ಚುನಾವಣೆ ಸಮೀಪಿಸುತ್ತಿರೋ ಹಿನ್ನೆಲೆ ಕೋಟೆನಾಡಿನಲ್ಲಿ ಕಡೆಯ ಕೆಡಿಪಿ ಸಭೆ ನಡೆಸಿದ ಸಚಿವ ಬಿ.ಸಿ ಪಾಟೀಲ್ ಸಭೆ ಬಳಿಕ ಜಿಲ್ಲೆಯ ಎಲ್ಲಾ ಅಧಿಕಾರಿಗಳಿಗೆ ಧನ್ಯವಾದ ತಿಳಿಸಿದ ಸಚಿವ.
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಮಾ.6): ನಮ್ಮ ನಾಡು ರೈತರ ನಾಡಾಗಿದ್ದು, ರೈತರ ಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಬೇಕು. ಆಸಕ್ತಿ ಮತ್ತು ಇಚ್ಚಾಶಕ್ತಿಯಿಂದ ಕಾರ್ಯನಿರ್ವಹಿಸುವ ಪರಿಪಾಠ ರೂಢಿಸಿಕೊಳ್ಳಬೇಕು. ಅಧಿಕಾರಿಗಳು ಕೇವಲ ಸಮಯ, ಸಂಬಳಕ್ಕೆ ಕೆಲಸ ಮಾಡುವುದು ಅಲ್ಲ, ಸರ್ಕಾರಿ ಸೇವೆ ಮಾಡಲು ದೊರಕಿರುವ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು, ಆತ್ಮತೃಪ್ತಿಗಾಗಿಯಾದರೂ ಉತ್ತಮವಾಗಿ ಕೆಲಸ ಮಾಡಬೇಕು. ಎಂದು ಸಚಿವರು ಅಧಿಕಾರಿಗಳಿಗೆ ಸಲಹೆ ನೀಡಿದರು. ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಇಂದು ಚಿತ್ರದುರ್ಗ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಈ ಸರ್ಕಾರದ ಕೊನೆಯ ಕೆಡಿಪಿ ಸಭೆಯಲ್ಲಿ ಸಚಿವರು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
ಸಭೆ ಪ್ರಾರಂಭಕ್ಕೂ ಮುನ್ನ, ಇತ್ತೀಚೆಗೆ ನಗರದಲ್ಲಿ ಜಿಲ್ಲಾಡಳಿತದ ವತಿಯಿಂದ ಏರ್ಪಡಿಸಿದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಫಲಾನುಭವಿಗಳ ಸಮ್ಮೇಳನ ಅಭೂತಪೂರ್ವ ಯಶಸ್ಸು ಕಂಡಿದ್ದು, ಇಡೀ ರಾಜ್ಯಕ್ಕೆ ಇಲ್ಲಿನ ಕಾರ್ಯಕ್ರಮ ಮಾದರಿಯಾಗಿದೆ. ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಎಲ್ಲ ಅಧಿಕಾರಿಗಳು ಅಭಿನಂದನೆಗೆ ಅರ್ಹರು ಎಂದು ಸಚಿವರು ಪ್ರಶಂಸೆ ವ್ಯಕ್ತಪಡಿಸಿದರು.
