ಈ ಕ್ಷೇತ್ರದ ಚುನಾವಣೆಯಲ್ಲಿ ಇದುವರೆಗೂ ಮಹಿಳೆಯರು ಸ್ಪರ್ಧೆ ಮಾಡುವ ಧೈರ್ಯ ತೋರಿಲ್ಲ
ವರದಿ : ಎಂ.ಅಫ್ರೋಜ್ ಖಾನ್
ರಾಮನಗರ (ಅ.20): ತೀವ್ರ ಕುತೂಹಲ ಕೆರಳಿಸುತ್ತಿರುವ ವಿಧಾನ ಪರಿಷತ್ನ ಬೆಂಗಳೂರು ಶಿಕ್ಷಕರ ಕ್ಷೇತ್ರ ಚುನಾವಣೆಯಲ್ಲಿ ಮಹಿಳಾ ಮತದಾರರು ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಒಂದರ್ಥದಲ್ಲಿ ಅಭ್ಯರ್ಥಿಗಳ ಜುಟ್ಟು ಮಹಿಳಾ ಮತದಾರರ ಕೈಯಲ್ಲಿದೆ.
undefined
ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರ ನೋಂದಣಿ ಪಟ್ಟಿಯಲ್ಲಿದ್ದಾರೆ. ಹೀಗಾಗಿ ಚುನಾವಣೆಯಲ್ಲಿ ಮಹಿಳಾ ಮತದಾರರನ್ನು ಓಲೈಸಿಕೊಂಡವರ ಗೆಲುವು ಸುಲಭವಾಗಲಿದೆ.
ಈ ಚುನಾವಣೆಯಲ್ಲಿ ಒಟ್ಟು 22,089 ಮತದಾರರಿದ್ದಾರೆ. ಈ ಪೈಕಿ 7,946 ಪುರುಷರಿದ್ದರೆ, 14,140 ಮಂದಿ ಮಹಿಳೆಯರು ಹಾಗೂ 3ಇತರೆ ಮತದಾರರು ಸೇರಿದ್ದಾರೆ. (ಇದಕ್ಕೂ ಮೊದಲು 17,610 ಮತದಾರರ ಪೈಕಿ 5,876 ಪುರುಷರು, 11,733 ಮಹಿಳೆಯರು, 01 ಇತರೆ ಮತದಾರರಿದ್ದರು.) ಪುರುಷರಿಗಿಂತ 6,194 ಮಹಿಳೆಯರು ಹೆಚ್ಚಿದ್ದು, ಅಭ್ಯರ್ಥಿಗಳ ಹಣೆಬರಹವನ್ನು ಮಹಿಳಾ ಮತದಾರರು ನಿರ್ಧರಿಸಲಿದ್ದಾರೆ.
ಉಪ ಚುನಾವಣೆ : ನಾಮಪತ್ರ ವಾಪಸ್ ಪಡೆದ ಮತ್ತೋರ್ವ ಅಭ್ಯರ್ಥಿ ಮುನಿರತ್ನ
ಶಿಕ್ಷಕ ಸಮುದಾಯದಲ್ಲಿ ಪುರುಷರಷ್ಟೇ ಮಹಿಳಾ ಮತದಾರರು ರಾಜಕೀಯ ಪ್ರಜ್ಞೆ ಹೊಂದಿದ್ದಾರೆ. ಚುನಾವಣೆಯಲ್ಲಿ ಮಹಿಳಾ ಮತದಾರರೇ ಮಹತ್ತರ ಪಾತ್ರ ವಹಿಸಲಿರುವ ಕಾರಣ ಅವರನ್ನು ಸೆಳೆಯಲು ಅಭ್ಯರ್ಥಿಗಳು ನಾನಾ ಕಸರತ್ತುಗಳಲ್ಲಿ ತೊಡಗಿದ್ದಾರೆ. ಬಿಜೆಪಿ ಅಭ್ಯರ್ಥಿ ಪುಟ್ಟಣ್ಣ, ಕಾಂಗ್ರೆಸ್ನ ಪ್ರವೀಣ್ ಕುಮಾರ್, ಜೆಡಿಎಸ್ ಅಭ್ಯರ್ಥಿ ಎ.ಪಿ.ರಂಗನಾಥ್ ಹಾಗೂ ಪಕ್ಷೇತರ ಅಭ್ಯರ್ಥಿಗಳ ಪೈಕಿ ಕೆಲವರು ತಮ್ಮ ಕುಟುಂಬದ ಮಹಿಳಾ ಸದಸ್ಯರ ಮೂಲಕ ಮಹಿಳಾ ಮತದಾರರ ಮತ ಸೆಳೆಯುವ ಪ್ರಯತ್ನ ನಡೆಸುತ್ತಿದ್ದರೆ, ಉಳಿದವರು ಪಕ್ಷದ ಮಹಿಳಾ ನಾಯಕರ ಮೂಲಕ ಮನ ಗೆಲ್ಲುವ ಕಸರತ್ತು ಮುಂದುವರೆಸಿದ್ದಾರೆ.
