ಮಂಗಳೂರಿನ ಸ್ಥಳೀಯ ಕಾರ್ಮಿಕರು ಹೇಳುವ ಪ್ರಕಾರ, ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳ್ಳಲು ಕನಿಷ್ಟಮೂರು ತಿಂಗಳು ಬೇಕು. ಆದರೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳು ಆರಂಭದಲ್ಲಿ ಕೇವಲ 20 ದಿನ ಸಾಕು ಎಂದು ಹೇಳುತ್ತಿದ್ದರೂ, ಸಂಸದರು ನಡೆಸಿದ ಸಭೆಯಲ್ಲಿ ಮತ್ತೆ ಮೂರು ತಿಂಗಳು ಗಡುವು ಕೇಳುತ್ತಿದ್ದಾರೆ.
ಮಂಗಳೂರು(ಜ.02): ಮಂಗಳೂರಿನ ಬಹುನಿರೀಕ್ಷಿತ ಪಂಪ್‌ವೆಲ್ ಮೇಲ್ಸೇತುವೆ ಕಾಮಗಾರಿ ಡಿಸೆಂಬರ್ ಅಂತ್ಯಕ್ಕೂ ಪೂರ್ಣಗೊಂಡಿಲ್ಲ. ಈ ಮಧ್ಯೆ ಈ ಕಾಮಗಾರಿಯನ್ನು ಜನವರಿ ಪ್ರಥಮ ವಾರದಲ್ಲಿ ಲೋಕಾರ್ಪಣೆಗೆ ಸಿದ್ಧಗೊಳಿಸಲಾಗುವುದು ಎಂದು ನವಯುಗ ಗುತ್ತಿಗೆ ಕಂಪನಿಯು ಸಂಸದರಿಗೆ ನೀಡಿದ ಭರವಸೆ ಹುಸಿಯಾಗಿದೆ. ಇದೀಗ ಮತ್ತೆ ಒಂದು ತಿಂಗಳು ಗಡುವು ವಿಸ್ತರಿಸಲಾಗಿದೆ. ಜನವರಿ ಅಂತ್ಯಕ್ಕೆ ಕಾಮಗಾರಿ ಮುಕ್ತಾಯಗೊಳ್ಳುವುದು ಸಾಧ್ಯವೇ ಎಂದು ಸಾರ್ವಜನಿಕರು ಸಂಶಯಿಸುವಂತಾಗಿದೆ.
ಸ್ಥಳೀಯ ಕಾರ್ಮಿಕರು ಹೇಳುವ ಪ್ರಕಾರ, ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳ್ಳಲು ಕನಿಷ್ಟಮೂರು ತಿಂಗಳು ಬೇಕು. ಆದರೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳು ಆರಂಭದಲ್ಲಿ ಕೇವಲ 20 ದಿನ ಸಾಕು ಎಂದು ಹೇಳುತ್ತಿದ್ದರೂ, ಸಂಸದರು ನಡೆಸಿದ ಸಭೆಯಲ್ಲಿ ಮತ್ತೆ ಮೂರು ತಿಂಗಳು ಗಡುವು ಕೇಳುತ್ತಿದ್ದಾರೆ. ಇದರಿಂದಾಗಿ ಜನವರಿಯಲ್ಲೂ ಮೇಲ್ಸೇತುವೆ ಉದ್ಘಾಟನೆಗೆ ತೆರೆದುಕೊಳ್ಳುವುದು ಅಸಂಭವ ಎನ್ನಲಾಗುತ್ತಿದೆ.
ಟೀಕೆಯಿಂದಾಗಿ ಕಾಮಗಾರಿಗೆ ವೇಗ!:
ಈ ಮೇಲ್ಸೇತುವೆ ಕಾಮಗಾರಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣದಲ್ಲಿ ನಿರಂತರ ಟೀಕೆಗಳು ವ್ಯಕ್ತವಾಗುತ್ತಿತ್ತು. ಅದರಲ್ಲಿಯೂ ಜನವರಿ ಪ್ರಥಮ ವಾರದಲ್ಲಿ ಮೇಲ್ಸೇತುವೆ ಉದ್ಘಾಟನೆ ಎಂಬ ಸಂಸದರ ಹೇಳಿಕೆ ನಾನಾ ವಿಧದಲ್ಲಿ ಟ್ರೋಲ್ ಆಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ಈ ಸಂಬಂಧ ಬಗೆ ಬಗೆಯ ಹಾಡು, ಕಾಮಿಡಿ ಕೂಡ ವೈರಲ್ ಆಗುತ್ತಿದೆ. ಸಾರ್ವಜನಿಕರ ಟೀಕೆ-ಆಕ್ಷೇಪಗಳ ಹಿನ್ನೆಲೆಯಲ್ಲಿ ಇತ್ತೀಚೆಗೆ ಇದರ ಕಾಮಗಾರಿಯೂ ಕೂಡ ವೇಗ ಪಡೆದಿತ್ತು. ಈ ಬಗ್ಗೆ ದ.ಕ. ಜಿಲ್ಲಾ ಕಾಂಗ್ರೆಸ್‌ನಿಂದ ಸತ್ಯಶೋಧನಾ ಸಮಿತಿ ರಚನೆಗೊಂಡು ಮಂಗಳವಾರ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಅಲ್ಲದೆ ಈ ಮೇಲ್ಸೇತುವೆಯನ್ನು ಜನವರಿ 1ರಂದು ಉದ್ಘಾಟಿÓದಿದ್ದರೆ ನಾವೇ ಉದ್ಘಾಟಿಸುವುದಾಗಿ ಕಾಂಗ್ರೆಸ್ ಮುಖಂಡರು ಹೇಳಿದ್ದಾರೆ.
