ಪತಿಯ ಶತಾಯಗತಾಯ ಪ್ರಯತ್ನಕ್ಕೆ ಕೂಡಿ ಬರಲಿಲ್ಲ ಕಾಲ| ಸಾಥ್ ನೀಡದ ಪಕ್ಷ ತ್ಯಾಗ| ನನ್ನ ಪ್ರಯತ್ನಕ್ಕೆ ದಕ್ಕದ್ದು, ನನ್ನ ಪತ್ನಿಯ ಮೂಲಕ ದಕ್ಕಿದ್ದು ಸಂತೋಷ| 6 ತಿಂಗಳ ಬಳಿಕ ಕೋರ್ಟ್ ತಡೆಯಾಜ್ಞೆ ತೆರವು|
ಕೊಪ್ಪಳ(ಮೇ.03): ಇಲ್ಲಿಯ ನಗರಸಭೆ ಅಧ್ಯಕ್ಷ ಸ್ಥಾನದ ಗದ್ದೆಗೆ ಏರಲು ಸತತ ಆರು ವರ್ಷಗಳ ಕಾಲ ಪ್ರಯತ್ನ ಮಾಡಿದರೂ ಕೈಗೂಡಲಿಲ್ಲ. ಆದರೆ, ಈಗ ಅವರ ಪತ್ನಿ ಅದನ್ನು ದಕ್ಕಿಸಿಕೊಂಡಿದ್ದು ವ್ಯಾಪಕವಾಗಿ ಚರ್ಚೆಯಾಗುತ್ತಿದೆ.
ಗವಿಸಿದ್ದಪ್ಪ ಚಿನ್ನೂರು ಅವರು ಬಿಜೆಪಿ ಪಕ್ಷದ ಸದಸ್ಯರಾಗಿದ್ದ ಕಳೆದ ಅವಧಿಯಲ್ಲಿ ಹೇಗಾದರೂ ಮಾಡಿ ಕೊಪ್ಪಳ ನಗರಸಭೆ ಅಧ್ಯಕ್ಷರಾಗಲೇಬೇಕು ಎಂದು ಶತಾಯಗತಾಯ ಶ್ರಮಿಸಿದರು. ಬಹುಮತದ ಕೊರತೆ ಇದ್ದರೂ ಏನೆಲ್ಲಾ ಕಸರತ್ತು ಮಾಡಿ, ಅಧ್ಯಕ್ಷ ಗಾದಿ ಏರಲು ಮುಂದಾಗಿದ್ದರು. ಆದರೆ, ಅದು ಕೊನೆ ಗಳಿಗೆಯಲ್ಲಿ ಕೈಗೂಡಲೇ ಇಲ್ಲ. ಇದರಿಂದ ಗವಿಸಿದ್ದಪ್ಪ ಚಿನ್ನೂರು ಅವರು ವಿಚಲಿತರಾಗಿದ್ದರು. ಅದರಲ್ಲೂ ಬಿಜೆಪಿ ಪಕ್ಷದವರೇ ಕೆಲವರು ಕೈಕೊಟ್ಟಿದ್ದರಿಂದ ಅವರು ಆಕ್ರೋಶಗೊಂಡಿದ್ದರು.
undefined
ನಾನು ಸೋತರೂ ಪರವಾಗಿಲ್ಲ, ಪಕ್ಷಕ್ಕೆ ದ್ರೋಹ ಮಾಡಿದವರನ್ನು ಸುಮ್ಮನೇ ಬಿಡುವುದಿಲ್ಲ ಎಂದು ಹಠ ಹಿಡಿದು ಪಕ್ಷಾಂತರ ಕಾಯ್ದೆ ಮೂಲಕ ಪಕ್ಷಾಂತರ ಮಾಡಿದ ಸದಸ್ಯರ ವಿರುದ್ಧ ಕಾನೂನು ಹೋರಾಟ ಪ್ರಾರಂಭಿಸಿದ್ದರು. ಇನ್ನೇನು ಪಕ್ಷಾಂತರ ಕಾಯ್ದೆ ತೀರ್ಪು ಬರಬೇಕು ಎನ್ನುವಾಗಲೇ ಬಿಜೆಪಿ ಪಕ್ಷದ ನಾಯಕರೇ ಇದಕ್ಕೆ ಸಾಥ್ ನೀಡಲಿಲ್ಲ. ಹಿಂದೆ ಸರಿದರು. ಇದು ಗವಿಸಿದ್ಧಪ್ಪ ಚಿನ್ನೂರು ಅವರಿಗೆ ಭಾರಿ ಹಿನ್ನಡೆ ಮತ್ತು ನೋವನ್ನುಂಟು ಮಾಡುವಂತೆ ಮಾಡಿತು. ಇದರಿಂದ ರಾಜಕೀಯವಾಗಿ ಬೇಸರ ಮಾಡಿಕೊಂಡಿದ್ದ ಅವರು ಆಕ್ರೋಶಗೊಂಡು ದೂರವೇ ಉಳಿದರು.
