ದೇಶದ್ರೋಹಿಗಳನ್ನು ಮಟ್ಟ ಹಾಕಲು ಬಿಗಿ ಕಾನೂನು ಅಗತ್ಯ|ಈಗಿರುವ ಕಾನೂನು ದೇಶದ್ರೋಹಿಗಳನ್ನು ಮಟ್ಟ ಹಾಕಲು ಆಗುತ್ತಿಲ್ಲ|ಇದನ್ನು ಮತ್ತಷ್ಟು ಗಟ್ಟಿ ಮಾಡುವ ಅಗತ್ಯವಿದೆ|
ಕೊಪ್ಪಳ(ಫೆ.21): ಭಾರತದಲ್ಲಿ ಇರುವವರು ಯಾರೇ ಆಗಿರಲಿ, ಯಾವುದೇ ಜಾತಿ, ಧರ್ಮಕ್ಕೆ ಸೇರಿರಲಿ, ಭಾರತ್ ಮಾತಾ ಕೀ ಜೈ ಅನ್ನಬೇಕು. ಆದರೆ, ಇತ್ತೀಚೆಗೆ ಕೆಲಕಡೆ ಪಾಕಿಸ್ತಾನಕ್ಕೆ ಜೈ ಅನ್ನುತ್ತಿದ್ದಾರೆ. ಇದನ್ನು ತಡೆಯಲು ಬಿಗಿ ಕಾನೂನು ಅಗತ್ಯ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿಯ ಕೆಎಲ್‌ಇ ಕಾಲೇಜಿನಲ್ಲಿ ನಡೆದ ಘಟನೆಯನ್ನು ಪ್ರಸ್ತಾಪಿಸಿದ ಅವರು, ದೇಶದಲ್ಲಿ ಇರುವ ಯಾವುದೇ ಜಾತಿಯವರು ಸಹ ಭಾರತ್ ಮಾತಾ ಕೀ ಜೈ ಅನ್ನಬೇಕು ಎಂದರು. ಇಂಥ ಪ್ರಕರಣಗಳಲ್ಲಿ ಮೊದಲು ಬಂಧಿಸಿ, ನಂತರ ಬಿಡುಗಡೆ ಮಾಡಿರುವುದಕ್ಕೆ ಕಾರಣವಿದೆ. ಅಗತ್ಯ ಸಾಕ್ಷ್ಯಾಧಾರಗಳು ಇಲ್ಲದಿರುವುದರಿಂದ ಬಿಡುಗಡೆ ಮಾಡಲಾಗಿತ್ತು. ನಂತರ ಸಾಕ್ಷ್ಯಾಧಾರಗಳೊಂದಿಗೆ ಬಂಧಿಸಲಾಗಿದೆ. ಆದರೆ, ಈಗಿರುವ ಕಾನೂನು ದೇಶದ್ರೋಹಿಗಳನ್ನು ಮಟ್ಟ ಹಾಕಲು ಆಗುತ್ತಿಲ್ಲ. ಇದನ್ನು ಮತ್ತಷ್ಟು ಗಟ್ಟಿ ಮಾಡುವ ಅಗತ್ಯವಿದೆ. ಈ ದಿಸೆಯಲ್ಲಿ ನಾನು ಈಗಾಗಲೇ ಗೃಹ ಸಚಿವರೊಂದಿಗೆ ಚರ್ಚೆ ಮಾಡಿದ್ದೇನೆ, ಶೀಘ್ರದಲ್ಲಿಯೇ ಬಿಗಿ ಕಾನೂನು ವ್ಯವಸ್ಥೆ ಜಾರಿಗೆ ಪ್ರಯತ್ನವೂ ನಡೆದಿದೆ ಎಂದರು.
