ಬಾಗಲಕೋಟೆ ಜಿಲ್ಲೆಯಲ್ಲಿ ಮಳೆ ಪ್ರವಾಹದಿಂದ ಉಂಟಾದ ಹಾನಿ ವೀಕ್ಷಿಸಿದ ಸಚಿವ ಸಿ.ಸಿ.ಪಾಟೀಲ್‌

By Govindaraj S  |  First Published Sep 17, 2022, 9:39 PM IST

ಜಿಲ್ಲೆಯ ಬಾದಾಮಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮಳೆ ಹಾಗೂ ಪ್ರವಾಹದಿಂದ ಉಂಟಾದ ಹಾನಿ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಭೇಟಿ ನೀಡಿ ಪರಿಶೀಲನೆ ನಡೆಸಿದರು.


ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷ್ಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ

ಬಾಗಲಕೋಟೆ (ಸೆ.17): ಜಿಲ್ಲೆಯ ಬಾದಾಮಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮಳೆ ಹಾಗೂ ಪ್ರವಾಹದಿಂದ ಉಂಟಾದ ಹಾನಿ ಪ್ರದೇಶಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇನ್ನು ಅಗಸನಕೊಪ್ಪಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅಂದಾಜು 50 ಹೆಕ್ಟೇರ್ ಪ್ರದೇಶ ಹಾನಿಯಾಗಿದ್ದು, ಇದರಿಂದ ರೈತ ಬೆಳೆ ಹೆಸರು, ಸೂರ್ಯಕ್ರಾಂತಿ, ಮೆಕ್ಕೆಜೋಳ, ಉಳ್ಳಾಗಡ್ಡಿ ಬೆಳೆ ಹಾಳಾಗಿರುವದನ್ನು ಪರಿಶೀಲನೆ ನಡೆಸಿದರು. ಈಗಾಗಲೇ ಹೆಸರು ಬೆಳೆದ ರೈತ ಭರಮಪ್ಪ ನಾಗನ್ನವರಿಗೆ ಪರಿಹಾರ ಹಣ ಬ್ಯಾಂಕ್ ಖಾತೆಗೆ ಜಮಾ ಆಗಿರುವ ಬಗ್ಗೆ ತಿಳಿಸಿದರು. 

Tap to resize

Latest Videos

undefined

ಉಳಿದ ಬೆಳೆ ಹಾನಿಗೆ ಶೀಘ್ರದಲ್ಲಿಯೇ ಪರಿಹಾರ ಒದಗಿಸುವ ಕಾರ್ಯ ಮಾಡಲಾಗುವುದೆಂದು ಸಚಿವರು ತಿಳಿಸಿದರು. ಕೆರೂರಿನ ವಿಜಯಲಕ್ಷ್ಮೀ ಕೆರೂರ ರೈತರ ಸರ್ವೆ ನಂಬರ 73 ಜಮೀನಿಗೆ ಭೇಟಿ ನೀಡಿ ಹಾಳಾಗಿರುವ ಮೆನಸಿಣಕಾಯಿ ಬೆಳೆಯನ್ನು ವೀಕ್ಷಿಸಿದರು. ನಂತರ ಚೊಳಚಗುಡ್ಡ, ಹೆಬ್ಬಾಳ ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿ ಉಂಟಾದ ಮನೆ, ಬೆಳೆ ಹಾನಿಗಳನ್ನು ಪರಿಶೀಲಿಸಿದರು. ಸಿ ವರ್ಗದ ಮನೆಗಳಿಗೆ ಶೀಘ್ರದಲ್ಲಿಯೇ ಪರಿಹಾರ ಒದಗಿಸುವಂತೆ ತಹಶೀಲ್ದಾರರಿಗೆ ಸೂಚಿಸಿದರು. ಉಳಿದ ಕೆಟಗರಿ ಮನೆಗಳಿಗೆ ಮೊದಲ ಕಂತಿನ ಹಣ ಜಮೆಗೆ ಕ್ರಮವಹಿಸಲು ಸೂಚಿಸಿದರು.

