ರಾಜ್ಯ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ, ಡಿಕೆಶಿ ಟೀಮ್ ಇದೆ| ಸಚಿವ ಕೆ.ಎಸ್. ಈಶ್ವರಪ್ಪ ಟಾಂಗ್| ಮುಖ್ಯಮಂತ್ರಿ ಸ್ಥಾನವನ್ನು ಕಳೆದುಕೊಂಡಿರುವ ಸಿದ್ದರಾಮಯ್ಯ ಅಧಿಕಾರದ ಹಗಲುಕನಸು ಕಾಣುತ್ತಿದ್ದಾರೆ| ಅಧಿಕಾರ ಇಲ್ಲದವರ ಜತೆ ಯಾರು ಹೋಗುತ್ತಾರೆ|
ಬಳ್ಳಾರಿ(ಜೂ.04): ತನ್ನ ಜತೆಗಿದ್ದ ಕಾಂಗ್ರೆಸ್ ಶಾಸಕರನ್ನು ಉಳಿಸಿಕೊಳ್ಳಲಾಗದ ಸಿದ್ದರಾಮಯ್ಯ ಅವರಿಗೆ ಇನ್ನು ಬಿಜೆಪಿ ಶಾಸಕರನ್ನು ಸೆಳೆಯಲು ಸಾಧ್ಯವಾ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಪ್ರಶ್ನಿಸಿದ್ದಾರೆ.
ನಗರದಲ್ಲಿ ಬುಧವಾರ ಸಂಜೆ ಸುದ್ದಿಗಾರರ ಜತೆ ಮಾತನಾಡಿದ ಅವರು, ಎಂದಿನಂತೆ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರಲ್ಲದೆ, ಮುಖ್ಯಮಂತ್ರಿ ಸ್ಥಾನವನ್ನು ಕಳೆದುಕೊಂಡಿರುವ ಸಿದ್ದರಾಮಯ್ಯ ಅಧಿಕಾರದ ಹಗಲುಕನಸು ಕಾಣುತ್ತಿದ್ದಾರೆ. ಅಧಿಕಾರ ಇಲ್ಲದವರ ಜತೆ ಯಾರು ಹೋಗುತ್ತಾರೆ ಎಂದು ಕೇಳಿದರು.
'ಕೊರೋನಾಗೆ ಮುಂದುವರೆದ ದೇಶಗಳೇ ತತ್ತರ, ಭಾರತದಲ್ಲಿ ಮೋದಿಯಿಂದ ಕೋವಿಡ್ ನಿಯಂತ್ರಣ'
ಈ ರಾಜ್ಯದಲ್ಲಿ ಕಾಂಗ್ರೆಸ್‌ನವರು ಮತ್ತೆ ಮುಖ್ಯಮಂತ್ರಿ ಆಗುವುದಿಲ್ಲ. ದೇಶದ ಯಾವ ಕಾಂಗ್ರೆಸ್ ನಾಯಕರಿಗೂ ರಾಜಕೀಯ ಭವಿಷ್ಯವಿಲ್ಲ. ಕೇಂದ್ರದಲ್ಲಿ ನರೇಂದ್ರ ಮೋದಿ ಅವರು ಬಿಟ್ಟರೆ ಬೇರೆ ಯಾರೂ ಅಧಿಕಾರಕ್ಕೆ ಬರುವುದಿಲ್ಲ ಎಂದರು.
ರಾಜ್ಯ ಕಾಂಗ್ರೆಸ್‌ನಲ್ಲಿ ಎರಡು ಟೀಮ್‌ಗಳಿವೆ. ಸಿದ್ದರಾಮಯ್ಯ ಒಂದು ಕಡೆಯಾದರೆ, ಡಿ.ಕೆ. ಶಿವಕುಮಾರ್ ಮತ್ತೊಂದು ಕಡೆ. ಆ ಪಕ್ಷಕ್ಕೆ ಪರ್ಯಾಯ ಲೀಡರ್‌ಗಳೇ ಇಲ್ಲ. ಡಿ.ಕೆ. ಶಿವಕುಮಾರ್ ಪದಗ್ರಹಣ ವಿಚಾರದಲ್ಲಿ ನಾವು ರಾಜಕೀಯ ಮಾಡುವುದಿಲ್ಲ. ಕೊರೋನಾ ಇರುವುದರಿಂದ ಬೇಡ ಎಂದಿದ್ದೇವಷ್ಟೇ ಎಂದರು. ಬಿಜೆಪಿಯಲ್ಲೂ ಭಿನ್ನಮತ ಇಲ್ಲವೆಂದು ಹೇಳುವುದಿಲ್ಲ, ಖಂಡಿತ ಇದೆ. ಆದರೆ, ಅದನ್ನು ನಾವು ಸರಿಪಡಿಸಿಕೊಳ್ಳುತ್ತೇವೆ ಎಂದು ತಿಳಿಸಿದರು.
ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ವಿಚಾರವೇ ಇಲ್ಲ. ನಾವು ಬಲಿಷ್ಠರಾಗಿರುವಾಗ ಅವರ ಜತೆ ಯಾಕೆ ಮೈತ್ರಿ ಮಾಡಿಕೊಳ್ಳಬೇಕು? ಬಿಜೆಪಿ ಎಲ್ಲೆಡೆ ಕೇಡರ್ ಬೇಸ್ಡ್ ಮಾಡಲು ಹೊರಟಿದೆ ಎಂದು ಕಾಂಗ್ರೆಸ್‌ನವರು ಟೀಕಿಸುತ್ತಿದ್ದಾರೆ. ಆದ್ರೆ, ಬೇಸ್ ಇಲ್ಲದೆ ಚುನಾವಣೆ ಗೆಲ್ಲಲು ಸಾಧ್ಯವೇ? ಎಂದು ಪ್ರಶ್ನಿಸಿದರಲ್ಲದೆ, ಸಂವಿಧಾನ ಬದ್ಧವಾಗಿ ಏನು ಮಾಡಬೇಕೋ ಅದನ್ನು ಮಾಡುತ್ತೇವೆ. ಕಾಂಗ್ರೆಸ್‌ನವರನ್ನು ಕೇಳಿ ಎಲ್ಲ ಮಾಡಬೇಕಾಗಿಲ್ಲ ಎಂದು ಎದುರೇಟು ನೀಡಿದರು.
ಗ್ರಾಮ ಪಂಚಾಯಿತಿಗೆ ನಾಮನಿರ್ದೇಶನ ಮಾಡುವ ಪ್ರಸ್ತಾಪ ಕುರಿತು ಪ್ರಶ್ನೆಗೆ, ಅದಿನ್ನು ಚರ್ಚೆ ನಡೆಯುತ್ತಿದೆ. ಅಂತಿಮವಾಗಿಲ್ಲ ಎಂದರು.