ದಾವಣಗೆರೆಯ ಹೊನ್ನಾಳಿ ತಾಲೂಕಿನ ಎಸ್.ಮಲ್ಲಾಪುರ, ಎಚ್.ಗೋಪಗೊಂಡನಹಳ್ಳಿ ಹಾಗೂ ಬಲಮುರಿ ಗ್ರಾಮದ ನೂರಾರು ವಿದ್ಯಾರ್ಥಿಗಳು ಸರ್ಕಾರಿ ಬಸ್ ಡಿಪೋ ಹಾಗೂ ಹಿರೇಕೆರೂರು ಡಿಪೋದ ಬಸ್‌ಗಳನ್ನು ತಡೆದು 5 ಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿದರು.
ದಾವಣಗೆರೆ(ಜು.24): ಹೊನ್ನಾಳಿ ತಾಲೂಕಿನ ಎಸ್.ಮಲ್ಲಾಪುರ, ಎಚ್.ಗೋಪಗೊಂಡನಹಳ್ಳಿ ಹಾಗೂ ಬಲಮುರಿ ಗ್ರಾಮದ ನೂರಾರು ವಿದ್ಯಾರ್ಥಿಗಳು ಮಂಗಳವಾರ ಹೊನ್ನಾಳಿ ಸರ್ಕಾರಿ ಬಸ್‌ಡಿಪೋ ಹಾಗೂ ಹಿರೇಕೆರೂರು ಡಿಪೋದ ಬಸ್‌ಗಳನ್ನು ತಡೆದು 5 ಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿದರು.
ಈ ಗ್ರಾಮಗಳಿಂದ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಪದವಿ ಶಿಕ್ಷಣದವರೆಗೂ ಹೊನ್ನಾಳಿಗೆ ಪ್ರತಿನಿತ್ಯ ಬಂದು ಹೋಗುವ ಅನಿವಾರ್ಯತೆ ಇದೆ. ಆದರೆ, ಶಾಲಾ- ಕಾಲೇಜುಗಳಿಗೆ ಸಮಯಕ್ಕೆ ಸರಿಯಾಗಿ ಬಂದು ಹೋಗಲು ಬಸ್ ಸೌಲಭ್ಯ ಇರುವುದಿಲ್ಲ. ಹಿರೇಕೇರೂರು ಡಿಪೋದಿಂದ ಬರುವ ಬಸ್ ಈ ಗ್ರಾಮಗಳಿಗೆ ಬರುವ ಹೊತ್ತಿಗೆ ಪ್ರಯಾಣಿಕರಿಂದ ತುಂಬಿ ತುಳುಕುತ್ತಿರುತ್ತವೆ ಎಂದು ಆರೋಪಿಸಿದರು.
ಇದರಿಂದ ವಿದ್ಯಾರ್ಥಿಗಳು ಬಸ್ ವಂಚಿತರಾಗುತ್ತಿದ್ದಾರೆ. ಹೀಗಾಗಿ, ಪ್ರತಿದಿನ ಶಾಲಾ ಕಾಲೇಜುಗಳಿಗೆ ಸಮಯಕ್ಕೆ ಸರಿಯಾಗಿ ಹೋಗಲಾಗುತ್ತಿಲ್ಲ, ಪಾಠ, ಪ್ರವಚನಗಳನ್ನು ಕೇಳಲಾಗುತ್ತಿಲ್ಲ ಎಂದು ವಿದ್ಯಾರ್ಥಿಗಳು ತಮ್ಮ ಅಳಲನ್ನು ತೋಡಿಕೊಂಡರು.
ಪಾಸ್ ಏನೋ ಇದೆ, ಆದ್ರೆ ದಾವಣಗೆರೆಯ ಈ ಗ್ರಾಮಕ್ಕೆ ಬಸ್ಸೇ ಇಲ್ಲ..!
ಮನವಿ ಸಲ್ಲಿಸಿದರೂ ಪರಿಹಾರವಿಲ್ಲ:
ಬಸ್ ಸೌಲಭ್ಯ ಕಲ್ಪಿಸಿಕೊಡುವಂತೆ ಕಳೆದ ವರ್ಷ ಶಾಸಕ ಎಂ.ಪಿ.ರೇಣುಕಾಚಾರ್ಯರಿಗೆ ಮನವಿ ಸಲ್ಲಿಸಲಾಗಿತ್ತು. ಹೊನ್ನಾಳಿ ಡಿಪೋ ಮ್ಯಾನೇಜರ್ ಅವರಿಗೂ ಕಳೆದ ವಾರ ಮನವಿ ಸಲ್ಲಿಸಲಾಗಿತ್ತು. ಆದರೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಅವರು ದೂರಿದರು. ಹೊನ್ನಾಳಿ ಸರ್ಕಾರಿ ಬಸ್ ಡಿಪೋದಿಂದ ಬೆಳಗ್ಗೆ 9 ಗಂಟೆಗೆ ಸರಿಯಾಗಿ ಎಸ್.ಮಲ್ಲಾಪುರ, ಎಚ್.ಗೋಪಗೊಂಡನಹಳ್ಳಿ ಹಾಗೂ ಬಲಮುರಿ ಮೂಲಕ ಹೊನ್ನಾಳಿಗೆ ಬಸ್ ಬಿಡಬೇಕು ಎಂದು ಆಗ್ರಹಿಸಿ ಇದೇ ವೇಳೆ ತಮ್ಮ ಬೇಡಿಕೆ ಸಲ್ಲಿಸಿದರು.
ಪೊಲೀಸರಿಂದ ಬೆದರಿಕೆ:
ಪೊಲೀಸರು ವಿದ್ಯಾರ್ಥಿಗಳಿಗೆ ರಕ್ಷಣೆ ಕೊಡುವುದನ್ನು ಬಿಟ್ಟು ನಮ್ಮನ್ನೇ ಬೆದರಿಸುತ್ತಾರೆ, ಏಕವಚನದಲ್ಲಿ ನಿಂದಿಸುತ್ತಾರೆ ಎಂದು ವಿದ್ಯಾರ್ಥಿಗಳಾದ ಯಶೋಧ, ಲಕ್ಷ್ಮೀ, ಶಶಿರೇಖಾ, ಉದಯಕುಮಾರ್, ಭರತ, ಸೌಜನ್ಯ, ರಂಜಿತಾ ಸೇರಿದಂತೆ ನೂರಾರು ವಿದ್ಯಾರ್ಥಿಗಳು ದೂರಿದರು.
ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಗ್ರಾ.ಪಂ. ಉಪಾಧ್ಯಕ್ಷ ಲೋಕಪ್ಪ ಹಾಗೂ ಗ್ರಾಮದ ನಾಗರಾಜಚಾರಿ ಮಾತನಾಡಿ, ಡಿಪೋ ಮ್ಯಾನೇಜರ್ ಮಹೇಶಪ್ಪ ಅವರು ವಿದ್ಯಾರ್ಥಿಗಳ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಈ ಸಮಸ್ಯೆ ಪರಿಹಾರಕ್ಕೆ ಸೂಕ್ತ ಕ್ರಮಕೈಗೊಳ್ಳದೇ ಇದ್ದಲ್ಲಿ ಈ ಗ್ರಾಮಗಳಿಂದ ಬಂದು ಹೋಗುವ ಯಾವುದೇ ಬಸ್‌ಗಳನ್ನು ಮುಂದಕ್ಕೆ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.