ಚಿಕ್ಕಮಗಳೂರು: ಮುತ್ತೋಡಿ ಅರಣ್ಯದಲ್ಲಿ ಭಾರಿ ಕಾಡ್ಗಿಚ್ಚು; ಭದ್ರಾ ಅಭಯಾರಣ್ಯದ ಅಪಾರ ಸಸ್ಯ ಸಂಪತ್ತು ನಾಶ!

Published : Mar 14, 2026, 12:48 PM IST
Massive Wildfire in Muthodi Forest chikkamagaluru Rare Flora Destroyed Wildlife at Risk

ಸಾರಾಂಶ

ಚಿಕ್ಕಮಗಳೂರು ತಾಲೂಕಿನ ಮುತ್ತೋಡಿ ಅರಣ್ಯ ಪ್ರದೇಶದಲ್ಲಿ ಭಾರಿ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು, ಭದ್ರಾ ಅಭಯಾರಣ್ಯದ ವ್ಯಾಪ್ತಿಯಲ್ಲಿ ಅಪಾರ ಅರಣ್ಯ ಸಂಪತ್ತು ನಾಶವಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದು, ಸಿಬ್ಬಂದಿ ಕೊರತೆಯಿಂದ ಇನ್ನಷ್ಟು ವ್ಯಾಪಿಸಿದೆ ಎಂಬ ಆರೋಪ.

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು

ಚಿಕ್ಕಮಗಳೂರು: ಚಿಕ್ಕಮಗಳೂರು ತಾಲೂಕಿನ ಮುತ್ತೋಡಿ ಅರಣ್ಯ ವ್ಯಾಪ್ತಿಯ ಪ್ರದೇಶದಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು, ಅರಣ್ಯ ಸಂಪತ್ತಿಗೆ ದೊಡ್ಡ ಮಟ್ಟದ ಹಾನಿ ಉಂಟಾಗಿದೆ. ಈ ಅರಣ್ಯ ಪ್ರದೇಶವು ಭದ್ರಾ ಅಭಯಾರಣ್ಯ ವ್ಯಾಪ್ತಿಗೆ ಸೇರಿದ್ದು, ಪರಿಸರ ಪ್ರೇಮಿಗಳು ಮತ್ತು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಕಿಲೋಮೀಟರ್‌ಗಳಷ್ಟು ದೂರ ಬೆಂಕಿ :

ಮುತ್ತೋಡಿ ಅರಣ್ಯ ವಲಯದ ಎಮ್ರಹಳ್ಳಿ ಮತ್ತು ಹೊಸಖಾನ್ ಸುತ್ತಮುತ್ತಲಿನ ಕಾಡು ಪ್ರದೇಶಗಳಲ್ಲಿ ಬೆಂಕಿ ವೇಗವಾಗಿ ಹರಡಿದ್ದು, ಒಣಗಿದ ತರಗೆಲೆಗಳು ಮತ್ತು ಹುಲ್ಲಿನಿಂದಾಗಿ ಕ್ಷಣಾರ್ಧದಲ್ಲೇ ಕಿಲೋಮೀಟರ್‌ಗಳಷ್ಟು ದೂರ ಬೆಂಕಿ ವ್ಯಾಪಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಪರಿಣಾಮವಾಗಿ ಅಪಾರ ಪ್ರಮಾಣದಲ್ಲಿ ಅಪರೂಪದ ಸಸ್ಯ ಸಂಪತ್ತಿಗೆ ಹಾನಿಯಾಗಿದ್ದು, ಅರಣ್ಯದ ಜೀವ ವೈವಿಧ್ಯತೆಗೆ ಹೊಡೆತ ಬಿದ್ದಿದೆ.ಬೆಂಕಿಯ ತೀವ್ರತೆಯಿಂದಾಗಿ ಅಭಯಾರಣ್ಯದಲ್ಲಿ ಇರುವ ಪ್ರಾಣಿ-ಪಕ್ಷಿಗಳ ಜೀವಕ್ಕೂ ಅಪಾಯ ಎದುರಾಗಿದೆ. ಕಾಡಿನೊಳಗಿನ ಅನೇಕ ಪ್ರಾಣಿಗಳು ಬೆಂಕಿಯಿಂದ ತಪ್ಪಿಸಿಕೊಳ್ಳಲು ಅರಣ್ಯದ ಬೇರೆ ಭಾಗಗಳಿಗೆ ಸ್ಥಳಾಂತರವಾಗುತ್ತಿರುವ ಸಾಧ್ಯತೆಯಿದೆ ಎಂದು ಅರಣ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಸಿಬ್ಬಂದಿಯ ಕೊರತೆ :