ವಾಹನಗಳ ಮೇಲೆ Press ಪದ ಬಳಸುವಂತಿಲ್ಲ: ಡಿಸಿ ಪಿ.ಸುನೀಲ್‌ಕುಮಾರ

ಮಳೆ ಹಾನಿ ಪರಿಹಾರವಾಗಿ 20 ಕೋಟಿ ಬಿಡುಗಡೆ: ಇದೇ ಸಂದರ್ಭದಲ್ಲಿ ಮಾತನಾಡಿದ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಜಿಲ್ಲೆಯಲ್ಲಿ ಉಂಟಾದ ಹಾನಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ 20 ಕೋಟಿ ರೂ.ಗಳ ಅನುದಾನ ಬಿಡುಗಡೆ ಮಾಡಲಾಗಿದೆ. ಹಾನಿಗೊಳಗಾದ ಮನೆಗಳಿಗೆ ತಕ್ಷಣ ಪರಿಹಾರಕ್ಕೆ 2 ಕ್ರಮ ಕೈಗೊಳ್ಳುವಂತೆ ಜಿಲ್ಲೆಯ ಎಲ್ಲ ತಹಶೀಲ್ದಾರರಿಗೆ ಸೂಚನೆ ನೀಡಲಾಗಿದೆ. ಇದಲ್ಲದೇ ಹಾನಿಗೊಳಗಾದ ಕೃಷಿ, ತೋಟಗಾರಿಕೆ ಬೆಳೆ ಸಮೀಕ್ಷೆಯನ್ನು ಸಹ ಜಮೀನಿನಲ್ಲಿ ನೀರು ಕಡಿಮೆಯಾದ ತಕ್ಷಣ 10-12 ದಿನಗಳಲ್ಲಿ ಸಮೀಕ್ಷೆ ಕಾರ್ಯ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದರು.

ಮಳೆ ಮತ್ತು ಪ್ರವಾಹ ಹಾನಿ ಪರಿಹಾರಕ್ಕಾಗಿ ಪ್ರಸ್ತಾವಣೆ: ಸಚಿವ ಸಿ.ಸಿ.ಪಾಟೀಲ ಮಳೆ ಹಾಗೂ ಪ್ರವಾಹದಿಂದ ಉಂಟಾದ ಬಾದಾಮಿ ತಾಲೂಕಿನ ಮಾಹಿತಿಯನ್ನು ಪಡೆದುಕೊಂಡರು. 26 ಗ್ರಾಮಗಳು ಪ್ರವಾಹಕ್ಕೆ ತುತ್ತಾಗಿವೆ. 2 ಜಾನುವಾರುಗಳ ಜೀವನ ಹಾನಿಯಾಗಿದ್ದು, ಪ್ರವಾಹದಿಂದ ನೀರು ನುಗ್ಗಿದ 63 ಮನೆಗಳಲ್ಲಿರುವ ಗೃಹೋಪಯೋಗಿ ಮತ್ತು ಬಟ್ಟೆ ಬರೆ ಹಾನಿಗೆ ಒಟ್ಟು 6.30 ಲಕ್ಷ ರೂ.ಗಳ ಎಕ್ಸಗ್ರೇಸಿಯಾ ಹಣ ಪಾವತಿಸಲಾಗಿದೆ. 181 ಮನೆಗಳು, ಕೃಷಿ 18929 ಹೆಕ್ಟೇರ್, ತೋಟಗಾರಿಕೆ ಬೆಳೆ 3823 ಹೆಕ್ಟೇರ್ ಸೇರಿ ಒಟ್ಟು 22752 ಹೆಕ್ಟೇರ್ ಬೆಳೆ ಹಾನಿಯಾಗಿದ್ದು, ಸರಕಾರಕ್ಕೆ ಪ್ರಸ್ತಾವಣೆ ಸಲ್ಲಿಸಿರುವುದಾಗಿ ಸಚಿವರಿಗೆ ತಿಳಿಸಿದರು. ಇನ್ನು ಭೇಟಿ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ, ಜಿಲ್ಲಾ ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ, ತೋಟಗಾರಿಕೆ ಉಪನಿರ್ದೇಶಕ ರಾಹುಲ್‍ಕುಮಾರ ಬಾವಿದಡ್ಡಿ, ತಹಶೀಲ್ದಾರ ಜೆ.ಬಿ.ಮಜ್ಜಗಿ, ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಕಲಾದಗಿ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ಹಾವು ನಮ್ಮ ಬುಟ್ಟಿಯಲ್ಲೂ ಇವೆ, ಕಾಂಗ್ರೆಸ್ ಬಿಡೋ ಹಾವು ನೋಡಿ, ಅದಕ್ಕಿಂತಲೂ ಒಳ್ಳೆಯ ಹಾವು ಬಿಡ್ತಿವಿ: ಮಳೆ ಮತ್ತು ಪ್ರವಾಹ ಹಾನಿ ಪರಿಶೀಲನೆಗೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಸಿ.ಸಿ.ಪಾಟೀಲ,  2006 ರಿಂದ ಇಲ್ಲಿವರೆಗೆ ನಡೆದ ಸರ್ಕಾರಗಳ ಹಗರಣ ತನಿಖೆ  ಮಾಡಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರ ವಾಗಿ ಪ್ರತಿಕ್ರಿಯೆ ನೀಡಿ, ಹಾವು ಅವರ ಬುಟ್ಯಾಗೂ ಅದಾವು,ನಮ್ಮ ಬುಟ್ಯಾಗೂ ಅದಾವೂ, ಅವ್ರು ಹಾವು ಎಂತಾವ ಬಿಡ್ತಾರೆ, ಅದರಕಿಂತ ಚಲೋ ಹಾವು ನಾವು ಬಿಡ್ತಿವಿ ಎಂದು ಹೇಳುವ ಮೂಲಕ ಸಿದ್ದರಾಮಯ್ಯನವರಿಗೆ ಸಿ.ಸಿ.ಪಾಟೀಲ ಟಾಂಗ್ ನೀಡಿದರು. 

