ವರದಿ : ಕಾಗತಿ ನಾಗರಾಜಪ್ಪ
ಚಿಕ್ಕಬಳ್ಳಾಪುರ(ಡಿ.25): ಅಕ್ರಮ ಕಲ್ಲು ಗಣಿಗಾರಿಕೆಗೆ ಕುಖ್ಯಾತಿ ಯಾಗಿರುವ ಮಂಡಿಕಲ್ಲು ಹೋಬಳಿಯಲ್ಲಿ ಸತತ ಎರಡು ದಿನಗಳಿಂದ ಸಂಭವಿಸಿರುವ ಭೂ ಕಂಪನದ (Earth quake) ಹಿಂದೆ ಕಲ್ಲು ಗಣಿಗಾರಿಕೆಯ ಕರಿನೆರಳು ಇದೆಯೆಂಬ ಆಕ್ರೋಶ ಆ ಭಾಗದ ಜನರಲ್ಲಿ ಕೇಳಿ ಬರುತ್ತಿದ್ದರೂ ಗ್ರಾಮಸ್ಥರುಗಳ ಆರ್ತನಾದಕ್ಕೆ ಧ್ವನಿಯಾಗುವರೇ ಇಲ್ಲವಾಗಿದೆ.
ಹೌದು, ಮಂಡಿಕಲ್ಲು, ಅಡ್ಡಗಲ್ ಗ್ರಾಪಂಗಳ (Grama Panchayat) ವ್ಯಾಪ್ತಿಯಲ್ಲಿ ಬುಧವಾರ ಬೆಳ್ಳಂ ಬೆಳಗ್ಗೆ ಎರಡು ಬಾರಿ ಕೇಳಿ ಬಂದಿರುವ ಭಾರೀ ದೊಡ್ಡ ಪ್ರಮಾಣದ ಭೂ ಕಂಪನದ ಶಬ್ದಕ್ಕೆ ಆ ಭಾಗದಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ಕಾರಣವಾಗಿದ್ದು ಈಗ ಸಾರ್ವಜನಿಕ (Publics) ವಲಯದಲ್ಲಿ ಈ ಬಗ್ಗೆ ಸಾಕಷ್ಟುಚರ್ಚೆಗೆ ಗ್ರಾಸವಾಗಿದೆ.
ಹಿರೇನಾಗವೇಲಿ ಕರಾಳ ನೆನೆಪು: ಕಳೆದ ಫೆಬ್ರವರಿಯಲ್ಲಿ 22 ರಂದು ಮಂಡಿಕಲ್ಲು ಸಮೀಪದ ಹಿರೇನಾಗವೇಲಿ ಬಳಿ ಅಕ್ರಮವಾಗಿ ದಾಸ್ತಾಣು ಮಾಡಿದ್ದ ಜಿಲಿಟಿನ್ ಕಡ್ಡಿಗಳನ್ನು ವಿಲೇವಾರಿ ಮಾಡಲು ಹೋಗಿದ್ದಾಗ ಜಿಲೆಟಿನ್ ಕಡ್ಡಿಗಳು ಸ್ಪೋಟವಾಗಿ 6 ಮಂದಿ ಕೂಲಿ ಕಾರ್ಮಿಕರ ದೇಹಗಳು ಛಿದ್ರವಾಗಿ ಹಾರಿ ಹೋಗಿದ್ದು ಆ ಭಾಗದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಗೆ ಪುಷ್ಟಿನೀಡಿದ್ದವು. ಆದರೆ ಇಂದಿಗೂ ಆ ಭಾಗದಲ್ಲಿ ರಾಜಕಾರಣಿಗಳು ಕೃಪೆಯಿಂದ, ಅಧಿಕಾರಿಗಳ ಬೇಜವಾಬ್ದಾರಿಯಿಂದ ಸಾಕಷ್ಟುಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು ಆ ಭಾಗದ ಬೆಟ್ಟಗುಡ್ಡಗಳ ಸೌಂದರ್ಯಕ್ಕೆ ಹೆಚ್ಚು ಘಾಸಿ ಆಗುವುದರ ಜೊತೆಗೆ ಇತಂಹ ಭೂ ಕಂಪನದ ಅವಘಡಗಳಿಗೆ ಸಾಕ್ಷಿಯಾಗುತ್ತಿದ್ದರೂ ಅಧಿಕಾರಿಗಳು ನಯ ನಾಜೂಕಾಗಿ ಭೂ ಕಂಪನಕ್ಕೆ ಬೇರೆಯದೇ ಕಾರಣಗಳನ್ನು ನೀಡುತ್ತಿರುವುದು ಆ ಭಾಗದ ಸಾರ್ವಜನಿಕರಲ್ಲಿ ಆಕ್ರೋಶ, ಅಸಮಾಧಾನಕ್ಕೆ ಕಾರಣವಾಗಿದೆ. ದಿನ ಬೆಳೆಗಾದರೂ ಅಪಾಯಕಾರಿ ಸ್ಪೋಟಕಗಳ ಶಬ್ದ ಕೇಳುವ ಆ ಮಂದಿಗೆ ಇದೀಗ ಭೂ ಕಂಪನದ ಶಬ್ದ (Heavy Noice) ಭವಿಷ್ಯದ ಬಗ್ಗೆ ಚಿಂತೆ ಹುಟ್ಟಿಸಿದ್ದು ಇದಕ್ಕೆಲ್ಲಾ ಎಗ್ಗಿಲ್ಲದೇ ನಡೆಯುತ್ತಿರುವ ಅಕ್ರಮ ಕಲ್ಲುಗಣಿಗಾರಿಕೆ ಎಂಬುದನ್ನು ಕೆಲ ನಿಷ್ಠಾವಂತ ಅಧಿಕಾರಿಗಳು ಪರೋಕ್ಷವಾಗಿ ಒಪ್ಪಿಕೊಳ್ಳುತ್ತಿದ್ದಾರೆ.
