ನರಗುಂದ: ಅನ್ಯಾಯವನ್ನು ಬಂಡಾಯ ನೆಲದ ಜನತೆ ಸಹಿಸುವುದಿಲ್ಲ, ಸಚಿವ ಸಿ.ಸಿ. ಪಾಟೀಲ

By Kannadaprabha NewsFirst Published Jul 22, 2020, 9:32 AM IST
Highlights

ವೀರಗಲ್ಲಿಗೆ ಮಾಲಾರ್ಪಣೆ ಸಲ್ಲಿಸಿದ ಸಚಿವ ಪಾಟೀಲ| ಈ ನಾಡಿನ ಮಣ್ಣು ಅನ್ಯಾಯವನ್ನು ಸಹಿಸುವ ಗುಣ ಹೊಂದಿಲ್ಲ, ಅನ್ಯಾಯದ ವಿರುದ್ಧ ಹೋರಾಟ ಮಾಡುವ ಗುಣ ಹೊಂದಿದೆ| ಸರ್ಕಾರಕ್ಕೆ ಇನ್ನೂ ಕಾಲ ಮಿಂಚಿಲ್ಲ ಆಗಸ್ಟ್‌ 15 ರೊಳಗೆ ಈ ಕಾಮಗಾರಿ ಪ್ರಾರಂಭಿಸದೇ ಇದ್ದಲ್ಲಿ ಕೋವಿಡ್‌ -19 ನಿಯಮಗಳನ್ನು ಲೆಕ್ಕಸದೆ ನಾವು ಸರ್ಕಾರದ ವಿರುದ್ಧ ಉಗ್ರ ಹೋರಾಟ|

ನರಗುಂದ(ಜು.22):  ರೈತ ಕುಲಕ್ಕೆ ಅನ್ಯಾಯ ಮಾಡಿದರೆ ಈ ಬಂಡಾಯ ನಾಡಿನ ಜನತೆ ಸಹಿಸುವುದಿಲ್ಲ ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಹೇಳಿದ್ದಾರೆ. 

ಅವರು ಮಂಗಳವಾರ 40 ನೇ ವರ್ಷದ ಈರಪ್ಪ ಕಡ್ಲಿಕೊಪ್ಪ ರೈತ ಹುತಾತ್ಮ ದಿನಾಚರಣೆ ನಿಮಿತ್ತ ವೀರಗಲ್ಲಿಗೆ ಮಾಲಾರ್ಪಣೆ ಮಾಡಿ ಮಾತನಾಡಿ, ಈ ನಾಡಿನ ಮಣ್ಣು ಅನ್ಯಾಯವನ್ನು ಸಹಿಸುವ ಗುಣ ಹೊಂದಿಲ್ಲ, ಅನ್ಯಾಯದ ವಿರುದ್ಧ ಹೋರಾಟ ಮಾಡುವ ಗುಣ ಹೊಂದಿದೆ ಎಂದು ಹೇಳಿದರು.

1980ರಲ್ಲಿ ಕಾಂಗ್ರೆಸ್‌ ಪಕ್ಷದ ಮುಖ್ಯಮಂತ್ರಿ ಗುಂಡೂರಾವ್‌ ಸರ್ಕಾರ ಈ ಭಾಗದ ರೈತರ ಜಮೀನುಗಳ ಮೇಲೆ ನೀರಿನ ಕರ ಹೇರಿದ ಹಿನ್ನೆಲೆಯಲ್ಲಿ ಅದರ ವಿರುದ್ಧ ಹೋರಾಟ ಮಾಡುವ ಸಮಯದಲ್ಲಿ ತಾಲೂಕಿನ ಚಿಕ್ಕನರಗುಂದ ಗ್ರಾಮದ ರೈತ ಈರಪ್ಪ ಕಡ್ಲಿಕೊಪ್ಪ ಹಾಗೂ ನವಲಗುಂದ ತಾಲೂಕಿನ ಅಳಗವಾಡಿ ಗ್ರಾಮದ ಬಸಪ್ಪ ಲಕ್ಕಂಡಿ ಅವರು ಪೊಲೀಸರ ಗುಂಡಿಗೆ ಪ್ರಾಣವನ್ನು ಕಳೆದುಕೊಂಡು ನಂತರ ಇಡೀ ದೇಶದಲ್ಲಿ ರೈತ ಸಂಘಟನೆಗಳು ಆಳುವ ಸರ್ಕಾರ ವಿರುದ್ಧ ಉಗ್ರ ಹೋರಾಟ ಮಾಡಿದ್ದರಿಂದ ಅಂದಿನ ಕಾಂಗ್ರೆಸ್‌ ಸರ್ಕಾರ ಕಿತ್ತು ಹಾಕಿದ ಕೀರ್ತಿ ನರಗುಂದ ಹೋರಾಟಕ್ಕೆ ಸಲ್ಲುತ್ತದೆ ಎಂದರು.

