ವಿಜಯನಗರ ಜಿಲ್ಲೆ ಉದ್ಘಾಟನೆಯಲ್ಲಿ ಹಂಪಿ ವೈಭವ

By Kannadaprabha News  |  First Published Sep 26, 2021, 7:26 AM IST

*  ಅ.2ಕ್ಕೆ ರಾಜ್ಯದ 31ನೇ ಜಿಲ್ಲೆ ಸಿಎಂ ಬೊಮ್ಮಾಯಿ ಅವರಿಂದ ಉದ್ಘಾಟನೆ
*  ವೇದಿಕೆಯಲ್ಲಿ ಹಂಪಿಯ ಭವ್ಯ ಗೋಪುರ, ಸ್ಮಾರಕಗಳ ಮೆರುಗು
*  ಬಳ್ಳಾರಿಯಿಂದ ಇಬ್ಭಾಗವಾಗಿ ನೂತನ ಜಿಲ್ಲೆಯಾದ ವಿಜಯನಗರ 


ಕೃಷ್ಣ ಎನ್‌.ಲಮಾಣಿ

ಹೊಸಪೇಟೆ(ಸೆ.26): ಐತಿಹಾಸಿಕ ವಿಜಯನಗರ(Vijayanagara) ಜಿಲ್ಲಾ ಕೇಂದ್ರದ ಉದ್ಘಾಟನೆಯೂ ಚಾರಿತ್ರಿಕ ಪರಂಪರೆ ಒಳಗೊಳ್ಳಲಿದ್ದು, ಇದಕ್ಕಾಗಿ ಸಿದ್ಧತೆ ನಡೆದಿದೆ. ಭವ್ಯ ವೇದಿಕೆಯಲ್ಲಿ ಹಂಪಿಯ ಗತವೈಭವ ರಾರಾಜಿಸಲಿದೆ. ವಿಜಯನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಅ.2 ಮತ್ತು 3ರಂದು ವಿಜಯನಗರ ಜಿಲ್ಲೆ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ. ಅ.2ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜಿಲ್ಲೆಗೆ ಅಧಿಕೃತ ಚಾಲನೆ ನೀಡಲಿದ್ದಾರೆ. ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಸೇರಿದಂತೆ ಗಣ್ಯರು ಆಗಮಿಸಲಿದ್ದಾರೆ.

Latest Videos

undefined

ಹಂಪಿಯ(Hampi) ಶ್ರೀವಿರೂಪಾಕ್ಷೇಶ್ವರ ದೇಗುಲದ ಭವ್ಯಗೋಪುರದ ಮಾದರಿಯಲ್ಲೇ 78 ಅಡಿ ಎತ್ತರದ ಗೋಪುರವನ್ನು ವೇದಿಕೆಯಲ್ಲಿ ನಿರ್ಮಿಸಲಾಗುತ್ತದೆ. ಹಂಪಿ ಪರಂಪರೆ ಸಾರುವ ಸ್ಮಾರಕಗಳ ವೈಭವವನ್ನು ಶಿಲ್ಪಿಗಳು ಸೃಷ್ಟಿಸಲಿದ್ದಾರೆ. ಈ ಭವ್ಯ ವೇದಿಕೆ 120 ಅಡಿಗೂ ಮೀರಿ ಉದ್ದ ಹಾಗೂ ವಿಶಾಲವಾಗಿರುತ್ತದೆ. ಹಂಪಿಯ ಭವ್ಯ ಪರಂಪರೆಯನ್ನು ಈ ವೇದಿಕೆ ಪ್ರತಿಬಿಂಬಿಸಲಿದೆ. ವಿಜಯನಗರ ನೆಲದ ಪರಂಪರೆಯನ್ನು ಸಾರುವ ಮಾದರಿಯಲ್ಲಿ ಪ್ರವೇಶ ದ್ವಾರಗಳನ್ನು ನಿರ್ಮಿಸಲಾಗುತ್ತದೆ. ವಿಜಯನಗರದ ಕಲೆ, ಸಂಸ್ಕೃತಿ, ವಾಸ್ತುಶಿಲ್ಪವನ್ನು ಪ್ರತಿಬಿಂಬಿಸುವ ಕಾರ್ಯವನ್ನು ನುರಿತ ಶಿಲ್ಪಿಗಳು, ತಜ್ಞರು ಮಾಡಲಿದ್ದಾರೆ. ಕ್ರೀಡಾಂಗಣದಲ್ಲಿ ಮ್ಯಾಟ್‌ ಹಾಕಲಾಗುತ್ತದೆ.

ಹೊಸಪೇಟೆ: ತಡರಾತ್ರಿ ಠಾಣೆಯಲ್ಲಿದ್ದ ಹಂಪಿ ವಿವಿ ವಿದ್ಯಾರ್ಥಿನಿಯರು?