ಆಗಬೇಕಾದ ಕಾಮಗಾರಿ ಏನು?
ಕಳೆದ ಕೆಲವು ಸಮಯದಿಂದ ಮೇಲ್ಸೇತುವೆ ಕಾಮಗಾರಿ ವೇಗ ಪಡೆದಿದ್ದರೂ, ಅಂತಿಮ ಹಂತದ ಕಾಮಗಾರಿ ಇನ್ನಷ್ಟೇ ನಡೆಯಬೇಕಿದೆ. ಅದರಲ್ಲಿಯೂ ಕರ್ಣಾಟಕ ಬ್ಯಾಂಕ್ ಕೇಂದ್ರ ಕಚೇರಿ ಭಾಗದಿಂದ ಮೇಲ್ಸೇತುವೆಯ ಗರ್ಡರ್ ಸಂಪರ್ಕ ಭಾಗದಲ್ಲಿ ಕಾಮಗಾರಿ ಇನ್ನಷ್ಟೆಆಗಬೇಕು. ಈ ಕಾಮಗಾರಿ ಪೂರ್ತಿಗೊಳ್ಳಲು ಇನ್ನೂ ಕೆಲವು ದಿನದ ಆವಶ್ಯಕತೆ ಇದೆ.
ಇಂಡಿಯಾನ ಆಸ್ಪತ್ರೆಯ ಭಾಗದಿಂದ ಮೇಲ್ಸೇತುವೆಯ ಗರ್ಡರ್ ಸಂಪರ್ಕದ ಬಹುತೇಕ ಕಾಮಗಾರಿ ಮುಗಿದಿದೆ. ಆಸ್ಪತ್ರೆಯ ಎಡಭಾಗದಿಂದ ಉಜ್ಜೋಡಿ ಕಡೆಗೆ ಸಂಪರ್ಕ ರಸ್ತೆ ಕಾಮಗಾರಿ ಈಗಷ್ಟೇ ನಡೆಯುತ್ತಿದೆ. ಉಜ್ಜೋಡಿಯಲ್ಲಿ ಅಂಡರ್‌ಪಾಸ್ ಕಾಮಗಾರಿ ಮುಗಿದಿದೆಯಾದರೂ, ಅದರ ಮೇಲ್ಬಾಗದಲ್ಲಿ ರಸ್ತೆ ಕಾಮಗಾರಿ ಇನ್ನಷ್ಟೆಆಗಬೇಕಿದೆ. ಈ ಭಾಗದಲ್ಲಿ ಎರಡೂ ಬದಿಯಲ್ಲಿ ತಡೆಗೋಡೆ ಅಳವಡಿಕೆ ನಡೆಯಬೇಕಿದೆ. ಇನ್ನು ಕರ್ಣಾಟಕ ಬ್ಯಾಂಕ್ ಕೇಂದ್ರ ಕಚೇರಿ ಮುಂಭಾಗದಲ್ಲಿ ಮಣ್ಣು ಹಾಕುವ ಕೆಲಸ ನಡೆಯುತ್ತಿದೆಯಾದರೂ ಇದು ರಾ.ಹೆ. ಸಂಪರ್ಕಿಸುವವರೆಗೆ ಆಗಬೇಕು. ತಡೆಗೋಡೆ ಕಾಮಗಾರಿ ಇಲ್ಲಿಯೂ ಈಗಷ್ಟೇ ನಡೆಯುತ್ತಿದೆ. ಮೇಲ್ಸೇತುವೆ ಪಕ್ಕದ ಬೃಹತ್ ಚರಂಡಿ ಕಾಮಗಾರಿ ಈಗ ಕೊನೆಯ ಹಂತದಲ್ಲಿ ನಡೆಯುತ್ತಿದೆ.
