ಮನುಷ್ಯನ ಆರೋಗ್ಯಕ್ಕೆ ರಾಗಿ ರಾಮಬಾಣ

By Kannadaprabha News  |  First Published Dec 25, 2023, 9:16 AM IST

ರೈತರು ಬೆಳೆದ ಬೆಳೆಗಳಿಗೆ ಬೆಲೆ ಮತ್ತು ಪ್ರಚಾರದ ಕೊರತೆಯಿಂದ ಸಾಕಷ್ಟು ಆರ್ಥಿಕ ಸಂಕಷ್ಟವನ್ನು ಎದುರಿಸುವಂತಾಗಿದ್ದು, ಮುಂದಿನ ದಿನಗಳಲ್ಲಿ ರೈತನ ಜೀವನಾಧಾರ ಹಾಗೂ ಪ್ರಮುಖ ವಾಣಿಜ್ಯ ಬೆಳೆಯಾದ ರಾಗಿ ಮತ್ತು ಕೊಬ್ಬರಿಗೆ ಟ್ರೇಡ್ ಮಾರ್ಕ್ ಕೊಡಿಸುವಂತೆ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಶಾಸಕ ಕೆ. ಷಡಕ್ಷರಿ ತಿಳಿಸಿದರು.


  ತಿಪಟೂರು :  ರೈತರು ಬೆಳೆದ ಬೆಳೆಗಳಿಗೆ ಬೆಲೆ ಮತ್ತು ಪ್ರಚಾರದ ಕೊರತೆಯಿಂದ ಸಾಕಷ್ಟು ಆರ್ಥಿಕ ಸಂಕಷ್ಟವನ್ನು ಎದುರಿಸುವಂತಾಗಿದ್ದು, ಮುಂದಿನ ದಿನಗಳಲ್ಲಿ ರೈತನ ಜೀವನಾಧಾರ ಹಾಗೂ ಪ್ರಮುಖ ವಾಣಿಜ್ಯ ಬೆಳೆಯಾದ ರಾಗಿ ಮತ್ತು ಕೊಬ್ಬರಿಗೆ ಟ್ರೇಡ್ ಮಾರ್ಕ್ ಕೊಡಿಸುವಂತೆ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಶಾಸಕ ಕೆ. ಷಡಕ್ಷರಿ ತಿಳಿಸಿದರು.

ನಗರದ ಶ್ರೀ ಸತ್ಯಗಣಪತಿ ಅಮೃತ ಮಹೋತ್ಸವ ಭವನದ ಆವರಣದಲ್ಲಿ ಶನಿವಾರ ಇಲಾಖೆ, ಸೊಗಡು ಜಾನಪದ ಹೆಜ್ಜೆ, ಜೆಮ್ಸ್ ಫೌಂಡೇಶನ್ ಮತ್ತಿತರ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಏರ್ಪಡಿಸಿದ್ದ ರೈತ ದಿನಾಚರಣೆ ಹಾಗೂ ರಾಗಿ ರುಚಿ ಕಾರ್ಯಕ್ರವನ್ನು ರಾಗಿ ರಾಶಿಗೆ ಪುಷ್ಪಾರ್ಚನೆ ಮಾಡಿ ದೀಪ ಬೆಳಗಿಸಿ ಮಾತನಾಡಿದರು.