ಒಟ್ಟಿನಲ್ಲಿ ಮಂಡಿಕಲ್ಲು ಹೋಬಳಿಯ ಆರೂರು, ಅಡ್ಡಗಲ್, ಮಂಡಿಕಲ್ಲು ಗ್ರಾಪಂ ವ್ಯಾಪ್ತಿಯ ಆರೇಳು ಗ್ರಾಮಗಳಲ್ಲಿ ಸಂಭವಿಸಿರುವ ಭೂ ಕಂಪನದ ಹಿಂದೆ ಕಲ್ಲುಗಣಿಗಾರಿಕೆಯು ತನ್ನ ಕರಾಳ ಛಾಯೆಯನ್ನು ಚಾಚುಕೊಂಡಿರುವುದು ಎದ್ದು ಕಾಣುತ್ತಿದೆ. ಆದರೆ ಅಧಿಕಾರ ಶಾಹಿ ಇದನ್ನು ಒಪ್ಪಿಕೊಳ್ಳದೇ ಪ್ರಶ್ನಿಸುವವರ ಬಾಯಿ ಮುಚ್ಚಿಸುವ ಕೆಲಸ ನಿರಂತರವಾಗಿ ನಡೆಯುತ್ತಿರುವ ಪರಿಣಾಮ ಇಂದು ಹಲವು ಗ್ರಾಮಗಳು ನಿಗೂಢ ಶಬ್ದಕ್ಕೆ ನಿದ್ದೆಗೆಟ್ಟು ಅಂಗೈಯಲ್ಲಿ ಜೀವ ಹಿಡಿದು ಬದುಕಿನ ಬಂಡಿ ಸಾಗಬೇಕಿದೆ.
ಮಂಡಿಕಲ್ಲು ಸುತ್ತಮುತ್ತ 70 ಕಲ್ಲು ಕ್ವಾರಿ, 34 ಕ್ರಷರ್!
ಚಿಕ್ಕಬಳ್ಳಾಪುರ (Chikkaballapura) ತಾಲೂಕಿನ ಮಂಡಿಕಲ್ಲು (Mandikallu) ಹೋಬಳಿಯಲ್ಲಿ ಎಷ್ಟರ ಮಟ್ಟಿಗೆ ಕಲ್ಲು ಗಣಿಗಾರಿಕೆ ತನ್ನ ಕರಾಳತೆಯನ್ನು ಚಾಚುಕೊಂಡಿದರೆ ಅಂದರೆ ಬರೀ ಒಂದು ಹೋಬಳಿಯಲ್ಲಿಯೆ ಬರೋಬ್ಬರಿ 70 ಕಲ್ಲು ಕ್ವಾರಿಗಳು, 34 ಕ್ರಷರ್‌ಗಳು ಕಾರ್ಯನಿರ್ವಹಿಸುತ್ತಿವೆ. ಇವು ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನೀಡಿರುವ ಅಧಿಕೃತ ಅಂಕಿ, ಅಂಶವಾಗಿವೆ.
ಚಿಕ್ಕಬಳ್ಳಾಪುರದ ಮಂಡಿಕಲ್ಲು, ಅಡ್ಡಗಲ್ ಗ್ರಾಪಂ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಬುಧವಾರ ಸಂಭವಿಸಿರುವ ಭೂ ಕಂಪನಕ್ಕೂ ಆ ಭಾಗದ ಗಣಿ ಗಾರಿಕೆಗೂ ಯಾವುದೇ ಸಂಬಂದ ಇಲ್ಲ. ಜಿಲ್ಲೆಯ ಭೂ ಪದರ ಗಟ್ಟಿಯಾಗಿದ್ದು ಭೂ ಕಂಪನ ನಡೆಯುವ ಸಾಧ್ಯತೆ ತೀರಾ ಕಡಿಮೆ. ಆದರೆ ಜನ ಎಚ್ಚರಿಕೆಯಿಂದ ಇರಬೇಕು.
- ಕೃಷ್ಣವೇಣಿ, ಜಿಲ್ಲಾ ಹಿರಿಯ ಗಣಿ ಮತ್ತು ಭೂ ವಿಜ್ಞಾನಿ,