ಮೇಲ್ಸೇತುವೆ ಕಾಮಗಾರಿಯನ್ನು ತ್ವರಿತವಾಗಿ ಮುಕ್ತಾಯಗೊಳಿಸುವಂತೆ ಸಾಕಷ್ಟುಒತ್ತಡವೂ ಇದೆ. ಇದರಿಂದಾಗಿ ಮೇಲ್ಸೇತುವೆ ಕಾಮಗಾರಿಯನ್ನು ಗಡಿಬಿಡಿಯಲ್ಲಿ ಪೂರ್ಣಗೊಳಿಸಲು ಎನ್‌ಎಚ್‌ಎಐ ಕಾಮಗಾರಿ ನಡೆಸುತ್ತಿದೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಕಾಮಗಾರಿಯನ್ನು ಇದೀಗ ಪ್ರತಿಷ್ಠೆಯಾಗಿ ಸ್ವೀಕರಿಸಿದ ಕಾರಣದಿಂದ ಕಾಮಗಾರಿ ಪೂರ್ಣಗೊಂಡರೆ ಸಾಕು ಎಂದು ರಾ.ಹೆ.ಪ್ರಾಧಿಕಾರದವರು ನಿರ್ಧರಿಸಿದಂತಿದೆ. ಇದಕ್ಕಾಗಿ ಗಡಿಬಿಡಿಯಲ್ಲಿ ಕಾಮಗಾರಿ ನಡೆಸುತ್ತಿದ್ದಾರೆ. ಇದರಿಂದ ಮುಂದೆ ಸಮಸ್ಯೆ ಆಗಬಹುದು ಎಂಬ ಆಕ್ಷೇಪವೂ ಇದೀಗ ಕೇಳಿಬರುತ್ತಿದೆ.
ಮೇಲ್ಸೇತುವೆ ಎತ್ತರ ಹೆಚ್ಚಳಗೊಳಿಸಲು ಮತ್ತೆ ರಸ್ತೆ ಅಗೆತ!
ಪಂಪ್‌ವೆಲ್ ಮೇಲ್ಸೇತುವೆ ನಿರ್ಮಾಣ ನಿಧಾನವಾಗುತ್ತಿದೆ ಎಂಬ ಸಾರ್ವತ್ರಿಕ ಟೀಕೆಯ ಮಧ್ಯೆಯೇ ಇದೀಗ ಮೇಲ್ಸೇತುವೆ ಕೆಳಭಾಗದ ಎತ್ತರ ಕಡಿಮೆಯಾದ ಕಾರಣಕ್ಕೆ ಈಗ ತಳಭಾಗದ ರಸ್ತೆಯನ್ನೇ ಅಗೆದು ತಗ್ಗಿಸುವ ಕಾಮಗಾರಿ ನಡೆಸಲಾಗುತ್ತಿದೆ. ಇಂಡಿಯನ್ ರೋಡ್ಸ್ ಕಾಂಗ್ರೆಸ್(ಐಆರ್‌ಸಿ) ನಿಯಮದಂತೆ ಮೇಲ್ಸೇತುವೆ ಕೆಳಭಾಗದ ಎತ್ತರ 5.50 ಮೀ. ಎತ್ತರವಿರಬೇಕು. ಆದರೆ, ಪಂಪ್‌ವೆಲ್ ಮೇಲ್ಸೇತುವೆಯನ್ನು ಕೇವಲ 4.5 ಮೀ. ಎತ್ತರದಲ್ಲಿ ನಿರ್ಮಿಸಲಾಗಿದೆ. ಈ ಬಗ್ಗೆ ಆರಂಭದಲ್ಲಿಯೇ ಸಾಕಷ್ಟುಆಕ್ಷೇಪ ಹಾಗೂ ಕೆಲವು ಬೃಹತ್ ಗಾತ್ರದ ವಾಹನ ಮೇಲ್ಸೇತುವೆ ಕೆಳಗೆ ಸಿಲುಕಿ ಸಮಸ್ಯೆ ಆಗಿದ್ದರೂ ರಾ.ಹೆ.ಪ್ರಾಧಿಕಾರದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮೌನವಾಗಿದ್ದರು. ಆದರೆ, ಈಗ ಎಚ್ಚೆತ್ತುಕೊಂಡ ಅಧಿಕಾರಿಗಳು ಮೇಲ್ಸೇತುವೆ ತಳಭಾಗದ ರಸ್ತೆಯನ್ನೇ ಅಗೆದು ತಗ್ಗಿಸುವುವ ಕಾಮಗಾರಿ ಆರಂಭಿಸಿದ್ದಾರೆ. ಹಾಲಿ ರಸ್ತೆಯನ್ನು 1 ಮೀ.ನಷ್ಟುತಗ್ಗಿಸಲಾಗುತ್ತಿದ್ದು, ಇದು ಮಳೆಗಾಲಕ್ಕೆ ಇನ್ನೊಂದು ಸಮಸ್ಯೆ ಸೃಷ್ಟಿಸುವ ಎಲ್ಲ ಸಾಧ್ಯತೆಗಳೂ ಇವೆ.