ಅತಿಕ್ರಮಣದಾರರನ್ನು ಒಕ್ಕಲೆಬ್ಬಿಸದಂತೆ ಬೃಹತ್‌ ಪ್ರತಿಭಟನೆ

By Kannadaprabha NewsFirst Published Oct 3, 2022, 12:32 PM IST
Highlights
  • ಅತಿಕ್ರಮಣದಾರರನ್ನು ಒಕ್ಕಲೆಬ್ಬಿಸದಂತೆ ಬೃಹತ್‌ ಪ್ರತಿಭಟನೆ
  • ಅರಣ್ಯ ಅತಿಕ್ರಮಣದಾರರ ಬಗ್ಗೆ ಸರ್ಕಾರದ ನಿಲುವು ಪ್ರಕಟಿಸಲು ಸ್ಪೀಕರ್‌ ಕಾಗೇರಿ ಕಚೇರಿ ಎದುರು ಆಗ್ರಹ
  • 3000ಕ್ಕೂ ಅಧಿಕ ಪ್ರತಿಭಟನಾಕಾರರು ಭಾಗಿ

ಶಿರಸಿ (ಅ.3) : ಅರಣ್ಯ ಅತಿಕ್ರಮಣದಾರರ ಒಕ್ಕಲೆಬ್ಬಿಸುವ ವಿಚಾರಣೆ ಸುಪ್ರೀಂಕೋರ್ಚ್‌ನಲ್ಲಿ ಅಂತಿಮ ಹಂತದಲ್ಲಿದೆ. ಈ ಬಗ್ಗೆ ಸರ್ಕಾರದ ನಿಲುವು ಏನು ಎಂಬುದನ್ನು ಪ್ರಕಟಿಸಬೇಕು ಎಂದು ಆಗ್ರಹಿಸಿ ಅರಣ್ಯ ಅತಿಕ್ರಮಣದಾರರು ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಘಟನೆ ನಗರದಲ್ಲಿ ಭಾನುವಾರ ನಡೆಯಿತು.

ಪೊರಕೆ ಹಿಡಿದು ಬಸ್‌ ನಿಲ್ದಾಣ ಸ್ವಚ್ಛಗೊಳಿಸಿದ ಸ್ಪೀಕರ್‌ ಕಾಗೇರಿ

ಇಲ್ಲಿನ ಬಿಡ್ಕಿಬೈಲಿನಲ್ಲಿ ಗಾಂಧೀಜಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ರವೀಂದ್ರನಾಥ ನಾಯ್ಕ ನೇತೃತ್ವದಲ್ಲಿ 3000ಕ್ಕೂ ಅಧಿಕ ಜನ ಮೆರವಣಿಗೆ ಮೂಲಕ ಕಾಗೇರಿಯವರ ಕಚೇರಿಗೆ ಆಗಮಿಸಿದರು.

ಈ ವೇಳೆ ಮಾತನಾಡಿದ ಅರಣ್ಯ ಅತಿಕ್ರಮಣದಾರ ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರನಾಥ ನಾಯ್ಕ, ನಮ್ಮ ಹೋರಾಟ ಯಾವುದೇ ವ್ಯಕ್ತಿ, ಪಕ್ಷದ ವಿರುದ್ಧ ಅಲ್ಲ. ಅತಿಕ್ರಮಣದಾರರಿಗೆ ನ್ಯಾಯ ಬೇಕು. ಅತಿಕ್ರಮಣದಾರರ ಒಕ್ಕಲೆಬ್ಬಿಸುವ ಕುರಿತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯೇ ಸುಪ್ರಿಂಕೋರ್ಚ್‌ಗೆ ಅಫಿಡವಿಟ್‌ ಸಲ್ಲಿಸಿದೆ. ಜಿಪಿಎಸ್‌ ಆಗದ ಅತಿಕ್ರಮಣದಾರರನ್ನು ಒಕ್ಕಲೆಬ್ಬಿಸಲು ನ್ಯಾಯಾಲಯ ಆದೇಶಿಸಿದರೆ ಅತಿಕ್ರಮಣದಾರರ ಗತಿ ಏನು? ಎಂದು ಪ್ರಶ್ನಿಸಿದರು.

ನಾವು ಜೀವ ಬೇಕಿದ್ರೂ ಕೊಡ್ತಿವಿ, ಜಾಗ ಬೀಡಲ್ಲ. ಸುಪ್ರಿಂಕೋರ್ಚ್‌ನಲ್ಲಿ ಅಂತಿಮ ವಿಚಾರಣೆ ನಡೆಯುತ್ತಿರುವಾಗ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಅಭಿಪ್ರಾಯ ಸಲ್ಲಿಸಬೇಕಾಗಿದೆ. ಈ ಹಿಂದೆ ಬೆಳಗಾವಿ ಅಧಿವೇಶನದಲ್ಲಿಯೂ ಯಾರೂ ಧ್ವನಿ ಎತ್ತಿಲ್ಲ. ಸುಪ್ರಿಂಕೋರ್ಚ್‌ ಅಂತಿಮ ವಿಚಾರಣೆ ದಿನ ನಿಗದಿಗೊಳಿಸಿದೆ. ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಯಾವುದೇ ಆಸಕ್ತಿ ತೋರುತ್ತಿಲ್ಲ ಎಂದು ಆರೋಪಿಸಿದರು.