ಎಲ್‌ಇಡಿ ವ್ಯವಸ್ಥೆ:

ಕೋವಿಡ್‌(Covid19) ಹಿನ್ನೆಲೆಯಲ್ಲಿ ಕ್ರೀಡಾಂಗಣದಲ್ಲಿ ಜನಸಾಗರ ಸೇರದಂತೆ ಮುನ್ನೆಚ್ಚರಿಕೆ ವಹಿಸಲಾಗುತ್ತಿದ್ದು, ನಗರದ ಪ್ರಮುಖ ಸ್ಥಳಗಳಲ್ಲಿ ಎಲ್‌ಇಡಿ ಪರದೆ ವ್ಯವಸ್ಥೆ ಮಾಡುವ ಆಲೋಚನೆಯೂ ಹೊಂದಲಾಗಿದೆ. ವಿಜಯನಗರದ ಭವ್ಯ ಪರಂಪರೆಯನ್ನು ಸಾದರಪಡಿಸುವ ಮಾದರಿಯಲ್ಲಿ ಉದ್ಘಾಟನಾ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. 2021ರ ಫೆಬ್ರವರಿ 8ರಂದೇ ರಾಜ್ಯ ಸರ್ಕಾರ ವಿಜಯನಗರ ಜಿಲ್ಲೆ ಘೋಷಣೆ ಮಾಡಿದ್ದರೂ ಕೋವಿಡ್‌ ಹಿನ್ನೆಲೆ ಉದ್ಘಾಟನಾ ಕಾರ್ಯಕ್ರಮ ಆಯೋಜನೆಗೆ ತಡವಾಗಿತ್ತು. ಈಗ ಕೋವಿಡ್‌ ನಿಯಮ ಪಾಲನೆಯೊಂದಿಗೆ ಭವ್ಯ ವೇದಿಕೆಯಲ್ಲೇ ಐತಿಹಾಸಿಕ ಜಿಲ್ಲೆಗೆ ವಿಧ್ಯುಕ್ತ ಚಾಲನೆ ನೀಡಲು ಸಚಿವ ಆನಂದ್‌ ಸಿಂಗ್‌ ಹಾಗೂ ವಿಜಯನಗರ ಜಿಲ್ಲಾಡಳಿತ ಯೋಜನೆ ರೂಪಿಸುತ್ತಿದೆ.

ಕೊಪ್ಪಳ ಜಿಲ್ಲೆ ರಚನೆಯಾದ ಸಂದರ್ಭದಲ್ಲೇ ಹೊಸಪೇಟೆಯನ್ನು ಜಿಲ್ಲಾ ಕೇಂದ್ರವಾಗಿಸುವ ಕೂಗು ಎದ್ದಿತ್ತು. ನಿರಂತರ ಹೋರಾಟದ ಫಲವಾಗಿ ವಿಜಯನಗರ ಜಿಲ್ಲೆ ರಚನೆಯಾಗಿದ್ದು, ಸಂಸ್ಕೃತಿಯನ್ನು ಮತ್ತೊಮ್ಮೆ ಅನಾವರಣಗೊಳಿಸುವ ಕಾರ್ಯಕ್ಕೆ ಜಿಲ್ಲಾಡಳಿತ ಮುಂದಾಗಿದೆ. ಬಳ್ಳಾರಿಯಿಂದ ಇಬ್ಭಾಗವಾಗಿರುವ ನೂತನ ವಿಜಯನಗರ ಜಿಲ್ಲೆಯು ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿ, ಹರಪನಹಳ್ಳಿ, ಕೂಡ್ಲಿಗಿ ಮತ್ತು ಕೊಟ್ಟೂರು ತಾಲೂಕುಗಳನ್ನು ಒಳಗೊಂಡಿದೆ.

ಭವ್ಯ ವೇದಿಕೆ ನಿರ್ಮಾಣ

ಹಂಪಿಯ ಭವ್ಯ ಪರಂಪರೆಯನ್ನು ಸಾರುವ ಮಾದರಿಯಲ್ಲಿ ವೇದಿಕೆ ನಿರ್ಮಿಸಲಾಗುತ್ತದೆ. ಅ.2ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೂತನ ಜಿಲ್ಲೆಗೆ ಚಾಲನೆ ನೀಡಲಿದ್ದಾರೆ. ಜಿಲ್ಲೆ ಕೊಡುಗೆ ನೀಡಿದ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರು ಆಗಮಿಸಲಿದ್ದಾರೆ ಎಂದು ಸಚಿವ ಆನಂದ್‌ ಸಿಂಗ್‌(Anand Singh) ತಿಳಿಸಿದ್ದಾರೆ.  
 

click me!