ನೋಡ್ತಾ ಇರಿ ಬಿಜೆಪಿಯಲ್ಲಿನ ಅಸಮಾಧಾನ ಸ್ಫೋಟಗೊಳ್ಳುತ್ತದೆ: ಖಂಡ್ರೆ, ಡಾ. ಅಜಯ್, ಪ್ರಿಯಾಂಕ್ ಭವಿಷ್ಯ| ಶೆಟ್ಟರ್ ಮೊದಲು ಸಿಎಂ ಇದ್ದವರು. ಈಗ ಬಿಎಸ್‌ವೈ ಸಂಪುಟದಲ್ಲಿ ಸಚಿವರಾಗಿದ್ದಾರೆ. ಇದೇ ಸಾಕು, ಅವರೇ ವಿಳಾಸ ಇಲ್ಲದಂತೆ ಇರುವಾಗ ರಾಷ್ಟ್ರೀಯ ಪಕ್ಷದ ಬಗ್ಗೆ ಮಾತನಾಡುವ ನೈತಿಕತೆ ಅವರಿಗಿಲ್ಲ ಎಂದು ಟೀಕಿಸಿದ ಕಾಂಗ್ರೆಸ್ ನಾಯಕರು|
ಕಲಬುರಗಿ(ಜ.14): ಬಿಜೆಪಿಯಲ್ಲಿ ಗುಂಪುಗಾರಿಕೆ ಹೆಚ್ಚುತ್ತಿದೆ. ಹಿಂಬಾಗಿಲ ಸರ್ಕಾರಕ್ಕೆ ಬಲ ಇಲ್ಲದಂತಾಗಿದೆ. ಬಿಎಸ್‌ವೈ ಮುಕ್ತ ಬಿಜೆಪಿ ಕಟ್ಟೋದೇ ವರಿಷ್ಠರ ಸಂಕಲ್ಪವಾಗಿದೆ. ಅದರ ಮೊದಲ ಭಾಗವೇ ಸಂಪುಟ ವಿಸ್ತರಣೆ, ನೋಡ್ತಾ ಇರಿ ಸಂಪುಟ ವಿಸ್ತರಣೆ ನಂತರ ಬಿಜೆಪಿಯಲ್ಲಿ ಸಮಾಧಾನದ ಸ್ಫೋಟವಾಗಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ವಿರೋಧ ಪಕ್ಷದ ಮುಖ್ಯ ಸಚೇತಕ ಡಾ. ಅಜಯ್ ಸಿಂಗ್, ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಬಿಜೆಪಿಯಲ್ಲಿ ಗುಂಪುಗಾರಿಕೆ ಹೆಚ್ಚುವ ಭವಿಷ್ಯ ನುಡಿದಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಎಸ್‌ವೈ ಮುಕ್ತ ಬಿಜೆಪಿ ರಾಜ್ಯದಲ್ಲಿ ಸಂಘಟಿಸುವುದೇ ದಿಲ್ಲಿಯ ಕೇಸರಿ ಪಡೆಯ ಮುಖಂಡರ ಸಂಕಲ್ಪವಾದಂತಿದೆ. ಅದಕ್ಕಾಗಿಯೇ ಒಳಗೊಳಗೆ ಎಲ್ಲವೂ ನಡೆಯುತ್ತಿದೆ. ಒಬ್ಬರೊಬ್ಬರು ಭಿನ್ನ ಹೇಳಿಕೆ ನೀಡುತ್ತ ಹೊರಟಿದ್ದಾರೆ ಎಂದು ದೂರಿದರು.
ಬಿಜೆಪಿಯಲ್ಲಿನ ಅಸಮಾಧಾನದ ಬಗ್ಗೆ ತಮಗೆ ಪಕ್ಕಾ ಮಾಹಿತಿ ಇದೆ ಎಂದ ಡಾ. ಅಜಯ್ ಸಿಂಗ್, ಖರ್ಗೆ ಕಾದು ನೋಡಿ, ಸಂಪುಟ ರಚನೆಯಾದ ಮರುಕ್ಷಣದಿಂದಲೇ ನೀವೆ ಮಾಧ್ಯಮದವರು ಫ್ರೈಂ ಟೈಮ್‌ನಲ್ಲಿ ಬಿನ್ನಮತ ಸ್ಫೋಟದ ಸುದ್ದಿ ಬಿತ್ತರಿಸ್ಲಿಕ್ಕೆ ಶುರು ಮಾಡ್ತೀರಿ, ಯಾರಾರಯರ ಅಸಮಾಧಾನವಿದೆ ಎಂದು ನಾವು ಹೇಳೋದಿಲ್ಲ. ಕಾದು ನೋಡಿ ಎಲ್ಲವೂ ಹೊರ ಬರಲಿದೆ ಎಂದರು.