undefined
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಮಂಗಳೂರು ಗಲಭೆಯಲ್ಲಿ ಏನಾಗಿದೆ ಎನ್ನುವುದು ಜಗತ್ತಿಗೆ ಗೊತ್ತಾಗಿದೆ. ಇದನ್ನು ಪೊಲೀಸ್ ಇಲಾಖೆ ಸಮರ್ಥವಾಗಿಯೇ ನಿಭಾಯಿಸಿದೆ. ಹೀಗಿರುವಾಗ ಮತ್ತೆ ನ್ಯಾಯಾಂಗ ತನಿಖೆ ಅನಗತ್ಯ. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಆಡಳಿತ ನಡೆಸಿದ್ದಾರೆ. ಈಗ ವಿನಾಕಾರಣ ನ್ಯಾಯಾಂಗ ತನಿಖೆಯಾಗಬೇಕು ಎಂದು ಆಗ್ರಹಿಸುತ್ತಿದ್ದಾರೆ. ನನ್ನ ಪ್ರಕಾರ ನ್ಯಾಯಾಂಗ ತನಿಖೆಯ ಅಗತ್ಯವಿಲ್ಲ ಎಂದರು. ಪಿಎಫ್‌ಐ ಮತ್ತು ಎಸ್‌ಡಿಪಿಐ ಸಂಘಟನೆಯನ್ನು ಕಾಂಗ್ರೆಸ್ ಬೆಂಬಲಿಸುತ್ತಿದೆ. ಈ ಮೂಲಕ ಅದು ಹತ್ಯೆ ಪ್ರವೃತ್ತಿಯುಳ್ಳವರನ್ನು ಬೆಂಬಲಿಸುವ ಮೂಲಕ ಭಯೋತ್ಪಾದಕ ಚಟುವಟಿಕೆಯನ್ನು ಬೆಂಬಲಿಸಿದಂತೆ ಆಗುತ್ತಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಸೋತಿರುವ ಕಾಂಗ್ರೆಸ್ ವೋಟ್‌ಬ್ಯಾಂಕ್ ರಾಜಕಾರಣಕ್ಕಾಗಿ ಇಂಥ ಕೀಳುಮಟ್ಟದ ರಾಜಕೀಯ ಮಾಡುತ್ತಿದೆ ಎಂದು ಶ್ರೀರಾಮುಲು ಆಪಾದಿಸಿದರು.
ಮಹದಾಯಿ ಯೋಜನೆ ಕುರಿತು ಸುಪ್ರೀಂಕೋರ್ಟ್ ಆದೇಶ ಮಾಡಿದ್ದು, ಈ ಕುರಿತು ರಾಜ್ಯ ಸರ್ಕಾರ ಸೂಕ್ತ ನಿರ್ಣಯ ಕೈಗೊಳ್ಳುತ್ತದೆ ಎಂದರು. ಬೆಂಗಳೂರಲ್ಲಿ ಕಸಬ್‌ಗೆ ಆಶ್ರಯ ನೀಡಿದ್ದು ಕಾಂಗ್ರೆಸ್ ನಾಯಕರು ಎನ್ನುವುದು ಇತ್ತೀಚೆಗೆ ಬಹಿರಂಗವಾಗಿದೆ. ಕಸಬ್ ಬೆಂಗಳೂರು ನಿವಾಸಿ ಎನ್ನುವ ವಿಳಾಸ ಹೊಂದಿದ್ದನು. ಈ ವಿಳಾಸ ಕಾಂಗ್ರೆಸ್ ನಾಯಕರಿಗೆ ಸೇರಿದ್ದು ಎನ್ನುವುದರಿಂದಲೇ ಗೊತ್ತಾಗುತ್ತದೆ ಕಾಂಗ್ರೆಸ್ ನಾಯಕರು ಏನೇನು ಮಾಡುತ್ತಿದ್ದಾರೆ ಎನ್ನುವುದು ಎಂದು ಕುಟುಕಿದರು. ಭಾರತದಲ್ಲಿ ನೆಲೆಸುವವರು ಭಾರತ ಮಾತಾ ಕೀ ಜೈ ಅನ್ನಲೇಬೇಕು
ಕೊಪ್ಪಳಕ್ಕೆ ಸ್ಕ್ಯಾನ್ ಸೆಂಟರ್
ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಸ್ಕ್ಯಾನ್ ಸೆಂಟರ್ ಪ್ರಾರಂಭಿಸುವುದಕ್ಕೆ ಆರೋಗ್ಯ ಇಲಾಖೆ ಸಿದ್ದವಿದೆ. ಆದರೆ, ಆಸ್ಪತ್ರೆ ವೈದ್ಯಕೀಯ ಕಾಲೇಜಿನ ವ್ಯಾಪ್ತಿಗೆ ಬರುತ್ತಿರುವುದರಿಂದ ಸಮಸ್ಯೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು ಹೇಳಿದ್ದಾರೆ. ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸಮಸ್ಯೆ ರಾಜ್ಯಾದ್ಯಂತ ಇದ್ದು, ವೈದ್ಯಕೀಯ ಇಲಾಖೆಯ ಆಸ್ಪತ್ರೆಯಲ್ಲಿ ಪಿಪಿಪಿ ಯೋಜನೆಯಲ್ಲಿ ಸ್ಕ್ಯಾನ್ ಸೆಂಟರ್ ಹಾಕುವ ಕುರಿತು ಚಿಂತನೆ ನಡೆದಿದೆ. ಪಿಪಿಪಿ ಯೋಜನೆಯಾಗಿದ್ದರೂ ಇದರ ವೆಚ್ಚವನ್ನು ಆರೋಗ್ಯ ಇಲಾಖೆಯ ಮೂಲಕವೇ ಭರಿಸಲಾಗುವುದು. ಇದನ್ನು ಶೀಘ್ರ ಜಾರಿ ಮಾಡಲಾಗುವುದು ಎಂದರು.