ಬಾಗಲಕೋಟೆ ನಗರಕ್ಕೆ ಆಗಮಿಸಿದ ಸಮಯದಲ್ಲಿ ಮಾಧ್ಯಮ ಪತ್ರಿನಿಧಿಗಳೊಂದಿಗೆ ಮಾತನಾಡುತ್ತಾ, ವಿಧಾನಸಭಾ ಅಧಿವೇಶನದಲ್ಲಿ ಭಾಗಿಯಾಗಿದ್ದೇವೆ. ಶನಿವಾರ ಮತ್ತು ಭಾನುವಾರ ಅಧಿವೇಶನ ರಜೆ ಕಾರಣ, ಉಸ್ತುವಾರಿ ಜಿಲ್ಲೆ ಬಾಗಲಕೋಟೆಗೆ ಬಂದಿದ್ದೇನೆ. ಮಳೆ ಹಾನಿ, ಪ್ರವಾಹ ಹಾನಿ ಪ್ರದೇಶದ, ಪರಿಹಾರದ ಕುರಿತು ಜಿಲ್ಲಾಮಟ್ಟದ ಅಧಿಕಾರಿಗಳ ಜೊತೆ ಸಭೆ ‌ನಡೆಸಿ, ಮಳೆ ಪ್ರವಾಹ ಹಾನಿಗೊಳಗಾದವರಿಗೆ ಸರಿಯಾಗಿ ಪರಿಹಾರ ತಲುಪಿದರ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತೆನೆ ಎಂದರು.

