ಕೊಟ್ಟ ಮಾತಿನಂತೆ ನಡೆದುಕೊಳ್ತೀರಾ ಸಿಂಗ್: ವಿಜಯನಗರ ಆಗುತ್ತಾ ಜಿಲ್ಲೆ?

By Kannadaprabha News  |  First Published Feb 8, 2020, 11:50 AM IST

ಹೊಸ ಸಚಿವಗೆ ಹೊಸ ಜಿಲ್ಲೆಯ ಸವಾಲು| ಉಪ ಚುನಾವಣೆಯಲ್ಲಿ ಕೊಟ್ಟ ಮಾತಿನಂತೆ ನಡೆದುಕೊಳ್ಳಲಿ| ವಿಜಯನಗರ ಕ್ಷೇತ್ರದಲ್ಲಿ ಕಾಣದ ಸಂಭ್ರಮ| ಜಿಂದಾಲ್‌ ಭೂಮಿ ಪರಾಭಾರೆ ವಿಚಾರದಲ್ಲಿ ಸಿಂಗ್‌ ನಡೆಯತ್ತ ಗಮನ|


ಕೆ.ಎಂ. ಮಂಜುನಾಥ್‌ 

ಬಳ್ಳಾರಿ[ಫೆ.08]: ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಸ್ವಿತ್ವ ಪಡೆಯಲು ಕಾರಣಿಕರ್ತ​ರಾದ ಮಿತ್ರ ಮಂಡಳಿಯ ಸದಸ್ಯ ಆನಂದಸಿಂಗ್‌ ನಿರೀಕ್ಷೆಯಂತೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಆದರೆ, ಉಪ ಚುನಾವಣೆಯಲ್ಲಿ ವಿಜಯನಗರ ಕ್ಷೇತ್ರದ ಜನರಿಗೆ ನೀಡಿದ್ದ ಪ್ರತ್ಯೇಕ ಜಿಲ್ಲೆಯನ್ನಾಗಿಸುವ ‘ವಚನ’ ಎಷ್ಟರ ಮಟ್ಟಿಗೆ ಪಾಲಿಸುತ್ತಾರೆ? ಎಂಬ ಕುತೂಹಲ ಮೂಡಿದೆ.

Latest Videos

undefined

ಉಪ ಚುನಾವಣೆ ಪ್ರಚಾರಕ್ಕೆ ಬಂದಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಗೆದ್ದ ಶಾಸಕರಿಗೆ 24 ತಾಸಿನಗೊಳಗೆ ಮಂತ್ರಿ ಮಾಡುತ್ತೇನೆ ಎಂದು ಅಭಯ ನೀಡಿದ್ದರು. ತಡವಾಗಿಯಾದರೂ ಆನಂದಸಿಂಗ್‌ ಬಿಜೆಪಿ ಸರ್ಕಾರದಲ್ಲಿ ಎರಡನೇ ಬಾರಿಗೆ ಮಂತ್ರಿಯಾಗುವ ಸುಯೋಗ ಪಡೆದಿದ್ದಾರೆ. ಆದರೆ, ಮಂತ್ರಿಪಟ್ಟದ ‘ಕಿರೀಟ’ ಹೊತ್ತಿರುವ ಸಿಂಗ್‌ಗೆ ‘ಆನಂದ’ಕ್ಕಿಂತ ‘ಭಾರ’ವಾಗುವ ಸಾಧ್ಯತೆಯೇ ಹೆಚ್ಚಾಗಿದೆ. ಪಕ್ಷಾಂತರ ಪರ್ವ ನಡೆಸಿದ ಆನಂದಸಿಂಗ್‌ ಉಪ ಚುನಾವಣೆಯಲ್ಲಿ ಗೆಲ್ಲುವುದು ಅಷ್ಟು ಸುಲಭವಿರಲಿಲ್ಲ. ಕಾಂಗ್ರೆಸ್‌ ತೀವ್ರ ಪೈಪೋಟಿಯಲ್ಲಿ ಸಿಂಗ್‌ ಗೆಲುವಿಗಾಗಿ ಹರಸಾಹಸ ನಡೆಸಿದರು.

