ಮೈಸೂರು ರಸ್ತೆ-ಕೆಂಗೇರಿ ಮೆಟ್ರೋ ಸ್ಥಗಿತ: ಪ್ರಯಾಣಿಕರ ಪರದಾಟ

By Kannadaprabha NewsFirst Published Jan 28, 2023, 9:48 AM IST
Highlights

ನಾಲ್ಕು ದಿನ ಈ ಮಾರ್ಗದಲ್ಲಿ ರೈಲು ಸಂಚಾರ ರದ್ದುಗೊಳಿಸುವುದಾಗಿ ಬಿಎಂಆರ್‌ಸಿಎಲ್‌ ತಿಳಿಸಿತ್ತು. ವಾರಾಂತ್ಯದಲ್ಲಿ ಈ ಮಾರ್ಗದ ಪ್ರಯಾಣಿಕರ ಸಂಖ್ಯೆ ಹೆಚ್ಚೇ ಇರುವ ಕಾರಣ ಶನಿವಾರ ಹಾಗೂ ಭಾನುವಾರ ಈ ಮಾರ್ಗದ ಪ್ರಯಾಣಿಕರು ಹೆಚ್ಚಾಗಿ ಸಮಸ್ಯೆಗೆ ಸಿಲುಕಲಿದ್ದಾರೆ.

ಬೆಂಗಳೂರು(ಜ.28):  ಕೆಂಗೇರಿಯಿಂದ ಚಲ್ಲಘಟ್ಟ ಮೆಟ್ರೋ ವಿಸ್ತರಣಾ ಕಾಮಗಾರಿ ಹಿನ್ನೆಲೆಯಲ್ಲಿ ಜ.30ರವರೆಗೆ ಮೈಸೂರು ರಸ್ತೆ-ಕೆಂಗೇರಿ ಮಾರ್ಗದ ನಡುವೆ ಮೆಟ್ರೋ ಸಂಚಾರ ಸ್ಥಗಿತಗೊಂಡಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಈ ಮಾರ್ಗದ ಮೆಟ್ರೋ ಬಳಕೆದಾರರು ತೊಂದರೆಗೆ ಸಿಲುಕಿದರು. ವಾರಾಂತ್ಯವಾದ ಇಂದು, ನಾಳೆ ಪ್ರಯಾಣಿಕರು ಇನ್ನಷ್ಟುಪರದಾಡುವ ಸಾಧ್ಯತೆ ಇದೆ. ನಾಲ್ಕು ದಿನ ಈ ಮಾರ್ಗದಲ್ಲಿ ರೈಲು ಸಂಚಾರ ರದ್ದುಗೊಳಿಸುವುದಾಗಿ ಬಿಎಂಆರ್‌ಸಿಎಲ್‌ ತಿಳಿಸಿತ್ತು. ವಾರಾಂತ್ಯದಲ್ಲಿ ಈ ಮಾರ್ಗದ ಪ್ರಯಾಣಿಕರ ಸಂಖ್ಯೆ ಹೆಚ್ಚೇ ಇರುವ ಕಾರಣ ಶನಿವಾರ ಹಾಗೂ ಭಾನುವಾರ ಈ ಮಾರ್ಗದ ಪ್ರಯಾಣಿಕರು ಹೆಚ್ಚಾಗಿ ಸಮಸ್ಯೆಗೆ ಸಿಲುಕಲಿದ್ದಾರೆ. ಸಿನಿಮಾ, ಶಾಪಿಂಗ್‌ ಸೇರಿ ಇತರೆ ಕಾರಣಕ್ಕೆ ಜನತೆ ರಸ್ತೆಗಿಳಿಯುವುದರಿಂದ ಇಲ್ಲಿ ಸಂಚಾರ ದಟ್ಟಣೆ ವಿಪರೀತವಾಗಲಿದೆ.