ಮಲಪ್ರಭಾ ಒತ್ತುವರಿ ತೆರವುಗೊಳಿಸುವ ಯೋಜನೆ ಸರ್ಕಾರದ ಮುಂದಿದೆ: ಇದೇ ಸಂದರ್ಭದಲ್ಲಿ ಮಲ್ಲಪ್ರಭಾ ನದಿಯ ಒತ್ತುವರಿ ವಿಚಾರವಾಗಿ ಮಾತನಾಡಿ, ಮಲಪ್ರಭಾ ಒತ್ತುವರಿ ತೆರವುಗೊಳಿಸುವ ಯೋಜನೆ ಸರ್ಕಾರದ ಮುಂದಿದೆ. ದೊಡ್ಡ ಪ್ರಮಾಣದ ಹಣಕಾಸು ಬೇಕಾಗಿದ್ದರಿಂದ ವಿಶೇಷವಾದ ಬಜೆಟ್ ಹಂಚಿಕೆಗೆ ಬೇಕಾಗಿದೆ. ಮುಂಬರುವ ದಿನಗಳಲ್ಲಿ ಆ ಬಗ್ಗೆ ವಿಚಾರ ಮಾಡುತ್ತೇವೆ. ನಾವೇ ಅದನ್ನ ಒತ್ತುವರಿ ಮಾಡಿಕೊಂಡಿದ್ದೀವಿ. ಪ್ರವಾಹ ಬಂದಾಗ ನಾವೇ ನಷ್ಟವನ್ನು ಅನುಭವಿಸ್ತೀವಿ ಎಂದ ಸಚಿವರು,ಪ್ರಕೃತಿಯನ್ನು ಎಷ್ಟರ ಮಟ್ಟಿಗೆ ಉಪಯೋಗ, ದುರಪಯೋಗ ಮಾಡಿಕೊಳ್ಳಬೇಕೆಂಬುದನ್ನು ಮೊದಲು ನಾವು ವಿಚಾರ ಮಾಡಿಕೊಳ್ಳಬೇಕಾಗಿದೆ. 

ಲೋಕಾಯುಕ್ತ ಅಧಿಕಾರ ಕಸಿದು ಎಸಿಬಿ ಸ್ಥಾಪಿಸಿದ್ದ ಸಿದ್ದರಾಮಯ್ಯ: ಹಿರೇಮಠ

ಒಬ್ಬರ ರೈತನಾಗಿ ನನಗೂ ಮಲಪ್ರಭಾ ನೀರು ಬೇಕು.ಈ ಹಿಂದೆ 10 ಸಾವಿರಕ್ಕೂ ಅಧಿಕ ಕ್ಯೂಸೆಕ್ ನೀರು ಬಂದ್ರೂ ನದಿ ಒಡಲಲ್ಲೇ ಹೋಗ್ತಿತ್ತು.ಈಗ 5 ಸಾವಿರ ಕ್ಯೂಸೆಕ್ ನೀರು ಬಿಟ್ರೂ ಕೊಣ್ಣೂರು ಬಸ್ ನಿಲ್ದಾಣಕ್ಕೆ ಬರುತ್ತೆ,ಇದು ಮಾನವ ನಿರ್ಮಿತ ತಪ್ಪು, ಅದಕ್ಕೆ ತೆಗೆದುಕೊಳ್ಳಬೇಕಾದ ಕ್ರಮ ತಗೊಳ್ಳುತ್ತೇವೆ. ಸದ್ಯಕ್ಕೆ ಹೂಳೆತ್ತಿರುವ ವಿಚಾರ ಸರ್ಕಾರದ ಮುಂದಿಲ್ಲ. ಮುಂದಿನ ಬಜೆಟ್‌ನಲ್ಲಿ ವ್ಯವಸ್ಥೆ ಮಾಡಲಿಕ್ಕೆ ಸಿಎಂ ಬಳಿ‌ ಮನವಿ ಮಾಡುತ್ತೇನೆ ಎಂದರು. ಇದೇ ಸಂದರ್ಭದಲ್ಲಿ,ಈಶ್ವರಪ್ಪಗೆ ಸಚಿವ ಸ್ಥಾನ ಸಿಗದ್ದಕ್ಕೆ ಅಸಮಾಧಾನ ಹೊರ ಹಾಕಿದ ವಿಚಾರವಾಗಿ ಮಾತನಾಡಿದ ಸಚಿವರು, ಅದೆಲ್ಲಾ ಪಕ್ಷದ ಆಂತರಿಕ ವಿಚಾರವಾಗಿದೆ. ನಾವೇನು ಈ ಬಗ್ಗೆ ಹೇಳೋದಿಲ್ಲ ಎಂದರು.

click me!