ಹೋರಾಟ ನಿರತ ರೈತರ ಸಾವಿಗೆ ಕಾಂಗ್ರೆಸ್‌ ಪಕ್ಷವೇ ಹೊಣೆ: ಶೆಟ್ಟರ್‌

By Kannadaprabha NewsFirst Published Jan 27, 2021, 8:25 AM IST
Highlights

ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಸಿಗುವ ಮೂಲಕ ಅವರ ಆದಾಯ ದ್ವಿಗುಣದ ಹಿನ್ನೆಲೆಯಲ್ಲಿ ಕಾಯ್ದೆ ಜಾರಿ| ರೈತರ ಹೋರಾಟಕ್ಕೆ ಕುಮ್ಮಕ್ಕು ನೀಡಿದ್ದೇ ಕಾಂಗ್ರೆಸ್‌ ಮುಖಂಡರು| ಖಾತೆಗಳ ಹಂಚಿಕೆಯ ವಿಷಯದಲ್ಲಿ ಕೆಲ ವಿಷಯಗಳಿಗೆ ಗೊಂದಲ ಉಂಟಾಗುವುದು ಸಹಜ| 

ಧಾರವಾಡ(ಜ.27): ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟದಲ್ಲಿ ಅಸುನೀಗಿದ ಹೋರಾಟಗಾರರ ಸಾವಿಗೆ ನೇರವಾಗಿ ಕಾಂಗ್ರೆಸ್‌ ಪಕ್ಷವೇ ಹೊಣೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌ ಆರೋಪಿಸಿದ್ದಾರೆ. 

ಜಿಲ್ಲಾ ಕ್ರೀಡಾಂಗಣದಲ್ಲಿ 72ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಸಿಗುವ ಮೂಲಕ ಅವರ ಆದಾಯ ದ್ವಿಗುಣದ ಹಿನ್ನೆಲೆಯಲ್ಲಿ ಈ ಕಾಯ್ದೆಗಳನ್ನು ಜಾರಿ ಮಾಡಲಾಗಿದೆ. ಆದರೆ, ನಿರುದ್ಯೋಗಿ ಆಗಿರುವ ಕಾಂಗ್ರೆಸ್‌ ನಾಯಕರು ರೈತರಿಗೆ ಪ್ರಚೋದನೆ ನೀಡಿ ಹೋರಾಟ ನಡೆಸುವಂತೆ ಮಾಡಿದ್ದಾರೆ. ಕಾಂಗ್ರೆಸ್‌ನ ಕುಮ್ಮಕ್ಕಿನಿಂದ ಪ್ರತಿಭಟನೆ ನಡೆಸಲಾಗುತ್ತಿರುವ ಕಾರಣ ಅಲ್ಲಿ ಮಡಿದ ರೈತರ ಸಾವಿಗೆ ಕಾಂಗ್ರೆಸ್‌ ಹೊಣೆ ಎಂದು ಪ್ರತಿಪಾದಿಸಿದರು.

ನಮ್ಮ ರೈತರು ವಿರೋಧಿಸಿಲ್ಲ:

ರೈತರ ಹೋರಾಟ ಬರೀ ಪಂಜಾಬ ಮತ್ತು ಹರಿಯಾಣ ರಾಜ್ಯಗಳಿಗೆ ಮಾತ್ರ ಸೀಮಿತವಾಗಿದೆ. ನಮ್ಮ ರಾಜ್ಯದ ಯಾವ ರೈತರೂ ಈ ಕಾನೂನು ಬೇಡ ಎಂದಿಲ್ಲ. ರೈತರ ಹಿತಾಸಕ್ತಿಗೆ ನಡೆಸುತ್ತಿರುವ ಒಳ್ಳೆ ಕೆಲಸಕ್ಕೆ ಪ್ರತಿಪಕ್ಷಗಳು ನೈತಿಕ ಬೆಂಬಲ ನೀಡಬೇಕಿತ್ತು. ಆದರೆ, ಅವರು ಕೇವಲ ಟೀಕೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಪಾರದರ್ಶಕ ಆಡಳಿತ ನಡೆಸುತ್ತಿದ್ದು, ಅವರಿಗೆ ವಿರೋಧ ಮಾಡಲು ಕಾಂಗ್ರೆಸ್‌ಗೆ ಯಾವುದೇ ವಿಷಯ ಇಲ್ಲದ ಕಾರಣ ಈ ಹೋರಾಟಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ದೂರಿದ ಶೆಟ್ಟರ್‌, ಸುಮಾರು 30 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್‌ ರೈತರಿಗೆ ಯಾವುದೇ ಅನುಕೂಲ ಕಲ್ಪಿಸಿಲ್ಲ. ಇದೀಗ ಕೆಲ ಬದಲಾವಣೆ ಮೂಲಕ ಅನುಕೂಲ ಕಲ್ಪಿಸಲಾಗುತ್ತಿದೆ. ಕಾನೂನು ಜಾರಿಗೆ ತಂದು ಪ್ರಯೋಗ ನಡೆಸಿದಾಗ ಮಾತ್ರ ಅದರಲ್ಲಿನ ಲೋಪ ದೋಷಗಳು ಸ್ಪಷ್ಟವಾಗುತ್ತದೆ. ಒಂದು ವೇಳೆ ರೈತರಿಗೆ ಮಾರಕವಾದರೆ ಹಿಂಪಡೆಯಲೂ ಸರ್ಕಾರ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದರು.