ಇದೀಗ ಬೆಂಕಿಯನ್ನು ನಿಯಂತ್ರಣಕ್ಕೆ ತರಲು ಅರಣ್ಯ ಇಲಾಖೆಯ ಸಿಬ್ಬಂದಿಗಳು ಹರಸಾಹಸ ಪಡುತ್ತಿದ್ದಾರೆ. ಬೆಂಕಿ ವ್ಯಾಪಿಸಿರುವ ಪ್ರದೇಶಗಳಲ್ಲಿ ಸಿಬ್ಬಂದಿಗಳು ಅಗ್ನಿ ನಿಯಂತ್ರಣ ಕಾರ್ಯಾಚರಣೆ ನಡೆಸುತ್ತಿದ್ದು, ಬೆಂಕಿ ಮತ್ತಷ್ಟು ಹರಡುವುದನ್ನು ತಡೆಯಲು ಪ್ರಯತ್ನಿಸುತ್ತಿದ್ದಾರೆ.ಆದರೆ, ಅರಣ್ಯದಲ್ಲಿ ವಾಚರ್‌ಗಳ ಕೊರತೆ ಇರುವುದರಿಂದ ಬೆಂಕಿಯನ್ನು ನಿಯಂತ್ರಿಸಲು ತೊಂದರೆ ಆಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಜೊತೆಗೆ ಕೆಲವೆಡೆ ಅಗತ್ಯವಿರುವ ಫೈರ್ ಲೈನ್‌ಗಳನ್ನು ಅಧಿಕಾರಿಗಳು ಮಾಡಿಲ್ಲ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ವಿಶೇಷವಾಗಿ ಜೇನುಕಲ್ಲುಗಿರಿ, ಕಾಗೆಮನೆಗಿರಿ ಹಾಗೂ ಗೆಸ್ಟ್ ಹೌಸ್ ರಸ್ತೆಯ ಭಾಗಗಳಲ್ಲಿ ಫೈರ್ ಲೈನ್ ಮಾಡದಿರುವುದು ಬೆಂಕಿ ವೇಗವಾಗಿ ಹರಡುವುದಕ್ಕೆ ಕಾರಣವಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.ಸ್ಥಳೀಯರು ಹಾಗೂ ಪರಿಸರ ಪ್ರೇಮಿಗಳು ತಕ್ಷಣವೇ ಹೆಚ್ಚಿನ ಸಿಬ್ಬಂದಿ ಹಾಗೂ ಅಗ್ನಿ ನಿಯಂತ್ರಣ ಸಾಧನಗಳನ್ನು ನಿಯೋಜಿಸಿ ಕಾಡ್ಗಿಚ್ಚನ್ನು ಸಂಪೂರ್ಣವಾಗಿ ನಂದಿಸಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೆ ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಅರಣ್ಯ ಪ್ರದೇಶಗಳಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

PREV
Read more Articles on
click me!

Recommended Stories

ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ ಗೃಹ ಸಚಿವ ಜಿ. ಪರಮೇಶ್ವರ್; ಒಳಮೀಸಲಾತಿ ಬಗ್ಗೆ ಮಹತ್ವದ ಘೋಷಣೆ!
ಒಳಮೀಸಲಾತಿ ಜಾರಿಗೆ ಬಿಜೆಪಿ ಹಮ್ಮಿಕೊಂಡಿದ್ದ ಪಾದಯಾತ್ರೆ ದಿಢೀರ್ ಮುಂದೂಡಿದ್ದೇಕೆ