ಲಾಭದಲ್ಲಿದ್ದರೂ ಮಸ್ಕಾಂನಿಂದ ವಿದ್ಯುತ್‌ ದರ ಏರಿಕೆ!

By Kannadaprabha NewsFirst Published Feb 7, 2020, 7:31 AM IST
Highlights

ಮಂಗಳೂರು ವಿದ್ಯುತ್‌ ಸರಬರಾಜು ಕಂಪನಿ ನಿಯಮಿತ (ಮೆಸ್ಕಾಂ) ನಿರಂತರವಾಗಿ ಲಾಭದಲ್ಲಿದ್ದರೂ, ಈ ವರ್ಷವೂ ವಿದ್ಯುತ್‌ ದರ ಏರಿಸಿ, ಗ್ರಾಹಕರ ಮೇಲೆ ಅನಗತ್ಯ ಹೊರೆ ಹೊರಿಸುವುದಕ್ಕೆ ಸಿದ್ಧತೆಗಳನ್ನು ನಡೆಸಿದೆ.

ಉಡುಪಿ(ಫೆ.07): ಮಂಗಳೂರು ವಿದ್ಯುತ್‌ ಸರಬರಾಜು ಕಂಪನಿ ನಿಯಮಿತ (ಮೆಸ್ಕಾಂ) ನಿರಂತರವಾಗಿ ಲಾಭದಲ್ಲಿದ್ದರೂ, ಈ ವರ್ಷವೂ ವಿದ್ಯುತ್‌ ದರ ಏರಿಸಿ, ಗ್ರಾಹಕರ ಮೇಲೆ ಅನಗತ್ಯ ಹೊರೆ ಹೊರಿಸುವುದಕ್ಕೆ ಸಿದ್ಧತೆಗಳನ್ನು ನಡೆಸಿದೆ.

ಪ್ರತಿವರ್ಷವೂ ಮೆಸ್ಕಾಂ ವಿದ್ಯುತ್‌ ದರವನ್ನು ಏರಿಸುತ್ತಿದ್ದು, ಈ ವರ್ಷ ಸರಾಸರಿ ಯುನಿಟ್‌ಗೆ 62 ಪೈಸೆ ಏರಿಕೆಗೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆ.ಇ.ಆರ್‌.ಸಿ.)ಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದೆ. ಕಳೆದ 7 ವರ್ಷಗಳಿಂದ ಮೆಸ್ಕಾಂ ನಿರಂತರವಾಗಿ ಲಾಭದಲ್ಲಿದೆ.

ಮಂಗಳೂರು ಗೋಲಿಬಾರ್: ಸಾಕ್ಷಿ ಹೇಳೋಕೆ ಬಂದ್ರು ಅಪಾರ ಜನ

2013ರಲ್ಲಿ 12.60 ಕೋಟಿ ರು., 2014ರಲ್ಲಿ 20.17 ಕೋಟಿ ರು., 2015ರಲ್ಲಿ 13.92 ಕೋಟಿ ರು., 2016ರಲ್ಲಿ 11.12 ಕೋಟಿ ರು., 2017ರಲ್ಲಿ 12.94 ಕೋಟಿ ರು., 2018ರಲ್ಲಿ 31.42 ಕೋಟಿ ರು. ಹಾಗೂ 2019ರಲ್ಲಿ 56.39 ಕೋಟಿ ರು. ಲಾಭ ಗಳಿಸಿದೆ ಎಂದು ಮೆಸ್ಕಾಂ ತನ್ನ ಲೆಕ್ಕಪರಿಶೋಧನಾ ವರದಿಯಲ್ಲಿಯೇ ತಿಳಿಸಿದೆ. ಅಲ್ಲದೇ ಮೆಸ್ಕಾಂ ರಾಜ್ಯದ 5 ವಿದ್ಯುತ್‌ ಸರಬರಾಜು ಕಂಪನಿಗಳ ಪೈಕಿ ಅತಿ ಕಡಿಮೆ ಹಂಚಿಕೆ ನಷ್ಟ(ಡಿಸ್ಟ್ರಿಬ್ಯೂಷನ್‌ ಲಾಸ್‌) ವನ್ನು ಹೊಂದಿದೆ. ಆದರೂ ಪುನಃ ದರ ಏರಿಕೆಯ ಪ್ರಸ್ತಾವನೆಯನ್ನು ಸಲ್ಲಿಸಿದೆ. ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಭಾರತೀಯ ಕಿಸಾನ್‌ ಸಂಘದ ಸುಮಾರು 50 ಮಂದಿ ಪ್ರಮುಖ ಪದಾಧಿಕಾರಿಗಳು ವಿದ್ಯುತ್‌ ದರ ಏರಿಕೆಗೆ ತಮ್ಮ ಆಕ್ಷೇಪಗಳನ್ನು ಸಲ್ಲಿಸಿದ್ದಾರೆ.

ಫೆ.13ರಂದು ಮಂಗಳೂರಿನಲ್ಲಿ ಈ ಆಕ್ಷೇಪಗಳ ಸಾರ್ವಜನಿಕ ವಿಚಾರಣೆ ನಡೆಯಲಿದ್ದು, ಈ ಸಂದರ್ಭದಲ್ಲಿ ಸಂಘದ ಪರವಾಗಿ ಮೆಸ್ಕಾಂನ ದರ ಏರಿಕೆ ಪ್ರಸ್ತಾವನೆಯನ್ನು ತಿರಸ್ಕರಿಸುವಂತೆ ಆಯೋಗದ ಮುಂದೆ ಬಲವಾಗಿ ವಾದ ಮಂಡಿಸಲು ತೀರ್ಮಾನಿಸಿದೆ.