ಕಾಂಗ್ರೆಸ್ ಮುಳುಗಿ ಹೋಗೋ ಪಕ್ಷ ಎಂದು ಇತ್ತೀಚೆಗೆ ಸಚಿವ ಜಗದೀಶ ಶೆಟ್ಟರ್ ನೀಡಿದ್ದ ಹೇಳಿಕೆಗೆ ಪ್ರತ್ಯುತ್ತರ ನೀಡಿದ ಕಾಂಗ್ರೆಸ್ ಮುಖಂಡರು, ಶೆಟ್ಟರ್ ಮೊದಲು ಸಿಎಂ ಇದ್ದವರು. ಈಗ ಬಿಎಸ್‌ವೈ ಸಂಪುಟದಲ್ಲಿ ಸಚಿವರಾಗಿದ್ದಾರೆ. ಇದೇ ಸಾಕು, ಅವರೇ ವಿಳಾಸ ಇಲ್ಲದಂತೆ ಇರುವಾಗ ರಾಷ್ಟ್ರೀಯ ಪಕ್ಷದ ಬಗ್ಗೆ ಮಾತನಾಡುವ ನೈತಿಕತೆ ಅವರಿಗಿಲ್ಲ ಎಂದು ಟೀಕಿಸಿದರು.
ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರಕ್ಕೆ ಕಣ್ಣು, ಕಿವಿ, ಹೃದಯವಿಲ್ಲ ಎಂದು ದೂರಿದ ಅವರು ರೈತರ ಹೋರಾಟಕ್ಕೆ ಸ್ಪಂದಿಸುತ್ತಿಲ್ಲ. ನ್ಯಾಯಾಲಯವೇ ರೈತರ ನೆರವಿಗೆ ಧಾವಿಸಿದೆ. ಕೇಂದ್ರದ ತಪ್ಪು ನಡೆಯೇ ಇದಕ್ಕೆ ಕಾರಣ. ರೈತ ವಿರೋಧಿ, ಕಾರ್ಮಿಕ, ಜನ ವಿರೋಧಿ ಸರ್ಕಾರ ಇದಾಗಿದೆ ಎಂದು ದೂರಿದರು.
ಕಾಂಗ್ರೆಸ್ ಸದಾಕಾಲ ರೈತರು, ಜನಪರ ಹೋರಾಟಗಳೊಂದಿಗೆ ಮುಂದೆ ಹೊರಟಿದೆ. ಈ ಹೋರಾಟ ಹಾಗೇ ಮುಂದುವರಿಯುತ್ತದೆ. ಯಾವ ಕಾರಣಕ್ಕೂ ನಿಲ್ಲೋದಿಲ್ಲವೆಂದ ಖಂಡ್ರೆ ಜನರಿಗೂ ಬಿಜೆಪಿಯ ಭ್ರಷ್ಟಾಚಾರ ಗಮನಕ್ಕೆ ಬರುತ್ತಿದೆ. ಈ ಸರಕಾರದ ಜನ ವಿರೋಧಿ ನಿಲುವುಗಳ ಬಗ್ಗೆ ಬಿಸಿ ಮುಟ್ಟುತ್ತಿದೆ. ಜನರೇ ಪಾಠ ಕಲಿಸುತ್ತಾರೆಂದರು.
