ಕೊಡಗಿನ ಪೊನ್ನಂಪೇಟೆಯಲ್ಲಿ ಗೂಡ್ಸ್ ವಾಹನವನ್ನು ಹೊರಗೆ ತೆಗೆಯುವಾಗ ಹ್ಯಾಂಡ್ ಬ್ರೇಕ್ ಹಾಕದೇ ಇಳಿದ ಮಹಿಳೆ, ವಾಹನ ಮತ್ತು ಕಾಂಪೌಂಡ್ ನಡುವೆ ಸಿಲುಕಿ ಸಾವನ್ನಪ್ಪಿದ್ದಾರೆ. ಈ ದುರ್ಘಟನೆಯ ಸಿಸಿಟಿವಿ ದೃಶ್ಯಗಳು ವೈರಲ್ ಆಗಿವೆ.
ಕೊಡಗು (ಮಾ.15): ಪೊನ್ನಂಪೇಟೆಯಲ್ಲಿ ಒಬ್ಬಂಟಿ ಮಹಿಳೆ ಮನೆಯ ಕಾಂಪೌಂಡ್ ಒಳಗಿದ್ದ ವಾಹನವನ್ನು ಹೊರಗೆ ತೆಗೆಯುತ್ತಿದ್ದ ವೇಳೆ ವಾಹನದ ಹ್ಯಾಂಡ್ ಬ್ರೇಕ್ ಹಾಕದೇ ಕೆಳಗೆ ಇಳಿಯುವಾಗ ಪಕ್ಕದಲ್ಲಿದ್ದ ಕಾಂಪೌಂಡ್‌ಗೆ ಗುದ್ದಿಸಿದೆ. ಈ ವೇಳೆ ಮಹಿಳೆ ಕಾಂಪೌಂಡ್ ಹಾಗೂ ಜೀಪ್ ನಡುವೆ ಸಿಲುಕಿ ಅಲ್ಲಿಯೇ ಒದ್ದಾಡಿ ಪ್ರಾಣ ಬಿಟ್ಟ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಮಹಿಳೆಯರು ಕೃಷಿ ಹಾಗೂ ಇತರೆ ಕಾರ್ಯಗಳಲ್ಲಿ ಹೆಚ್ಚಾಗಿ ಸ್ವಾವಲಂಬಿಗಳಾಗಿ ಕೆಲಸ ಮಾಡುವ ಕೊಡಗು ಜಿಲ್ಲೆಯಲ್ಲಿ ದುರ್ಘಟನೆಯೊಂದು ನಡೆದಿದೆ. ಮನೆಯ ಕಾಂಪೌಂಡ್ ಒಳಗಿದ್ದ ಗೂಡ್ಸ್ ವಾಹನವನ್ನು ಹೊರಗೆ ತೆಗೆಯುತ್ತಿದ್ದ ವೇಳೆ ವಾಹನದ ಹ್ಯಾಂಡ್ ಬ್ರೇಕ್ ಹಾಕದೇ ಕೆಳಗೆ ಇಳಿದು ಗೇಟ್ ತೆಗೆಯುವುದಕ್ಕೆ ಹೋಗಲು ಮುಂದಾಗಿದ್ದಾರೆ. ಆದರೆ, ಇಳಿಜಾರಿನಲ್ಲಿದ್ದ ವಾಹನ ಮಹಿಳೆ ಒಂದು ಕಾಲು ಕೆಳಗಿಡುತ್ತಲೇ ಜಾರಿಕೊಂಡು ಮುಂದಕ್ಕೆ ಚಲಿಸಿದೆ. ಆಗ ಮಹಿಳೆ ಕೆಳಗೆ ಜಿಗಿಯಲೂ ಆಗದೇ, ವಾಹನದ ಒಳಗೂ ಹೋಗಲಾಗದೇ ಡೋರಿನಲ್ಲಿ ಸಿಲುಕಿದಾಗ ಗೂಡ್ಸ್ ವಾಹನ ಮುಂದೆ ಇದ್ದ ಗೋಡೆಗೆ ಡಿಕ್ಕಿ ಹೊಡೆದಿದೆ. ಆಗ ಮಹಿಳೆ ಕಾಂಪೌಂಡ್ ಹಾಗೂ ವಾಹನದ ನಡುವೆ ಸಿಲುಕಿ ಅಲ್ಲಿಯೇ ಪ್ರಾಣ ಬಿಟ್ಟಿದ್ದಾರೆ.
