
ಧಾರವಾಡ(ಫೆ.22): ಪಿಎಫ್‌ಐ, ಮಾಜಿ ಸಿಎಂ ಸಿದ್ದರಾಮಯ್ಯ ಇವರೆಲ್ಲಾ ಒಂದೇ ತಂಡ. ಆರ್‌ಎಸ್‌ಎಸ್ ಎನ್ನುವುದು ರಾಷ್ಟ್ರಭಕ್ತಿಯ ಸಂಕೇತ. ಸಂಘವು ದೇಶವನ್ನು ಕಟ್ಟುವ ಕೆಲಸ ಮಾಡುತ್ತಿದೆ ಎಂದು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ತಿಳಿಸಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್‌ಎಸ್‌ಎಸ್ ಎಲ್ಲ ಸಮಾಜವನ್ನು ಒಗ್ಗೂಡಿಸುವ ಕೆಲಸವನ್ನು ಮಾಡುತ್ತಿದೆ. ಟೀಕೆ ಮಾಡಿದವರೇ ಹಾಳಾಗಿದ್ದಾರೆಯೇ ಹೊರತು ಅದರಿಂದ ಸಂಘಕ್ಕೆ ಏನೂ ಆಗಿಲ್ಲ ಎಂದರು.
'ಸಿದ್ದು, ಎಚ್‌ಡಿಕೆ ಹಣ ನೀಡದಿದ್ರೂ ರಾಮ ಮಂದಿರ ನಿರ್ಮಾಣವಾಗುತ್ತೆ'
ಮಾಜಿ ಮುಖ್ಯಮಂತ್ರಿಗಳು ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡದೇ ಇದ್ದರೆ ನಿರ್ಮಾಣ ಕಾರ್ಯ ಸ್ಥಗಿತಗೊಳ್ಳುವುದಿಲ್ಲ. ರಾಮಮಂದಿರ ನಿರ್ಮಾಣ ಮಾಡಬೇಕು ಎಂಬುವುದು ಕೋಟ್ಯಂತರ ಜನರ ಅಭಿಲಾಷೆ. ಈ ಕಾರಣದಿಂದ ನಾವು ಹೋದಲೆಲ್ಲಾ ಒಬ್ಬೊಬ್ಬರು ಲಕ್ಷಾಂತರ ರುಪಾಯಿ ದೇಣಿಗೆ ನೀಡುತ್ತಿದ್ದಾರೆ. ಮತಬ್ಯಾಂಕ್‌ಗಾಗಿ ಮಾಜಿ ಮುಖ್ಯಮಂತ್ರಿಗಳು ರಾಮಮಂದಿರದ ಬಗ್ಗೆ ಅಪಸ್ವರ ತೆಗೆಯುತ್ತಿದ್ದಾರೆ. ಅವರವರ ಅಪಸ್ವರವೇ ಅವರಿಗೆ ಮುಳುವಾಗಲಿದೆ ಎಂದರು.
ಐಎಂಎ ಪ್ರಕರಣದಲ್ಲಿ ಮಾಜಿ ಸಿಎಂಗಳ ಹೆಸರು ಕೇಳಿಬಂದಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಪ್ರಕರಣದ ಬಗ್ಗೆ ಇನ್ನೂ ವಿಚಾರಣೆ ನಡೆದಿದೆ. ಅವರ ಹೆಸರಿದ್ದರೆ ತನಿಖೆಯಲ್ಲಿ ಹೊರಗೆ ಬರುತ್ತದೆ ಎಂದರು.