ಶಾಲಾ ಅಡುಗೆ ಸಿಬ್ಬಂದಿಯಿಂದ ಬಿಸಿಯೂಟದ ಅಕ್ಕಿ ಕಳವು| ತಡವಾಗಿ ಬೆಳಕಿಗೆ ಬಂದ ಪ್ರಕರಣ|ಕಳ್ಳತನ ಮಾಡಿದವರ ಮೇಲೆ ಯಾವುದೇ ಕ್ರಮವಿಲ್ಲ| ಈ ಕುರಿತು ಸಮಗ್ರವಾಗಿ ತನಿಖೆ ಮಾಡಬೇಕು ಎಂದು ಸಾರ್ವಜನಿಕರ ಆಗ್ರಹ|
ಶಿಗ್ಗಾಂವಿ(ನ.20):ರಾಜ್ಯ ಸರ್ಕಾರವ ಶಾಲಾ ಮಕ್ಕಳಿಗೆ ಬಿಸಿಯೂಟ ತಯಾರಿಸುವ ಉದ್ದೇಶದಿಂದ ನೀಡಿರುವ ಅಕ್ಕಿಯನ್ನು ಅಡುಗೆ ಸಿಬ್ಬಂದಿ ಶಾಲೆಯಿಂದ ಕದ್ದು ತೆಗೆದುಕೊಂಡು ಹೋಗುತ್ತಿದ್ದಾಗ ಗ್ರಾಮಸ್ಥರು ಹಿಡಿದ ಘಟನೆ ತಾಲೂಕಿನ ದುಂಡಶಿ ತಾಂಡಾ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದ್ದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ತಾಲೂಕಿನ ದುಂಡಶಿ ತಾಂಡಾ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ ನ. 8 ರಂದು ಶಾಲೆಯಿಂದ ಸುಮಾರು 20 ಕೆಜಿಗೂ ಹೆಚ್ಚು ಅಕ್ಕಿಯನ್ನು ಕಳ್ಳತನ ಮಾಡಿಕೊಂಡು ದ್ವಿ ಚಕ್ರ ವಾಹನದ ಮೇಲೆ ತೆಗೆದುಕೊಂಡು ಹೋಗುವಾಗ ಗ್ರಾಮಸ್ಥರು ಹಿಡಿದಿದ್ದು ಅದರ ಪೋಟೊವನ್ನು ತೆಗೆಯಲಾಗಿದೆ. ನಂತರದ ದಿನದಲ್ಲಿ ಶಾಲೆಯ ಮುಖ್ಯ ಗುರುಗಳು ಹಾಗೂ ಎಸ್‌ಡಿಎಂಸಿ ಸಮಿತಿಯವರು ಸಭೆ ಸೇರಿ ಶಾಲೆಯ ಎರಡು ಜನ ಅಡುಗೆದಾರರಿಂದ ಬಿಳಿ ಹಾಳೆಯ ಮೇಲೆ ಕ್ಷಮಾಪಣೆಯ ಪತ್ರ ಬರೆದುಕೊಡುವಂತೆ ಸಭೆಯಲ್ಲಿ ತೀರ್ಮಾನಿಸಿ ಬಿಳಿ ಹಾಳೆಯ ಮೇಲೆ ಸಹಿ ಮಾಡಿಸಿಕೊಳ್ಳಲಾಗಿದೆ.
undefined
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಕಳ್ಳತನ ಮಾಡಿರುವ ಕುರಿತು ತಪ್ಪೊಪ್ಪಿಗೆಯನ್ನು ಅಡುಗೆದಾರರಾದ ಸುರೇಖಾ ರಾಮಪ್ಪ ಗುಡಗೇರಿ ಹಾಗೂ ಲಕ್ಷ್ಮವ್ವ ಹೆ ಲಮಾಣಿ ಅವರ ಸಹಿಯನ್ನು ಖಾಲಿ ಇರುವ ಬಿಳಿಯ ಕಾಗದದ ಮೇಲೆ ಪಡೆದುಕೊಳ್ಳಲಾಗಿದ್ದು, ಮಾಡಿದ ತಪ್ಪು ಏನು ಎಂಬುದು ಬರೆಯಿಸಿಕೊಳ್ಳದೇ ಬಿಳಿ ಹಾಳೆಯ ಮೇಲೆ ಕೇವಲ ಸಹಿ ಪಡೆದುಕೊಳ್ಳಲಾಗಿದ್ದು, ಈ ಪ್ರತಿಯನ್ನು ಹಾಗೂ ಅಗಿರುವ ಘಟನೆ ಕುರಿತು ಅಧಿಕಾರಿಗಳಿಗೆ ತಿಳಿಸದೇ ಮುಖ್ಯ ಶಿಕ್ಷಕಿಯರು ಸಹಿ ಪತ್ರವನ್ನು ತಮ್ಮ ಪೈಲ್‌ನಲ್ಲಿ ಇಟ್ಟುಕೊಂಡಿದ್ದು ಸರಿಯೇ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಅಂತೂ ಇಂತೂ ಅಕ್ಕಿ ಕಳ್ಳರನ್ನು ಹಿಡಿದಿದ್ದು ಆಯಿತು ಅದರ ಕ್ಷಮಾಪಣೆಯೂ ಆಯಿತು. ಆದರೆ, ಇದರ ಕುರಿತು ಮುಖ್ಯ ಶಿಕ್ಷಕರು ಮೇಲಧಿಕಾರಿಗಳಿಗೆ ಆಗಲಿ, ಬಿಸಿಊಟ ಯೋಜನಾಧಿಕಾರಿಗಳಿಗಾಗಲಿ ಯಾವುದೇ ವರದಿ ನೀಡಿಲ್ಲ. ಈ ಕುರಿತು ಸಮಗ್ರವಾಗಿ ತನಿಖೆ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ನಾನು ಅಂದು ಶಿಗ್ಗಾಂವಿಗೆ ತರಬೇತಿಗೆ ಹೋಗಿದ್ದ ವೇಳೆಯಲ್ಲಿ ಅಕ್ಕಿ ಕಳ್ಳತನವಾಗಿದೆ. ಆದರೆ, ನಂತರದ ದಿನದಲ್ಲಿ ಎಸ್‌ಡಿಎಂಸಿ ಹಾಗೂ ಶಿಕ್ಷಕರ ನೇತೃತ್ವದಲ್ಲಿ ಸಭೆ ಸೇರಿ ಕಳ್ಳತನ ಮಾಡಿದ್ದ ಅಡುಗೆದಾರರಿಂದ ಬಿಳಿ ಕಾಗದದ ಮೇಲೆ ಕ್ಷಮಾಪಣೆ ಬರೆದುಕೊಂಡು ಅವರಿಂದ ಸಹಿ ಪಡೆಯಾಗಿದೆ. ಆದರೆ, ಈ ಕುರಿತು ಮೇಲಧಿಕಾರಿಗಳಿಗೆ ಯಾವುದೇ ವರದಿ ನೀಡಿಲ್ಲ ಎಂದು ಮುಖ್ಯ ಶಿಕ್ಷಕಿ ಎಸ್.ಜಿ. ಅಂಗಡಿ ಅವರು ಹೇಳಿದ್ದಾರೆ.
ಬಿಸಿಯೂಟದ ಯೋಜನೆಯ 20 ಕೆಜಿ ಅಕ್ಕಿಯನ್ನು ಕಳ್ಳತನ ಮಾಡಲಾಗಿದೆ. ಆದರೆ, ಶಾಲೆಯಲ್ಲಿಯೇ ಸಭೆ ಮಾಡಿ ಅಡುಗೆದಾರರಿಗೆ ಸೂಚನೆ ನೀಡಲಾಗಿದೆ ಹಾಗೂ ಬಿಳಿ ಕಾಗದದ ಮೇಲೆ ಅಡುಗೆದಾರರ ಸಹಿ ಪಡೆದುಕೊಳ್ಳಲಾಗಿದೆ ಎಂದು ಎಸ್‌ಡಿಎಂಸಿ ಅಧ್ಯಕ್ಷ ನಾರಾಯಣ ತಾ. ಲಮಾಣಿ ಅವರು ತಿಳಿಸಿದ್ದಾರೆ.
ಸುಮಾರು 20 ಕೆಜಿಗೂ ಹೆಚ್ಚು ಅಕ್ಕಿಯನ್ನು ಕಳ್ಳತನ ಮಾಡಿಕೊಂಡು ಹೋಗುತ್ತಿರುವುದನ್ನು ಗಮನಿಸಿ ತಕ್ಷಣವೇ ಸಿಆರ್‌ಪಿ ನಾಗರಾಜ ಲಮಾಣಿ ಅವರಿಗೆ ದೂರವಾಣಿ ಮೂಲಕ ವಿಷಯ ತಿಳಿಸಿದರೂ ಸಹ ಇಲ್ಲಿಯ ವರೆಗೂ ಕಳ್ಳತನ ಮಾಡಿದವರ ಮೇಲೆ ಯಾವುದೇ ಕ್ರಮ ಕೈಗೊಳ್ಳದಿರುವುದು ಖಂಡನಾರ್ಹ ಎಂದು ಗ್ರಾಮಸ್ಥ ರವಿ ಪರಶುರಾಮ ಲಮಾಣಿ ಅವರು ಹೇಳಿದ್ದಾರೆ.