ಬೆಳಗಾವಿಯಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ ಮುಂದುವರೆದಿದ್ದು, ಸಾಲ ವಸೂಲಿಗಾಗಿ ಸಿಬ್ಬಂದಿ ಮನೆಗೆ ನುಗ್ಗಿ ಟಿಕಾಣಿ ಹೂಡುತ್ತಿದ್ದಾರೆ. ಇದರಿಂದ ಕೌಟುಂಬಿಕ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ಜಿಲ್ಲಾಡಳಿತದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ (ಮಾ.16): ರಾಜ್ಯ ಸರ್ಕಾರದಿಂದ ಇತ್ತೀಚೆಗೆ ಮೈಕ್ರೋ ಫೈನಾನ್ಸ್ ಕಂಪನಿಗಳ ಸಾಲ ವಸೂಲಾತಿ ಕಿರುಕುಳವನ್ನು ತಡೆಗಟ್ಟಲು ಸುಗ್ರೀವಾಜ್ಞೆ ಮೂಲಕ ಕಾಯ್ದೆ ಜಾರಿಗೆ ತಂದರೂ ಕಿರುಕುಳ ಮಾತ್ರ ನಿಲ್ಲುತ್ತಿಲ್ಲ. ಸಾಲ ವಸೂಲಿಗಾಗಿ ಬೆಳಗ್ಗೆ 8 ಗಂಟೆಗೆ ಮನೆಯೊಳಗೆ ಬಂದು ಕುಳಿತುಕೊಂಡರೆ ರಾತ್ರಿ 10 ಗಂಟೆಗೆ ವಾಪಸ್ ಹೋಗುತ್ತಾರೆ. ಹಣಕ್ಕಾಗಿ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಬಂದು ಮನೆಯೊಳಗೆ ಕೂರುವುದರಿಂದ ಕೌಟುಂಬಿಕ ದಾಂಪತ್ಯದಲ್ಲಿ ಬಿರುಕು ಮೂಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆಯಲ್ಲಿ ಫೈನಾನ್ಸ್ ಕಂಪನಿಗಳ ಕಿರುಕುಳ ಮುಂದುವರೆದಿದೆ. ಖಾನಾಪುರ ತಾಲೂಕಿನ ಕೇರವಾಡ, ಗುಂಡ್ಯಾನಟ್ಟಿ ಗ್ರಾಮದಲ್ಲಿ ಫೈನಾನ್ಸ್ ಕಂಪನಿ ಸಿಬ್ಬಂದಿಗಳಿಂದ ಕಿರುಕುಳ ಎಗ್ಗಿಲ್ಲದೆ ಸಾಗಿದೆ. ಫೈನಾನ್ಸ್ ಸಿಬ್ಬಂದಿ ಸಾಲ ವಸೂಲಿಗಾಗಿ ಮನೆಯೊಳಗೆ ಟಿಕಾಣಿ ಹೂಡುತ್ತಿದ್ದಾರೆ. ಸಾಲ ಮರುಪಾವತಿ ಮಾಡುವಂತೆ ಬಡಕುಂಬಗಳಿಗೆ ಬೆದರಿಕೆ ಹಾಕುತ್ತಿದ್ದಾರೆ. ಸಾಲ ಮರುಪಾವತಿಗೆ 4 ದಿನಗಳ ಕಾಲ ಅವಕಾಶ ಕೊಡಿ ಎಂದರೂ ಕೇಳದೇ ಮನೆಯೊಳಗೆ ಬಂದು ಕುಳಿತುಕೊಂಡಿದ್ದಾರೆ. ನೀವು ಪೊಲೀಸರಿಗೆ ಹೇಳಿ, ಮೀಡಿಯಾದವರಿಗೂ ಹೇಳಿ. ಆದರೆ, ಹಣ ಕೊಡೊವರೆಗೂ ನಾವ ಮನೆಬಿಟ್ಟು ಕದಲೊದಿಲ್ಲ ಎಂದು ಫೈನಾನ್ಸ್ ಕಂಪನಿ ಸಿಬ್ಬಂದಿ ಪಟ್ಟು ಹಿಡಿದಿದ್ದಾರೆ.
