
ಬೆಳಗಾವಿ: ಪ್ರಸಿದ್ಧ ಪುಣ್ಯಕ್ಷೇತ್ರ ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿ ಭಕ್ತರ ನೀಡಿದ ಕಾಣಿಕೆಯಲ್ಲಿ ದಾಖಲೆಯಾಗಿದೆ. ಕಳೆದ ನಾಲ್ಕು ದಿನಗಳಲ್ಲಿ ನಡೆದ ಹುಂಡಿ ಎಣಿಕೆ ಕಾರ್ಯ ಮುಕ್ತಾಯವಾಗಿದ್ದು, ಕೋಟಿಗಟ್ಟಲೆ ಹಣ ಹಾಗೂ ಕೆಜಿಗಟ್ಟಲೆ ಚಿನ್ನಾಭರಣ ಸಂಗ್ರಹವಾಗಿದೆ. 2025-26ನೇ ವರ್ಷದಲ್ಲಿ ಮಾರ್ಚ್ 9 ರಿಂದ 12 ರವರೆಗೆ ನಡೆದ ಹುಂಡಿ ಎಣಿಕೆ ಕಾರ್ಯವು ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಒಟ್ಟು ₹3.07 ಕೋಟಿ ಮೌಲ್ಯದ ಕಾಣಿಕೆ ಸಂಗ್ರಹವಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.
ಕಳೆದ ವಾರವಷ್ಟೇ ಒಂದು ಸುತ್ತಿನ ಎಣಿಕೆ ಕಾರ್ಯ ನಡೆದಿದ್ದರೂ, ಈ ಬಾರಿಯ ಎಣಿಕೆಯಲ್ಲಿ ಭಾರಿ ಪ್ರಮಾಣದ ನಗದು ಹಾಗೂ ಆಭರಣಗಳು ಹರಿದು ಬಂದಿದೆ. ಒಟ್ಟು ₹2.78 ಕೋಟಿ ನಗದು ಹಣದ ಜೊತೆಗೆ, ₹16.16 ಲಕ್ಷ ಮೌಲ್ಯದ 100 ಗ್ರಾಂ ಚಿನ್ನಾಭರಣ ಹಾಗೂ ₹12.35 ಲಕ್ಷ ಬೆಲೆಯ ಸುಮಾರು 4 ಕೆಜಿ 547 ಗ್ರಾಂ ಬೆಳ್ಳಿ ಆಭರಣಗಳು ಸಂಗ್ರಹವಾಗಿವೆ. ಈ ಬೃಹತ್ ಎಣಿಕೆ ಕಾರ್ಯದಲ್ಲಿ ದೇವಸ್ಥಾನದ ನೂರಾರು ಸಿಬ್ಬಂದಿಯೊಂದಿಗೆ ಸ್ಥಳೀಯ ಕಾಲೇಜು ವಿದ್ಯಾರ್ಥಿಗಳು ಸಹ ಉತ್ಸಾಹದಿಂದ ಭಾಗವಹಿಸಿ ಪಾರದರ್ಶಕವಾಗಿ ಕಾರ್ಯ ನಿರ್ವಹಿಸಿದರು.
ಸುಕ್ಷೇತ್ರ ಯಲ್ಲಮ್ಮಾ ದೇವಸ್ಥಾನದ ಭಕ್ತರಿಂದ ಸಂಗ್ರಹಗೊಂಡ ಕಾಣಿಕೆಯ ಹುಂಡಿಗಳ ಎಣಿಕೆ ಕಾರ್ಯ ಮಾ.3ರಿಂದ ಪ್ರಾರಂಭವಾಗಿ ಮಾ.12ಕ್ಕೆ ಮುಕ್ತಾಯಗೊಂಡಿದ್ದು, 2025-26ನೇ ಸಾಲಿಗೆ ಒಟ್ಟು ₹ 9.92 ಕೋಟಿ ನಗದು ಹಣ ಸಂಗ್ರಹಗೊಂಡಿದೆ. ಎಣಿಕೆ ಕಾರ್ಯದಲ್ಲಿ ₹ 3.72 ಕೋಟಿ ನಗದು ಹಣ ಸಂಗ್ರಹವಾಗಿದ್ದು, ₹ 17.66 ಲಕ್ಷ ಮೌಲ್ಯದ ಬಂಗಾರ ಹಾಗೂ ₹ 14.27ಲಕ್ಷ ಮೌಲ್ಯದ ಬೆಳ್ಳಿ ಸಂಗ್ರಹವಾಗಿದೆ.
2025-26ನೇ ಸಾಲಿಗೆ ಒಟ್ಟು ₹ 74.889 ಲಕ್ಷ ಮೌಲ್ಯದ ಚಿನ್ನ ಹಾಗೂ ₹ 38.35 ಲಕ್ಷ ಮೌಲ್ಯದ ಬೆಳ್ಳಿ ಸಂಗ್ರಹಗೊಂಡಿದೆ ಎಂದು ರೇಣುಕಾ ಯಲ್ಲಮ್ಮಾ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ತಿಳಿಸಿದ್ದಾರೆ.