'ರ‍್ಯಾಲಿಯಲ್ಲಿ ಅನ್ನದಾತರೇ ಇರಲಿಲ್ಲ, ಕಾಂಗ್ರೆಸ್ ರೈತರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ'
ತೊಗರಿ ಪ್ರೋತ್ಸಾಹ ಧನ ನೀಡದೆ ಸರ್ಕಾರ ತಪ್ಪು ಮಾಡಿದೆ. ಇದೀಗ ನಾಫೆಡ್ ಸಂಸ್ಥೆ ತಾನು ಖರೀದಿಸಿದ ತೊಗರಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತ ಬೆಲೆ ಕುಸಿತಕ್ಕೆ ನಾಂದಿ ಹಾಕಿದೆ. ಇಂತದ್ದನ್ನೆಲ್ಲ ಕಂಡರೂ ಬಿಜೆಪಿ ಮುಖಂಡರು ಜಾಣ ಕುರುಡು ಧೋರಣೆ ಅನುಸರಿಸುತ್ತಿದ್ದಾರೆ. ಬರುವ ದಿನಗಳಲ್ಲಿ ಇದನ್ನೆಲ್ಲ ಕ್ರೂಢೀಕರಿಸಿ ಹೋರಾಟ ಮಾಡುತ್ತೇವೆಂದು ಮುಖ್ಯ ಸಚೇತಕ ಡಾ. ಅಜಯ್ ಸಿಂಗ್ ಹೇಳಿದರು. ಕಲ್ಯಾಣ ವೆಂದು ಹೆಸರಿಟ್ಟರೆ ಕಲ್ಯಾಣವಾಗೋದಿಲ್ಲ. ಕಲಂ 371 ಅನುಷ್ಠಾನ ಮಾಡಲು ಈ ಸಕರಾಕಕ್ಕೆ ಆಸಕ್ತಿಯೇ ಇಲ್ಲ. ಕಲ್ಯಾಣ ನಾಡಿನ ಪ್ರಗತಿಗೆ ಈ ಸರ್ಕಾರ ಕಲ್ಲು ಹಾಕುತ್ತಿದೆ. ನೇಮಕಾತಿ ನಿಲ್ಲಿಸಿದೆ. ಜನರ ಬವಣೆ ನೀಗಿಸುತ್ತಿಲ್ಲ. ಹೊಸ ಯೋಜನೆಗಳನ್ನು ಈ ಬಾಗಕ್ಕೆ ಕೊಡುತ್ತಿಲ್ಲವೆಂದು ಜರಿದ ಖಂಡ್ರೆ ಇಂತಹ ಸರ್ಕಾರ ಬುಡ ಸಮೇತ ಕೀಳುವುದೇ ಕಾಂಗ್ರೆಸ್ ಸಂಕಲ್ಪವೆಂದರು.
ಬಸವಕಲ್ಯಾಣ 8 ಆಕಾಂಕ್ಷಿಗಳ ಹೆಸರು ಕೆಪಿಸಿಸಿ ಮುಂದಿದೆ
ಉಪ ಚುನಾವಣೆ ನಡೆಯಲಿರುವ ಬಸವಕಲ್ಯಾಣದಲ್ಲಿ ಆದಷ್ಟು ಬೇಗ ಕೈ ಪಕ್ಷದ ಅಭ್ಯರ್ಥಿ ಘೋಷಣೆ ಮಾಡೋದಾಗಿ ಹೇಳಿರುವ ಖಂಡ್ರೆ ಈಗಾಗಲೇ 23 ಮಂದಿ ಅರ್ಜಿ ಹಾಕಿದ್ದರು. ಈ ಪೈಕಿ 8 ಮಂದಿ ಹೆಸರುಗಳನ್ನು ಅಂತಿಮಗೊಳಿಸಿ ಪರಿಶೀಲಿಸಲಾಗುತ್ತಿದ್ದು, ಇವರಲ್ಲೇ ಅಭ್ಯರ್ಥಿ ನಿರ್ಧಾರವಾಗಲಿದೆ ಎಂದರು. ಬಸವಕಲ್ಯಾಣ, ಮಸ್ಕಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಖಂಡ್ರೆ ಶೀಘ್ರ ಜ.20 ರೊಳಗೇ ಕಲ್ಯಾಣದ ಅಭ್ಯರ್ಥಿ ಘೋಷಿಸೋದಾಗಿ ಹೇಳಿದರು. 8 ಜನರ ಪಟ್ಟಿಯಲ್ಲಿ ಧರಂಸಿಂಗ್ ಪುತ್ರ ವಿಜಯ ಸಿಂಗ್ ಹಾಗೂ ನಾರಾಯಣ ಅವರ ಧರ್ಮ ಪತ್ನಿ ಮಲ್ಲಮ್ಮನವರಿಬ್ಬರ ಹೆಸರುಗಳಿವೆ ಎಂದ ಖಂಡ್ರೆ ಆ ಬಗ್ಗೆ ಹೆಚ್ಚಿನ ಮಾಹಿತಿ ನೀಡುವ ಗೋಜಿಗೆ ಹೋಗಲಿಲ್ಲ.