ಮಾಧ್ಯಮಗಳು ಸಾಮಾಜಿಕ ಜವಾಬ್ದಾರಿ ಮರೆಯಬಾರದು: ಸಚಿವ ಗೋವಿಂದ ಕಾರಜೋಳ

By Kannadaprabha NewsFirst Published Feb 5, 2023, 9:30 PM IST
Highlights

ಸ್ವಾತಂತ್ರ್ಯ ಚಳವಳಿಗೆ ಪೋತ್ಸಾಹ, ಪ್ರೇರಣೆ ನೀಡಿದ್ದು ಪತ್ರಿಕೋದ್ಯಮ ಇಂದು ಸಾಮಾಜಿಕ ಕಳಕಳಿ ಕಾಯ್ದುಕೊಂಡಿಲ್ಲ. ಲಾಭದಾಯಕ ದಂಧೆಯಾಗಿ ಪರಿವರ್ತನೆಯಾಗುತ್ತಿದೆ. ಸಾಮಾಜಿಕ ಜವಾಬ್ದಾರಿ ಇರುವ ಮಾಧ್ಯಮಗಳು ಮರೆಯಾಗುತ್ತಿವೆ ಎಂದು ವಿಷಾದಿಸಿದ ಸಚಿವ ಗೋವಿಂದ ಕಾರಜೋಳ 

ವಿಜಯಪುರ(ಫೆ.05): ಸ್ವಾತಂತ್ರ್ಯ ಪೂರ್ವದಲ್ಲಿ ಮಾಧ್ಯಮದ ಆಶಯ, ವಿಚಾರಗಳ ಬೆಳಕಿನಲ್ಲಿ ನೀತಿ ಸಂಹಿತೆಯನ್ನು ರೂಪಿಸಿಕೊಂಡು ಮುನ್ನಡೆಯವ ಆತ್ಮಾವಲೋಕನದ ಸಕಾಲ ಈಗ ಬಂದಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಆಶಯ ವ್ಯಕ್ತಪಡಿಸಿದರು.

ವಿಜಯಪುರದ ಕಂದಗಲ್‌ ಶ್ರೀಹನುಮಂತರಾಯ ರಂಗಮಂದಿರದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ 37ನೇ ರಾಜ್ಯಮಟ್ಟದ ಸಮ್ಮೇಳನದಲ್ಲಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಸ್ವಾತಂತ್ರ್ಯ ಚಳವಳಿಗೆ ಪೋತ್ಸಾಹ, ಪ್ರೇರಣೆ ನೀಡಿದ್ದು ಪತ್ರಿಕೋದ್ಯಮ ಇಂದು ಸಾಮಾಜಿಕ ಕಳಕಳಿ ಕಾಯ್ದುಕೊಂಡಿಲ್ಲ. ಲಾಭದಾಯಕ ದಂಧೆಯಾಗಿ ಪರಿವರ್ತನೆಯಾಗುತ್ತಿದೆ. ಸಾಮಾಜಿಕ ಜವಾಬ್ದಾರಿ ಇರುವ ಮಾಧ್ಯಮಗಳು ಮರೆಯಾಗುತ್ತಿವೆ ಎಂದು ವಿಷಾದಿಸಿದರು.

ಗ್ರಾಮೀಣ ಪತ್ರಕರ್ತರಿಗೂ ಉಚಿತ ಬಸ್‌ ಪಾಸ್‌: ಸಿಎಂ ಬೊಮ್ಮಾಯಿ

ದೇಶದ ಸ್ವಾತಂತ್ರ್ಯದ ನೇತೃತ್ವ ವಹಿಸಿದ್ದ ಮಹಾತ್ಮಾ ಗಾಂಧೀಜಿ, ಸಂವಿಧಾನ ನೀಡಿದ ಡಾ.ಬಿ.ಆರ್‌. ಅಂಬೇಡ್ಕರ್‌ ಅವರು ಸಹ ಪತ್ರಕರ್ತರಾಗಿದ್ದರು, ಮಹಾತ್ಮಾ ಗಾಂಧೀಜಿ ಅವರು ಬ್ರಿಟಿಷರ ದುರಾಡಳಿತವನ್ನು ಜನರಿಗೆ ತಿಳಿಸುವ ದೃಷ್ಟಿಯಿಂದ ಮಹಾತ್ಮಾ ಗಾಂಧೀಜಿ ಪತ್ರಿಕೆಯನ್ನೇ ಅಸ್ತ್ರವಾಗಿ ಬಳಸಿದರು. ನಂತರ ಪ್ರಾದೇಶಿಕ ಭಾಷೆಯಲ್ಲ ಪತ್ರಿಕೆ ಆರಂಭಿಸಲು ಪೋ›ತ್ಸಾಹ ನೀಡಿದರು. ಹರಿಜನ ಪತ್ರಿಕೆಯಲ್ಲಿ ಮಹಾತ್ಮಾ ಗಾಂಧೀಜಿ ಅವರು ಬರೆದ ಸಂಪಾದಕೀಯ ಉಲ್ಲೇಖಿಸಿದ ಕಾರಜೋಳರು, ಕಾಂಗ್ರೆಸ್‌ ರಾಜಕೀಯ ಸಂಸ್ಥೆ ಅಲ್ಲ. ಸ್ವಾತಂತ್ರ್ಯಕ್ಕಾಗಿ ಅಸ್ತಿತ್ವಕ್ಕೆ ಬಂದ ಸಂಸ್ಥೆ, ಇದನ್ನು ವಿಸರ್ಜನೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದರು. ಕಾಂಗ್ರೆಸ್‌ ಮುಂದೊಂದು ದಿನ ಸೇರ್ಪಡೆಯಾಗಿ ಹೆಸರು ಕೆಡಿಸಬಾರದು ಎಂಬ ಉದ್ದೇಶದಿಂದ ಗಾಂಧೀಜಿ ಈ ಆಶಯವನ್ನು ಸಂಪಾದಕೀಯದಲ್ಲಿ ವಿವರಿಸಿದ್ದರು ಎಂದು ಕಾರಜೋಳ ಉಲ್ಲೇಖಿಸಿದರು.

ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ದಾನ, ಧರ್ಮ, ಮಾನವೀಯ ಮೌಲ್ಯಗಳ ಆಗರ ವಿಜಯಪುರ, ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು, ಬಂಥನಾಳ ಶಿವಯೋಗಿಗಳು ಜನಿಸಿದ ಪಾವನ ನೆಲ. ವಿಜಯಪುರ ಜನತೆ ಹೃದಯ ವೈಶಾಲ್ಯತೆ ಯಾವ ರೀತಿ ಎಂದರೆ ಮಿನಿಸ್ಟರ್‌ ಅಷ್ಟೇ ಅಲ್ಲ ಡ್ರೈವರ್‌ ಸಾಹೇಬರು, ಗನ್‌ಮ್ಯಾನ್‌ ಸಾಹೇಬರು ಊಟ ಮಾಡಿದ್ದಾರೆಯೇ? ಎಂದು ಕೇಳುವ ಔದಾರ್ಯತೆ, ಸೌಜನ್ಯತೆ ಇದೆ ಎಂದರು.
ಆಶಯ ನುಡಿಗಳನ್ನಾಡಿದ ಕಾನಿಪ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಮಾತನಾಡಿ, ಸಾಮಾಜಿಕ ಜಾಲತಾಣ, ಯ್ಯೂಟ್ಯೂಬ್‌ ವಿವಿಧ ಮಾಧ್ಯಮಗಳ ಹಾವಳಿಯಿಂದಾಗಿ 24 ಗಂಟೆಗಳಲ್ಲಿಯೇ ಪತ್ರಕರ್ತರಾಗಿ ರೂಪುಗೊಳ್ಳುವ ಇಂದಿನ ಕಾಲಘಟ್ಟದಲ್ಲಿ ನೈಜ ಪತ್ರಕರ್ತರು ಅಸ್ತಿತ್ವ ಕಳೆದುಕೊಳ್ಳುವ ಭೀತಿ ಎದುರಿಸುವಂತಾಗಿದೆ. ಬದಲಾವಣೆ ಈಗ ಅನಿವಾರ್ಯ, ಇಂದಿನ ಆವಿಷ್ಕಾರಗಳಿಗನುಗುಣವಾಗಿ ಬದಲಾವಣೆಯಾಗದೇ ಹೋದರೆ ನೈಜ ಪತ್ರಕರ್ತರು ಕಳೆದು ಹೋಗಬೇಕಾಗುತ್ತದೆ ಎಂದರು.

ಈ ಸಂಘಟನೆ ಇರುವುದು ಕಾರ್ಯನಿರತರಿಗೆ ಹೊರತು ಕಾರ್ಯಮರೆತವರಿಗೆ ಅಲ್ಲ, ಯಾವುದೋ ಒಂದು ದಿನ ಪತ್ರಿಕೆ ಹೊರತಂದು ಪತ್ರಕರ್ತರು ಎಂದು ಹೇಳಿಕೊಳ್ಳುವ ಐಡಿಟೆಂಟಿ ಕಾರ್ಡ್‌ ಪತ್ರಕರ್ತರ ಸಂಖ್ಯೆ ಹೆಚ್ಚುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಪತ್ರಕರ್ತರ ಪರವಾದ ವಿವಿಧ ಬೇಡಿಕೆಗಳುಳ್ಳ ಹಕ್ಕೊತ್ತಾಯದ ನಿರ್ಣಯವನ್ನು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳಿಗೆ ಅರ್ಪಿಸಿದರು.