ಸಂಪರ್ಕಕ್ಕೆ ಸಿಗದ ಶಿಕ್ಷಕರು: ಕೋವಿಡ್ -19 ಕಾರಣದಿಂದಾಗಿ ವಿದ್ಯಾಗಮ ಯೋಜನೆ ಸ್ಥಗಿತದ ಜೊತೆಗೆ ದಸರಾ ರಜೆ ಕಾರಣ ಶಿಕ್ಷಕರು ಊರು ಸೇರಿದ್ದಾರೆ. ಅವರನ್ನು ವೈಯಕ್ತಿಕವಾಗಿ ಸಂಪರ್ಕಿಸಿ ಮತಯಾಚಿಸಲು ಸಹ ಅಭ್ಯರ್ಥಿಗಳಿಂದ ಸಾಧ್ಯವಾಗುತ್ತಿಲ್ಲ.
ಬೆಂಗಳೂರು ಶಿಕ್ಷಕರ ಕ್ಷೇತ್ರ 36 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯನ್ನು ಹೊಂದಿದೆ. ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಅಭ್ಯರ್ಥಿಗಳು ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ಶಿಕ್ಷಕರಿಂದ ಮತದಾನ ಮಾಡಿಸುವಂತೆ ಮನವಿ ಮಾಡುತ್ತಿದ್ದಾರೆ. ಇಲ್ಲವೆ, 50 ರಿಂದ 60 ಶಿಕ್ಷಕರನ್ನು ಒಳಗೊಂಡಂತೆ ಸಭೆಗಳನ್ನು ಆಯೋಜಿಸುತ್ತಿದ್ದಾರೆ.
ಅಭ್ಯರ್ಥಿಗಳ ಬೆಂಬಲಿಗರು ಹಾಗೂ ರಾಜಕೀಯ ಪಕ್ಷಗಳ ಕಾರ್ಯಕರ್ತರು ಮನೆ ಮನೆ ಪ್ರಚಾರ ಮಾಡುತ್ತಿದ್ದಾರೆ. ಮತದಾರ ಶಿಕ್ಷಕರನ್ನು ದೂರವಾಣಿ ಮೂಲಕವೂ ಸಂಪರ್ಕಿಸುತ್ತಿದ್ದಾರೆ. ಅಲ್ಲದೆ, ವಾಟ್ಸಪ್, ಫೇಸ್ಬುಕ್, ಟ್ವಿಟರ್ನಂತಹ ಸಾಮಾಜಿಕ ಜಾಲತಾಣಗಳನ್ನು ಪ್ರಚಾರ ಕಾರ್ಯಕ್ಕೆ ಸಮಪರ್ಕವಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಮಹಿಳಾ ಮತದಾರರು ಯಾವ ಅಭ್ಯರ್ಥಿ ಪರ ಒಲವು ತೋರುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.
ಸ್ಪರ್ಧೆಗೆ ಧೈರ್ಯ ತೋರದ ಮಹಿಳೆಯರು!
ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ಗೆ ನಡೆಯುವ ಚುನಾವಣೆಯಲ್ಲಿ ಈವರೆಗೆ ಮಹಿಳೆಯರು ಸ್ಪರ್ಧೆ ಮಾಡುವ ಧೈರ್ಯವನ್ನೇ ತೋರಿಲ್ಲ. ಈಗ ಸ್ಪರ್ಧೆ ಮಾಡಿರುವ 9 ಮಂದಿ ಅಭ್ಯರ್ಥಿಗಳು ಪುರುಷರೇ ಆಗಿದ್ದಾರೆ. ಈ ಕ್ಷೇತ್ರದಲ್ಲಿ ಪುರುಷರಿಗೆ ಹೋಲಿಕೆ ಮಾಡಿದರೆ ಮಹಿಳಾ ಮತದಾರರ ಸಂಖ್ಯೆಯೇ ಹೆಚ್ಚಾಗಿದೆ. ಆದರೂ ಯಾವ ರಾಜಕೀಯ ಪಕ್ಷಗಳು ಮಹಿಳೆಯನ್ನು ಕಣಕ್ಕಿಳಿಸುವ ಚಿಂತನೆ ಹೊಂದಲಿಲ್ಲ. ಮಹಿಳಾ ನಾಯಕರು ಟಿಕೆಟ್ ಕೇಳುವ ಮನಸ್ಸು ಮಾಡಲಿಲ್ಲ. ಬದಲಾದ ಕಾಲಘಟ್ಟದಲ್ಲಿ ಮಹಿಳೆಯರು ಕೂಡ ಪುರುಷರಿಗೆ ಸರಿಸಮನಾಗಿದ್ದಾಳೆ. ವಿವಿಧ ಕ್ಷೇತ್ರಗಳ ಉನ್ನತ ಹುದ್ದೆಗಳನ್ನು ಅಲಂಕರಿಸುತ್ತಿದ್ದಾರೆ. ಶಿಕ್ಷಿತರಾಗಿರುವ ಮಹಿಳೆಯರು ಮತದಾರರಲ್ಲಿ ತಮ್ಮವರೇ ಅಧಿಕವಾಗಿದ್ದರೂ ಸ್ಪರ್ಧೆಗೆ ಆಸಕ್ತಿ ತೋರಿಲ್ಲ.