
ಶಿವಮೊಗ್ಗ(ಜು.25): ಉನ್ನತ ಶಿಕ್ಷಣ ಪಡೆಯಲು ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗೆ ಇನ್ನೊಂದು ಅವಕಾಶ ನೀಡುವ ಸಲುವಾಗಿ 2019-20ನೇ ಶೈಕ್ಷಣಿಕ ಸಾಲಿನಲ್ಲಿ ಕುವೆಂಪು ವಿವಿಯು ತನ್ನ ವ್ಯಾಪ್ತಿಗೊಳಪಟ್ಟ ಕಾಲೇಜುಗಳಲ್ಲಿಸ್ನಾತಕೋತ್ತರ ಪದವಿ ಸೀಟುಗಳಿಗೆ ಕ್ಯಾಶುವಲ್ ಸುತ್ತಿನಲ್ಲಿ ಪ್ರವೇಶಾತಿ ನೀಡಲು ಅರ್ಜಿ ಆಹ್ವಾನಿಸಿದೆ.
ಸ್ನಾತಕೋತ್ತರ ಅಧ್ಯಯನ ವಿಭಾಗಗಳು ಮತ್ತು ಸಂಯೋಜಿತ ಕಾಲೇಜುಗಳಲ್ಲಿ ಖಾಲಿ ಉಳಿದಿರುವ ಸೀಟುಗಳಿಗೆ ಅರ್ಜಿ ಆಹ್ವಾನಿಸಿದ್ದು, ಕಳೆದ ಜುಲೈ 18 ಮತ್ತು 19 ರಂದು ಪ್ರವೇಶಾತಿ ಕೌನ್ಸೆಲಿಂಗ್ ನಡೆದಿದೆ. ವಿವಿಧ ಸ್ನಾತಕೋತ್ತರ ವಿಭಾಗಗಳು ಮತ್ತು ಸಂಯೋಜಿತ ಕಾಲೇಜುಗಳಲ್ಲಿ ಕೆಲವು ಸೀಟುಗಳು ಖಾಲಿ ಉಳಿದಿದ್ದು, ಈ ಸೀಟುಗಳಿಗೆ ಮೆರಿಟ್ ಕಮ್ ಪೇಮೆಂಟ್ ಕೋಟಾದಡಿ ಮತ್ತು ಸಂಯೋಜಿತ ಕಾಲೇಜುಗಳಲ್ಲಿ ಉಳಿದಿರುವ ಸೀಟುಗಳಿಗೆ ಮೆರಿಟ್ ಆಧಾರದ ಮೇಲೆ ಪ್ರವೇಶಾತಿ ನೀಡಲು ಅವಕಾಶ ಕಲ್ಪಿಸಲಾಗಿದೆ.
ಆಸಕ್ತ ಅರ್ಹ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ವೆಬ್‌ಸೈಟ್ ಮೂಲಕ ಅರ್ಜಿಗಳನ್ನು ಡೌನ್‌ಲೋಡ್ ಮಾಡಿಕೊಂಡು ಖುದ್ದಾಗಿ ಅಥವಾ ಅಂಚೆಯ ಮೂಲಕ ಜುಲೈ 29ರ ಸಂಜೆ 5 ಗಂಟೆಯ ಒಳಗೆ ವಿಶ್ವವಿದ್ಯಾಲಯದ ಶೈಕ್ಷಣಿಕ ವಿಭಾಗದ ಕುಲಸಚಿವರಿಗೆ ಸಲ್ಲಿಸಬಹುದು.
ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸಿದ ಎಲ್ಲ ವಿದ್ಯಾರ್ಥಿಗಳು ಜುಲೈ 30ರಂದು ಬೆಳಗ್ಗೆ 10 ಗಂಟೆಗೆ ಎಲ್ಲ ಮೂಲ ದಾಖಲೆಗಳು ಮತ್ತು ಶುಲ್ಕದ ಮೊಬಲಗಿನೊಂದಿಗೆ ಸಂಬಂಧಪಟ್ಟವಿಭಾಗಗಳಿಗೆ ಖುದ್ದಾಗಿ ಭೇಟಿ ನೀಡಬಹುದು ಎಂದು ಕುಲಸಚಿವ ಪೊ. ಎಚ್ ಎಸ್ ಭೋಜ್ಯಾ ನಾಯಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವಿಭಾಗಾವಾರು ಖಾಲಿ ಉಳಿದಿರುವ ಸೀಟುಗಳ ಮಾಹಿತಿಯನ್ನು ವಿಶ್ವವಿದ್ಯಾಲಯದ ವೆಬ್‌ಸೈಟ್ www.kuvempu.ac.in ನಿಂದ ಪಡೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ.