
ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಇವತ್ತು ಗೃಹ ಲಕ್ಷ್ಮೀಯರಿಗೆ ಭರ್ಜರಿ ಗುಡ್‌ನ್ಯೂಸ್ ನೀಡಿದ್ದಾರೆ. ಯೋಜನೆಯ ಮೂರು ಕಂತಿನ ಹಣವನ್ನು ಒಟ್ಟಿಗೆ ಬಿಡುಗಡೆ ಮಾಡಿ ದೀಪಾವಳಿ ಹಬ್ಬದ ಗಿಫ್ಟ್ ನೀಡಿದ್ದಾರೆ.
ಒಟ್ಟು ಶಿವಕುಮಾರ್ ಅವರು ಬರೋಬ್ಬರಿ 7405.86 ಕೋಟಿ ರೂಪಾಯಿ ಹಣವನ್ನು ಬಿಡುಗಡೆ ಮಾಡಿದ್ದಾರೆ. ಇಲ್ಲಿಯವರೆಗೆ ರಾಜ್ಯ ಸರ್ಕಾರ 33 ಕಂತಿನವರೆಗೆ ಹಣವನ್ನು ಪಾವತಿ ಮಾಡಿತ್ತು. ಇದೀಗ 34, 35 ಮತ್ತು 36ನೇ ಕಂತಿನ ಹಣವನ್ನು ಬಿಡುಗಡೆ ಮಾಡಿದೆ. ಅಕ್ಟೋಬರ್ ವರೆಗೆ ರಾಜ್ಯದ 1.24 ಕೋಟಿ ಮಹಿಳೆಯರಿಗೆ ಇದರ ಲಾಭ ಆಗಿದೆ. ಇಲ್ಲಿಯವರೆಗೆ ಸರ್ಕಾರ ಈ ಯೋಜನೆಗಾಗಿ ಬರೋಬ್ಬರಿ 86,838.36 ಕೋಟಿ ರೂಪಾಯಿ ಹಣ ವಿನಿಯೋಗಿಸಿದೆ. ಅಂದರೆ ಪ್ರತಿ ಮನೆಯ ಯಜಮಾನಿಗೆ ತಲಾ 72,000 ರೂಪಾಯಿ ಹಣ ಜಮೆ ಆಗಿದೆ. ಈಗ 34ನೇ ಕಂತಿನ 2500 ಕೋಟಿ ರೂ., 35ನೇ ಕಂತಿನ 2452.93 ಕೋಟಿ ರೂ. ಮತ್ತು 36ನೇ ಕಂತಿನ 2452.93 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಿದೆ.
ಕರ್ನಾಟಕ ಸರ್ಕಾರ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಇದೂ ಒಂದು. ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬರುವ ಮೊದಲು ಪಂಚ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿತ್ತು. ಅಧಿಕಾರಕ್ಕೆ ಏರಿದ ಬೆನ್ನಲ್ಲೇ ಈ ಯೋಜನೆಯನ್ನು ಜಾರಿಗೆ ತಂದಿದೆ. ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ಇಲ್ಲಿಯವರೆಗೆ 36 ಕಂತುಗಳಲ್ಲಿ ಹಣ ಬಿಡುಗಡೆ ಮಾಡಿದೆ. ಈ ಯೋಜನೆಯಡಿ ಪ್ರತಿ ತಿಂಗಳು ಮನೆಯ ಯಜಮಾನಿಗೆ 2 ಸಾವಿರ ರೂಪಾಯಿ ಹಣವನ್ನು ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತದೆ. ಅಂದರೆ ವರ್ಷಕ್ಕೆ 24 ಸಾವಿರ ರೂಪಾಯಿ ಜಮೆ ಆಗಲಿದೆ.
ಅಂತ್ಯೋದಯ, ಬಿಪಿಎಲ್, ಎಪಿಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬದ ಯಜಮಾನಿಗೆ ಈ ಯೋಜನೆಯ ಲಾಭ ಸಿಗಲಿದೆ. ರೇಷನ್ ಕಾರ್ಡ್‌ನಲ್ಲಿ ಯಾರು ಮನೆಯ ಯಜಮಾನಿ ಎಂದು ಗುರುತಿಸಲಾಗುತ್ತದೆಯೋ ಅವರಿಗೆ ಇದರ ಲಾಭ ಸಿಗಲಿದೆ. ಇನ್ನು ಮನೆಯ ಯಜಮಾನಿಯ ಪತಿ ಇನ್ ಕಮ್ ಟ್ಯಾಕ್ಸ್ ಪಾವತಿ ಮಾಡುತ್ತಿದ್ದರೆ, ಜಿಎಸ್‌ಟಿ ರಿಟರ್ನ್ಸ್ ಮಾಡುತ್ತಿದ್ದರೆ ಅಂತವರಿಗೆ ಇದರ ಪ್ರಯೋಜನ ಸಿಗೋದು ಇಲ್ಲ. ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್ ಕೇಂದ್ರಗಳು ಅಥವಾ ಸೇವಾ ಸಿಂಧು ಪೋರ್ಟಲ್ ಮೂಲಕ ಉಚಿತವಾಗಿ ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಬಹುದು.
ಇತ್ತೀಚೆಗೆ ಯೋಜನೆಯ ಹಣ ಪಾವತಿಯು ತುಂಬಾ ವಿಳಂಬ ಆಗುತ್ತಿತ್ತು. ಇದರಿಂದ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶವೂ ವ್ಯಕ್ತವಾಗಿತ್ತು. ಇದೀಗ ಸರ್ಕಾರ ಒಟ್ಟಿಗೆ ಮೂರು ಕಂತುಗಳ ಹಣವನ್ನು ಒಟ್ಟಿಗೆ ಜಮೆ ಮಾಡಿದೆ. ದೀಪಾವಳಿ ಹಬ್ಬದ ಸಂಭ್ರಮದಲ್ಲಿರುವ ಮನೆಯ ಯಜಮಾನಿಗೆ ಸರ್ಕಾರ ಖುಷಿ ಸುದ್ದಿಯನ್ನ ನೀಡಿದೆ. ಆದರೆ ಇತ್ತೀಚೆಗಿನ ದಿನಗಳಲ್ಲಿ ಹಾಲು, ಬಸ್ಸಿನ ಟಿಕೆಟ್ ರೇಟ್ ಜಾಸ್ತಿ ಮಾಡಿದೆ. ಇದರಿಂದ ಸರ್ಕಾರದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಮಹಿಳೆಯರಿಗೆ ಗೃಹಲಕ್ಷ್ಮೀ ಹಣವನ್ನು ರಿಲೀಸ್ ಮಾಡಿದೆ.