ಇದನ್ನೂ ಓದಿ: ಸುಗ್ರೀವಾಜ್ಞೆಗಿಲ್ಲ ಕಿಂಚಿತ್ತೂ ಬೆಲೆ, ಕಂತು ಕಟ್ಟಕ್ಕೆ ತಡವಾಗಿದ್ದಕ್ಕೆ ಮೈಕ್ರೋಫೈನಾನ್ಸ್ ಸಿಬ್ಬಂದಿಯಿಂದ ಹಲ್ಲೆ!
ಸಾಲದ ಹಣ ಪಾವತಿ ಮಾಡಿದರೆ ಮಾತ್ರ ನಾವು ಇಲ್ಲಿಂದ ವಾಪಸ್ ಹೋಗುತ್ತೇವೆ ಎಂದು ಬಡ ಮಹಿಳೆಯರಿಗೆ ಫೈನಾನ್ಸ್ ಸಿಬ್ಬಂದಿ ಅವಾಜ್ ಹಾಕಿದ್ದಾರೆ. ಬೆಳಗ್ಗೆ 08ಗಂಟೆಗೆ ಮನೆಯ ಬಳಿ ಬರುವ ಫೈನಾನ್ಸ್ ಸಿಬ್ಬಂದಿಗಳು ರಾತ್ರಿ 10ಗಂಟೆವರೆಗೂ ಮನೆಯಲ್ಲಿ ಠಿಕಾಣಿ ಹೂಡುತ್ತಿದ್ದಾರೆ. ನೀವು ಏನಾದರೂ ಮಾಡಿ ಹಣ ತುಂಬಲೇಬೇಕು ಎಂದು ನಿರಂತರ ಕಿರುಕುಳ ನೀಡುತ್ತಿದ್ದಾರೆ. ಮಹಿಳೆಯರ ಸಂಘಕ್ಕೆ ಹಣ ಕೊಡುವ ಇವರು ಅವರನ್ನೇ ಹೆಚ್ಚಾಗಿ ಹಣಕ್ಕಾಗಿ ಪೀಡಿಸುತ್ತಿದ್ದಾರೆ. ಅದೇ ರೀತಿ ಮಹಿಳೆಯ ಹಿಂದೆ ಸಾಲದ ಹಣ ಮರುಪಾವತಿಗೆ ಬೆನ್ನುಬಿದ್ದಿರುವ ಹಿನ್ನೆಲೆಯಲ್ಲಿ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂದು ಮಹಿಳೆ ಅಳಲು ತೋಡಿಕೊಂಡಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ ಫೈನಾನ್ಸ್ ಹಾವಳಿಗೆ ಕಡಿವಾಣ ಹಾಕುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ ಎಂದು ಮಹಿಳೆಯರು ಹಾಗೂ ಸಾರ್ವಜನಿರಕು ಆಕ್ರೋಶ ಹೊರಹಾಕಿದ್ದಾರೆ. ಮೈಕ್ರೋ ಫೈನಾನ್ಸ್ ಸಿಬ್ಬಂದಿ ರಾಜಾರೋಷವಾಗಿ ಅಕ್ರಮವಾಗಿ ಮನೆ ಪ್ರವೇಶಿಸಿ ಟಿಕಾಣಿ ಹೂಡಿ ಅವಾಜ್ ಹಾಕಿದರೂ ಯಾರೊಬ್ಬರೂ ಬಂದು ಕೇಳುತ್ತಿಲ್ಲ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರೂ ಸಹಾಯ ಸಿಗುತ್ತಿಲ್ಲ ಎಂದು ಮಹಿಳೆಯರು ಆರೋಪ ಮಾಡಿದ್ದಾರೆ. ಸರ್ಕಾರದ ಆದೇಶ ಪಾಲನೆ ಮಾಡುವಲ್ಲಿ ಬೆಳಗಾವಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ ವಿಫಲವಾಗಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಇದನ್ನೂ ಓದಿ: ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ; ಈ ಆದೇಶ ಇಟ್ಟುಕೊಂಡು ಕಿರುಕುಳದಿಂದ ಪಾರಾಗಿ!