ಉತ್ತಮ ಬೆಲೆ ಸಿಗುವುದಾದರೆ ಎಪಿಎಂಸಿ ಮುಚ್ಚಿದ್ರೆ ಏನಾಗುತ್ತೆ?: ಜಗದೀಶ್‌ ಶೆಟ್ಟರ್‌

ಹು-ಧಾ ಬೈಪಾಸ್‌ ಅಗಲೀಕರಣ ವಿಷಯವಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು, ನೈಸ್‌ ಸಂಸ್ಥೆ ಮುಖ್ಯಸ್ಥ ಅಶೋಕ ಖೇಣಿ ಜತೆಗೆ ಮಾತುಕತೆ ನಡೆಸಲಾಗಿದೆ. ಸಧ್ಯದ ರಸ್ತೆಯ ಅಕ್ಕಪಕ್ಕದಲ್ಲಿ ಮತ್ತೇ ನಾಲ್ಕು ರಸ್ತೆ ನಿರ್ಮಾಣಕ್ಕೆ ಅವರು ಒಪ್ಪಿಗೆ ನೀಡಿದ್ದಾರೆ. ಕೇಂದ್ರ ಸರ್ಕಾರ ಸಹ ಅಗತ್ಯ ಅನುದಾನ ನೀಡಲು ಸಿದ್ಧವಿದ್ದು, ಡಿಪಿಆರ್‌ ತಯಾರಿಸಿ ನೀಡುವಂತೆ ಸೂಚಿಸಿದೆ. ಹೀಗಾಗಿ ಕೆಲ ದಿನಗಳಲ್ಲೇ ಕೇಂದ್ರ ಸರ್ಕಾರಕ್ಕೆ ಡಿಪಿಆರ್‌ನೊಂದಿಗೆ 1200 ಕೋಟಿ ಮೊತ್ತದ ಪ್ರಸ್ತಾವ ಸಲ್ಲಿಸಿ, ಶೀಘ್ರದಲ್ಲಿ ಕಾಮಗಾರಿ ಪ್ರಾರಂಭಿಸಲಾಗುವುದು ಎಂದರು.

ಖಾತೆಗಳ ಹಂಚಿಕೆಯ ವಿಷಯದಲ್ಲಿ ಕೆಲ ವಿಷಯಗಳಿಗೆ ಗೊಂದಲ ಉಂಟಾಗುವುದು ಸಹಜ. ಮುಖ್ಯಮಂತ್ರಿ ಯಡಿಯೂರಪ್ಪ ಎಲ್ಲರೊಂದಿಗೆ ಪರಸ್ಪರ ಮಾತನಾಡುವ ಮೂಲಕ ಎಲ್ಲ ಗೊಂದಲಗಳನ್ನು ನಿವಾರಣೆ ಮಾಡಿದ್ದಾರೆ ಎಂದರು. ಕೈಗಾರಿಕಾ ಕಂಪನಿಗಳಿಗೆ ಭೂಮಿ ನೀಡಲು ರಾಜ್ಯದಲ್ಲಿ ಒಟ್ಟು 10 ಸಾವಿರ ಎಕರೆ ಜಾಗ ಸರ್ಕಾರದ ಬಳಿ ಇದೆ. ಇನ್ನೂ 10 ಸಾವಿರ ಎಕರೆ ಭೂ ಸ್ವಾಧೀನ ಮಾಡಿಕೊಳ್ಳುವ ಪ್ರಕ್ರಿಯೆ ನಡೆದಿದೆ. ಹೀಗಾಗಿ ರಾಜ್ಯಕ್ಕೆ ಆಗಮಿಸುವ ಕಂಪನಿಗಳಿಗೆ ಭೂಮಿ ನೀಡಲು ಯಾವುದೇ ಸಮಸ್ಯೆ ಇಲ್ಲ ಎಂದರು.
 

click me!