ಮಂಗಳೂರು ಗೋಲಿಬಾರ್ ಬಗ್ಗೆ ಮೌಖಿಕವಾಗಿ ಸಾಕ್ಷಿ ಹೇಳಿಕೆ ನೀಡಲು ಬಂದಿದ್ದ 8 ಮಂದಿಗೆ ಫೆ. 13ರಂದು ಅಫಿದಾವಿತ್ ಸಮೇತ ಬಂದು ಸಾಕ್ಷಿ ಹೇಳಿಕೆ ನೀಡಲು ಅವಕಾಶ ನೀಡಲಾಗಿದೆ. ಇದೇ ವೇಳೆ ಪೊಲೀಸರು ತಮ್ಮ ಬಳಿ ಇರುವ ವೀಡಿಯೋ ಮತ್ತು ಸಿಸಿ ಕ್ಯಾಮರಾ ಸಾಕ್ಷಿಗಳನ್ನು ಅಂದು ಹಾಜರು ಪಡಿಸುವಂತೆ ಸೂಚಿಸಲಾಗಿದೆ.
ಮಂಗಳೂರು(ಫೆ.07): ಕಳೆದ ಡಿಸೆಂಬರ್ 19ರಂದು ಮಂಗಳೂರಿನಲ್ಲಿ ನಡೆದ ಅಹಿತಕರ ಘಟನೆ ಮತ್ತು ಪೊಲೀಸ್ ಗೋಲಿಬಾರ್ ಕುರಿತಂತೆ ಮ್ಯಾಜಿಸ್ಟೀರಿಯಲ್ ತನಿಖೆಯ ಭಾಗವಾಗಿ ಗುರುವಾರ ಮಂಗಳೂರು ಸಹಾಯಕ ಆಯುಕ್ತರ ಕೋರ್ಟ್ ಹಾಲ್‌ನಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ನಡೆಯಿತು.
ಸುಮಾರು 75 ಮಂದಿ ಪ್ರಮಾಣಪತ್ರ ಸಮೇತ ತಮ್ಮ ಅಹವಾಲುಗಳನ್ನು ಸಲ್ಲಿಸಿದರು. ಮ್ಯಾಜಿಸ್ಟೀರಿಯಲ್ ತನಿಖೆಗೆ ನೇಮಕಗೊಂಡಿರುವ ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಅವರು ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ ದಾಖಲಿಸಿಕೊಂಡರು. ಗೋಲಿಬಾರ್‌ನಿಂದ ಸಾವನ್ನಪ್ಪಿದ ಜಲೀಲ್‌ನ ಸಂಬಂಧಿಕರು, ಮಹಿಳೆಯರು ಕೂಡಾ ಸಾಕ್ಷಿ ಹೇಳಿಕೆಗಳನ್ನು ಮ್ಯಾಜಿಸ್ಪ್ರೇಟರಿಗೆ ಸಲ್ಲಿಸಿದರು.
ಮಂಗಳೂರು ಗೋಲಿಬಾರ್: ಸಾಕ್ಷಿ ಹೇಳೋಕೆ ಬಂದ್ರು ಅಪಾರ ಜನ
ಇದು ಮೆಜಿಸ್ಟೀರಿಯಲ್ ತನಿಖೆಯ ಭಾಗವಾಗಿ ನಡೆದ 5ನೇ ಬೈಠಕ್ ಆಗಿದೆ. ಈ ಬಾರಿ 75 ಮಂದಿಯ ಸಾಕ್ಷಿ ಸೇರಿದಂತೆ ಇದುವರೆಗೆ ಒಟ್ಟು 201 ಮಂದಿ ಸಾಕ್ಷಿ ಹೇಳಿಕೆಗಳನ್ನು ನೀಡಿದಂತಾಗಿದೆ ಎಂದು ಜಿಲ್ಲಾಧಿಕಾರಿ ಜಗದೀಶ್ ಅವರು ಬಳಿಕ ಸುದ್ದಿಗಾರರಿಗೆ ತಿಳಿಸಿದರು.
13ರಂದು ಪೊಲೀಸರ ವೀಡಿಯೋ ಸಾಕ್ಷ್ಯಗೆ ಸೂಚನೆ:
ಗುರುವಾರ ಅಂತಿಮ ಅಹವಾಲು ಸಲ್ಲಿಕೆ ಎಂದು ಈ ಹಿಂದೆ ತಿಳಿಸಿದ್ದರೂ, ಇದೀಗ ಹೈಕೋರ್ಟ್ ಸೂಚನೆಯಂತೆ ಫೆ. 13ರಂದು ಇನ್ನೊಂದು ಬೈಠಕ್ ನಡೆಸಲಾಗುವುದು. ಗುರುವಾರ ಮೌಖಿಕವಾಗಿ ಸಾಕ್ಷಿ ಹೇಳಿಕೆ ನೀಡಲು ಬಂದಿದ್ದ 8 ಮಂದಿಗೆ ಫೆ. 13ರಂದು ಅಫಿದಾವಿತ್ ಸಮೇತ ಬಂದು ಸಾಕ್ಷಿ ಹೇಳಿಕೆ ನೀಡಲು ಅವಕಾಶ ನೀಡಲಾಗಿದೆ. ಇದೇ ವೇಳೆ ಪೊಲೀಸರು ತಮ್ಮ ಬಳಿ ಇರುವ ವೀಡಿಯೋ ಮತ್ತು ಸಿಸಿ ಕ್ಯಾಮರಾ ಸಾಕ್ಷಿಗಳನ್ನು ಅಂದು ಹಾಜರು ಪಡಿಸುವಂತೆ ಸೂಚಿಸಲಾಗಿದೆ. ಮಾಧ್ಯಮದವರು ಮತ್ತು ಇತರ ಸಾರ್ವಜನಿಕರು ಕೂಡಾ ವೀಡಿಯೋ ಸಾಕ್ಷ್ಯಗಳಿದ್ದರೆ ಅವುಗಳನ್ನು ಸಲ್ಲಿಸಬಹುದಾಗಿದೆ ಎಂದು ಜಗದೀಶ್ ವಿವರಿಸಿದರು. ಮಂಗಳೂರು ದಕ್ಷಿಣ ಉಪ ವಿಭಾಗದ ಎಸಿಪಿ ಬೆಳ್ಳಿಯಪ್ಪ ಇದ್ದರು.