ಈ ವೇಳೆ ಮಾತನಾಡಿದ ವಿಶ್ವೇಶ್ವರ ಹೆಗಡೆ ಕಾಗೇರಿ, ಈ ಹೋರಾಟ ಬಡವರ, ಕಷ್ಟದವರ ಹೋರಾಟವಾಗಿದೆ. ಇದು ಸರ್ಕಾರದ ಗಮನದಲ್ಲಿದೆ. ಈ ವಿಷಯದಲ್ಲಿ ಎಲ್ಲ ಸರ್ಕಾರಗಳೂ ಗಂಭೀರ ಯತ್ನ ನಡೆಸಿವೆ. ಆದರೆ ಸಮಸ್ಯೆ ಬಗೆಹರಿದಿಲ್ಲ. ಅತಿಕ್ರಮಣದಾರರು ಜೀವನ ನಿರ್ವಹಣೆಗಾಗಿ ಒತ್ತುವರಿ ಮಾಡಿಕೊಂಡಿದ್ದಾರೆ. ಕಸ್ತೂರಿ ರಂಗನ್‌ ವರದಿಯನ್ನೂ ನಾವು ಖಂಡಿಸಿದ್ದೇವೆ. ಅತಿಕ್ರಮಣದಾರರಿಗೆ ನ್ಯಾಯ ಸಿಗಲೇ ಬೇಕು. ಜಿಪಿಎಸ್‌ ಲೋಪ ದೋಷ ಆಗಿದ್ದರೆ ಕಮಿಟಿಯವರೂ ವಿಚಾರಿಸಿ ಸಹಿ ಹಾಕಿ ಕಳಿಸಬೇಕಿತ್ತು. ಹಳೆ ಅತಿಕ್ರಮಣದಾರರಿಗೆ ಹಲವರಿಗೆ ಇನ್ನೂ ಜಿಪಿಎಸ್‌ ಆಗಿಲ್ಲ. ಅರಣ್ಯ ಇಲಾಖೆಯವರಿಂದ ಏನೂ ತೊಂದರೆ ಆಗದಂತೆ ನೋಡಿಕೊಳ್ಳುತ್ತೇನೆ ಎಂದು ಭರವಸೆ ನೀಡಿದರು. ಜಿಲ್ಲಾ ಅರಣ್ಯ ಅತಿಕ್ರಮಣದಾರ ಹೋರಾಟಗಾರರ ಸಂಘದ ತಾಲೂಕು ಅಧ್ಯಕ್ಷರು, ಪದಾಧಿಕಾರಿಗಳು ಇದ್ದರು.

ಉತ್ತರಕನ್ನಡ: ಹವಾಮಾನ ವೈಪರೀತ್ಯ: ಸಾಂಪ್ರದಾಯಿಕ ಉಪ್ಪಿನ ಕೊರತೆ

ಅತಿಕ್ರಮಣದಾರರ ಪರವಾಗಿ ಸರ್ಕಾರದ ನಿಲುವು ಏನು ಎಂಬುದನ್ನು ವಿಶ್ವೇಶ್ವರ ಹೆಗಡೆ ಸ್ಪಷ್ಟಪಡಿಸಿಲ್ಲ. ಒಂದೊಮ್ಮೆ ಅತಿಕ್ರಮಣದಾರರ ಸಮಸ್ಯೆ ಮುಂದುವರಿದರೆ ಜಿಲ್ಲೆಗೆ ಯಾವುದೇ ಸಚಿವರು, ಶಾಸಕರು ಬಂದರೂ ನಾವು ಅವರ ಸಮ್ಮುಖದಲ್ಲಿ ಪ್ರತಿಭಟನೆ ನಡೆಸುತ್ತೇವೆ.

- ರವೀಂದ್ರನಾಥ ನಾಯ್ಕ.

ನಮಗೆ ಸ್ವಾತಂತ್ರ್ಯ ಬಂದಿದೆಯೇ?: ಕಾಗೋಡು ತಿಮ್ಮಪ್ಪ ಪ್ರಶ್ನೆ

ಇದಕ್ಕೂ ಮುನ್ನ ಬಿಡ್ಕಿಬೈಲಿನಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮಾತನಾಡಿ, ನಾವು ಇನ್ನೂ ಭೂಮಿ ಹಕ್ಕಿಗಾಗಿ ಹೋರಾಟ ನಡೆಸುತ್ತಿದ್ದೇವೆ ಎಂದರೆ ನಮಗೆ ಸ್ವಾತಂತ್ರ್ಯ ಬಂದಿದೆಯಾ ಎನ್ನುವ ಪ್ರಶ್ನೆ ಕಾಡುತ್ತಿದೆ. ಊಳುವವನೇ ಹೊಲದೊಡೆಯ ಕಾನೂನು ಜಾರಿಗೆ ತರಲು 20 ವರ್ಷಗಳ ಕಾಲ ಹೋರಾಟ ನಡೆಸಬೇಕಾಯಿತು. ಈಗ ಅರಣ್ಯ ಅತಿಕ್ರಮಣದಾರರ ಹೋರಾಟ 31 ವರ್ಷಗಳಿಂದ ನಡೆದಿದೆ. ಅರಣ್ಯ ಭೂಮಿ ಹಕ್ಕಿಗೆ ಹೋರಾಟ ಸುದೀರ್ಘ ನಡೆಸಲೇಬೇಕು. ಬೇರೆ ದಾರಿ ಇಲ್ಲ. ಈ ಹೋರಾಟ ರಾಜ್ಯದ ಮೂರು ಲಕ್ಷ ಜನಕ್ಕಾಗಿ ನಡೆಯುತ್ತಿರುವ ಹೋರಾಟ ಎಂದರು.

click me!