Tap to resize

Latest Videos

undefined

ಹಿಂದೆಲ್ಲಾತಿನ್ನುವವರು ಬಡವರು ಎನ್ನುತ್ತಿದ್ದರು. ಆದರೆ ಈಗ ರಾಗಿ ತಿಂದವನೇ ಶ್ರೀಮಂತ ಎನ್ನುವಂತಾಗಿದ್ದು ರೋಗಗಳ ನಡುವೆ ಜೀವನ ನಡೆಸುತ್ತಿರುವ ಮನುಷ್ಯನಿಗೆ ರಾಗಿ ರಾಮಬಾಣವಾಗಿದೆ. ಇತ್ತೀಚಿನ ದಿನಗಳಲ್ಲಿ ರಾಗಿಯನ್ನು ಹೆಚ್ಚಾಗಿ ಬಳಕೆ ಮಾಡುತ್ತಿದ್ದಾರೆ. ಬರಗಾಲ ಆವರಿಸಿದ್ದು ರೈತರು ಕಷ್ಟವನ್ನು ಅನುಭವಿಸುವಂತಾಗಿದ್ದು ಬೆಳಗಾವಿಯಲ್ಲಿ ನಡೆದ ಅಧಿವೇಶನಲ್ಲಿ ಮುಖ್ಯಮಂತ್ರಿಗಳು ರೈತರ ಸಾಲ ಮತ್ತು ಬಡ್ಡಿಮನ್ನಾ ಮಾಡುವಂತೆ ಹೇಳಿದ್ದಾರೆ. ಅದರಂತೆ ಕೊಬ್ಬರಿಗೆ ಬೆಂಬಲ ಬೆಲೆ ನೀಡುವಂತೆ ಒತ್ತಾಯಿಸಲಾಗಿದ್ದು ಆದರೆ ಬೆಳೆಯ ಉತ್ಪಾದನೆ ಮತ್ತು ಉಪಯುಕ್ತತೆ ಆಧಾರದ ಮೇಲೆ ಬೆಲೆ ನಿಗದಿಯಾಗಲಿದೆ. ಸರ್ಕಾರ ಮುಂದಿನ ದಿನಗಳಲ್ಲಿ ಈ ಬಗ್ಗೆ ಚಿಂತಿಸಲಿದೆ. ಸರ್ಕಾರ ರೈತರಿಗೆಗಾಗಿ ಬಂದಿರುವ ಎಲ್ಲಾ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ಸದೃಢರಾಗಬೇಕೆಂದರು.

ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಸಪ್ತಾಶ್ರೀ, ಕೃಷಿ ಇಲಾಖೆ ಸಹಾಯಕ ನಿದೇಶಕ ಚನ್ನಕೇಶವಮೂರ್ತಿ, ಸೊಗಡು ಜನಪದ ಹೆಜ್ಜೆ ಅಧ್ಯಕ್ಷ ಸಿರಿಗಂಧ ಗುರು, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಕೆ.ಎಸ್. ದೇವರಾಜು, ಜಿಲ್ಲಾಪ್ರತಿನಿಧಿ ಕೆ.ಎಸ್. ಸದಾಶಿವಯ್ಯ, ಕರಡಿ ಸಹಕಾರ ಸಂಘದ ಅಧ್ಯಕ್ಷ ಕೆ.ಆರ್. ದೇವರಾಜು, ಮಹಿಳಾ ಮತ್ತು ಮಕ್ಕಳ ಇಲಾಖೆ ಮೇಲ್ವಿಚಾರಕಿ ಬಿ.ಎನ್. ಪ್ರೇಮಾ, ನಿಸರ್ಗ ಪ್ರೇಮಿ ಮುರುಳೀಧರ್, ಜೇಮ್ಸ್ ಫೌಂಡೇಶನ್‌ನ ತರಕಾರಿ ಗಂಗಾಧರ್, ಕಾರ್ಯದರ್ಶಿ ಚಿದಾನಂದ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರುಗಳಿದ್ದರು.

ಈ ಸಂದರ್ಭದಲ್ಲಿ ಹಸಿರುಗಂಬಿ ರಾಗಿ ತಳಿ ಸಂರಕ್ಷಕ ತಾಲೂಕಿನ ಬಿದರೆಗುಡಿ ತಿಮ್ಲಾಪುರ ರೈತ ಭೈರೇಶ್‌ಗೆ ಸೊಗಡು ರತ್ನ ರೈತ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಬಾಯಲ್ಲಿ ನಿರೂರಿಸಿದ ರಾಗಿ ಖಾದ್ಯಗಳು

