ಚಿಕ್ಕಬಳ್ಳಾಪುರ ಉತ್ಸವಕ್ಕೆ ನಿರೀಕ್ಷೆಗೂ ಮೀರಿ ಪ್ರತಿಕ್ರಿಯೆ: ಸಚಿವ ಸುಧಾಕರ್‌

By Girish Goudar  |  First Published Jan 3, 2023, 9:03 PM IST

ಉತ್ಸವದ ಸಿದ್ಧತೆಗಳು ಅಂತಿಮ ಹಂತದಲ್ಲಿದ್ದು, ಯುವಕರು ಉತ್ಸಾಹದಿಂದ ಭಾಗವಹಿಸುತ್ತಿರುವುದು ಪ್ರಶಂಸನೀಯ. ಚಿಕ್ಕಬಳ್ಳಾಪುರ ಜಿಲ್ಲೆಯಾಗಿ ಒಂದೂವರೆ ದಶಕ ಪೂರೈಸಿರುವ ಹಿನ್ನೆಲೆಯಲ್ಲಿ ಇದು ಜಿಲ್ಲೆಯ ಒಂದೂವರೆ ದಶಕದ ಸಂಭ್ರವೂ ಆಗಲಿದೆ ಎಂದ ಸಚಿವ ಡಾ.ಕೆ.ಸುಧಾಕರ್ 


ವರದಿ- ರವಿಕುಮಾರ್ ವಿ, ಏಷ್ಯಾನೆಟ್ ಸುವರ್ಣ ನ್ಯೂಸ್

ಚಿಕ್ಕಬಳ್ಳಾಪುರ(ಜ.03):  ದಾಖಲೆ ಮಟ್ಟದಲ್ಲಿ ಕ್ರೀಡಾ ತಂಡಗಳು ನೋಂದಾಯಿಸಿಕೊಳ್ಳುವ ಮೂಲಕ ಚಿಕ್ಕಬಳ್ಳಾಪುರ ಉತ್ಸವಕ್ಕೆ ಯುವಕರು ಮತ್ತು ಮಹಿಳೆಯರು ನಿರೀಕ್ಷೆಗೂ ಮೀರಿ ಪ್ರತಿಕ್ರಿಯೆ ತೋರುತ್ತಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹರ್ಷ ವ್ಯಕ್ತಪಡಿಸಿದರು. ಇಂದು(ಮಂಗಳವಾರ) ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ಸವದ ಸಿದ್ಧತೆಗಳು ಅಂತಿಮ ಹಂತದಲ್ಲಿದ್ದು, ಯುವಕರು ಉತ್ಸಾಹದಿಂದ ಭಾಗವಹಿಸುತ್ತಿರುವುದು ಪ್ರಶಂಸನೀಯ. ಚಿಕ್ಕಬಳ್ಳಾಪುರ ಜಿಲ್ಲೆಯಾಗಿ ಒಂದೂವರೆ ದಶಕ ಪೂರೈಸಿರುವ ಹಿನ್ನೆಲೆಯಲ್ಲಿ ಇದು ಜಿಲ್ಲೆಯ ಒಂದೂವರೆ ದಶಕದ ಸಂಭ್ರವೂ ಆಗಲಿದೆ ಎಂದರು.