ಸಾಹಿತ್ಯ ಅಧ್ಯಯನ ಭಾಗವಾಗಲಿ

ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಜಾವಾಣಿ ಸಂಪಾದಕ ರವೀಂದ್ರ ಭಟ್‌, ಇತ್ತೀಚಿನ ದಿನಗಳಲ್ಲಿ ಮಾಧ್ಯಮ ಲೋಕ ಕಳೆದುಕೊಂಡಿರುವ ವಿಶ್ವಾಸಾರ್ಹತೆಯನ್ನು ಪುನಃ ಗಳಿಸಿಕೊಳ್ಳುವ ನಿಟ್ಟಿನಲ್ಲಿ ಈ ಸಮ್ಮೇಳನದಲ್ಲಿ ಚಿಂತನ-ಮಂಥನ ನಡೆಯಬೇಕು. ಓದುಗರು, ನೋಡುಗರು, ಕೇಳುಗರಿಗೆ ವಿಶ್ವಾಸ ಬರುವ ನಿಟ್ಟಿನಲ್ಲಿ ನೀತಿ ಸಂಹಿತೆ ರೂಪುಗೊಂಡರೆ ಸಮ್ಮೇಳನಕ್ಕೆ ಅರ್ಥ ಬರುತ್ತದೆ. ರಾಜ್ಯದ ಎಲ್ಲ ಪತ್ರಿಕೋದ್ಯಮ ವಿಭಾಗದಲ್ಲಿ ಸಾಹಿತ್ಯ ಒಂದು ವಿಷಯವಾಗಿ ಅಧ್ಯಯನ ಮಾಡೇಕು ಆಗ ಮಾತ್ರ ಭಾವಿ ಪತ್ರಕರ್ತರಿಗೆ ಸುದ್ದಿ ಯಾವುದು ಎಂಬುದು ಅರ್ಥವಾಗುತ್ತದೆ, ಇತ್ತೀಚಿಗೆ ಸ್ಮಾರ್ಚ್‌ಫೋನ್‌ ಇದ್ದವರು ಪತ್ರಕರ್ತರೇ ಆಗಿದ್ದಾರೆ. ನಕಲಿ ಪತ್ರಕರ್ತರ ಹಾವಳಿಯ ನಡುವೆ ನೈಜ ಪತ್ರಕರ್ತರನ್ನು ಗುರುತಿಸಲು ಕಾರ್ಯಸಮೀಕ್ಷೆ ನಡೆಯಬೇಕಿದೆ ಎಂದು ಸಲಹೆ ನೀಡಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೆಯುಡಬ್ಲ್ಯುಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಬರೆದಿರುವ ಕೋವಿಡ್‌ ಕಥೆಗಳು ಪರಿಷ್ಕೃತ ಪುಸ್ತಕ ಬಿಡುಗಡೆ ಮಾಡಿದರು.

ನವಮಾಧ್ಯಮಕ್ಕೆ ಗೇಟ್‌ಕೀಪರ್‌ ವ್ಯವಸ್ಥೆ ಅಗತ್ಯ: ಪತ್ರಕರ್ತರ ಸಮ್ಮೇಳನದಲ್ಲಿ ರವಿ ಹೆಗಡೆ ಸಲಹೆ

ವಿಜಯಪುರದ ಜ್ಞಾನಯೋಗಾಶ್ರಮದ ಶ್ರೀ ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬೃಹತ್‌ ಕೈಗಾರಿಕಾ ಸಚಿವ ಮುರುಗೇಶ ರುದ್ರಪ್ಪ ನಿರಾಣಿ ವ್ಯಂಗಚಿತ್ರ ಪ್ರದರ್ಶನದ ಉದ್ಘಾಟನೆಯನ್ನು ನೆರವೇರಿಸಿದರು.ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ, ಸಂಸದ ರಮೇಶ ಜಿಗಜಿಣಗಿ, ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ, ಸಿಇಒ ರಾಹಲ್‌ ಶಿಂಧೆ, ಪೊಲೀಸ್‌ ಅಧೀಕ್ಷಕ ಎಚ್‌.ಡಿ. ಆನಂದಕುಮಾರ್‌, ಶಾಸಕರಾದ ಎ.ಎಸ್‌ ಪಾಟೀಲ ನಡಹಳ್ಳಿ, ಸೋಮನಗೌಡ ಬಿ.ಪಾಟೀಲ, ರಮೇಶ ಭೂಸನೂರ, ಕರ್ನಾಟಕ ಸಾವಯುವ ಬೀಜ ಪ್ರಮಾಣ ಸಂಸ್ಥೆಯ ಅಧ್ಯಕ್ಷ ವಿಜುಗೌಡ ಪಾಟೀಲ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಉಪಸ್ಥಿತರಿದ್ದರು.

ವೀರೇಶ ವಾಲಿ ಮತ್ತು ಸಂಗಡಿಗರು ಪ್ರಾರ್ಥನೆ ಹಾಗೂ ನಾಡಗೀತೆ ಹಾಡಿದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಂಗಮೇಶ ಚೂರಿ ಸ್ವಾಗತಿಸಿದರು. ಕೆಯುಡಬ್ಲ್ಯುಜೆಯ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ ವಂದಿಸಿದರು. ಪೊ›.ಶರಣಗೌಡ ಪಾಟೀಲ ನಿರೂಪಿದರು.

click me!