ರಾಗಿ ಪ್ರಿಯರಿಗಾಗಿ ರಾಗಿ ಮುದ್ದೆ, ಶ್ಯಾವಿಗೆ, ಇಡ್ಲಿ, ದೋಸೆ, ಅಂಬಲಿ, ಕಡುಬು, ಹಲ್ವಾ, ರೊಟ್ಟಿ, ರಾಗಿ ಬೋಟಿ, ನಿಪ್ಪಟ್ಟು, ಸಂಡಿಗೆ, ಮಾಲ್ಟ್, ರಾಗಿ ಖಾರ, ರಾಗಿ ಚೌಚೌ, ರಾಗಿ ಉಪ್ಪಿಟ್ಟು, ರಾಗಿ ಸಿಹಿ ಉಂಡೆ, ಹಸಿ ರಾಗಿಯಿಂದ ಮಾಡಿದ್ದ ಸ್ವೀಟ್ ಹೀಗೆ ಹಲವು ಬಗೆಯ ಏನಿಲ್ಲ ಏನೆಂಟು ಎಂಬಂತೆ ರಾಗಿ ತಿನಿಸುಗಳು ಎಲ್ಲರನ್ನು ಆಕರ್ಷಿಸಿತು. ಕಾರ್ಯಕ್ರಮಕ್ಕೆ ಬಂದ ಜನರು ರಾಗಿ ರುಚಿ ಸವಿದು ಕೊಂಡುಕೊಳ್ಳುವಲ್ಲಿ ನಿರತರಾಗಿದ್ದರು. ಅದರಲ್ಲೂ ವಿಶೇಷವಾಗಿ ರಾಗಿ ಮುದ್ದೆಗೆ ಹಲಸಿನಕಾಯಿ ಸಾಂಬಾರು, ಅವರೆಕಾಯಿ ಮತ್ತು ಸೊಪ್ಪಿನ ಸಾಂಬಾರು ಎಲ್ಲರ ಬಾಯಿಯಲ್ಲಿ ನೀರು ತರಿಸುತ್ತಿತ್ತು. ರೊಟ್ಟಿಗೆ ಎಣ್ಣೆಗಾಯಿ, ಹುರುಳಿಕಾಳು ಚಟ್ನಿ, ಹುಚ್ಚಳ್ಳಿನ ಚಟ್ನಿ ಹೀಗೆ ನಾನಾ ರೀತಿಯ ಅಹಾರ ಪದಾರ್ಥಗಳು ಎಲ್ಲರನ್ನು ಸೆಳೆಯುತ್ತಿದ್ದವು.

ಸ್ಪರ್ಧೆಗಳು

ರಾಗಿ ಮುದ್ದೆ ಊಟ, ರಾಗಿ ಕಲ್ಲು ಬೀಸುವುದು, ರಾಗಿ ಬೆಳೆ ಸಂಬಂಧಿತ ಚಿತ್ರ ಬಿಡಿಸುವುದು, ರಾಗಿ ಚೀಲ ಎತ್ತುವ ಸ್ಪರ್ಧೆ, ರಾಗಿ ತಿನಿಸುಗಳ ರುಚಿ, ರಾಗಿ ಬಿತ್ತನೆ, ಒಕ್ಕಣೆ ಬಳಕೆ ಬಗ್ಗೆ ಪ್ರಬಂಧ ಹೀಗೆ ಹಲವಾರು ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಅಲ್ಲದೆ ರಾಗಿ ಕಣ, ಕೃಷಿ ಪರಿಕಗಳ ಪ್ರದರ್ಶನ, ರಾಗಿ ತಳಿಗಳ ಪ್ರದರ್ಶನ ಹಾಗೂ ಮಾರಾಟ, ಮನರಂಜನೆಗಾಗಿ ಸ್ಪರ್ಧೆಗಳು, ರಾಗಿ ಉತ್ಪನ್ನಗಳ ಮಾರಾಟ ಹಾಗೂ ಯಂತ್ರೋಪಕರಣಗಳ ಮಳಿಗೆಗಳನ್ನು ಸಹ ತೆರೆಯಲಾಗಿತ್ತು. ವಿವಿಧ ಸಿರಿಧಾನ್ಯಗಳಿಂದ ತಯಾರಿಸಲಾಗಿದ್ದ ರಾಗಿ ರಾಶಿ ಎಲ್ಲರ ಗಮನಸೆಳೆಯಿತು.

click me!