ಗುಡ್ ನ್ಯೂಸ್ : ನಮ್ಮ ಮೆಟ್ರೋ ಸಂಚಾರ ಅವಧಿ ವಿಸ್ತರಣೆ

By Kannadaprabha News  |  First Published Jan 2, 2020, 8:16 AM IST

ಮೆಟ್ರೋ ರೈಲಿನ ಕೊನೆಯ ಸಂಚಾರದ ಅವಧಿಯನ್ನು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌) ವಿಸ್ತರಿಸುವ ಮೂಲಕ ಪ್ರಯಾಣಿಕರಿಗೆ ಹೊಸ ವರ್ಷದ ಉಡುಗೊರೆ ನೀಡಿದೆ.


ಬೆಂಗಳೂರು [ಜ.02]:  ಮೆಟ್ರೋ ಪ್ರಯಾಣಿಕರಿಗೆ ಅನುಕೂಲಕ್ಕಾಗಿ ಬುಧವಾರ(ಜ.1)ದಿಂದ ಮೆಟ್ರೋ ರೈಲಿನ ಕೊನೆಯ ಸಂಚಾರದ ಅವಧಿಯನ್ನು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌) ಅರ್ಧಗಂಟೆ ಕಾಲ ವಿಸ್ತರಿಸುವ ಮೂಲಕ ಪ್ರಯಾಣಿಕರಿಗೆ ಹೊಸ ವರ್ಷದ ಉಡುಗೊರೆ ನೀಡಿದೆ.

ನೇರಳೆ ಮತ್ತು ಹಸಿರು ಮಾರ್ಗದ ನಾಲ್ಕು ಟರ್ಮಿನಲ್‌ಗಳಿಂದ ಪ್ರತಿ ರಾತ್ರಿ ಹೊರಡುತ್ತಿದ್ದ ಕೊನೆಯ ಮೆಟ್ರೋ ರೈಲು ಸಂಚಾರದ ಅವಧಿಯನ್ನು ಜ.1ರಿಂದ ಅರ್ಧ ಗಂಟೆ ವಿಸ್ತರಿಸಲಾಗಿದೆ. ಇದು ವಾರದ ಎಲ್ಲ ದಿನವೂ ಮುಂದುವರೆಯಲಿದೆ. ಆದರೆ, ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣದಿಂದ (ಮೆಜೆಸ್ಟಿಕ್‌) ಯಾವುದೇ ಪ್ರಯಾಣಿಕರು ಬಾಕಿ ಉಳಿದಿಲ್ಲ ಎಂಬುದನ್ನು ಖಚಿತಪಡಿಸಿಕೊಂಡ ಬಳಿಕ ಮೆಜೆಸ್ಟಿಕ್‌- ನಾಗಸಂದ್ರ, ಮೆಜೆಸ್ಟಿಕ್‌- ಯಲಚೇನಹಳ್ಳಿ, ಮೆಜೆಸ್ಟಿಕ್‌- ಮೈಸೂರು ರಸ್ತೆ, ಮೆಜೆಸ್ಟಿಕ್‌- ಬೈಯ್ಯಪ್ಪನಹಳ್ಳಿ ಹೀಗೆ ನಾಲ್ಕು ದಿಕ್ಕುಗಳಿಗೆ ಕೊನೆಯ ರೈಲುಗಳು ರಾತ್ರಿ 12ಕ್ಕೆ ಹೊರಡಲಿವೆ.

Latest Videos

undefined

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಪಂದ್ಯಾವಳಿ ನಡೆಯುವ ವೇಳೆಯಲ್ಲಿ ಅಥವಾ ಡಿ.31ರ ಹೊಸ ವರ್ಷ ಸಂಭ್ರಮಾಚರಣೆ ಸಂದರ್ಭದಲ್ಲಿ ಎಂ.ಜಿ.ರಸ್ತೆ ಮತ್ತು ಕಬ್ಬನ್‌ಪಾರ್ಕ್ ಮೆಟ್ರೋ ನಿಲ್ದಾಣದಿಂದ ಹೊರಡುವ ಮೆಟ್ರೋ ರೈಲಿನ ಅವಧಿಯನ್ನು ಒಂದು ಗಂಟೆ ವಿಸ್ತರಿಸಲಾಗುತ್ತಿತ್ತು. ಅದನ್ನು ಹೊರತು ಪಡಿಸಿದರೆ ಇತರ ದಿನಗಳಲ್ಲಿ ಎಂದಿನಂತೆಯೇ ರಾತ್ರಿ 11ಕ್ಕೆ ಕೊನೆಯ ಮೆಟ್ರೋ ರೈಲು ಟರ್ಮಿನಲ್‌ ನಿಲ್ದಾಣಗಳಿಂದ ಹೊರಡುತ್ತಿತ್ತು.

