ಈ ಅವಧಿಯುದ್ದಕ್ಕೂ ಯಡಿಯೂರಪ್ಪ ಅವರೇ ಮುಖ್ಯಮಂತ್ರಿ ಆಗಿರುತ್ತಾರೆ. ಮುಂದಿನ ಸರ್ಕಾರ ಬಂದ ಮೇಲೆ ಆಗ ಯಾರಾಗಬೇಕು ಎಂದು ನಿರ್ಣಯಿಸುತ್ತಾರೆ ಎಂದ ಬಿ.ಸಿ. ಪಾಟೀಲ್
ಕೊಪ್ಪಳ(ನ.02): ಅವರ (ಕಾಂಗ್ರೆಸ್) ತಟ್ಟೆಯಲ್ಲಿಯೇ ಕತ್ತೆ ಸತ್ತು ಬಿದ್ದಿದೆ. ಇಲ್ಲಿ (ಬಿಜೆಪಿಯಲ್ಲಿ) ನೊಣ ಬಿದ್ದಿರುವುದನ್ನು ತೆಗೆಯುವುದಕ್ಕೆ ಸಿದ್ದರಾಮಯ್ಯಅವರು ಅಷ್ಟ್ಯಾಕೆ ಆಸಕ್ತಿ ತೊರಿಸುತ್ತಿದ್ದಾರೋ ಗೊತ್ತಿಲ್ಲ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ.
ಕೊಪ್ಪಳದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಬಿಜೆಪಿ ಸರ್ಕಾರ ಬೀಳುತ್ತೆ, ಮುಖ್ಯಮಂತ್ರಿ ಬದಲಾಗುತ್ತಾರೆ ಎಂದು ಪದೇ ಪದೇ ಯಾಕೆ ಹೇಳುತ್ತಿದ್ದಾರೆ ಎನ್ನುವುದು ಅರ್ಥವಾಗುತ್ತಿಲ್ಲ. ಅಷ್ಟಕ್ಕೂ ತಮ್ಮ ಪಕ್ಷದಲ್ಲಿರುವುದನ್ನೇ ತೊಳೆದುಕೊಂಡರೆ ಸಾಕು. ಇಲ್ಲಿದೇನು ತೊಳೆಯಲು ಬರುತ್ತಾರೆ?. ಡಿ.ಕೆ. ಶಿವಕುಮಾರ ಅವರನ್ನು ಮುಗಿಸಲು ಸಿದ್ದರಾಮಯ್ಯ, ಸಿದ್ದರಾಮಯ್ಯ ಮುಗಿಸಲು ಡಿಕೆಶಿ ಕಾಯುತ್ತಿದ್ದಾರೆ. ತಮ್ಮ ಪಕ್ಷದಲ್ಲಿರುವ ಒಳಜಗಳ ಮುಚ್ಚಿಕೊಂಡು ಹೋದರೆ ಸಾಕು. ಅವರಿಗೆ ಬಿಜೆಪಿ ಬಗ್ಗೆ ಅಷ್ಟೊಂದು ಆಸಕ್ತಿ ಇದ್ದರೆ ಪಕ್ಷಕ್ಕೆ ಬಂದರೆ ನಾವು 17 ಜನರು ಸ್ವಾಗತ ಮಾಡುತ್ತೇವೆ ಎಂದರು.
'ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದೆಲ್ಲವೂ ವೇದವಾಕ್ಯವಲ್ಲ'
ಇನ್ನು ಮುಖ್ಯಮಂತ್ರಿ ಬದಲಾವಣೆಯ ಪ್ರಶ್ನೆಯೇ ಇಲ್ಲದಿರುವಾಗ ಆ ಪ್ರಶ್ನೆ ಯಾಕೆ? ಈ ಅವಧಿಯುದ್ದಕ್ಕೂ ಯಡಿಯೂರಪ್ಪ ಅವರೇ ಮುಖ್ಯಮಂತ್ರಿ ಆಗಿರುತ್ತಾರೆ. ಮುಂದಿನ ಸರ್ಕಾರ ಬಂದ ಮೇಲೆ ಆಗ ಯಾರಾಗಬೇಕು ಎಂದು ನಿರ್ಣಯಿಸುತ್ತಾರೆ ಎಂದು ಟಾಂಗ್ ನೀಡಿದ್ದಾರೆ.