ಸಚಿವರಾಗಬೇಕು ಎನ್ನುವುದು ಎಲ್ಲರ ಆಸೆ| ಬಿಜೆಪಿಯಲ್ಲಿ ಯಾವುದೇ ಭಿನ್ನಮತ ಇಲ್ಲ| ಸರ್ಕಾರ ಸುಭದ್ರವಾಗಿದ್ದು, ಯಡಿಯೂರಪ್ಪ ಅವರೇ ಇನ್ನೂ ಮೂರು ವರ್ಷ ಮುಖ್ಯಮಂತ್ರಿಯಾಗಿರುತ್ತಾರೆ. ಇದರಲ್ಲಿ ಯಾವುದೇ ಅನುಮಾನ ಬೇಡ|
ಕೊಪ್ಪಳ(ಜೂ.06): ಲಾಕ್‌ಡೌನ್ ವೇಳೆ ಹೋಟೆಲ್‌ಗಳು ಬಂದ್ ಇರುವುದರಿಂದ ಯಾರದ್ದಾದರೂ ಮನೆಗೆ ಊಟಕ್ಕೆ ಹೋದರೆ ಅದನ್ನೇ ಭಿನ್ನಮತ ಎಂದರೇ ಹೇಗೆ? ಶಾಸಕರು ಮನೆಗೆ ಊಟಕ್ಕೆ ಕರೆದರೆ ಹೋಗಲು ಭಯವಾಗುತ್ತದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಭಿನ್ನಮತದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿಯಲ್ಲಿ ಯಾವುದೇ ಭಿನ್ನಮತ ಇಲ್ಲ. ಸರ್ಕಾರ ಸುಭದ್ರವಾಗಿದ್ದು, ಯಡಿಯೂರಪ್ಪ ಅವರೇ ಇನ್ನೂ ಮೂರು ವರ್ಷ ಮುಖ್ಯಮಂತ್ರಿಯಾಗಿರುತ್ತಾರೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ವಿಶ್ವಾಸ ವ್ಯಕ್ತಪಡಿಸಿದರು.
'ಸಿದ್ದರಾಮಯ್ಯ ಮೋಸ ಮಾಡಿದ್ದಕ್ಕೆ ನಾವು ಕಾಂಗ್ರೆಸ್ ಬಿಟ್ಟಿದ್ದು'
ಆಸೆ ಇದ್ದರೆ ತಪ್ಪೇನು?
ಯಾರಾದರೂ ಸಚಿವರಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರೆ ಅದು ಭಿನ್ನಮತವಲ್ಲ, ಅವರವರ ಆಸೆಗಳನ್ನು ಅವರು ಹೇಳಿಕೊಳ್ಳುತ್ತಾರೆ. ನನಗೂ ಅನೇಕ ಆಸೆಗಳಿವೆ. ಮುಖ್ಯಮಂತ್ರಿಯಾಗಬೇಕು, ಪ್ರಧಾನಮಂತ್ರಿಯಾಗಬೇಕು ಎನ್ನುವ ಆಸೆ ಇದ್ದರೆ ತಪ್ಪೇನು ಎಂದು ಪ್ರಶ್ನೆ ಮಾಡಿದರು.
ಬಿಜೆಪಿಯಲ್ಲಿ ಭಿನ್ನಮತ ಇದೆ ಎಂದು ಹೇಳುವವರು ತಮ್ಮ ಪಕ್ಷದಲ್ಲಿ ಏನಾಗುತ್ತಿದೆ ಎನ್ನುವುದನ್ನು ನೋಡಿಕೊಳ್ಳಲಿ. ಸಿದ್ದರಾಮಯ್ಯ ಸ್ವಾರ್ಥದಿಂದಾಗಿಯೇ ನಾವೆಲ್ಲ ಪಕ್ಷವನ್ನು ಬಿಟ್ಟು ಬಂದಿದ್ದು, 17 ಶಾಸಕರು ಪಕ್ಷ ತೊರದಿದ್ದೇವೆ. ಈಗ ಬಿಜೆಪಿಯ ಭಿನ್ನಮತದ ಬಗ್ಗೆ ಏನು ಮಾತನಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಾಸಕರನ್ನು ಆಹ್ವಾನಿಸಿದ್ದೇನೆ:
ಕೋವಿಡ್ ಪ್ರಯೋಗಾಲಯ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವ ಕಾರ್ಯಕ್ರಮಕ್ಕೆ ಸ್ವತಃ ನಾನೇ ಸ್ಥಳೀಯ ಶಾಸಕ ರಾಘವೇಂದ್ರ ಹಿಟ್ನಾಳ ಅವರನ್ನು ಆಹ್ವಾನ ಮಾಡಿದ್ದೇನೆ. ಅವರು ಬಂದಿಲ್ಲ ಎಂದರೆ ನಾನೇನು ಮಾಡಲು ಆಗುವುದಿಲ್ಲ ಎಂದರು.
ಶಾಸಕರನ್ನು ಆಹ್ವಾನ ಮಾಡುವುದು ನಮ್ಮ ಕರ್ತವ್ಯ, ಮಾಡಿದ್ದೇವೆ. ಬರುವುದು ಅವರ ಕರ್ತವ್ಯ ಎಂದರು. ಇನ್ನು ಶಾಸಕ ರಾಘವೇಂದ್ರ ಹಿಟ್ನಾಳ ಅವರು ಶಿಷ್ಟಾಚಾರ ಪಾಲಿಸಬೇಕು. ಸರ್ಕಾರ ನಿಗದಿ ಮಾಡುವ ಕಾರ್ಯಕ್ರಮಗಳಲ್ಲಿ ಭಾಗಿಯಾಗಬೇಕು. ಶಿಷ್ಟಾಚಾರ ಬಿಟ್ಟು, ತಾವೇ ಮಾಡಿದರೆ ಅದು ಸರಿಯಲ್ಲ. ಹೀಗಾಗಿ, ಸರ್ಕಾರದ ಪರವಾಗಿ ನಾನು ವಿಜಯನಗರ ಕಾಲುವೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ್ದೇನೆ ಎಂದರು.