Tap to resize

Latest Videos

1,301 ಕ್ರೀಡಾ ತಂಡಗಳು ಭಾಗಿ 

ಚಿಕ್ಕಬಳ್ಳಾಪುರ ಉತ್ಸವದಲ್ಲಿ 1,301 ವಿವಿಧ ಕ್ರೀಡಾ ತಂಡಗಳು ಭಾಗವಹಿಸುತ್ತಿವೆ. ಇಂದಿನಿಂದಲೇ ಕ್ರೀಡಾಕೂಟಗಳು ಆರಂಭವಾಗಿದ್ದು, ಹೊನಲು ಬೆಳಕಿನ ಕಬಡ್ಡಿ, ವಾಲೀಬಾಲ್ ಸೇರಿದಂತೆ ಹಲವು ಪಂದ್ಯಾವಳಿಗಳು ನಡೆಯಲಿವೆ. ಗಾಪಂ, ಜಿಪಂ ಮಟ್ಟದಲ್ಲಿ ಕ್ರೀಡೆಗಳಿಗೆ ಈಗಾಗಲೇ ಚಾಲನೆ ದೊರೆತಿದೆ. ಥ್ರೋಬಾಲ್, ಕ್ರಿಕೆಟ್, ಹಗ್ಗಜಗ್ಗಾಟ, ಈಜು ಸೇರಿದಂತೆ ಹಲವು ಕ್ರೀಡೆಗಳು ನಡೆಯುತ್ತಿವೆ ಎಂದರು. 325 ಕ್ರಿಕೆಟ್ ತಂಡಗಳು, 90 ಥ್ರೋಬಾಲ್ ತಂಡಗಳು, 166 ವಾಲೀಬಾಲ್ ತಂಡಗಳು, 283 ಕಬಡ್ಡಿ ತಂಡಗಳು, 288 ಹಗ್ಗಜಗ್ಗಾಟ ತಂಡಗಳು, 134 ಮಹಿಳಾ ತಂಡಗಳು ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಲು ನೋಂದಣಿ ಮಾಡಿಕೊಂಡಿದ್ದು, 10 ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳು ಉತ್ಸವದಲ್ಲಿ ನಡೆಯಲಿರುವ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸುತ್ತಿರುವುದು ವಿಶೇಷ ಎಂದರು.

ಶ್ರಮಿಕ ವರ್ಗಗಳಿಗೆ ಮೀಸಲಾತಿ ಐತಿಹಾಸಿಕ ತೀರ್ಮಾನ: ಆರೋಗ್ಯ ಸಚಿವ ಡಾ.ಕೆ. ಸುಧಾಕರ್

ಉತ್ಸವಕ್ಕೆ ಡಿಜಿಟಲ್ ಟಚ್ 

ಚಿಕ್ಕಬಳ್ಳಾಪುರ ಉತ್ಸವಕ್ಕೆ ಡಿಜಿಟಲ್ ಟಚ್ ನೀಡಲಾಗಿದ್ದು, www.chikkaballapurutsava.com ವೆಬ್ ಸೈಟ್ ನಲ್ಲಿ  ಉತ್ಸವದ ಎಲ್ಲ ಮಾಹಿತಿಯೂ ಲಭ್ಯವಾಗಲಿದೆ. ಮನರಂಜನೆ, ಹಾಸ್ಯ, ಕಲೆ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ ಹೀಗೆ ಎಲ್ಲ ವಿಧದ ಮನರಂಜನೆ ಉತ್ಸವದಲ್ಲಿ ಆಯೋಜಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಕಾರ್ಯಕ್ರಮಗಳ ವಿವರ 

ಈ ಉತ್ಸವದ ಮೂಲಕ ರಾಜ್ಯಕ್ಕೆ ಜಿಲ್ಲೆಯ ಸಾಧನೆ, ಪರಂಪರೆ, ಪ್ರವಾಸಿ ತಾಣಗಳನ್ನು ಪರಿಚಯಿಸುವ ಕೆಲಸವಾಗಬೇಕು. ಜ.7ರಂದು ಮಧ್ಯಾಹ್ನ 2ಗಂಟೆಗೆ ನಗರದ ಎಂಜಿ ರಸ್ತೆಯ ಮರಳು ಸಿದ್ಧೇಶ್ವರ ದೇವಾಲಯದ ಬಳಿ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ. ನಂತರ ಮೂರೂವರೆ ಗಂಟೆಗೂ ಹೆಚ್ಚು ಕಾಲ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಲಿದೆ ಎಂದು ಸಚಿವರು ಮಾಹಿತಿ ನೀಡಿದರು.

3 ಸಾವಿರ ಕಲಾ ತಂಡಗಳು ಭಾಗಿ 

ರಾಜ್ಯ ಮತ್ತು ದೇಶದ ವಿವಿಧ ಭಾಗಗಳಿಂದ ಸುಮಾರು 3 ಸಾವಿರಕ್ಕೂ ಹೆಚ್ಚು ಕಲಾ ತಂಡಗಳು ಈ ಮೆರವಣಿಗೆಯಲ್ಲಿ ಭಾಗವಹಿಸಲಿವೆ. ಅಲ್ಲದೆ ಸ್ಥಳೀಯ ಯುವಕರು ವೇಷಭೂಷಣದೊಂದಿಗೆ ಭಾಗವಹಿಸಲಿದ್ದಾರೆ. ಜೊತೆಗೆ ಜಿಲ್ಲೆಯ 21 ವಿವಿಧ ಇಲಾಖೆಗಳಿಂದ ಸ್ಥಬ್ದ ಚಿತ್ರದ ವಾಹನಗಳು ಸಂಚರಿಸಲಿವೆ. ಉದ್ಘಾಟನೆ ಮತ್ತು ಮೆರವಣಿಗೆ ನಂತರ ನಗರದ ಸರ್ ಎಂವಿ ಜಿಲ್ಲಾ ಕ್ರೀಡಾಂಗಣದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ ಎಂದರು.

