* ದೇಶದ ಜನರಿಗೆ ಮೋದಿ ಆಡಳಿತದಲ್ಲಿ ಸುರಕ್ಷಿತ ಭಾವನೆ ಬಂದಿದೆ
* ಕಠಿಣ ಲಾಕ್‌ಡೌನ್ ಧಾರವಾಡದಲ್ಲಿ ಜಾರಿ
* ಪಾಸಿಟಿವಿಟಿ ದರ ಕಡಿಮೆಯಾದರೆ ಲಾಕ್‌ಡೌನ್ ತೆರವು
ಹುಬ್ಬಳ್ಳಿ(ಮೇ.31): ರಾಜ್ಯ ಹಾಗೂ ಧಾರವಾಡ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಜೂ. 7ರ ವರೆಗೆ ಲಾಕ್‌ಡೌನ್ ಇದೆ. ಅಲ್ಲಿವರೆಗೂ ಕಾಯ್ದು ನೋಡಿ ಲಾಕ್‌ಡೌನ್ ಮಾಡಬೇಕೋ, ಡಿ ಲಾಕ್ ಮಾಡಬೇಕೋ ಎಂಬುದನ್ನು ನಿರ್ಧರಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಹೇಳಿದರು.
ಪ್ರಧಾನಮಂತ್ರಿ ಮೋದಿ ಅವರ ಸರ್ಕಾರ ಎರಡನೇ ಬಾರಿ ಅಧಿಕಾರಕ್ಕೆ ಬಂದು ಎರಡು ವರ್ಷ ತುಂಬಿದ ಹಿನ್ನೆಲೆಯಲ್ಲಿ, ಕೇಶ್ವಾಪುರ ಮಯೂರಿ ಬಡಾವಣೆ ಉದ್ಯಾನದಲ್ಲಿ ಆಯೋಜಿಸಲಾಗಿದ್ದ ಸಸಿ ನೆಡುವ ಕಾರ್ಯಕ್ರಮ ಹಾಗೂ ಫುಡ್‌ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಆನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಕೊರೋನಾ ನಿಯಂತ್ರಣವಾಗುತ್ತಿದೆ. ಸೋಂಕಿತರ ಖಚಿತತೆಯ ಪ್ರಮಾಣ ಶೇ. 16ರಷ್ಟಿದೆ. ಪಾಸಿಟಿವಿಟಿ ದರ ಕಡಿಮೆಯಾದರೆ ಲಾಕ್‌ಡೌನ್ ತೆರವು ಮಾಡಲು ಸಿದ್ಧವಿರುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ಸದ್ಯ ಪಾಸಿಟಿವಿಟಿ ದರ ಕಡಿಮೆಯಿದೆ. ಇದು ಇನ್ನಷ್ಟು ಕಡಿಮೆಯಾಗಬಹುದು ಅಥವಾ ಹೆಚ್ಚಿಗೆ ಕೂಡ ಆಗಬಹುದು. ಇದು ಯಾರ ಕೈಯಲ್ಲೂ ಇಲ್ಲ. ಲಾಕ್‌ಡೌನ್ ಇನ್ನೂ ಎಂಟು ದಿನಗಳ ಕಾಲ ಇದೆ. ಹೀಗಾಗಿ ಜೂ. 7ರ ವರೆಗೆ ಕಾಯ್ದು ನೋಡಿ ಲಾಕ್‌ಡೌನ್ ಮಾಡಬೇಕೋ ಡಿ ಲಾಕ್ ಮಾಡಬೇಕೋ ಎಂಬ ಬಗ್ಗೆ ಮುಖ್ಯಮಂತ್ರಿ ನಿರ್ಧರಿಸುತ್ತಾರೆ. ಲಾಕ್‌ಡೌನ್ ಸಡಿಲಿಕೆ ಎಷ್ಟು ಪ್ರಮಾಣದಲ್ಲಿರಬೇಕೆಂಬ ಬಗ್ಗೆಯೂ ಈಗಲೇ ಮಾತನಾಡುವುದು ಸೂಕ್ತವಲ್ಲ ಎಂದು ನುಡಿದರು.