ಈ ಹಿನ್ನೆಲೆಯಲ್ಲಿ ಮೆಟ್ರೋ ರೈಲು ಸಂಚಾರ ಅವಧಿಯನ್ನು ವಿಸ್ತರಿಸಬೇಕು ಎಂಬುದು ಪ್ರಯಾಣಿಕರ ಬಹುದಿನಗಳ ಬೇಡಿಕೆಯಾಗಿತ್ತು. ಬಿಎಂಟಿಸಿ ಬಸ್‌ಗಳು ತಡರಾತ್ರಿವರೆಗೂ ಸಂಚರಿಸಿದರೂ ಕೆಲವು ಕಡೆಗಳಲ್ಲಿ ಅನಾನುಕೂಲತೆ ಆಗುತ್ತಿದ್ದರಿಂದ ಮೆಟ್ರೋ ನಿಗಮದ ಮೇಲೆ ಹೆಚ್ಚಿನ ಒತ್ತಡ ಇತ್ತು. ಇದೀಗ ತಡರಾತ್ರಿ ಅರ್ಧ ಗಂಟೆ ಹೆಚ್ಚುವರಿಯಾಗಿ ಮೆಟ್ರೋ ರೈಲುಗಳು ವಾಣಿಜ್ಯ ಸಂಚಾರ ನಡೆಸಲಿದ್ದು, ಒತ್ತಡ ಕಡಿಮೆ ಮಾಡುವ ಪ್ರಯತ್ನ ಮಾಡಲಾಗಿದೆ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಜಯ್‌ಸೇಠ್‌ ಮಾಹಿತಿ ನೀಡಿದ್ದಾರೆ.

ಬೆಂಗಳೂರಿಗೆ ಬರಲಿಗೆ ಅಗ್ಗದ ಮೆಟ್ರೋ...

ಟರ್ಮಿನಲ್‌ ನಿಲ್ದಾಣಗಳು ಅಸ್ತಿತ್ವದಲ್ಲಿರುವ ವೇಳೆ ಪರಿಷ್ಕೃತ ವೇಳೆ

ಮೈಸೂರು ರಸ್ತೆ ರಾತ್ರಿ 11.05 ರಾತ್ರಿ 11.40

ಬೈಯಪ್ಪನಹಳ್ಳಿ ರಾತ್ರಿ 11.00 ರಾತ್ರಿ 11.35

ನಾಗಸಂದ್ರ ರಾತ್ರಿ 10.50 ರಾತ್ರಿ 11.25

ಯಲಚೇನಹಳ್ಳಿ ರಾತ್ರಿ 11.00 ರಾತ್ರಿ 11.35

ವಿಸ್ತರಿತ ಅವಧಿಯಲ್ಲಿ 32 ಸಾವಿರ ಮಂದಿ ಪಯಣ

ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ನಮ್ಮ ಮೆಟ್ರೋ ಡಿ.31ರಂದು ರಾತ್ರಿ 11 ಗಂಟೆಯಿಂದ ತಡರಾತ್ರಿ 2 ಗಂಟೆವರೆಗೆ ಮೆಟ್ರೋ ರೈಲು ಸೇವೆಯನ್ನು ವಿಸ್ತರಿಸಿತ್ತು. ಈ ಅವಧಿಯಲ್ಲಿ ಸುಮಾರು 32,394 ಮಂದಿ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿದ್ದು, ವಿಸ್ತರಿಸಿದ ಅವಧಿಯಲ್ಲಿ .9.51 ಲಕ್ಷ ಆದಾಯ ಬಂದಿದೆ. ವರ್ಷದ ಕೊನೆಯ ದಿನವಾದ ಮಂಗಳವಾರ ಹಸಿರು ಮತ್ತು ನೇರಳೆ ಮಾರ್ಗದಲ್ಲಿ ಒಟ್ಟು 4,53,875 ಮಂದಿ ಪ್ರಯಾಣಿಸಿದ್ದಾರೆ ಎಂದು ಬಿಎಂಆರ್‌ಸಿಎಲ್‌ ಹಿರಿಯ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

click me!