ದಾವಣಗೆರೆಯಲ್ಲಿ ಮತ್ತೆ ಐವರು ಕೊರೋನಾದಿಂದ ಗುಣಮುಖರಾಗಿದ್ದು, ರೆಡ್ ಕಾರ್ಪೆಟ್ ಹಾಕಿ ಅವರನ್ನೆಲ್ಲ ಬೀಳ್ಕೊಡಲಾಯಿತು. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ದಾವಣಗೆರೆ(ಮೇ.22): ಕೊರೋನಾ ಸೋಂಕಿನಿಂದ ಗುಣಮುಖರಾದ ಐವರಿಗೆ ನಗರದ ಜಿಲ್ಲಾ ಕೋವಿಡ್-19 ಆಸ್ಪತ್ರೆ ಆವರಣದಲ್ಲಿ ರೆಡ್ ಕಾರ್ಪೆಟ್ ಹಾಕಿ, ಪುಷ್ಪವೃಷ್ಟಿಮೂಲಕ ಮೇಯರ್ ಬಿ.ಜಿ.ಅಜಯಕುಮಾರ, ಜಿಲ್ಲಾಧಿಕಾರಿ ಮಹಾಂತೇಶ ಜಿ. ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ವೈದ್ಯರು, ಆರೋಗ್ಯ ಸಿಬ್ಬಂದಿ ಚಪ್ಪಾಳೆ ತಟ್ಟುವ ಮೂಲಕ ಆಸ್ಪತ್ರೆಯಿಂದ ಬೀಳ್ಕೊಟ್ಟರು.
ಅನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಮಹಾಂತೇಶ ಜಿ. ಬೀಳಗಿ, ಜಿಲ್ಲೆಯಲ್ಲಿ ಇಂದು ಹೊಸದಾಗಿ 3 ಪಾಸಿಟಿವ್ ಕೇಸ್ ವರದಿಯಾಗಿವೆ. ಪಿ-1483, ಪಿ-1485, ಪಿ-1488 ಈ ಮೂವರೂ ಜಾಲಿ ನಗರ ಕಂಟೈನ್‌ಮೆಂಟ್‌ಗೆ ಸಂಬಂಧಿಸಿದವರು. ಪಿ-1485ಕ್ಕೆ ಪಿ-667ರ ದ್ವಿತೀಯ ಸಂಪರ್ಕದಿಂದ, ಪಿ-1488ಗೆ ಪಿ-634ರ ಸಂಪರ್ಕ, ಕಂಟೈನ್‌ಮೆಂಟ್ ಝೋನ್‌ನ ಎಪಿ ಸೆಂಟರ್‌ನ ಅಕ್ಕಪಕ್ಕದ ಮನೆಯಲ್ಲಿ ಕಂಡುಬಂದ ಪಿ-1483 ಎಂಬ ಬಾಲಕನಲ್ಲೂ ಸೋಂಕು ದೃಢಪಟ್ಟಿದೆ ಎಂದರು.