ಗಂಗಾವತಿ: ಹೆಚ್ಚಿನ ದರಕ್ಕೆ ಮಾರಾಟ, ರಸಗೊಬ್ಬರ ಅಂಗಡಿಗಳ ಮೇಲೆ ಕೃಷಿ ಅಧಿಕಾರಿ ದಾಳಿ
ಪಟ್ಟ ಬಿಡದೆ ಪ್ರಯತ್ನ:
ಹೀಗೆ ರಾಜಕೀಯದಿಂದ ದೂರ ಉಳಿದ ಅವರನ್ನು ಆಡಿಕೊಳ್ಳಲು ಶುರು ಮಾಡಿದರು. ಗೆಲ್ಲಲೂ ಇಲ್ಲ, ಗೆಲುವಿಗೆ ಮೋಸ ಮಾಡಿದವರ ವಿರುದ್ಧ ಹೋರಾಟ ಮಾಡಿ, ಅರ್ಧಕ್ಕೆ ನಿಂತರು ಎಂದು ಹಿಯಾಳಿಸಲು ಶುರು ಮಾಡಿದರು. ತಮ್ಮ ಪಕ್ಷದವರೇ ಅದು ಏನ್ ಮಾಡ್ಕೊಳ್ತಾನೆ ಮಾಡಿಕೊಳ್ಳಲಿ ಎಂದು ಸವಾಲು ಹಾಕುತ್ತಿರುವುದರಿಂದ ಮನಸ್ಸಿಗೆ ಘಾಸಿಯನ್ನು ಅನುಭವಿಸಬೇಕಾಯಿತು.
ಹೀಗೆ ಘಾಸಿಗೊಂಡಿದ್ದ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ತಮಗೆ ಮೋಸ ಮಾಡಿದವರ ವಿರುದ್ಧ ಸೇಡು ತೀರಿಸಿಕೊಳ್ಳುವುದಕ್ಕಿಂತ ನಗರಸಭೆ ಅಧ್ಯಕ್ಷನಾಗಲೇಬೇಕು ಎಂದು ಪಟ್ಟು ಹಿಡಿದು, ಹೋರಾಟ ಪ್ರಾರಂಭಿಸಿದರು. ತಮ್ಮ ವಾರ್ಡಿನಲ್ಲಿ ಮಹಿಳಾ ಮೀಸಲಾತಿ ಬಂದಿದ್ದರಿಂದ ನಗರಸಭೆಯ ಚುನಾವಣೆಯಲ್ಲಿ ಪತ್ನಿಯನ್ನು ಕಣಕ್ಕೆ ಇಳಿಸಿದರು. ಪತ್ನಿ ಲತಾ ಗವಿಸಿದ್ದಪ್ಪ ಚಿನ್ನೂರು ಜಯ ಸಾಧಿಸಿದರು.