ಹೃದಯ ಚಿಕಿತ್ಸೆ, 40 ದಿನದ ಹಸುಗೂಸಿಗೆ ಮಂಗಳೂರಿಂದ- ಬೆಂಗಳೂರಿಗೆ ಝೀರೋ ಟ್ರಾಫಿಕ್

ಮೆಸ್ಕಾಂಗೆ ಸರ್ಕಾರದ ಸಬ್ಸಿಡಿ ಹಾಗೂ ರಾಜ್ಯದ ಇತರ ವಿದ್ಯುತ್‌ ಕಂಪನಿಗಳಿಂದ 1000 ಕೋಟಿ ರು.ಗಳಿಗೂ ಅಧಿಕ ಹಣ ಪಾವತಿಗೆ ಬಾಕಿಯಿದೆ. ರಾಜ್ಯದ ಇತರ ಕಂಪನಿಗಳಿಗಿಂತ ಮೆಸ್ಕಾಂ ಹೆಚ್ಚು ದುಬಾರಿ ದರದಲ್ಲಿ ವಿದ್ಯುತ್ತನ್ನು ತನ್ನ ಗ್ರಾಹಕರಿಗೆ ಪೂರೈಕೆ ಮಾಡುತ್ತಿದೆ. ಇದರಿಂದ ಮೆಸ್ಕಾಂ ಸಾಕಷ್ಟುಲಾಭದಲ್ಲಿದ್ದರೂ, ರಾಜ್ಯದ ಇತರ ವಿದ್ಯುತ್‌ ಕಂಪನಿಗಳ ನಷ್ಟವನ್ನು ತೋರಿಸಿ, ಮತ್ತೆ ವಿದ್ಯುತ್‌ ದರ ಏರಿಕೆಗೆ ಕೆ.ಇ.ಆರ್‌.ಸಿ. ಮುಂದೆ ಪ್ರಸ್ತಾಪ ಸಲ್ಲಿಸಿದೆ.

ಮೆಸ್ಕಾಂ ವಿರುದ್ಧ ಕಳೆದ ಅನೇಕ ವರ್ಷಗಳಿಂದ ಹೋರಾಟ ನಡೆಸುತ್ತಿರುವ ಭಾ.ಕಿ.ಸಂ. ಈ ಬಾರಿ ಮತ್ತೆ ಮೆಸ್ಕಾಂ ವಿರುದ್ಧ ಕೆ.ಇ.ಆರ್‌.ಸಿ. ಮುಂದೆ ತನ್ನ ವಾದವನ್ನು ಮಂಡಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕೆ.ಇ.ಆರ್‌.ಸಿ. ಮೆಸ್ಕಾಂಗೆ 62 ಪೈಸೆ ಏರಿಕೆಗೆ ಅವಕಾಶ ನೀಡುವುದಿಲ್ಲ ಎನ್ನುವುದು ಗ್ರಾಹಕರ ಭರವಸೆಯಾಗಿದೆ.

ದರ ಇಳಿಸಲು ಪ್ರಸ್ತಾಪ ಸಲ್ಲಿಸಬೇಕಾಗಿತ್ತು

ಶೇ.50ಕ್ಕೂ ಹೆಚ್ಚು ಸಿಬ್ಬಂದಿ ಹುದ್ದೆಗಳನ್ನು ಖಾಲಿ ಇಟ್ಟಿರುವ ಮೆಸ್ಕಾಂ ಗುಣಮಟ್ಟದಲ್ಲಿ ಹಾಗೂ ಗ್ರಾಹಕರ ಸೇವೆಯಲ್ಲಿ ಸುಧಾರಣೆ ಮಾಡದೆ ಪ್ರತಿವರ್ಷ ದರ ಏರಿಕೆಗೆ ಆಯೋಗದ ಮುಂದೆ ಪ್ರಸ್ತಾಪ ಸಲ್ಲಿಸಿ ಗ್ರಾಹಕರ ಹಿತಾಸಕ್ತಿಗೆ ಧಕ್ಕೆ ತರುತ್ತಿದೆ. ಸಾಕಷ್ಟುಲಾಭದಲ್ಲಿರುವ ಮೆಸ್ಕಾಂ ಈ ಬಾರಿ ದರ ಇಳಿಕೆಗೆ ಪ್ರಸ್ತಾವನೆ ಸಲ್ಲಿಸಬೇಕಿತ್ತು, ಅದನ್ನು ಬಿಟ್ಟು ದರ ಏರಿಕೆಗೆ ಪ್ರಸ್ತಾಪ ಸಲ್ಲಿಸಿರುವುದನ್ನು ಆಯೋಗದ ಮುಂದೆ ಪ್ರಸ್ತಾವಿಸಿ ದರ ಇಳಿಕೆಗೆ ಆದೇಶ ನೀಡುವಂತೆ ಜಿಲ್ಲಾ ಭಾ.ಕಿ.ಸಂ. ಪ್ರಯತ್ನಿಸಲಿದೆ ಎಂದು ಭಾಕಿಸಂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ ಜಪ್ತಿ ತಿಳಿಸಿದ್ದಾರೆ.

click me!