ಕಮಲದತ್ತ ಪ್ರಭಾವಿ ಕಾಂಗ್ರೆಸ್‌ ಮುಖಂಡ: ರಾಜಕೀಯದಲ್ಲಿ ಭಾರೀ ಸಂಚಲನ..!

By Kannadaprabha NewsFirst Published Oct 1, 2021, 1:45 PM IST
Highlights

*  BSY ನೇತೃತ್ವದಲ್ಲಿ ಬಿಜೆಪಿ ಸೇರಲಿರುವ ಗುಂಡುಮುಣಗು ತಿಪ್ಪೇಸ್ವಾಮಿ 
*  ಹಲವು ದಶಕಗಳಿಂದ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿರುವ ಗುಂಡುಮುಣಗು 
*  ಕಾಂಗ್ರೆಸ್ಸಿನಲ್ಲಿ ದುಡಿದವರಿಗೆ ಗೌರವ ಸಿಗದ ಕಾರಣ ಬಿಜೆಪಿ ಸೇರ್ಪಡೆ  
 

ಕೂಡ್ಲಿಗಿ(ಅ.01):  ತಾಲೂಕಿನ ಪ್ರಭಾವಿ ಕಾಂಗ್ರೆಸ್‌(Congress) ಮುಖಂಡ ಗುಂಡುಮುಣಗು ತಿಪ್ಪೇಸ್ವಾಮಿ ಹಾಗೂ ಅವರ ಬೆಂಬಲಿಗರು ಅ. 2ರಂದು ಹೊಸಪೇಟೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ(BJP) ಸೇರಲಿದ್ದಾರೆ. ಇದು ಕ್ಷೇತ್ರದ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ.

ಹಲವು ದಶಕಗಳಿಂದ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿರುವ ಗುಂಡುಮುಣಗು ತಿಪ್ಪೇಸ್ವಾಮಿ ಲೋಕಸಭಾ ಚುನಾವಣೆ ವೇಳೆ ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಾರೆ ಎಂದು ಇವರನ್ನು ಹಾಗೂ ಉದಯ ಜನ್ನು, ಗುಳಿಗಿ ವೀರೇಂದ್ರ, ಜಯರಾಂ ನಾಯಕ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿತ್ತು. ಅಂದಿನಿಂದ ಈ ನಾಲ್ವರು ಯಾವುದೇ ಪಕ್ಷದಲ್ಲಿ ಗುರುತಿಸಿಕೊಳ್ಳದೆ ಅಂತರ ಕಾದುಕೊಂಡಿದ್ದರು. ಇತ್ತೀಚೆಗೆ ಶಾಸಕ ಎನ್‌.ವೈ. ಗೋಪಾಲಕೃಷ್ಣ ಅವರೊಂದಿಗೆ ಗುಂಡುಮುಣಗು ತಿಪ್ಪೇಸ್ವಾಮಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳಲು ಆರಂಭಿಸಿದ್ದರು. ಇದೀಗ ಅವರ ಮೂಲಕವೇ ಬಿಜೆಪಿ ಸೇರಲು ವೇದಿಕೆ ಸಿದ್ಧಮಾಡಿಕೊಂಡಿದ್ದು ಇವರ ಬೆಂಬಲಗರು ಸಹ ಕಮಲ ಮುಡಿಯುವ ಸಾಧ್ಯತೆ ಇದೆ.

'ಹಿಂದುತ್ವ, ಹಿಂದೂ ರಾಷ್ಟ್ರದ ಹೆಸರಿನಲ್ಲಿ ಬಿಜೆಪಿ ಯುವಕರ ದಾರಿ ತಪ್ಪಿಸುತ್ತಿದೆ'

ಕ್ಷೇತ್ರದಲ್ಲಿ ಸಂಚಲನ:

ಕ್ಷೇತ್ರದಲ್ಲಿ ಪ್ರಭಾವಿ ಮುಖಂಡರಾಗಿರುವ ಗುಂಡುಮುಣಗು ತಿಪ್ಪೇಸ್ವಾಮಿ, ಬಿಜೆಪಿ ಸೇರುವ ವಿಷಯ ತಿಳಿಯುತ್ತಿದ್ದಂತೆ ಇವರ ಬೆಂಬಲಿಗರು, ಸ್ನೇಹಿತರು ಯಾರಾರ‍ಯರು ಬಿಜೆಪಿ ಸೇರಲಿದ್ದಾರೆ ಎಂಬ ಚರ್ಚೆ ಶುರುವಾಗಿದೆ. ಇವರೊಂದಿಗೆ ಅಮಾನತುಗೊಂಡಿದ್ದ ಉದಯ ಜನ್ನು ಹಾಗೂ ಗುಳಿಗಿ ವೀರೇಂದ್ರ ನಡೆ ಇನ್ನೂ ನಿಗೂಢವಾಗಿದೆ. ಜೆಡಿಎಸ್‌ನ ಜರ್ಮಲಿ ಶಶಿಧರ, ನರಸಿಂಹಗಿರಿ ಮಂಜುನಾಥ ಸಹ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಇಲ್ಲದ ಪರಿಣಾಮ ಅವರು ಸಹ ಅನ್ಯ ಪಕ್ಷದತ್ತ (ಕಾಂಗ್ರೆಸ್‌-ಬಿಜೆಪಿ) ಮುಖ ಮಾಡುವ ಸಾಧ್ಯತೆ ಇದೆ.

ದಶಕಗಳ ಕಾಲ ಕಾಂಗ್ರೆಸ್ಸಿನಲ್ಲಿ ದುಡಿದರು ಅಲ್ಲಿ ಗೌರವ ಸಿಗದ ಕಾರಣ ಬೆಂಬಲಿಗರೊಂದಿಗೆ ಬಿಜೆಪಿ ಸೇರುತ್ತಿದ್ದೇನೆ. ಶಾಸಕ ಎನ್‌.ವೈ. ಗೋಪಾಲಕೃಷ್ಣ ಅವರ ಅಭಿವೃದ್ಧಿ ಕಾರ್ಯವನ್ನು ಮೆಚ್ಚಿ ಅವರ ಕೈ ಬಲಪಡಿಸಲು ಅ. 2ರಂದು ಹೊಸಪೇಟೆಯಲ್ಲಿ ಮುಖ್ಯಮಂತ್ರಿ ಬಸವರಾಜ, ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಶಾಸಕ ಎನ್‌.ವೈ. ಗೋಪಾಲಕೃಷ್ಣ ಅವರ ಸಮ್ಮುಖದಲ್ಲಿ ಬಿಜೆಪಿ ಸೇರುತ್ತಿದ್ದೇನೆ ಎಂದು ಗುಂಡುಮುಣಗು ತಿಪ್ಪೇಸ್ವಾಮಿ ತಿಳಿಸಿದ್ದಾರೆ. 
 

click me!