ಸೋಂಕಿನಿಂದ ಗುಣಮುಖರಾದ ಐವರಿಗೆ ಜಿಲ್ಲಾ ಕೋವಿಡ್-19 ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಪಿ-618, 620, 623, 628, 664 ಈ ಐವರೂ ಇಂದು ತಮ್ಮ ಮನೆಗೆ ಮರಳುತ್ತಿದ್ದಾರೆ. ಈ ಪೈಕಿ ಇಬ್ಬರು ಪುರುಷರು, ಓರ್ವ ವೃದ್ಧೆ ಸೇರಿದಂತೆ ಮೂವರು ಮಹಿಳೆಯರಿಗೆ ಇಂದು ಬೀಳ್ಕೊಡಲಾಯತು. ಬುಧವಾರ 7 ಜನ, ಇಂದು 5 ಜನ, ಹಿಂದಿನ 2 ಕೇಸ್ ಸೇರಿದಂತೆ ಒಟ್ಟು 14 ಜನ ಈವರೆಗೆ ಬಿಡುಗಡೆಯಾಗಿದ್ದಾರೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಸೋಂಕಿನಿಂದ ನಾಲ್ವರು ಸಾವನ್ನಪ್ಪಿದ್ದಾರೆ. ಒಟ್ಟು 115 ಕೇಸ್ ಪೈಕಿ ಸದ್ಯಕ್ಕೆ ಈಗ ಜಿಲ್ಲೆಯಲ್ಲಿ 97 ಸಕ್ರಿಯ ಕೇಸ್ ಇವೆ. ಸೋಂಕಿತರಿಗೆ ಪ್ರೊಟೋಕಾಲ್ ಪ್ರಕಾರ ಉತ್ತಮ ಚಿಕಿತ್ಸೆ ನೀಡಿ, ಆ ಎಲ್ಲರಲ್ಲೂ ರೋಗ ನಿರೋಧಕ ಶಕ್ತಿ ಹೆಚ್ಚಿಸಿ, ಆದಷ್ಟುಬೇಗನೆ ಗುಣಮುಖರಾಗಿಸುವ ಪ್ರಯತ್ನ ಮಾಡಲಾಗುತ್ತಿದೆ. 14 ದಿನಗಳ ಚಿಕಿತ್ಸೆ ಮುಗಿದವರದ್ದು ಮತ್ತೊಮ್ಮೆ ಸ್ಯಾಂಪಲ್ ಸಂಗ್ರಹಿಸಿ, ಕಳಿಸುವ ಕೆಲಸ ನಿರಂತರ ಸಾಗಿದೆ. ಉಳಿದವರೂ ಆದಷ್ಟುಬೇಗನೆ ಗುಣ ಹೊಂದುವರೆಂಬ ವಿಶ್ವಾಸವಿದೆ ಎಂದು ತಿಳಿಸಿದರು.
ಕೊರೋನಾದಿಂದ ಗುಣಮುಖರಾದ ಮೂವರಿಗೆ ಪುಷ್ಪವೃಷ್ಟಿ ಗೌರವ
ಒಟ್ಟು 1400 ಸ್ಯಾಂಪಲ್ ಫಲಿತಾಂಶದ ವರದಿ ಬರಬೇಕು. ಇಂದು 601 ಸ್ಯಾಂಪಲ್ ಸಂಗ್ರಹಿಸಿದ್ದು, ಶಿವಮೊಗ್ಗಕ್ಕೆ 200 ಸ್ಯಾಂಪಲ್ ಪರೀಕ್ಷೆಗೆ ಕಳಿಸಿದ್ದೇವೆ. ಕೆಲ ಸ್ಯಾಂಪಲ್‌ಗಳನ್ನು ಖಾಸಗಿಯವರಾದ ಆನಂದ್ ಡಯಾಗ್ನೋಸ್ಟಿಕ್ ಸೆಂಟರ್‌ಗೆ, ಉಳಿದ 60-70 ಸ್ಯಾಂಪಲ್‌ಗಳನ್ನು ಸ್ಥಳೀಯ ಲ್ಯಾಬ್‌ಗೆ ಕಳಿಸುವ ವ್ಯವಸ್ಥೆ ಮಾಡಿದೆ. ಮೇ 22ರಿಂದ ಇಲ್ಲಿನ ಬಾಪೂಜಿ ಸಂಸ್ಥೆಯ ಜೆಜೆಎಂ ಲ್ಯಾಬ್ ಆರಂಭಗೊಳ್ಳಲಿದೆ. ಹೊಸ ಲ್ಯಾಬ್‌ಗೂ ಸ್ಯಾಂಪಲ್ ಕಳಿಸಲಾಗುತ್ತದೆ ಎಂದು ವಿವರಿಸಿದರು.
ಮೇಯರ್ ಬಿ.ಜಿ.ಅಜಯಕುಮಾರ ಮಾತನಾಡಿ, ದಾವಣಗೆರೆಯಲ್ಲಿ 97 ಸಕ್ರಿಯ ಕೇಸ್‌ಗಳಿದ್ದು, ವೈದ್ಯರು ಹೇಳುವ ಪ್ರಕಾರ 50 ಜನರು 14 ದಿನದ ಚಿಕಿತ್ಸೆ ಮುಗಿಸಲಿದ್ದಾರೆ. ಇಂಥವರ 2ನೇ ಸುತ್ತಿನ ಸ್ಯಾಂಪಲ್ ಸಂಗ್ರಹಿಸಿ, ಪರೀಕ್ಷೆಗೆ ಕಳಿಸಿದೆ. ವರದಿ ಬಂದ ನಂತರ ಸರ್ಕಾರದ ನಿಯಮಾನುಸಾರ ಆಸ್ಪತ್ರೆಯಿಂದ ಗುಣಮುಖರಾದವರನ್ನು ಬಿಡುಗಡೆಗೊಳಿಸಲಿದ್ದಾರೆ. ದಿನದಿನಕ್ಕೂ ಕೇಸ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನರೂ ಎಚ್ಚೆತ್ತುಕೊಳ್ಳಬೇಕು ಎಂದು ತಿಳಿಸಿದರು.
‘ಹೊರ ರಾಜ್ಯದಿಂದ ಬಂದವರ ರೋಗಿಗಳಂತೆ ಕಾಣಬೇಡಿ’
ದಾವಣಗೆರೆ: ಹೊರ ರಾಜ್ಯಗಳಿಗೆ ದುಡಿಮೆಗೆ ಹೋದವರು ಮರಳುತ್ತಿದ್ದು, ಗ್ರಾಮೀಣ ಭಾಗದಲ್ಲಿ ಹೀಗೆ ಬಂದವರನ್ನು ರೋಗಿಗಳಂತೆ ಕಾಣುತ್ತಿರುವುದು ಸರಿಯಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಹೇಳಿದರು.
ಗ್ರಾಮೀಣ ಭಾಗದಲ್ಲಿ ಪರ ರಾಜ್ಯಗಳಿಂದ ಬಂದವರನ್ನು ರೋಗಿಗಳಂತೆ ಕಾಣುತ್ತಿರುವುದು ತಪ್ಪು. ಹೀಗೆ ಬಂದವರನ್ನು ನಾವು ಜಿಲ್ಲೆ ಹಾಗೂ ಸರ್ಕಾರಿ ಶಾಲೆಗಳಲ್ಲಿ ವೈದ್ಯಕೀಯ ಸೇವೆಯೊಂದಿಗೆ ಕ್ವಾರಂಟೈನ್ ಮಾಡುತ್ತಿದ್ದೇವೆ. ಅಂಥವರು ಹೊರಹೋಗದಂತೆ ಕ್ವಾರಂಟೈನ್ ಮಾಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.
ಲಾಕ್ ಡೌನ್ ಹಿನ್ನೆಲೆ ಕಂಟೈನ್‌ಮೆಂಟ್ ಝೋನ್ ನಿವಾಸಿಗಳು ಅನಗತ್ಯವಾಗಿ ಓಡಾಡದೇ ಸಹಕರಿಸಬೇಕು. ಕಾನೂನನ್ನು ಎಲ್ಲರೂ ಗೌರವಿಸಬೇಕು. ಅನ್ಯ ರಾಜ್ಯಗಳಿಂದ ನಮ್ಮ ಜಿಲ್ಲೆಯ ನಗರ, ಪಟ್ಟಣ, ಗ್ರಾಮೀಣ ಭಾಗಕ್ಕೆ ಬಂದವರನ್ನು ಕ್ವಾರಂಟೈನ್ ಮಾಡಲು ಅವಕಾಶ ನೀಡಬೇಕು ಎಂದು ತಿಳಿಸಿದರು.