'ಉತ್ತರ ಕರ್ನಾಟಕಕ್ಕೆ ತಾರತಮ್ಯ ಮಾಡಿದ್ರೆ ಪ್ರತ್ಯೇಕ ರಾಜ್ಯದ ಕೂಗು ಅನಿವಾರ್ಯ'

ಈ ಹಿಂದೆ ಸಹ ನರಗುಂದ ಬಂಡಾಯ, ಅನ್ಯಾಯದ ವಿರುದ್ಧ ಹೋರಾಟದ ಮನೋಭಾವವನ್ನು ಬೆಳೆಸಿಕೊಂಡಿತ್ತು. ಸ್ವಾತಂತ್ರ್ಯ ಸಂಗ್ರಾಮದಲ್ಲೂ ನರಗುಂದ ಬಂಡಾಯ ಪ್ರಮುಖವಾಗಿತ್ತು. 1857 ರಲ್ಲಿ ಅಂದು ಸಂಸ್ಥಾನ ಆಳುವ ವೀರ ಬಾಬಾಸಾಹೇಬರು ಸ್ವಾತಂತ್ರ್ಯಹೋರಾಟದ ಸಂದರ್ಭದಲ್ಲಿ ಬ್ರಿಟಿಷ ಅಧಿಕಾರಿ ರುಂಡ ಕಡಿದು ಪಟ್ಟಣದ ಅಗಸಿ ಬಾಗಲಿಗೆ ತೂಗು ಹಾಕಿದ್ದರಿಂದ ಇಂದಿಗೂ ಈ ಅಗಸಿಗೆ ಕೆಂಪಅಗಸಿ ಎಂದು ಕರೆಯುತ್ತಾರೆ.

ತಾಲೂಕು ಬಿಜೆಪಿ ಮಂಡಳ ಅಧ್ಯಕ್ಷ ಗುರುಪ್ಪ ಆದಪ್ಪನವರ, ಟಿಎಪಿಎಂಸಿ ಅಧ್ಯಕ್ಷ ಅಜ್ಜಪ್ಪ ಹುಡೇದ, ಪಿಕಾರ್ಡ್‌ ಬ್ಯಾಂಕ್‌ ಅಧ್ಯಕ್ಷ ಎಂ.ಎಸ್‌. ಪಾಟೀಲ, ನಿರ್ದೇಶಕ ಬಿ.ಬಿ. ಐನಾಪೂರ, ಶಂಕರಗೌಡ ಪಾಟೀಲ, ಬಸವಣ್ಣಪ್ಪ ಸುಂಕದ, ಉಮೇಶಗೌಡ ಪಾಟೀಲ, ಪುರಸಭೆ ಸದಸ್ಯ ರಾಚನಗೌಡ ಪಾಟೀಲ, ಪ್ರಕಾಶ ಹಾದಿಮನಿ, ಚಂದ್ರಗೌಡ ಪಾಟೀಲ, ಮಂಜು ಮೆಣಸಗಿ, ಅನಿಲ್‌ ಧರಯಣ್ಣವರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

ಮಹದಾಯಿ ಕಾಮಗಾರಿ ಪ್ರಾರಂಭಿಸದಿದ್ದಲ್ಲಿ ಉಗ್ರ ಹೋರಾಟ

ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ರೈತ ಸಮುದಾಯ ಬಹುದಿನಗಳ ಬೇಡಿಕೆಯಾದ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆ ಕಾಮಗಾರಿ ಬೇಗ ಪ್ರಾರಂಭ ಮಾಡದಿದ್ದರೆ ಸರ್ಕಾರದ ವಿರದ್ಧ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ರೈತ ಸೇನಾ ಸಂಘಟನೆ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಶ್ರೀಗಳು ಎಚ್ಚರಿಕೆ ನೀಡಿದರು.