ಶುಕ್ರವಾರ ಕೆಂಗೇರಿ, ಪಟ್ಟಣಗೆರೆ, ಜ್ಞಾನಭಾರತಿ ಸೇರಿ ಸುತ್ತಲಿನ ಜನ ಮೈಸೂರು ರಸ್ತೆಗೆ ಬಂದು ಅಲ್ಲಿಂದ ಮೆಟ್ರೋ ಏರಿ ಪ್ರಯಾಣಿಸುವ ಅನಿವಾರ್ಯತೆ ಎದುರಿಸಿದರು. ಮೆಟ್ರೋ ವ್ಯತ್ಯಯದ ಕಾರಣಕ್ಕೆ ಈ ಮೊದಲೇ ಬಿಎಂಆರ್‌ಸಿಎಲ್‌ ಮನವಿ ಮೇರೆಗೆ ಈ ಮಾರ್ಗದಲ್ಲಿ ಬಿಎಂಟಿಸಿಗೆ ಹೆಚ್ಚುವರಿ ಬಸ್ಸುಗಳ ಸಂಚಾರಕ್ಕೆ ಮನವಿ ಮಾಡಿತ್ತು. ಅದರಂತೆ ಹೆಚ್ಚುವರಿ ಬಸ್‌ಗಳ ಸೇವೆ ಒದಗಿಸಿದ್ದರೂ ಮೆಟ್ರೋ ನೆಚ್ಚಿಕೊಂಡವರಿಗೆ ತೊಂದರೆ ತಪ್ಪಿರಲಿಲ್ಲ.

ಒಂದೇ ಕಾರ್ಡಲ್ಲಿ ದೇಶದ ಎಲ್ಲ ಮೆಟ್ರೋ, ಬಸ್ಸಲ್ಲಿ ಓಡಾಟ?

ಪ್ರತಿನಿತ್ಯ ನಮ್ಮ ಮೆಟ್ರೋದಲ್ಲಿ 5.5 ಲಕ್ಷ ಪ್ರಯಾಣಿಕರು ಸಂಚರಿಸುತ್ತಿದ್ದು, 1ರಿಂದ 1.2 ಕೋಟಿ ರು. ಆದಾಯ ಬರುತ್ತಿದೆ. ನೇರಳೆ ಮಾರ್ಗದಲ್ಲಿ 1.70 ಲಕ್ಷ ಜನರು ಪ್ರಯಾಣಿಸುತ್ತಾರೆ. ಈ ಪೈಕಿ ಮೈಸೂರು ರಸ್ತೆ- ಕೆಂಗೇರಿ ಮಾರ್ಗದಿಂದಲೇ ಸುಮಾರು 35-40 ಸಾವಿರ ಜನ ಪ್ರಯಾಣಿಸುತ್ತಾರೆ. ಮೆಟ್ರೋಗೆ .12-15 ಲಕ್ಷ ಆದಾಯ ಬರುತ್ತದೆ. ಈ ಪ್ರಯಾಣಿಕರೆಲ್ಲ ಶುಕ್ರವಾರ ತೊಂದರೆಗೀಡಾಗಿ ಖಾಸಗಿ ವಾಹನದ ಮೊರೆಹೋಗಿ ರಸ್ತೆ ಮಾರ್ಗ ಅವಲಂಬಿಸುವಂತಾಯಿತು.

ಉಳಿದಂತೆ ಹಸಿರು ಮಾರ್ಗದ ನಾಗಸಂದ್ರ- ರೇಷ್ಮೆ ಸಂಸ್ಥೆ ನಡುವಿನ ಮೆಟ್ರೋ ರೈಲ್ವೆ ಎಂದಿನಂತೆ ಸೇವೆಯಲ್ಲಿತ್ತು. ಇನ್ನು, ಜ.31ರಿಂದ ಎಂದಿನ ವೇಳಾಪಟ್ಟಿಯಂತೆ ಈ ಮಾರ್ಗದ ಮೆಟ್ರೋ ಪುನರ್‌ ಆರಂಭವಾಗಲಿದೆ.

click me!