ಮಂತ್ರಿಗಿರಿ, ವಿಜಯನಗರ ಜಿಲ್ಲೆ ಎರಡನ್ನೂ ಪಡೆಯುತ್ತೇನೆ: ಆನಂದ ಸಿಂಗ್‌

ಚುನಾವಣೆಯಲ್ಲಿ ಪ್ರತ್ಯೇಕ ಜಿಲ್ಲೆಯ ಗಾಳ ಬೀಸಿದ ಆನಂದಸಿಂಗ್‌, ವಿಜಯನಗರ ಜಿಲ್ಲೆಯಾಗುವುದರಿಂದ ಸಮಗ್ರ ಅಭಿವೃದ್ಧಿಗೆ ಸಾಧ್ಯವಾಗುತ್ತದೆ ಎಂದು ಮತದಾರರಲ್ಲಿ ಕನಸು ಬಿತ್ತಿದರು. ಹೋದ ಕಡೆಯಲ್ಲೆಲ್ಲಾ ಇದನ್ನೇ ಪ್ರಮುಖವಾಗಿಟ್ಟುಕೊಂಡು ಮಾತನಾಡಿದರು. ಗ್ರಾಮೀಣ ಭಾಗದ ಕಡೆ ಪ್ರಚಾರದಲ್ಲಿದ್ದಾಗ ಕ್ಷೇತ್ರದ ರೈತರ ಅನುಕೂಲಕ್ಕಾಗಿ ಅನೇಕ ಏತ ನೀರಾವರಿ ಯೋಜನೆಗಳನ್ನು ಜಾರಿಗೊಳಿಸುವೆ. ಅನ್ನದಾತರ ಅನುಕೂಲಕ್ಕಾಗಿ ಗರಿಷ್ಠ ಪ್ರಮಾಣದ ಪ್ರಯತ್ನ ಮಾಡುವೆ ಎಂದು ಅಭಯ ನೀಡಿದರು. ಏತನ್ಮಧ್ಯೆ, ಪ್ರಚಾರದಲ್ಲಿದ್ದ ಬಿಜೆಪಿಯ ರಾಜ್ಯ ನಾಯಕರು ಪ್ರತ್ಯೇಕ ಜಿಲ್ಲೆಯ ವಿಷಯವೇ ಹೆಚ್ಚು ಚರ್ಚೆಯಾಗುವಂತೆ ನೋಡಿಕೊಂಡರು. ಈ ಎಲ್ಲವೂ ಆನಂದಸಿಂಗ್‌ ಗೆಲುವಿನ ಮುನ್ನುಡಿ ಬರೆಯಲು ಸಾಧ್ಯವಾಯಿತು.

ಜಿಲ್ಲೆಯಾಗುವವರೆಗೆ ನೆಮ್ಮದಿ ಇಲ್ಲ:

ವಿಜಯನಗರ ಪ್ರತ್ಯೇಕ ಜಿಲ್ಲೆಯಾಗಬೇಕು ಎಂಬ ಕೂಗೆತ್ತಿದ ಆನಂದಸಿಂಗ್‌ ‘ನನಗೆ ಮಂತ್ರಿಯಾಗುವುದಕ್ಕಿಂತ ಪ್ರತ್ಯೇಕ ಜಿಲ್ಲೆಯನ್ನಾಗಿಸುವುದೇ ಗುರಿ’ ಎಂದು ಹೇಳಿದ್ದರು. ಆದರೆ, ಇದೀಗ ಮಂತ್ರಿಯಾಗಿರುವ ಸಿಂಗ್‌, ವಿಜಯನಗರ ಜಿಲ್ಲೆಯನ್ನಾಗಿಸಲು ಸರ್ಕಾರದ ಮೇಲೆ ಯಾವ ಒತ್ತಡ ತರಲಿದ್ದಾರೆ ಎಂಬ ಕುತೂಹಲವೂ ಕ್ಷೇತ್ರದ ಜನರಲ್ಲಿದೆ. ಹೀಗಾಗಿಯೇ ಗುರುವಾರ ಆನಂದಸಿಂಗ್‌ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾಗ್ಯೂ ಸಂಭ್ರಮಾಚರಣೆಯಿಂದ ಬೆಂಬಲಿಗರು ದೂರ ಉಳಿದಿದ್ದಾರೆ. ಇದರಿಂದ ಮಂತ್ರಿಯಾದ ಸಂಭ್ರಮಕ್ಕಿಂತ ಹೊಸ ಜಿಲ್ಲೆಯನ್ನಾಗಿಸುವ ತಮ್ಮ ನಿರ್ಧಾರಕ್ಕೆ ಎಷ್ಟರಮಟ್ಟಿಗೆ ಮುಖ್ಯಮಂತ್ರಿ ಸ್ಪಂದಿಸುತ್ತಾರೆ? ಎಂಬ ಆತಂಕ ನೂತನ ಸಚಿವ ಆನಂದಸಿಂಗ್‌ ಅವರಿಗೂ ಇದೆ ಎಂಬುದು ಕ್ಷೇತ್ರದಲ್ಲಿ ಹೆಚ್ಚಾಗಿ ಕೇಳಿ ಬರುತ್ತಿರುವ ಮಾತು.

ಜಿಂದಾಲ್‌ ಭೂಮಿ ಪರಾಭಾರೆ?