ಈ ಘಟನೆ ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲೂಕಿನ ಬಾಡಗರಕೇರಿಯಲ್ಲಿ ಬುಧವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಇದೀಗ ಸಿಸಿಟಿವಿ ದೃಶ್ಯಗಳು ವೈರಲ್ ಆಗುತ್ತಿವೆ. ಮೃತ ಮಹಿಳೆಯನ್ನು ರಶ್ಮಿ (46) ಎಂದು ಗುರುತಿಸಲಾಗಿದೆ. ಈ ಘಟನೆ ನಡೆದಾಗ ಮನೆಯಲ್ಲಿ ಯಾರೂ ಇಲ್ಲದ ಹಿನ್ನೆಲೆಯಲ್ಲಿ ಮಹಿಳೆ ಸಹಾಯಕ್ಕೆ ಕೂಗಿದರೂ ಯಾರೊಬ್ಬರೂ ಬಂದಿಲ್ಲ. ಕಾರಣ, ಎತ್ತರದ ಕಾಂಪೌಂಡ್ ಹಾಗೂ ಸೆಕ್ಯೂರಿಟಿ ಸಿಸ್ಟಮ್ ಇರುವ ಗೇಟ್ ಇರುವುದರಿಂದ ಮಹಿಳೆ ಅಪಘಾತಕ್ಕೆ ಸಿಲುಕಿರುವುದು ಯಾರಿಗೂ ಕಂಡುಬಂದಿಲ್ಲ. ಇನ್ನು ವಾಹನ ಕಾಂಪೌಂಡ್‌ಗೆ ಗುದ್ದಿದಾಗ ಮಹಿಳೆ ಒಮ್ಮೆ ಕಿರುಚಿಕೊಂಡಿದ್ದು, ಆಗ ನಾಯಿ ಹೊರಗೆ ಬಮದು ನೋಡಿದೆ. ತನ್ನ ಮಾಲಕಿ ಅಪಾಯದಲ್ಲಿದ್ದಾಳೆ ಎಂಬುದು ಅರಿವಿಗೆ ಬಾರದೆ ಒಂದೆರಡು ಬಾರಿ ಬೊಗಳಿ ಸುಮ್ಮನೆ ನೋಡುತ್ತಾ ನಿಂತಿದೆ.
ಇದನ್ನೂ ಓದಿ: ನಾವು ಸಂಪಾದಿಸಿದ ಆಸ್ತಿ ಸತ್ತ ನಂತರ ಯಾರಿಗೆ ಸೇರಬೇಕು? ವಿಲ್ ರಿಜಿಸ್ಟರ್ ಮಾಡಿಸೋದು ಹೇಗೆ?
ಇನ್ನು ಮೃತ ರಶ್ಮಿ ಅವರ ಗಂಡ ಮಧು ಮೋಟಯ್ಯ ಅವರು ಕೆಲಸದ ನಿಮಿತ್ತ ಗೋಣಿಕೊಪ್ಪಲಿಗೆ ಹೋಗಿದ್ದರು. ಈ ಘಟನೆ ನಡೆದು ಎಷ್ಟೋ ಸಮಯದ ಬಳಿಕ ಪತಿ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಕಾಂಪೌಂಡ್ ಹಾಗೂ ವಾಹನದ ಮಧ್ಯದಲ್ಲಿಯೇ ಮಹಿಳೆ ನಜ್ಜುಗುಜ್ಜಾಗಿ ಸಿಲುಕಿ ಸಾವನ್ನಪ್ಪಿದ್ದಾರೆ. ಕೂಡಲೇ ಇತರರನ್ನು ಸಹಾಯಕ್ಕೆ ಕರೆದು ವಾಹನ ಹಿಂದಕ್ಕೆ ಎಳೆದು ನಿಲ್ಲಿಸಿ ರಶ್ಮಿ ಅವರನ್ನು ರಕ್ಷಣೆ ಮಾಡಿ ಬದುಕಿದ್ದಾರೆಯೇ ಎಂದು ಪರಿಶೀಲನೆ ಮಾಡಿದ್ದಾರೆ. ಆದರೆ, ರಶ್ಮಿ ಜೀವ ಹೋಗಿ ತುಂಬಾ ಸಮಯವಾಗಿತ್ತು. ಈ ಘಟನೆ ಕುರಿತಂತೆ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.