ಸಿದ್ದರಾಮಯ್ಯ ಅವರನ್ನು ನಂಬಿದ್ರೆ ಇನ್ನೂ ಬಾಡಿಗೆ ಮನೆಯಲ್ಲೇ ಇರಬೇಕಿತ್ತು ಎಂದು ಸಚಿವ ಬಿಸಿ ಪಾಟೀಲ್ ಹೇಳಿದ್ದಾರೆ
ಹಾವೇರಿ (ನ.03): ಮುಂದಿನ ಚುನಾವಣೆ ಕೂಡ ಯಡಿಯೂರಪ್ಪನವರ ನೇತೃತ್ವದಲ್ಲಿಯೇ ನಡೆಯಲಿದೆ. ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇನ್ನುಳಿದ ಎರಡೂವರೆ ವರ್ಷಗಳ ಕಾಲ ಯಾರಿಂದಲೂ ಅಲ್ಲಾಡಿಸಲು ಸಾಧ್ಯವಿಲ್ಲ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವರು ಪಕ್ಷದಲ್ಲಿ ಗೊಂದಲ ಸೃಷ್ಟಿಸುವುದು, ತಿರುಕನ ಕನಸು ಕಾಣುವುದನ್ನು ಮಾಡುತ್ತಿದ್ದಾರೆ. ಆದರೆ ಯಡಿಯೂರಪ್ಪನವರನ್ನು ಅಲ್ಲಾಡಿಸಲು ಯಾರಿಂದಲೂ ಸಾಧ್ಯವಿಲ್ಲ. ಅವರ ನೇತೃತ್ವದಲ್ಲಿಯೇ ಮುಂದಿನ ಸ್ಥಳೀಯ ಸಂಸ್ಥೆ ಚುನಾವಣೆಯಿಂದ ಹಿಡಿದು ಎಲ್ಲ ಚುನಾವಣೆ ನಡೆಯಲಿದೆ ಎಂದು ಸ್ಪಷ್ಟಪಡಿಸಿದರು.
ರಾಜ್ಯದ ಗಮನಸೆಳೆದಿದ್ದ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಭರ್ಜರಿ ಜಯ
ಯಡಿಯೂರಪ್ಪನವರು ಸಿಎಂ ಆಗಿದ್ದರಿಂದ ಸಿದ್ದರಾಮಯ್ಯ ವಿಪಕ್ಷ ನಾಯಕರಾಗಲು ಸಾಧ್ಯವಾಯಿತು. ಕುಮಾರಸ್ವಾಮಿಯವರೊಂದಿಗೆ ಮೈತ್ರಿ ಸರ್ಕಾರದಲ್ಲಿಯೇ ಇದ್ದಿದ್ದರೆ ಸಿದ್ದರಾಮಯ್ಯ ಬಾಡಿಗೆ ಮನೆಯಲ್ಲೇ ಇರಬೇಕಾಗಿತ್ತು. ಸಿದ್ದರಾಮಯ್ಯನವರಿಗೆ ವಿರೋಧ ಪಕ್ಷದ ನಾಯಕನ ಸ್ಥಾನವೂ ಅಲ್ಲಾಡಿ ಹೋಗುತ್ತದೆಯೋ ಎಂಬ ಭಯ ಕಾಡುತ್ತಿರಬಹುದು ಎಂದು ತಿರುಗೇಟು ನೀಡಿದರು.
ಮನುಷ್ಯರನ್ನು ಸಮಾಧಿ ಮಾಡುವುದು, ನಾಯಿ, ಪ್ರಾಣಿ, ಬಂಡೆಗೆ ಹೋಲಿಸುವುದು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ ಅವರಿಗೆ ಶೋಭೆ ತರುವುದಿಲ್ಲ. ನಾಯಿಗೆ ನಿಯತ್ತು ಇರುತ್ತದೆ. ಇವರು ಸಾಕಿರುವ ನಾಯಿಗಳೆಲ್ಲ ಕಚ್ಚುವ ನಾಯಿಗಳೇ ಇರಬೇಕು. ಒಳ್ಳೆಯ ನಾಯಿಗಳನ್ನು ಸಾಕಿದ್ದರೆ ಈ ರೀತಿ ದುಃಸ್ಥಿತಿ ಬರುತ್ತಿರಲಿಲ್ಲ. ಬಿಜೆಪಿ ಸೇರಿದ 17 ಜನ ಶಾಸಕರು ರಾಜಕೀಯ ಸಮಾಧಿಯಾಗುತ್ತಾರೆ ಎಂದು ಡಿಕೆಶಿ ಹೇಳಿದ್ದರು. ಆದರೆ, ನಿಜವಾಗಿಯೂ ಸಮಾಧಿಯಾಗುತ್ತಿರುವವರು ಯಾರು ಎಂಬುದನ್ನು ಅರಿಯಬೇಕು ಎಂದು ಡಿಕೆಶಿಗೆ ತಿರುಗೇಟು ನೀಡಿದರು.
ಶಿರಾ ಮತ್ತು ಆರ್‌ಆರ್ ನಗರ ಚುನಾವಣೆಯಲ್ಲಿ ಬಿಜೆಪಿ ದೊಡ್ಡ ಅಂತರದಲ್ಲಿ ಗೆಲ್ಲಲಿದೆ. ಮೋದಿ ಮತ್ತು ಯಡಿಯೂರಪ್ಪನವರ ಕೆಲಸ ನೋಡಿ ಮತದಾರರು ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.