* ಪ್ರಣಾಳಿಕೆಯಲ್ಲಿ ಮೆಟ್ರೋ ಯೋಜನೆ ಪ್ರಸ್ತಾಪಿಸಿದ ಕಾಂಗ್ರೆಸ್
* ಬಹುತೇಕ ಹಳೆ ಯೋಜನೆಗಳ ಭರವಸೆ
* ತಮಾಟಗಾರ ಫೋಟೋ ರಾದ್ಧಾಂತ
ಹುಬ್ಬಳ್ಳಿ(ಆ.29): ಮಹಾನಗರ ಪಾಲಿಕೆ ಚುನಾವಣೆಗಾಗಿ ಕಾಂಗ್ರೆಸ್ ಶನಿವಾರ 23 ಅಂಶಗಳ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಹು-ಧಾ ನಗರದಲ್ಲಿ ಮೆಟ್ರೋ ರೈಲು ಯೋಜನೆ, ಕೈಗಾರಿಕಾ ವಸಾಹತು ತೆರಿಗೆಯಲ್ಲಿ ಹೊಸ ವರ್ಗೀಕರಣ ಮಾಡುವುದಾಗಿ ಭರವಸೆ ನೀಡಿದೆ.
ಶನಿವಾರ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಈ ಕುರಿತು ಪಕ್ಷದ ಮುಖಂಡರು ಪ್ರಣಾಳಿಕೆ ಬಿಡುಗಡೆಗೊಳಿಸಿದರು. ಹು-ಧಾ ಪಾಲಿಕೆ ವ್ಯಾಪ್ತಿಯ ಎಲ್ಲ ಸರ್ಕಾರಿ ಶಾಲೆಗಳನ್ನು ಆಧುನೀಕರಣ, ಹೆರಿಗೆ ಮತ್ತು ಡಯಾಲಿಸಿಸ್ ವ್ಯವಸ್ಥೆಯ 100 ಬೆಡ್‌ಗಳ ಸುಸಜ್ಜಿತ ಆಸ್ಪತ್ರೆ, ಹದಗೆಟ್ಟಬೀದಿ ದೀಪ ನಿರ್ವಹಣಾ ವ್ಯವಸ್ಥೆಗೆ ಮರುರೂಪ, ಹೊರವಲಯದಲ್ಲಿ ಬೀದಿದೀಪ ಅಳವಡಿಕೆಗೆ ಕ್ರಮಗಳನ್ನು ಮೊದಲ ಮೂರು ವಿಷಯವಾಗಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹೇಳಿದೆ.
ವ್ಯಾಯಾಮ ಸಲಕರಣೆ ಇರುವ ಉದ್ಯಾನವನ ಹಾಗೂ ಪ್ರತಿ ವಲಯದಲ್ಲಿ ಪುರುಷ, ಮಹಿಳೆಯರಿಗೆ ಪ್ರತ್ಯೇಕ ಜಿಮ್ ಸ್ಥಾಪಿಸುತ್ತೇವೆ. ಹುಧಾ ಸಂಪೂರ್ಣ ಬೈಪಾಸ್ ವರ್ತುಲ ರಸ್ತೆ ನಿರ್ಮಾಣ. ಪಾಲಿಕೆಯ ಆಸ್ಪತ್ರೆ ಮತ್ತು ಈಗಿನ ಪಿಎಚ್‌ಸಿ ಆಧುನೀಕರಣ, ಕೈಗಾರಿಕಾ ವಸಾಹತು ತೆರಿಗೆಯಲ್ಲಿ ಹೊಸ ವರ್ಗೀಕರಣ, ತೆರಿಗೆ ಬಡ್ಡಿ, ದಂಡ ವಿನಾಯಿತಿ ತುಂಬಲು ಒಟಿಎಸ್ ಸೌಲಭ್ಯ, ಮಹಾನಗರದ ಹೊರ, ಒಳ ಕ್ರೀಡಾಂಗಣಗಳ ಆಧುನಿಕರಣಕ್ಕೆ ಯತ್ನಿಸುತ್ತೇವೆ. ಬಡ ಕುಟುಂಬಗಳಿಗೆ ಉಚಿತ ಹೊಲಿಗೆ ಯಂತ್ರ, ಅಡುಗೆ ಅನಿಲ ಸಂಪರ್ಕ ನೀಡುವುದಾಗಿ ಹೇಳಿದೆ.
ಹುಬ್ಬಳ್ಳಿ -ಧಾರವಾಡ ಹೈಟೆಕ್ ಸಿಟಿ ಮಾಡಲು ಜೆಡಿಎಸ್‌ಗೆ ಮತ ನೀಡಿ: ಎಚ್‌ಡಿಕೆ
2001ರ ಪೂರ್ವದ ಅಕ್ರಮ ಕಟ್ಟಡಗಳ ಸಕ್ರಮಕ್ಕೆ ಯೋಜನೆ ರೂಪಿಸಲು ಕ್ರಮ, ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ಯೋಜನೆ ಪ್ರತಿ ವಲಯದಲ್ಲೂ ಕನಿಷ್ಠ ಒಂದು ಪಿಎಚ್‌ಸಿ ನಿರ್ಮಾಣಕ್ಕೆ ಕ್ರಮ, ಕೈಗಾರಿಕಾ ವಸಾಹತುಗಳಲ್ಲಿ ನಾಗರಿಕ ಸೌಲಭ್ಯ ಒದಗಿಸಲು ಪಾಲಿಕೆಗೆ ಹಸ್ತಾಂತರ ಪ್ರಕ್ರಿಯೆಗೆ ಪ್ರಸ್ತಾವನೆ ಮಾಡುವುದಾಗಿ ಪ್ರಕಟಿಸಿದೆ. ಹಲವು ವರ್ಷಗಳಿಂದ ಈಡೇರದ ಅಘೋಷಿತ ಕೊಳಚೆ ಪ್ರದೇಶವನ್ನು ಕೊಳಚೆ ಪ್ರದೇಶವಾಗಿ ಘೋಷಿಸಿ ಬಡಜನತೆಗೆ ಹಕ್ಕುಪತ್ರ ವಿತರಣೆ ಮಾಡುವ ಭರವಸೆ ನೀಡಲಾಗಿದೆ.
ತಮಾಟಗಾರ ಫೋಟೋ ರಾದ್ಧಾಂತ:
ಕಾಂಗ್ರೆಸ್ ಪಟ್ಟಿಯ ಸ್ಥಳೀಯ ಮುಖಂಡರ ಭಾವಚಿತ್ರದಲ್ಲಿ ಇಸ್ಮಾಯಿಲ್ ತಮಾಟಗಾರ ಫೋಟೋ ಇರಲಿಲ್ಲ. ಅವರ ಬೆಂಬಲಿಗರು ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಬಳಿಕ ಪಟ್ಟಿಯಲ್ಲಿ ಇಸ್ಮಾಯಿಲ್ ಎಂದು ಕೈಯಲ್ಲಿ ಬರೆದು ಕೊಡಲಾಗಿದೆ. ಇದರಿಂದ ಮತ್ತಷ್ಟು ಮುಜುಗರ ಆಗಿ ಬೆಂಬಲಿರು ಇನ್ನಷ್ಟು ಬೇಸರ ವ್ಯಕ್ತಪಡಿಸಿದರು. ಹೀಗಾಗಿ ಮತ್ತೆ ಪ್ರಿಂಟಿಂಗ್‌ಗೆ ಕಳಿಸಿ ಇಸ್ಮಾಯಿಲ್ ಫೋಟೋವನ್ನು ಪ್ರಕಟಿಸಲಾಗಿದೆ.