ಉತ್ಸವದ ಉದ್ಘಾಟನೆಯನ್ನು ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರು ನೆರವೇರಿಸಲಿದ್ದು, ಧರ್ಮಸ್ಥಳದ ಶ್ರೀ ವೀರೇಂದ್ರ ಹೆಗ್ಗಡೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಾಲ್ಗೊಳ್ಳಲಿದ್ದಾರೆ.   ತೋಟಗಾರಿಕಾ ಸಚಿವ ಮುನಿರತ್ನ, ಪ್ರವಾಸೋದ್ಯಮ ಸಚಿವ ಆನಂದ ಸಿಂಗ್, ಇಂಧನ ಸಚಿವ ಸುನಿಲ್ ಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್, ಕನ್ನಡದ ಖ್ಯಾತ  ನಟ ಕಿಚ್ಚ ಸುದೀಪ್ ಮತ್ತು ತಾವು ತಲಾ ಒಂದು ಪ್ರದರ್ಶನದ ಉದ್ಘಾಟನೆ ನೆರವೇರಿಸಲಾಗುವುದು ಎಂದು ತಿಳಿಸಿದರು.

Chikkaballapur News: ಜಿಲ್ಲೆಯಲ್ಲಿ ಶಾಲೆಯಿಂದ ಹೊರಗುಳಿದ 496 ಮಕ್ಕಳು

ಅದ್ಧೂರಿ ಊರ ಹಬ್ಬ 

ಜ.8ರಂದು ಮಹಿಳೆಯರಿಗಾಗಿ ಅಡುಗೆ ಸ್ಪರ್ಧೆ ಏರ್ಪಡಿಸಲಾಗಿದೆ. ಸಂಜೆ ವೇದಿಕೆ ಕಾರ್ಯಕ್ರಮಗಳು ನಡೆಯಲಿವೆ. ಜ.9ರಂದು ಅಥ್ಲೆಟಿಕ್ ಸ್ಪರ್ಧೆಗಳು ನಡೆಯಲಿವೆ. ಅಂದಿನ ಸಂಜೆ ಕ್ಲಾಸಿಕಲ್ ನೃತ್ಯ, ಯಕ್ಷಗಾನ, ಸೋನುನಿಗಮ್ ಅವರ ಪ್ರದರ್ಶನ ನಡೆಯಲಿದ್ದು, ನಟರಾದ ಗಣೇಶ್, ಉಪೇಂದ್ರ ಸೇರಿದಂತೆ ಹಲವರು ಭಾಗಿಯಾಗಲಿದ್ದಾರೆ ಎಂದರು.

ಜ.10 ರಂದು ಕುಸ್ತಿ ಪ್ರದರ್ಶನ ಏರ್ಪಡಿಸಲಾಗಿದ್ದು, ಸಂಜೆ ಅರ್ಜುನ್ ಜನ್ಯ, ವಿಜಯ ಪ್ರಕಾಶ್ ಭಾಗಿಯಾಗಲಿದ್ದಾರೆ. ಜ.11ರಂದು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಎಲ್ಲ ಗ್ರಾಮಗಳಲ್ಲಿ ಊರ ಹಬ್ಬ ನಡೆಯಲಿದ್ದು, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. 12 ರಂದು ಯುವೋತ್ಸವ ನಡೆಯಲಿದ್ದು, ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ ಸಂವಾದ, ಯುವಕರಿಗೆ ಚರ್ಚಾಸ್ಪರ್ದೆ, ಚಿತ್ರಕಲಾ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಕಿರುಚಿತ್ರ ನಿರ್ದೇಶನ, ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ,  ಉದ್ಯೋಗ ಮೇಳದಲ್ಲಿ 105 ಪ್ರತಿಷ್ಠಿತ ಕಂಪನಿಗಳು ನೋಂದಣಿಯಾಗಿದ್ದು, 12 ಸಾವಿರಕ್ಕೂ ಹೆಚ್ಚು ಉದ್ಯೋಗದ ಭರವಸೆ ನೀಡಿದ್ದಾರೆ.

click me!