ಇನ್ನೆರಡು ದಿನಗಳಲ್ಲಿ ಬ್ಲ್ಯಾಕ್ ಫಂಗಸ್ ರೋಗಿಗಳಿಗೆ ಔಷಧಿ ಲಭ್ಯ: ಕೇಂದ್ರ ಸಚಿವ ಅಭಯ
ಪಾರ್ಸಲ್ ಸೇವೆಗೆ ಅವಕಾಶ ರಾಜ್ಯದ ಇತರ ಜಿಲ್ಲೆಗಳಿಗಿಂತಲೂ ಕಠಿಣ ಲಾಕ್‌ಡೌನ್ ಧಾರವಾಡದಲ್ಲಿ ಜಾರಿ ಮಾಡಲಾಗಿದೆ. ಹಲವು ಅಸೋಸಿಯೇಷನ್‌ಗಳು ಲಾಕ್‌ಡೌನ್ ನಿಯಮದಲ್ಲಿ ಕೆಲವು ವಿನಾಯಿತಿ ನೀಡುವಂತೆ ಮನವಿ ಮಾಡಿವೆ. ಮುಖ್ಯವಾಗಿ ಹೋಟೆಲ್ ಸಂಘದ ವತಿಯಿಂದ ಪಾರ್ಸಲ್ ಸೇವೆ ಆರಂಭಿಸಲು ಅವಕಾಶ ಕೇಳಿದ್ದಾರೆ. ಹೋಟೆಲ್‌ಗಳ ಮೇಲೆ ಅವಲಂಬಿತರಾದವರ ಸಂಖ್ಯೆಯೂ ಹೆಚ್ಚಿದೆ. ಈ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ, ಪಾರ್ಸಲ್ ಸೇವೆಗೆ ಅವಕಾಶ ನೀಡುವಂತೆ ಸೂಕ್ತ ನಿರ್ದೇಶನ ನೀಡಲಾಗುವುದು. ರೈತರಿಗೆ ಕೃಷಿ ಚಟುವಟಿಕೆಗೆ ಅನುಕೂಲವಾಗುವಂತೆ ಮಧ್ಯಾಹ್ನ 12ರವರೆಗೆ ಬೀಜ, ಗೊಬ್ಬರ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಎಪಿಎಂಸಿ ಸದಸ್ಯರು ಬೇರೆಡೆಯಿಂದ ಟ್ರಕ್‌ಗಳಲ್ಲಿ ಬರುವ ಕಾಳು ಕಡಿಗಳನ್ನು ಅನ್‌ಲೋಡ್ ಮಾಡಲು ಅವಕಾಶ ನೀಡುವಂತೆ ಕೋರಿದ್ದಾರೆ. ಇವುಗಳ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ಉತ್ತಮ ಆಡಳಿತ:
ದೇಶದ ಆಡಳಿತದ ಚುಕ್ಕಾಣಿ ಹಿಡಿದ ಮೋದಿ ನೇತೃತ್ವದ ಸರ್ಕಾರ ಏಳು ವರ್ಷಗಳನ್ನು ಪೂರೈಸಿ, ಎಂಟನೇ ವರ್ಷಕ್ಕೆ ಕಾಲಿಡುತ್ತಿದೆ. ಈ ಶುಭ ಸಂದರ್ಭದಲ್ಲಿ ದೇಶದ ಜನತೆಯ ಪರವಾಗಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ದೇಶದ ಬದಲಾವಣೆ ತರುವಲ್ಲಿ ಮೋದಿ ಅವರು ಸಫಲರಾಗಿದ್ದಾರೆ. ಆಶ್ವಾಸನೆ ನೀಡಿದ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ.
ಜಮ್ಮು ಕಾಶ್ಮೀರ, ರಾಮಮಂದಿರ ನಿರ್ಮಾಣದ ವಿಚಾರ ಮತ್ತು ದೇಶದಲ್ಲಿ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸುವಲ್ಲಿ ಕಾರ್ಯನಿರ್ವಹಿಸಿದ್ದಾರೆ. ದೇಶದ ಜನರಿಗೆ ಮೋದಿ ಅವರ ಆಡಳಿತದಲ್ಲಿ ಸುರಕ್ಷಿತ ಭಾವನೆ ಬಂದಿದೆ. ಅನಿರೀಕ್ಷಿತ ಕೋವಿಡ್ 2 ಅಲೆ ಸಂದರ್ಭದಲ್ಲಿ ಕೂಡ ಜನರ ವಿಶ್ವಾಸ ಮೂಡಿಸಿ ಕೆಲಸ ಮಾಡುತ್ತಿದ್ದಾರೆ ಎಂದು ಶೆಟ್ಟರ್ ಹೇಳಿದರು. ಈ ವೇಳೆ ಸಚಿವ ಪ್ರಹ್ಲಾದ ಜೋಶಿ, ಮುಖಂಡರಾದ ಮಲ್ಲಿಕಾರ್ಜುನ ಸಾವುಕಾರ್, ಸಂತೋಷ ಚವ್ಹಾಣ್ ಉಪಸ್ಥಿತರಿದ್ದರು.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona