'ಸಿಎಂ ಯಡಿಯೂರಪ್ಪ ನನಗೆ ಒಳ್ಳೆಯ ಸ್ಥಾನ ಕೊಟ್ಟೇ ಕೊಡ್ತಾರೆ'

By Kannadaprabha NewsFirst Published Feb 9, 2020, 7:47 AM IST
Highlights

ಸಚಿವ ಸ್ಥಾನಕ್ಕಾಗಿ ಸಿಎಂ ಮೇಲೆ ಒತ್ತಡ ಸಲ್ಲದು| ಕೈ ನಾಯಕರಿಗೆ ಕೆಲಸವಿಲ್ಲ, ಬಾಯಿಚಪಲ|ಬಿಜೆಪಿಯಲ್ಲಿ ಯಾವುದೆ ಗುಂಪುಗಾರಿಕೆ, ವೈಮನಸ್ಸು ಇಲ್ಲ|

ಹುಬ್ಬಳ್ಳಿ(ಫೆ.09):ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಬಹಳ ಒತ್ತಡದಿಂದ ಕೆಲಸ ಮಾಡುತ್ತಿದ್ದು, ಅವರಿಗೆ ಕಾಲಾವಕಾಶದ ಅಗತ್ಯವಿದೆ. ಅವರ ಮೇಲೆ ನಮಗೆ ನಂಬಿಕೆ, ಭರವಸೆ ಇಡಬೇಕೆ ಹೊರತು ಒತ್ತಡ ಹಾಕುವುದು ಸರಿಯಲ್ಲ ಎಂದಿರುವ ಆರೋಗ್ಯ ಸಚಿವ ಬಿ.ಶ್ರೀರಾಮುಲು, ನಮಗೆ ಅವರು ಒಳ್ಳೆಯ ಸ್ಥಾನ ಕೊಟ್ಟೇ ಕೊಡುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ಶನಿವಾರ ಇಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳನ್ನು ಇಕ್ಕಟ್ಟಿಗೆ ಸಿಲುಕಿಸುವ ಸಂದರ್ಭ ಸೃಷ್ಟಿಯಾಗಬಾರದು. ಪಕ್ಷದಲ್ಲಿ ಆಕಾಂಕ್ಷಿತರು ಸಹಜ. ಯಾರಿಗೆ ಯಾವ ಖಾತೆ ನೀಡಬೇಕು ಎಂಬುದು ಸಿಎಂ ವಿವೇಚನೆಗೆ ಬಿಟ್ಟಿದ್ದು. ಕಾಂಗ್ರೆಸ್‌ ಬರಿದು ಮಾಡಿರುವ ಖಜಾನೆಯ ಬೊಕ್ಕಸವನ್ನು ತುಂಬಬೇಕಾದ ಹೊಣೆ ಸರ್ಕಾರದ ಮೇಲಿದೆ. ಯಾವತ್ತಾದರೂ ಒಂದು ದಿನ ಭಗವಂತ ನಮ್ಮ ಆಸೆ ಈಡೇರಿಸಬಹುದು ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಯಾರೇ ಆದರೂ ಯಡಿಯೂರಪ್ಪ ಮಾತು ಕೇಳಲೇ ಬೇಕು. ನಮ್ಮಲ್ಲಿ ಯಾವುದೇ ಖಾತೆ ಬದಲಾವಣೆ ಇಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬರಲು ಎಲ್ಲರ ಅಳಿಲು ಸೇವೆ ಇದೆ. ಅದಕ್ಕೆ ಬಿಎಸ್‌ವೈ ಶಕ್ತಿ ಬಹಳ ಪ್ರಮುಖವಾಗಿದ್ದು, ಅವರೊಂದು ಮರ ಇದ್ದಂತೆ, ನಾವು ಕೊಂಬೆಗಳಾಗಿ ಕೆಲಸ ಮಾಡುತ್ತಿದ್ದೇವೆ ಅಷ್ಟೇ. ಡಿಸಿಎಂ ಸ್ಥಾನಕ್ಕಾಗಿ ನಾನು ಆಸೆ ಇಟ್ಟುಕೊಳ್ಳಬಹುದು. ಆದರೆ, ಸಮಯ ಬಂದಾಗ ಪಕ್ಷ ನೀಡಲಿದೆ. ಈ ವೇಳೆ ಬಿಎಸ್‌ವೈ ಮೇಲೆ ಮತ್ತಷ್ಟುಒತ್ತಡ ಹಾಕುವುದು ಸರಿಯಲ್ಲ ಎಂದರು.

ಸಿದ್ದರಾಮಯ್ಯ ಅವರಿಗೆ ಕೆಲಸವಿಲ್ಲದೆ ನಿರುದ್ಯೋಗಿ. ನಮ್ಮಲ್ಲಿ ವಲಸಿಗ ಬಿಜೆಪಿ, ಮೂಲ ಬಿಜೆಪಿ ಎಂಬ ಭೇದವಿಲ್ಲ. ಯಾವುದೆ ತಾರತಮ್ಯ ಇಲ್ಲದೆ, ಭಿನ್ನಮತವಿಲ್ಲದೆ ಸರ್ಕಾರ ಪೂರ್ಣಾವಧಿ ಪೂರೈಸಲಿದೆ. ಇನ್ನು, ಕೈ ನಾಯಕರಿಗೆ ಕೆಲಸವಿಲ್ಲ, ಹೀಗಾಗಿ ಅವರಿಗೆ ಏನೆನೋ ಯೋಚನೆ ಬರುತ್ತವೆ. ಸರ್ಕಾರ ಬೀಳಲಿದೆ ಎಂಬ ಅವರ ಮಾತಿಗೆ ಅರ್ಥವಿಲ್ಲ ಎಂದು ಹೇಳಿದರು.

ಡಾ. ಜಿ. ಪರಮೇಶ್ವರ್‌ ಅವರ ಸರ್ಕಾರ ಸ್ಥಿರ ಇಲ್ಲ, ಶೀಘ್ರ ವಿಧಾನಸಭೆ ಚುನಾವಣೆ ಎಂಬ ಹೇಳಿಕೆಗೆ ತಿರುಗೇಟು ನೀಡಿದ ರಾಮುಲು, ಕಾಂಗ್ರೆಸ್‌ನವರಿಗೆ ಕೆಲಸವಿಲ್ಲದೆ ಬಾಯಿಚಪಲ ಹೆಚ್ಚಾಗಿದೆ. ಕೆಲಸವಿಲ್ಲದ ಮನುಷ್ಯ ಏನು ತಾನೆ ಮಾಡಬಲ್ಲ? ಬಿಜೆಪಿಯಲ್ಲಿ ಯಾವುದೆ ಗುಂಪುಗಾರಿಕೆ, ವೈಮನಸ್ಸು ಇಲ್ಲ ಎಂದು ಸ್ಪಷ್ಟಪಡಿಸಿದರು.

ಕೊರೋನಾ ಬಗ್ಗೆ ಭಯ ಬೇಡ

ರಾಜ್ಯದಲ್ಲಿ ಈವರೆಗೆ ಕೊರೋನಾ ಶಂಕಿತ ಎನ್ನಲಾದ 97 ಜನರ ರಕ್ತ ಪರಿಶೀಲನೆ ಮಾಡಲಾಗಿದ್ದು, ಅದರಲ್ಲಿ 70 ಜನರ ವರದಿ ಬಂದಿದೆ. ಎಲ್ಲವೂ ನೆಗೆಟಿವ್‌ ಎಂಬ ಫಲಿತಾಂಶ ಬಂದಿರುವುದು ನೆಮ್ಮದಿ ತಂದಿದೆ. ಉಳಿದ ಪ್ರಕರಣಗಳು ಕೂಡ ನೆಗೆಟಿವ್‌ ಎಂಬುದನ್ನು ವೈದ್ಯಾಧಿಕಾರಿಗಳು ಪರೋಕ್ಷವಾಗಿ ತಿಳಿಸಿದ್ದಾರೆ. ಮಂಗಳೂರು, ಉಡುಪಿ ಸೇರಿದಂತೆ ಕೇರಳ ಭಾಗದಲ್ಲಿ ಅಗತ್ಯ ತಪಾಸಣೆ ಕೈಗೊಳ್ಳಲಾಗುತ್ತಿದೆ. ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ 10 ಹಾಸಿಗೆಯನ್ನು ಮೀಸಲಿಡಲಾಗಿದೆ. ಇನ್ನು, ಕೊರೋನಾ ಸೇರಿದಂತೆ ಚಿಕೂನ್‌ ಗುನ್ಯಾ ರೀತಿಯ ಸಾಂಕ್ರಾಮಿಕ ರೋಗಗಳ ಕುರಿತು ಗ್ರಾಮಗಳಲ್ಲಿ ಜಾಗೃತಿ ಮೂಡಿಸಲು ಸೂಚಿಸಲಾಗಿದೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೇಳಿದರು.
 

click me!