ಜಿಲ್ಲೆಯ ಕೆಲವಡೆ ಸಾಮಾಜಿಕ ಭದ್ರತಾ ಯೋಜನೆಯ ವೃದ್ಧಾಪ್ಯ ವೇತನ, ವಿಧವಾ ವೇತನ ಮತ್ತಿತರ ಪಿಂಚಣಿ ಹಣವನ್ನು ಬ್ಯಾಂಕ್‍ಗಳು ಆಯಾ ಫಲಾನುಭವಿಗಳ ಹಳೆಯ ಸಾಲಕ್ಕೆ ಕಡಿತಗೊಳಿಸಿರುವುದು ಗಮನಕ್ಕೆ ಬಂದಿದೆ. ಹಾಗಾಗಿ ಸಾಮಾಜಿಕ ಭದ್ರತಾ ಯೋಜನೆಯ ಪಿಂಚಣಿ ಹಣ ಸೇರಿದಂತೆ ರೈತರ ಪರಿಹಾರಧನದ ಮೊತ್ತವನ್ನು ಯಾವುದೇ ಕಾರಣಕ್ಕೂ ಸಾಲಕ್ಕೆ ಜಮೆ ಮಾಡಿಕೊಳ್ಳಬಾರದು. ಅದೇ ರೀತಿ ಕೈಗಾರಿಕೆ ಇಲಾಖೆ ಹಾಗೂ ವಿವಿಧ ಇಲಾಖೆಗಳಿಂದ ನಾನಾ ಯೋಜನೆಗಳಡಿ ಸಾಲ ಮಂಜೂರಾಗಿರುವ ಫಲಾನುಭವಿಗಳಿಗೆ ಬ್ಯಾಂಕ್‍ಗಳು ಸಾಲ ನೀಡದೆ ಅಲೆದಾಡಿಸುತ್ತಿದ್ದಾರೆ. ಕೂಡಲೆ ಸಂಬಂಧಪಟ್ಟ ಫಲಾನುಭವಿಗಳಿಗೆ ಬ್ಯಾಂಕ್ ಸಾಲ ವಿತರಣೆಯಾಗಬೇಕು. ಈ ಕುರಿತು ಬ್ಯಾಂಕ್‍ಗಳಿಗೆ ಸೂಕ್ತ ನಿರ್ದೇಶನ ನೀಡಿ, ಮೂರು ದಿನದೊಳಗೆ ಪರಿಶೀಲಿಸಿ ವರದಿ ಸಲ್ಲಿಸುವಂತೆ ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ಸಚಿವರು ಸೂಚನೆ ನೀಡಿದರು.
ಮಲೆನಾಡಿನಲ್ಲಿ ಮಾತ್ರವಲ್ಲದೇ ಬಯಲುಸೀಮೆ ಚಿತ್ರದುರ್ಗ ಜಿಲ್ಲೆಯಲ್ಲಿಯೂ ಈಚೆಗೆ ಅಡಿಕೆ ಬೆಳೆಯನ್ನು ಬೆಳೆಯಲು ಹೆಚ್ಚಾಗಿ ರೈತರು ಶುರುಮಾಡಿದ್ದು, ಬಯಲುಸೀಮೆಯ ಅಡಿಕೆ ಬೆಳೆಗೂ ಪ್ರೊತ್ಸಾಹಧನ ನೀಡಬೇಕು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ತೋಟಗಾರಿಕೆ ಉಪನಿರ್ದೇಶಕಿ ಸವಿತಾ, ಒಣಹವೆ ಇರುವಂತಹ ಪ್ರದೇಶಗಳಲ್ಲಿ ಅಡಿಕೆ ಬೆಳೆ ಸರಿಯಾಗಿ ಬರುವುದಿಲ್ಲ. ಆದಾಗ್ಯೂ ನೀರಾವರಿ ಇರುವ ಒಣಹವೆ ಪ್ರದೇಶದ ತಾಲ್ಲೂಕುಗಳಲ್ಲೂ ಅಡಿಕೆ ಬೆಳೆ ಹಾಕುತ್ತಿದ್ದಾರೆ. ಆದಾಗ್ಯೂ ಅಡಿಕೆ ಬೆಳೆಗೆ ಪ್ರೊತ್ಸಾಹ ನೀಡುವಂತೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಕುಡಿಯುವ ನೀರಿಗೆ ತೊಂದರೆಯಾಗಬಾರದು:
ಜಿಲ್ಲೆಯ ಜನರಿಗೆ ಕುಡಿಯುವ ನೀರಿನ ಯಾವುದೇ ತೊಂದರೆಯಾಗದಂತೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಸಬೇಕು. ಕುಡಿಯುವ ನೀರು ಸಮಸ್ಯೆ ಎದುರಿಸುವ ಗ್ರಾಮಗಳಲ್ಲಿ, ಬೋರ್‍ವೆಲ್ ಅವಶ್ಯಕತೆ ಇರುವ ಕಡೆ ಸಂಬಂಧಪಟ್ಟ ಇಲಾಖೆಯ ಅವರು ಪ್ರಮಾಣಿಕರಿಸಿದ ನಂತರ ತಕ್ಷಣವೇ ಬೋರ್‍ವೆಲ್ ಕೊರೆಸಿ, ಕುಡಿಯುವ ನೀರು ಸೌಲಭ್ಯ ಕಲ್ಪಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಬೋರ್‍ವೆಲ್ ಕೊರೆಸುವ ಮುಂಚಿತವಾಗಿಯೇ ನೀರು ಲಭ್ಯವಿರುವ ಬಗ್ಗೆ ಕನಿಷ್ಟ ಎರಡರಿಂದ ಮೂರು ಪಾಯಿಂಟ್ ಮಾಡಬೇಕು. ಒಂದು ಬೋರ್‍ವೆಲ್ ವಿಫಲವಾದಾಗ ಮೊತ್ತೊಂದು ಪಾಯಿಂಟ್‍ನಲ್ಲಿ ಬೋರ್‍ವೆಲ್ ಕೊರೆಸಬೇಕು. ಯಾವುದೇ ರೀತಿಯಲ್ಲಿಯೂ ಜನರಿಗೆ ಕುಡಿಯುವ ನೀರಿನ ತೊಂದರೆಯಾಗಕೂಡದು ಎಂದು ಸಚಿವರು ತಾಕೀತು ಮಾಡಿದರು.
ಮುಂದಿನ ದಿನಗಳಲ್ಲಿ ಬೇಸಿಗೆ ಬರುವುದರಿಂದ ಜಿಲ್ಲೆ ಹಲವು ಕಡೆ ಕುಡಿಯುವ ನೀರಿನ ಅಭಾವ ತಲೆದೋರುವ ಸಾಧ್ಯತೆ ಇದೆ. ತುಂಗಭದ್ರಾ ಹಿನ್ನೀರಿನಿಂದ ಕುಡಿಯುವ ನೀರು ಬರುವುದು ನಾಲ್ಕೈದು ತಿಂಗಳು ತಡವಾಗಬಹುದು. ಹಾಗಾಗಿ ಜನರಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ, ಕುಡಿಯುವ ನೀರಿನ ಸಮಸ್ಯೆ ತಲೆದೋರಬಹುದಾದ ಗ್ರಾಮಗಳಲ್ಲಿ ಬೋರ್‍ವೆಲ್‍ಗಳ ಕೊರೆಸಿ, ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು ಎಂದು ಶಾಸಕ ಟಿ.ರಘುಮೂರ್ತಿ ಗ್ರಾಮೀಣ ಕುಡಿಯುವ ನೀರು ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಒಂದೇ ತಟ್ಟೇಲಿ ಅನ್ನ ತಿಂದು, ಸ್ಕೆಚ್ ಹಾಕಿದ ಸ್ನೇಹಿತರು: ಪಾರ್ಟಿಗೆಂದು ಕರೆದೊಯ್ದು ಕೊಲೆ
ಅರ್ಹರೆಲ್ಲರಿಗೂ ರೈತ ವಿದ್ಯಾನಿಧಿ:
ಜಿಲ್ಲೆಯಲ್ಲಿ ಮುಖ್ಯಮಂತ್ರಿ ರೈತವಿದ್ಯಾನಿಧಿ ಯೋಜನೆಯ ಫಲಾನುಭವಿಗಳ ಸಂಖ್ಯೆ ಕಡಿಮೆ ಇದೆ. ಅರ್ಹರೆಲ್ಲರನ್ನೂ ಈ ಯೋಜನೆಗೆ ಸೇರಿಸಬೇಕು. ಅರ್ಹ ಫಲಾನುಭವಿ ಯಾವುದೇ ಕಾರಣಕ್ಕೂ ಈ ಯೋಜನೆಯಿಂದ ವಂಚಿತರಾಗಬಾರದು. ರಾಜ್ಯ ವಿದ್ಯಾರ್ಥಿವೇತನ ಫೋರ್ಟ್‍ಲ್‍ನಲ್ಲಿ ನೋಂದಣಿ ಮಾಡಿಸುವಂತೆ ಡಿಡಿಪಿಐ ಹಾಗೂ ಡಿಡಿಪಿಯು ಅವರಿಗೆ ತಾಕೀತು ಮಾಡಿದರು. ಪ್ರೌಢ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ 8, 9 ಮತ್ತು 10ನೇ ತರಗತಿಯ ರೈತರ ಹೆಣ್ಣು ಮಕ್ಕಳು ಕಡ್ಡಾಯವಾಗಿ ಖಾತೆ ತೆರೆದು, ಆಧಾರ್ ಲಿಂಕ್ ಮಾಡಲು ಅಗತ್ಯ ಕ್ರಮ ವಹಿಸಬೇಕು. ಮುಖ್ಯಮಂತ್ರಿ ರೈತವಿದ್ಯಾನಿಧಿ ಯೋಜನೆಯ ಕುರಿತು ಹೆಚ್ಚಿನ ಜಾಗೃತಿ ಮೂಡಿಸಬೇಕು.
Bengaluru crimes: ಬಾರ್ ಸಪ್ಲೆಯರ್ ನೇಣು ಬಿಗಿದುಕೊಂಡು ಆತ್ಮಹತ್ಯೆ
ಅದೇ ರೀತಿ ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ, ವೃತ್ತಿ ಪರ ಕೋರ್ಸ್‍ಗಳ ವಿದ್ಯಾರ್ಥಿಗಳಿಗೂ ಇದರ ಬಗ್ಗೆ ಅರಿವು ಮೂಡಿಸಬೇಕು, ಎಲ್ಲ ವರ್ಗದ ವಿದ್ಯಾರ್ಥಿಗಳು ಕೂಡ ಬ್ಯಾಂಕ್ ಖಾತೆ ತೆರೆದು, ಆಧಾರ್ ಜೋಡಣೆ ಮಾಡಿಕೊಳ್ಳುವಂತಾಗಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ತಿಳಿಸಿದರು. ಡಿಡಿಪಿಐ ಕೆ.ರವಿಶಂಕರ್ ರೆಡ್ಡಿ ಮಾತನಾಡಿ, ಜಿಲ್ಲೆಯಲ್ಲಿ 3978 ರೈತ ಮಕ್ಕಳು ಮುಖ್ಯಮಂತ್ರಿ ರೈತವಿದ್ಯಾನಿಧಿಯೋಜನೆಯ ಫಲಾನುಭವಿಗಳಾಗಿದ್ದಾರೆ. ಅರ್ಹರೆಲ್ಲರನ್ನೂ ತ್ವರಿತಗತಿಯಲ್ಲಿ ಈ ಯೋಜನೆಗೆ ಸೇರಿಸುವಂತೆ ಈಗಾಗಲೇ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಲಾಗಿದೆ ಎಂದರು. ಸಭೆ ಯಲ್ಲಿ ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿ, ಪೂರ್ಣಿಮಾ ಕೆ.ಶ್ರೀನಿವಾಸ್, ಟಿ.ರಘುಮೂರ್ತಿ, ಗೂಳಿಹಟ್ಟಿ ಡಿ.ಶೇಖರ್, ಎಂ.ಚಂದ್ರಪ್ಪ, ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.