ರು ತಿಂದು ಸಾಯಿ, ನಮಗೆ ಸಂಬಂಧ ಇಲ್ಲ ಎಂದು ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಜನಸೇವಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗೋ ಮಾತೆ ನಮ್ಮ ತಾಯಿ. ಗೋ ಮಾಂಸ ತಿಂತೀವಿ ಅನ್ನೋರಿಗೆ ಏನು ಹೇಳಬೇಕು. ಗೋ ಹತ್ಯೆ ನಿಷೇಧ ಮಾಡಲು ರಾಜ್ಯದಲ್ಲಿ ಬಿಜೆಪಿ ಆಡಳಿತಕ್ಕೆ ಬರಬೇಕಾಗಿತ್ತು. ಕಾಂಗ್ರೆಸ್ ಈ ಕೆಲಸ ಯಾಕೆ ಮಾಡ್ಲಿಲ್ಲ ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ನಿರ್ನಾಮ ಆಗಲು, ಸಿದ್ದರಾಮಯ್ಯ ಚಾಮುಡೇಶ್ವರಿ ಕ್ಷೇತ್ರದಲ್ಲಿ ಸೋಲೋದಕ್ಕೆ, ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳೊದಿಕ್ಕೆ ಗೋ ಶಾಪವೇ ಕಾರಣ ಎಂದು ಹೇಳಿದರು.
ನಾಯಿಗಳ ಘೋಷಣೆ:
ಇಲ್ಲಿನ ಅನ್ನ ತಿಂದು, ಗಾಳಿ ಕುಡಿದು ನಾಯಿಗಳು ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಹಾಕುತ್ತಿವೆ. ಕಾನೂನಿನ ಪ್ರಕಾರ ಅಂಥವರ ನಾಲಿಗೆ ಕಿತ್ತು ಹಾಕುವ ಸ್ಥಿತಿ ಮುಂದೊಂದು ದಿನ ಬರುತ್ತೆ, ಅನುಮಾನ ಬೇಡ. ಪಾಕಿಸ್ತಾನ ಜಿಂದಾಬಾದ್ ಅನ್ನೋರು ಇಲ್ಲಿಗೇ ಹೋಗಬೇಕು. ಇಲ್ಲಿನ ಅನ್ನ ತಿನ್ನಬಾರದು. ನಿಮ್ಮೂರಲ್ಲೂ ಇಂತಹ ರಾಷ್ಟ್ರದ್ರೋಹಿಗಳು ಇರಬಹುದು. ಗೋಹತ್ಯೆ ಮಾಡಿ ಮಾಂಸ ಮಾರಾಟ ಮಾಡುವವರು ಇರಬಹುದು, ಹುಷಾರ್. ನಿಮ್ಮೂರಲ್ಲಿ ಗೋವುಗಳನ್ನು ಕಳುವು ಮಾಡಲು ಬಿಡಬೇಡಿ ಎಂದು ಗ್ರಾಪಂ ಸದಸ್ಯರಿಗೆ ಕಿವಿಮಾತು ಹೇಳಿದರು.
'ಮತ್ತೆ ಮುಖ್ಯಮಂತ್ರಿ ಆಗುವುದು ಸಿದ್ದರಾಮಯ್ಯ, ಕುಮಾರಸ್ವಾಮಿಯ ಹಗಲು ಕನಸು'
ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನು ಮಾಡಲಾಗಿದೆ. ಸುಗ್ರೀವಾಜ್ಞೆ ಜಾರಿಗೆ ಬರುತ್ತಿದೆ. ನೀವೇನಾದರೂ ಗೋ ರಕ್ಷಕರಿಗೆ ತೊಂದ್ರೆ ಕೊಟ್ರೆ ನೀವೂ ಕೂಡ ಇಂದಲ್ಲಾ ನಾಳೆ ಅನುಭವಿಸಬೇಕಾಗುತ್ತೆ ಎಂದು ಪೊಲೀಸರಿಗೆ ಎಚ್ಚರಿಕೆ ನೀಡಿದರು. ಗೂಂಡಾಗಿರಿ, ಕಳ್ಳತನ ಮಾಡುವವರಿಗೆ ಬೆಂಬಲ ಕೊಡಬೇಡಿ, ಗೋ ರಕ್ಷಕರಿಗೆ ಸ್ವಾಭಾವಿಕವಾಗಿ ಬೆಂಬಲ ಕೊಡುವುದು ಬಿಟ್ಟು, ಗೋ ರಕ್ಷಕರನ್ನು ಬಂಧಿಸಲು ಇದು ಕಾಂಗ್ರೆಸ್ ಸರ್ಕಾರ ಅಲ್ಲ ಎಂದರು.
ನಮ್ಮ ಹೆಣ್ಣುಮಕ್ಕಳನ್ನು ಮುಟ್ಟಿದರೆ ಕೈ, ಕಾಲು ಮುರಿಯುತ್ತೇವೆ ಎಂಬ ಭಯ ಅವರಿಗೆ ಇರಬೇಕು. ಮುಂದಿನ ಅಧಿವೇಶನದಲ್ಲಿ ಲವ್ ಜಿಹಾದ್ ಕಾನೂನು ಜಾರಿಗೆ ತರಲಾಗುವುದು. ಅಂಥವರನ್ನು ಜೈಲಿಗೆ ಕಳಿಸುವ ಕೆಲಸ ಮಾಡಲಾಗುವುದು ಎಂದು ಹೇಳಿದರು.