ಬೆಂಗಳೂರು (ಅ.01): ಬೆಂಗಳೂರಿನಲ್ಲಿ (Bengaluru) ಮೆಟ್ರೋ (Metro) ಸ್ಟೇಷನ್ ಗೆ ಶಂಕರ್ ನಾಗ್ ಹೆಸರಿಡುವ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ಜೊತೆಗೆ ಚರ್ಚೆ ಮಾಡುವುದಾಗಿ ಸಚಿವ ಬೈರತಿ ಬಸವರಾಜ್ (Byrathi Basavaraj) ಹೇಳಿದ್ದಾರೆ.
ಬೆಂಗಳೂರಿನ ಬಿಜೆಪಿ (BJP) ಕಚೇರಿಯಲ್ಲಿಂದು ಮಾತನಾಡಿದ ಸಚಿವ ಬೈರತಿ ಬಸವರಾಜ್ ಶಂಕರ್ ನಾಗ್ (Shankar Nag) ಕನ್ನಡ ಚಿತ್ರರಂಗಕ್ಕೆ ತಮ್ಮದೇ ಕೊಡುಗೆ ಕೊಟ್ಟಿದ್ದಾರೆ. ಖಂಡಿತವಾಗಿ ಈ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡುತ್ತೇವೆ. ಯಾವುದಾದರೂ ಒಂದು ಮೆಟ್ರೋ ನಿಲ್ದಾಣಕ್ಕೆ ಶಂಕರ್ ನಾಗ್ ಹೆಸರಿಡಲು ಮನವಿ ಮಾಡುತ್ತೇವೆ ಎಂದರು.
ಬಿಬಿಎಂಪಿ ಚುನಾವಣೆ ವಿಚಾರ : ಬಿಬಿಎಂಪಿ (BBMP) ಚುನಾವಣೆ ನಡೆಸಲು ನಮ್ಮದೇನೂ ಅಭ್ಯಂತರ ಇಲ್ಲ. ಚುನಾವಣೆ ಯಾವಾಗ ನಡೆದರೂ ಬಿಜೆಪಿ ಸಿದ್ಧವಿದೆ. 198 ವಾರ್ಡ್ ಇತ್ತು. ಹೊರಮಾವು ವಾರ್ಡ್ 25ರಲ್ಲಿ ಒಂದೂವರೆ ಲಕ್ಷ ಜನರಿದ್ದರು. ಇಷ್ಟು ಜನ ಒಂದೆಡೆ ಇದ್ದರೆ ಚುನಾವಣೆ ನಡೆಸುವುದು ಹೇಗೆ..? ಹೀಗಾಗಿ ಡಿಲಿಮಿಟೇಷನ್ ಮಾಡಲು ಸರ್ಕಾರ ಮುಂದಾಗಿದೆ ಎಂದರು.
ಅಮಿತ್ ಶಾ ಹೇಳಿಕೆ ಸರಿ ಇದೆ, ಬೊಮ್ಮಾಯಿ ನೇತೃತ್ವದಲ್ಲೇ ಎಲೆಕ್ಷನ್: ತ್ರಿವಳಿ ಸಚಿವರು!
ಸಿಎಂ ಜೊತೆ ಮಾತನಾಡಿದ್ದೇವೆ. ಚುನಾವಣೆಗೆ ಹೆದರುವ ಪಕ್ಷ ನಮ್ಮದಲ್ಲ. ನಾವೇ ಅಧಿಕಾರಕ್ಕೆ ಬಂದು ಮೇಯರ್ ಕೂಡ ಆಗುತ್ತೇವೆ. ಜನರ ಋಣ ತೀರಿಸುವ ಕೆಲಸ ಮಾಡುತ್ತೇವೆ. ಯಾವುದೇ ಪ್ರದೇಶದಲ್ಲಿ ರಸ್ತೆ ಸಮಸ್ಯೆಗಳಿದ್ದರೆ ಅದನ್ನು ನನ್ನ ಗಮನಕ್ಕೆ ತನ್ನಿ ಎಂದು ಬಿಬಿಎಂಪಿ (BBMP) ಚುನಾವಣೆ ನಡೆಸಲು ಬಿಜೆಪಿ ಸರ್ಕಾರ ಹಿಂದೇಟು ಹಾಕುತ್ತಿದೆ ಎಂಬ ಟೀಕೆಗೆ ಸ್ಪಷ್ಟನೆ ನೀಡಿದರು ಸಚಿವ ಬೈರತಿ ಬಸವರಾಜ್.
ಇನ್ನು ಕಾರ್ಯಕರ್ತರಿಂದ ನನ್ನ ಇಲಾಖೆಗೆ ಸಂಬಂಧಿಸಿದ ಕೆಲವು ಸಮಸ್ಯೆಗಳ ಅರ್ಜಿಗಳು ಬಂದಿವೆ. ಸಂಬಂಧಿಸಿದ ಅಧಿಕಾರಿಗಳನ್ನ ಕರೆಸಿ ಈ ಬಗ್ಗೆ ಮಾತನಾಡುತ್ತೇನೆ ಎಂದು ಭರವಸೆ ನೀಡಿದರು.
ಅವಧಿ ಪರಿಷ್ಕರಣೆ
ಜನರ ಪ್ರಯಾಣಕ್ಕೆ ಅನುಕೂಲವಾಗುವಂತೆ ಬೆಂಗಳೂರು ನಮ್ಮ ಮೆಟ್ರೋ ಕಾರ್ಯನಿರ್ವಹಿಸುವ ಅವಧಿಯನ್ನು ಪರಿಷ್ಕರಿಸಲಾಗಿದೆ. ಬೆಂಗಳೂರು ನಮ್ಮ ಮೆಟ್ರೋ ರೈಲು ಸೇವೆಯ ಸಮಯವನ್ನು ಬೆಳಗ್ಗೆ 6 ರಿಂದ ರಾತ್ರಿ 10ರ ವರೆಗೆ ವಿಸ್ತರಣೆ ಮಾಡಲಾಗಿದೆ. ಕೊರೋನಾ ಕಾರಣದಿಂದ ಈ ಮೊದಲು ರೈಲು ಓಡಾಟದ ಅವಧಿ ಬೆಳಗ್ಗೆ 7 ಗಂಟೆಯಿಂದ ಸಂಜೆ 8 ಗಂಟೆ ವರೆಗೆ ಮಾತ್ರ ಇತ್ತು. ಇದೀಗ ರಾತ್ರಿ 10ರ ವರೆಗೆ ವಿಸ್ತರಿಸಲಾಗಿದೆ.