ಅವರು ಮಂಗಳವಾರ ಪಟ್ಟಣದಲ್ಲಿರುವ ಹುತಾತ್ಮ ರೈತ ಈರಪ್ಪ ಕಡ್ಲಿಕೊಪ್ಪ ಅವರ 40ನೇ ವರ್ಷದ ರೈತ ಹುತಾತ್ಮ ದಿನಾಚರಣೆ ಅಂಗವಾಗಿ ವೀರಗಲ್ಲಿಗೆ ಮಾಲಾರ್ಪಣೆ ಸಲ್ಲಿಸಿ ಪಟ್ಟಣದ ರೈತ ಸೇನಾ ಸಂಘಟನೆ ವತಿಯಿಂದ ನಡೆಯುತ್ತಿರುವ ಹೋರಾಟ ವೇದಿಕೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಮಹದಾಯಿ ಹೋರಾಟಗಾರರು ಕಳೆದ 5 ವರ್ಷಗಳಿಂದ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆ ಜಾರಿ ಮಾಡಬೇಕೆಂದು ಸರ್ಕಾರ ವಿರುದ್ದ ನಿರಂತರ ಹೋರಾಟ ಕೈಗೊಂಡ ಹಿನ್ನಲೆಯಲ್ಲಿ ಈ ಯೋಜನೆಗಳಿರುವ ಕಾನೂನು ತೊಡಕುಗಳು ಬಗೆಹರಿದು ಈ ಜಲ ವಿವಾದಕ್ಕೆ ನೇಮಕವಾದ ನ್ಯಾಯಾಧೀಕರಣದ ನ್ಯಾಯಾಧೀಶರು ಕರ್ನಾಟಕ ರಾಜ್ಯಕ್ಕೆ ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಹಳ್ಳಗಳಲ್ಲಿ ಹರಿಯುವ ನೀರಿನಲ್ಲಿ 13.42 ಟಿಎಂಸಿ ನೀರು ಬಳಕೆ ಮಾಡಿಕೊಳ್ಳಲು ಅನುಮತಿ ನೀಡಿದೆ. ಅದೇ ರೀತಿ ಕೇಂದ್ರ ಸರ್ಕಾರ ಈ ನೀರು ಬಳಕೆ ಮಾಡಿಕೊಳ್ಳಲು ಗೆಜೆಟ್‌ ನೊಟಿಫಿಕೇಷನ್‌ ಹೊರಡಿಸಿದರೂ ಸಹ ರಾಜ್ಯ ಸರ್ಕಾರ ಈ ಕಾಮಗಾರಿ ಪ್ರಾರಂಭಿಸದೇ ಮಹದಾಯಿ ಹೋರಾಟಗಾರರಿಗೆ ಅನ್ಯಾಯ ಮಾಡುತ್ತದೆ ಎಂದು ಆರೋಪಿಸಿದರು. ಸರ್ಕಾರಕ್ಕೆ ಇನ್ನೂ ಕಾಲ ಮಿಂಚಿಲ್ಲ ಆಗಸ್ಟ್‌ 15 ರೊಳಗೆ ಈ ಕಾಮಗಾರಿ ಪ್ರಾರಂಭಿಸದೇ ಇದ್ದಲ್ಲಿ ಕೋವಿಡ್‌ -19 ನಿಯಮಗಳನ್ನು ಲೆಕ್ಕಸದೆ ನಾವು ಸರ್ಕಾರದ ವಿರುದ್ಧ ಉಗ್ರ ಹೋರಾಟಕ್ಕೆ ಇಳಿಯುತ್ತವೆ ಎಂದರು.

ವೀರಬಸಪ್ಪ ಹೂಗಾರ, ಎಸ್‌.ಬಿ. ಜೋಗಣ್ಣವರ, ಎ.ಪಿ. ಪಾಟೀಲ, ಅಡಿಯಪ್ಪ ಕೋರಿ, ಹನಮಂತ ಸರನಾಯ್ಕರ, ಅರ್ಜುನ ಮಾನೆ, ಸೋಮಲಿಂಗಪ್ಪ ಆಯಿಟ್ಟ, ರಾಮಚಂದ್ರ ಸಾಬಳೆ, ಎಲ್‌.ಬಿ. ಮನನೇಕೊಪ್ಪ, ಮಲ್ಲಪ್ಪ ಐನಾಪೂರ, ಕೆ.ಎಚ್‌. ಮೊರಬದ, ಶ್ರೀಶೈಲ ಮೇಟಿ, ಮಲ್ಲೇಶ ಅಣ್ಣಿಗೇರಿ, ಮಾರುತಿ ಬಡಿಗೇರ, ವಾಸು ಚವಾಣ, ಯಲ್ಲಪ್ಪ ಗುಡದೇರಿ, ಮಲ್ಲವ್ವ ಭೋವಿ, ನಾಗರತ್ನ ಸವಳಭಾವಿ, ಅನಸವ್ವ ಶಿಂದೆ, ಬಸವ್ವ ಪೂಜಾರ, ಶಾಂತವ್ವ ಭೂಸರಡ್ಡಿ ಸೇರಿದಂತೆ ಮುಂತಾದವರು ಇದ್ದರು.
 

click me!