ಆಪರೇಷನ್ ಕಮಲ: ವಿರೋಧ ಪಕ್ಷಗಳಲ್ಲಿ ಆತಂಕ ಮೂಡಿಸಿದ ಕಟೀಲ್ ಹೇಳಿಕೆ

By Kannadaprabha News  |  First Published Feb 21, 2020, 1:11 PM IST

ರಾಜೀನಾಮೆ ಕೊಟ್ಟು ಬಂದರೂ ಸ್ವಾಗತಿಸುತ್ತೇವೆ: ನಳಿನ್‌ಕುಮಾರ್ ಕಟೀಲು| ಯಾದಗಿರಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಪದಗ್ರಹಣ ಸಮಾರಂಭದಲ್ಲಿ ಕಟೀಲು ಹೇಳಿಕೆ| ಕಾಂಗ್ರೆಸ್, ಜೆಡಿಎಸ್‌ಗಿಂತ ಹೆಚ್ಚು ಜನಾದೇಶ ಬಿಜೆಪಿಗೇ ಇದೆ| 
 


ಯಾದಗಿರಿ(ಫೆ.21): ಆಪರೇಷನ್ ಕಮಲ ನಿಲ್ಲಿಸಿದ್ದೇವೆ. ಆದರೆ, ಬಾಗಿಲು ಓಪನ್ ಇದೆಯಷ್ಟೇ’ಎನ್ನುವ ಮೂಲಕ, ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್  ವಿರೋಧ ಪಕ್ಷಗಳಲ್ಲಿ ಹೊಸ ಆತಂಕ ಮೂಡಿಸಿದಂತಿದೆ. 

ಬಿಜೆಪಿ ಜಿಲ್ಲಾಧ್ಯಕ್ಷ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಳ್ಳಲು ಗುರುವಾರ ಯಾದಗಿರಿಗೆ ಆಗಮಿಸಿದ್ದ ಅವರು, ಸರ್ಕೀಟ್ ಹೌಸಿನಲ್ಲಿ ತಮ್ಮನ್ನು ಭೇಟಿಯಾದ ಮಾಧ್ಯಮಗಳೊಂದಿಗೆ ಮಾತನಾಡಿದರು. ಶಾಸಕ ಜಿ.ಟಿ. ದೇವೇಗೌಡ ಅವರ ಬಿಜೆಪಿ ಸೇರ್ಪಡೆ ಕುರಿತ ಚರ್ಚೆಗಳ ಬಗ್ಗೆ ಪ್ರತಿಕ್ರಿಯಿಸಿದ ಕಟೀಲು, ಯಾರೇ ರಾಜೀನಾಮೆ ಕೊಟ್ಟು ಬಂದರೂ ಸ್ವಾಗತಿಸುತ್ತೇವೆ ಎಂದರು. ಅಲ್ಲದೇ ಈ ಸರ್ಕಾರ ಜನಾದೇಶದ ಸರ್ಕಾರ ಅಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟೀಕೆಗೆ ತಿರಗೇಟು ನೀಡಿದ ಕಟೀಲ್, ಕಾಂಗ್ರೆಸ್, ಜೆಡಿಎಸ್ ಗಿಂತ ಹೆಚ್ಚು ಜನಾದೇಶ ಬಿಜೆಪಿಗೇ ಇದೆ ಎಂದು ಹೇಳಿದರು. 

Latest Videos

undefined

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಶಾಸಕ ಉಮೇಶ ಕತ್ತಿ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಭೇಟಿ ಬಗೆಗಿನ ಮಾತುಗಳು ಎಲ್ಲವೂ ಉಹಾಪೋಹ ಎಂದ ನಳೀನಕುಮಾರ ಕಟೀಲು ಸ್ಪಷ್ಟಪಡಿಸಿದರು. ಸರ್ಕಾರ ಸುಭದ್ರವಾಗಿದೆ. ಇನ್ನೂ ಮೂರು ವರ್ಷ ಏನೂ ಆಗೋಲ್ಲ ಭರವಸೆ ವ್ಯಕ್ತಪಡಿಸಿದರು. 

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪರ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಸಾಫ್ಟ್ ಕಾರ್ನರ್ ಆಗಿದ್ದಾರಲ್ಲ ಅನ್ನೋ ಮಾಧ್ಯಮಗಳ ಪ್ರಶ್ನೆಗೆ, ದೇವೇಗೌಡರು ಚಾಣಾಕ್ಷ ರಾಜಕಾರಣಿ, ಅವರ ಶಾಸಕರು ಕಾಲು ಹೊರಗಿಟ್ಟರೆ ಪಕ್ಷ ಒಡೆಯುತ್ತೆ ಎಂದು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದರು. 

ಕವಿತೆ, ಕವನ ಬರೆದವರನ್ನ ಬಂಧಿಸಿಲ್ಲ, ರಾಷ್ಟ್ರವಿರೋಧಿ ಹೇಳಿಕೆ ವಿರುದ್ಧ ಕ್ರಮ

ಗನ್ ಹಾಗೂ ಕಲ್ಲು ಹೊಡೆಯುವವರು, ಪಾಕಿಸ್ತಾನಕ್ಕೆ ಜಿಂದಾಬಾದ್ ಅಂದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲು, ಕವಿತೆ ಹಾಗೂ ಕವನ ಬರೆದವರನ್ನ ಬಂಧಿಸಿಲ್ಲ. ರಾಷ್ಟ್ರ ವಿರೋಧಿ ಹೇಳಿಕೆ ನೀಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆಯಷ್ಟೇ ಎಂದು ಕವಿ ಸಿರಾಜ್ ಬಿಸರಳ್ಳಿ ಬಂಧನ ಕ್ರಮವನ್ನು ಸಮರ್ಥಿಸಿಕೊಂಡರು. 

ಮಾಜಿ ಸಿಎಂ ಸಿದ್ದರಾಮಯ್ಯ ಅವಧಿಯಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಟೀಕೆ ಮಾಡಿದ್ದಾರೆ ಅಂತ ಹತ್ತಾರು ಜನರನ್ನ ಬಂಧಿಸಿರಲಿಲ್ವೆ ಎಂದು ಪ್ರಶ್ನಿಸಿದ ಕಟೀಲು, ಗನ್, ಕಲ್ಲು ಹೊಡೆಯುವವರು, ಪಾಕ್‌ಗೆ ಜಿಂದಾಬಾದ್ ಎನ್ನುವವರ ವಿರುದ್ಧ ಕಾನೂನು ಕ್ರಮ ಕೈಗೊಂಡಿದೆ ಎಂದರು. ಇನ್ನು, ಸದನದಲ್ಲಿ ಸಿರಾಜ್ ಬಿಸರಳ್ಳಿ ಕವನ ಓದಿದ ಮಾಜಿ ಸಿಎಂ ಎಚ್‌ಡಿಕೆ ಬಗ್ಗೆ ಕ್ರಮದ ಬಗ್ಗೆ ಸಭಾಪತಿಗಳೇ ಸುಪ್ರೀಂ, ಅವರೇ ಯೋಚನೆ ಮಾಡ್ತಾರೆ ಎಂದರು. 

ಬಿಜೆಪಿ ರಾಜ್ಯಾಧ್ಯಕ್ಷರಿಗೆ ರಾಜಮರ್ಯಾದೆ, ಜನಸಾಮಾನ್ಯರ ಪರದಾಟ 

ಬಿಜೆಪಿ ಜಿಲ್ಲಾಧ್ಯಕ್ಷರ ಪದಗ್ರಹಣ ಸ್ವೀಕಾರ ಸಮಾರಂಭಕ್ಕೆಂದು ಗುರುವಾರ ನಗರಕ್ಕಾಗಮಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರ ವಾಹನಕ್ಕೆ ಆದ್ಯತೆ ನೀಡಿ, ಒಂದು ರೀತಿಯಲ್ಲಿ ‘ಝೀರೋ ಟ್ರಾಫಿಕ್’ ವಾತಾವರಣ ಬಿರು ಬಿಸಿಲಲ್ಲಿ ಬಸವಳಿದ ನಾಗರಿಕರ ಟೀಕೆಗೂ ಗುರಿಯಾಗಬೇಕಾಯಿತು. ಕಲಬುರಗಿಯಿಂದ ಯಾದಗಿರಿಗೆ ಆಗಮಿಸಿದ ಕಟೀಲು ಹಾಗೂ ಬೆಂಬಲಿಗರ ವಾಹನಗಳು ಧೂಳೆಬ್ಬಿಸುತ್ತ ನಡೆದವು. ಅವರ ವಾಹನಗಳು ಬರುವ ಕೆಲ ನಿಮಿಷಗಳ ಮುನ್ನವೇ ಸುಭಾಸ್ಚಂದ್ರ ಭೋಸ್ ವೃತ್ತ ಹಾಗೂ ಚಿತ್ತಾಪೂರ ರಸ್ತೆಯಲ್ಲಿ ಸಾರ್ವಜನಿಕರ ವಾಹನಗಳನ್ನು ಮುಂಚೆಯೇ ತಡೆದು ನಿಲ್ಲಿಸಲಾಗಿತ್ತು. ಸುಮಾರು ಹತ್ತಾರು ನಿಮಿಷಗಳ ಕಾಲ ಚುರುಗುಟ್ಟುವ ಬಿಸಿಲಲ್ಲಿ ಬಸವಳಿದ ವಾಹನ ಸವಾರರು, ಸಂಚಾರಿ ಪೊಲೀಸರ ಈ ಕ್ರಮಕ್ಕೆ ಆಕ್ಷೇಪಿಸಿ, ರಾಜಮರ್ಯಾದೆ ಅತಿಯಾಯ್ತು ಎಂದು ಶಪಿಸಿದ್ದು ಕಂಡು ಬಂತು.

click me!