ನಗರಸಭೆ ಅಧ್ಯಕ್ಷರಾದರು:
ಕೊಪ್ಪಳ ನಗರಸಭೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನಿಚ್ಚಳ ಬಹುಮತ ದೊರೆಯಿತು. ಆದರೆ, ಮೀಸಲಾತಿ ನಿಗದಿ ಗೊಂದಲದಿಂದ ಮುಂದೂಡುತ್ತಲೇ ಸಾಗಲಾಯಿತು. 2 ವರ್ಷ 2 ತಿಂಗಳ ಕಾಲ ಹೀಗೆ ಸಾಗಿತು. ಕೊನೆಗೂ ಮೀಸಲಾತಿ ನಿಗದಿಯಾಗಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಯೂ ನಡೆಯಿತು. ಲತಾ ಗವಿಸಿದ್ದಪ್ಪ ಚಿನ್ನೂರು ಅಧ್ಯಕ್ಷೆಯಾಗಿ ಆಯ್ಕೆಯಾದರು. ಆದರೆ, ಹೈಕೋರ್ಟ್ ಫಲಿತಾಂಶ ಪ್ರಕಟಿಸಲು ತಡೆಯಾಜ್ಞೆಯನ್ನು ನೀಡಿತು.
ಭುಗಿಲೆದ್ದಿದೆ ಆಂಜನೇಯ ಜನ್ಮ ಸ್ಥಳ ವಿವಾದ : ಯಾಕೆ ಕಿತ್ತಾಟ..?
ಆಗಂತೂ ಗವಿಸಿದ್ದಪ್ಪ ಚಿನ್ನೂರು ಅವರ ಕುಟುಂಬಕ್ಕೆ ಅಧ್ಯಕ್ಷರಾಗುವ ಯೋಗವೇ ಇಲ್ಲ ಎಂದು ಅನೇಕರು ಆಡಿಕೊಂಡರು. ಆದರೆ, 6 ತಿಂಗಳ ಬಳಿಕ ಕೋರ್ಟ್ ತಡೆಯಾಜ್ಞೆ ತೆರವಾಯಿತು. ಲತಾ ಗವಿಸಿದ್ದಪ್ಪ ಚಿನ್ನೂರು ಅವರನ್ನು ಅಧ್ಯಕ್ಷರೆಂದು ಘೋಷಣೆ ಮಾಡಲಾಯಿತು. ಚಿನ್ನೂರು ಅಭಿಮಾನಿಗಳು ಪಟಾಕಿ, ಸಿಡಿಸಿ ಸಂಭ್ರಮಿಸಿದರು. 6 ವರ್ಷಗಳ ಕಾಲ ಹಿಡಿದಿದ್ದ ಗ್ರಹಣ ಕೊನೆಗೂ ಬಿಟ್ಟಿ ತಲಾ ಎಂದು ಸಿಹಿ ಹಂಚಿದರು.
ಕೊಪ್ಪಳ ನಗರಸಭೆ ಅಧ್ಯಕ್ಷರಾಗಿ ಆಯ್ಕೆಯಾಗಿರುವುದಕ್ಕೆ ಖುಷಿಯಾಗುತ್ತಿದೆ. ಜನರ ಸೇವೆ ಮಾಡುವುದಕ್ಕೆ ಶತಾಯ ಪ್ರಯತ್ನ ಮಾಡುತ್ತೇನೆ ಎಂದು ಕೊಪ್ಪಳ ನಗರಸಭೆ ಅಧ್ಯಕ್ಷೆ ಲತಾ ಗವಿಸಿದ್ದಪ್ಪ ಚಿನ್ನೂರು ತಿಳಿಸಿದ್ದಾರೆ.
ಕೊನೆಗೂ ನಮ್ಮ ಕುಟುಂಬಕ್ಕೆ ಕೊಪ್ಪಳ ನಗರಸಭೆ ಅಧ್ಯಕ್ಷ ಸ್ಥಾನದ ಪಟ್ಟದಕ್ಕಿತು. ನಾನು ಶತಾಯ ಪ್ರಯತ್ನ ಮಾಡಿದರೂ ಕೈಗೂಡದೆ ಇದ್ದಾಗ ತೀವ್ರ ಹಿಂಸೆಯನ್ನು ಅನುಭವಿಸಿದ್ದೆ. ಈಗ ನನ್ನ ಪತ್ನಿಯ ಮೂಲಕವಾದರೂ ಅದು ದಕ್ಕಿದ್ದು, ಖುಷಿಯಾಗಿದೆ ಎಂದು ಗವಿಸಿದ್ದಪ್ಪ ಚಿನ್ನೂರು ಹೇಳಿದ್ದಾರೆ.