ಉಪ ಚುನಾವಣೆಯ ಸಿದ್ಧತೆಯಲ್ಲಿದ್ದ ಆನಂದಸಿಂಗ್‌ ರೈತರ ಕೃಷಿ ಭೂಮಿಯನ್ನು ಜಿಂದಾಲ್‌ಗೆ ಪರಾಭಾರೆ ಮಾಡುತ್ತಿರುವುದನ್ನು ವಿರೋಧಿಸಿ ಹೋರಾಟಕ್ಕೆ ಧುಮುಕಿದರು. ಇದಕ್ಕೆ ಮಾಜಿ ಶಾಸಕ ಅನಿಲ್‌ಲಾಡ್‌ ಸಾಥ್‌ ನೀಡಿದರು. ಜಿಂದಾಲ್‌ ಸುತ್ತಮುತ್ತಲ ಪ್ರದೇಶದ ಬಾಧಿತ ಗ್ರಾಮಗಳಿಗೆ ಭೇಟಿ ನೀಡಿದ ಆನಂದಸಿಂಗ್‌ ಹಾಗೂ ಅನಿಲ್‌ಲಾಡ್‌ ಅಲ್ಲಿನ ಜನರ ದುಃಖ ದುಮ್ಮಾನಗಳನ್ನು ಆಲಿಸಿದರು. ನಂತರದಲ್ಲಿ ಜಿಂದಾಲ್‌ ಭೂಮಿ ಪರಾಭಾರೆ ವಿಷಯ ಮರೆಯಾಯಿತು. ವಿಜಯನಗರ ಪ್ರತ್ಯೇಕ ಜಿಲ್ಲೆಯ ಕೂಗು ಹೆಚ್ಚು ಮುನ್ನಲೆ ಪಡೆದುಕೊಂಡಿತು. ಇದೀಗ ಆನಂದಸಿಂಗ್‌ ರಾಜ್ಯ ಸರ್ಕಾರದ ಒಂದು ಭಾಗವಾಗಿ ಜಿಂದಾಲ್‌ ಭೂಮಿ ಪರಾಭಾರೆ ವಿಷಯವನ್ನು ಹೇಗೆ ಪರಿಗಣಿಸುತ್ತಾರೆ. ಜಿಂದಾಲ್‌ ವಿಚಾರ ಬಂದಾಗ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬ ಕೌತುಕವಂತೂ ಇದ್ದೇ ಇದೆ.

ವಿಜಯನಗರ ಜಿಲ್ಲೆಗೆ ಶಾಸಕ ಸಿಂಗ್‌ ಆಗ್ರಹ: ಸಿಎಂ ಮೌನ, ಹುಸಿಯಾದ ನಿರೀಕ್ಷೆ

ಜಿಂದಾಲ್‌ಗೆ ಲೀಜ್‌ಗೆ ನೀಡಿದ್ದ ಭೂಮಿಯನ್ನು ಪರಾಭಾರೆ ಮಾಡಬಾರದು ಎಂದು ಒತ್ತಾಯಿಸಿ ಆನಂದಸಿಂಗ್‌ ಅವರು ರಾಜೀನಾಮೆ ನೀಡಿದ್ದರು. ಈಗ ಅವರೇ ರಾಜ್ಯ ಸರ್ಕಾರದ ಮಂತ್ರಿಯಾಗಿದ್ದಾರೆ. ಜಿಂದಾಲ್‌ ವಿಚಾರದಲ್ಲಿ ಹೇಗೆ ನಡೆದುಕೊಳ್ಳುತ್ತಾರೆ. ಅವರ ನಿಲುವು ಹೇಗಿರುತ್ತದೆ ಎಂಬುದನ್ನು ಎಲ್ಲರೂ ಕಾದು ನೋಡುತ್ತಿದ್ದೇವೆ. ಒಂದು ವೇಳೆ ಜಿಂದಾಲ್‌ ಪರ ನಿಂತರೆ ಹೋರಾಟ ಕೈಗೊಳ್ಳಲಾಗುವುದು ಎಂದು  ಬಳ್ಳಾರಿ ಕರ್ನಾಟಕ ಜನಸೈನ್ಯ ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ, ಕೆ. ಎರ್ರಿಸ್ವಾಮಿ ಹೇಳಿದ್ದಾರೆ. 

ಆನಂದಸಿಂಗ್‌ ಅವರಿಗೆ ಮಂತ್ರಿ ಪದವಿ ಹೂವಿನ ಹಾಸಿಗೆಯಂತೂ ಅಲ್ಲ. ಏಕೆಂದರೆ ಅವರು ವಿಜಯನಗರ ಜಿಲ್ಲೆ ಮಾಡುತ್ತೇನೆ ಎಂದು ಹೇಳಿಯೇ ಮತ ಪಡೆದಿದ್ದಾರೆ. ಅದಕ್ಕೆ ಅವರು ಬದ್ಧರಾಗಬೇಕಾಗುತ್ತದೆ. ಜನರ ವಿಶ್ವಾಸ ಉಳಿಸಿಕೊಳ್ಳುವ ಅನಿವಾರ್ಯತೆ ಅವರಿಗಿದೆ ಎಂದು ಹೊಸಪೇಟೆ ನಿವಾಸಿಗಳಾದ  ರಾಘು, ಮಹೇಶ್‌ ಕಲ್ಗುಡಿಯಪ್ಪ ಅವರು ಹೇಳಿದ್ದಾರೆ. 
 

click me!